Posts

Showing posts from August, 2013

"ಪಾಸ್ವರ್ಡ್" - RESET ಆಗ್ತಿರ್ಲಿ ಆಗಾಗ!!!

ಆಗಷ್ಟೇ ಅವರ ಮದುವೆಯಾಗಿತ್ತು, ಹೊಸ ಅಪಾರ್ಟ್ಮೆಂಟ್ ಒಳಗೆ ನೂತನ ವಧು ವರರ ಪ್ರವೇಶ.
ಎದುರಿಗೆ ಕಂಡ ಹಾಲಿನ ಗೋಡೆ ಮೇಲೆ ಹೃದಯಾಕಾರದ ಬೆಂಡಿನ ಮೇಲೆ ಬೆಂಡಿನಕ್ಷರಗಳಲ್ಲಿ ಬರೆದಿತ್ತು
"ರಾಹುಲ್ ವೆಡ್ಸ್ ತಾರಾ"
ರಾಹುಲ್ ನ ಫ್ಯಾಮಿಲಿ ಹೈ ಪ್ರೊಫೈಲ್ ಆಗಿತ್ತು, ಇನ್ನು ತಾರಾ ಮಧ್ಯಮ ವರ್ಗದ ಗುಮಾಸ್ತನ ಮಗಳು. ಹಾಗಾಗಿ ಅವಳು ಸಹಜವಾಗಿಯೇ ಮುಜುಗರದಿಂದ ನಡೆದುಕೊಳ್ಳುತ್ತಿದ್ದಳು.
ಇನ್ನು ಆ ಎರಡು ಕೋಣೆಯ ಅಪಾರ್ಟ್ಮೆಂಟಿನಲ್ಲಿ ರಾಹುಲ್ ಗೆ ತಾರಾ, ತಾರಾಳಿಗೆ ರಾಹುಲ್ ಅಷ್ಟೇ. ದಿನಕ್ಕೊಮ್ಮೆ ಬಂದು ಹೋಗುವ ಮನೆ ಕೆಲಸದವಳು.
ರಾಹುಲ್ ಪ್ರತಿಷ್ಟಿತ ಸಾಫ್ಟ್ವೇರ್ ಕಂಪನಿ ಉಧ್ಯಮಿ. ತಾರಾ ಬಿ.ಎಸ್ಸಿ ಪದವೀಧರೆ, ಮನೆಯಲ್ಲೇ ಟ್ಯೂಶನ್ ನಡೆಸುತ್ತಿದ್ದಳು ಮದುವೆಗೆ ಮುಂಚೆ, ಈಗ ಹೌಸ್ ವೈಫ್ ಅಷ್ಟೇ.

ಮದುವೆ ಆಗಿ ತಿಂಗಳು ಕಳೆದರೂ ರಾಹುಲ್, ತಾರಾ ಬಹಳ ಅಸಹಜವಾಗಿ ನಡೆದುಕೊಳ್ಳುತಿದ್ದಿದ್ದು ಕೆಲಸದವಳ ಗಮನಕ್ಕೆ ಬಂದಿದ್ದೂ ಉಂಟು. ಇಷ್ಟಾದರೂ ತಾರಾ ತನ್ನಲ್ಲೇ ಏನೋ ಹೊಂದಾಣಿಕೆಯ ಸಮಸ್ಯೆ ಇರಬೇಕೆಂದು ಸುಮ್ಮನಿದ್ದಳು.

ರಾಹುಲ್ ಒಮ್ಮೆ ಜಂಟಿ ಖಾತೆ ತೆರೆಯೋಕೆ ಅಂತ ತಾರಾಳನ್ನ ಬ್ಯಾಂಕಿಗೆ ಕರೆತಂದಿದ್ದ. ಬೇಕಾದಲ್ಲಿ ಸಹಿ ಹಾಕಿಸಿಕೊಂಡು ತಾರಾಳನ್ನ ಮನೆಗೆ ಕಳುಹಿಸಿ ಏ.ಟಿ.ಎಮ್ ಕಾರ್ಡ್ ಪಿನ್ ರಿಸೆಟ್ ಮಾಡಲು ಏ.ಟಿ.ಎಮ್ ಮಷೀನ್ ಬಳಿ ಹೋದ. ಹೊಸ ಪಿನ್ ಏನು ಇಡೋದು ಅಂತ ಯೋಚಿಸ್ತಾ ಇದ್ದಂತೆ ಒಂದು ಫ್ಲಾಶ್ ಬ್ಯಾಕ್ ಓಪನ್ ಆಯ್ತು:

ಫ್ಲಾಶ್ ಬ್ಯಾಕ್ ಸ್ಟೋರಿ
---------------…

ಕಣ್ಮುಂದೆ ದಾರಿ ಬೆನ್ಹಿಂದೆ ನೆನಪು

ಬೆಳಕು ಕತ್ತಲೆಯೊಳಗೆ ಮುಚ್ಚಿ ಮರೆಯಾಗಿದೆ 
ಪುಟ್ಟ ಕೂಸಿಗೆ ಕಣ್ಣ ಮುಚ್ಚಾಲೆ 
ಕನಸು ಬೀಳದೆ ಎಲ್ಲೋ ಕೊಚ್ಚಿ ಕಳೆದೋಗಿದೆ 
ಬರೆಯಬೇಕೇ ಒಂದು ಕರೆಯೋಲೆ ??
ಮನಬಿಚ್ಚಿ ಕೂಗಿ ಕರೆದಾಗಲೂ 
ಮನಸಿಟ್ಟು ಕೂತು ಬರೆದಾಗಲೂ 
ಸಿಗಲಿಲ್ಲ ಬೆಳಕು
ಬರಲಿಲ್ಲ ಕನಸು 

ಕಾಮನ ಬಿಲ್ಲಿಗೆ ಏಳು ಬಣ್ಣದ ಸಾಲು 
ಕೊಡಬಾರದೇ ಒಂದು ಸಾಲವಾಗಿ 
ಮುಗಿಲಿನ ಬೇಲಿಗೆ ಜಾರದ ಹನಿಗಳು 
ಬೇಕಾಗಿವೆ ಚೂರು ಬಹಳವಾಗಿ 
ಕನ್ನಡಿಯಲೊಂದು ನಗು ಮುಖವು ಬೇಕು 
ಎಲ್ಲಿ ಸಿಗಬಹುದು ಮಾಯಾ ದರ್ಪಣ 
ದಾರಿಯೂ ಒಂದು ಗುರಿ ಮುಟ್ಟಬೇಕು 
ಪಯಣ ಬೆಳೆಸಲು ಇಲ್ಲದ ಕಾರಣ 

ಸಾಗರ ದಾಟುವ ಛಲವಿದೆ ಆದರೆ 
ಕೊಡದಾಗಿವೆ ಅಲೆ ಬೆಂಬಲವನು 
ಮಂದಿರ ಕಟ್ಟುವ ಬಲವಿದೆ ಆದರೆ 
ಅಲ್ಲಗಳೆದಿದೆ ಮನ ಹಂಬಲವನು 
ಹೆಸರಾಗಲೆಂದೇ ಉಸಿರಾಟವಾಡಿ 
ಮಣ್ಣಾಗಬೇಕೆ ಬಡ ದೇಹ ??
ಕೊನೆ ಗಳಿಗೆಯಲ್ಲೂ ಕೊನೆಗಾಣಲಿಲ್ಲ 
ಇನ್ನೂ ಜೀವಂತ ವ್ಯಾಮೋಹ !!

                             --ರತ್ನಸುತ

ಸಣ್ನೂರು ಸಣ್ಣ ಗುಡಿ

ಮಣ್ಣು ದಾರಿ ಬೆಟ್ಟದೆಡೆಗೆ 
ಬಂಡೆ ಕಲ್ಲು, ಮುಳ್ಳು ದಾರಿ 
ಬೆಟ್ಟ ದೇವರ ಸೂರಿಗೆ
ಗುಡಿ ಅದುವೇ ಊರಿಗೆ 

ಮೈನೆರೆದ ಹೆಣ್ಣ ಮಗಳ ಬೇಡಿಕೆ 
ಮಕ್ಕಳಾಗದ ಬಂಜೆ ಹರಕೆ 
ಪಾಸು ಮಾಡಿಸೆ ತಪ್ಪು ಕಾಣಿಕೆ 
ಎಂದಿನಂತೆಲ್ಲರ ಕನಸ ಹೂಡಿಕೆ 

ಎಳ್ಳು ದೀಪ, ನಿಂಬೆ ದೀಪ 
ತಂಬಿಟ್ಟು, ತುಪ್ಪ ದೀಪ 
ಮಣ್ಣು ದೀಪ, ಬೆಳ್ಳಿ ದೀಪ 
ಸುಳಿದಿಲ್ಲ ಅಲ್ಲಿ ಪಾಪ 

ಕುಸಿದು ಬಿದ್ದ ಗೋಡೆ 
ಜೇಡ ಕಟ್ಟಿದ ಗೂಡು 
ಸೋರುವ ಮಾಳಿಗೆ 
ಇದು ದೇವರ ಪಾಡು 

ಹುಂಡಿ ಕಳುವಾಗಿ ವರ್ಷ ಆಯ್ತು 
ಹೂವು ಮೊನ್ನೆ ಸಂಕ್ರಾಂತಿದು 
ತೆಂಗು ಚಿಪ್ಪು, ಬಾಳೆಸಿಪ್ಪೆ 
ಪಳಗಿದಿಲಿಗಳು ಸಾಲದಕ್ಕೆ 

ಪುರೋಹಿತ, ಪಟ್ಟಣದಲ್ಲಿ ಹಿತ 
ಮುಂದಿನ ಸಂಕ್ರಾಂತಿಗೆ ಬರುವ 
ತುರ್ತು ಪರಿಸ್ಥಿತಿಗೆ, "ತಿಥಿ"ಗೆ 
ದೇವರಿಗೆ ನಂಬರ್ರು ಕೊಟ್ಟಿರುವ  

ಊರು ಸಣ್ಣದಾಯ್ತು ಬೆಟ್ಟ ದೇವಗೆ 
ಗುಡಿ ಸಣ್ಣದಾಯ್ತು ಊರ ಮಂದಿಗೆ 
ಎಲ್ಲರೂ ಮಲಗಿದ್ದಾರೆ 
ಯಾರಿಲ್ಲ ಯಾರ ನೆರವಿಗೆ !!!

                      --ರತ್ನಸುತ 

ಮನದಲಿ ಒಂದು ಹಾಡು!!

ಎದೆಯಲ್ಲಿ ಎದ್ದ ಅಲೆಯಲಿ  ಕಾಗದ, ದೋಣಿಯಾಗಲಿ  ತೇಲಿ ತೇಲಿ ಸಾಗಲಿ  ನಿನ್ನವರೆಗೂ ಅದು ತಲುಪಲಿ  ಅಕ್ಷರ ಅಳಿಯದೆ ಇರಲಿ  ನಿನ್ನ ಓದಿಗೆಲ್ಲಾ ಸಿಗಲಿ  ಮರು ಅಲೆ ಎದ್ದ ಕೂಡಲೇ  ಉತ್ತರ ನನ್ನ ಸೇರಲಿ 
ಕಾಯುವ ಪ್ರತಿ ಕ್ಷಣದಲ್ಲೂ  ಸುಂದರ ಸಾಲು ಹೊರ ಹೊಮ್ಮಲಿ  ಬರುವುದ ನೀ ಮರೆತರೂ  ಪ್ರೇಮ ಕಾವ್ಯ ಜೊತೆಯಾಗಲಿ  ನೆನಪಿಗೆ ನೀ ಬಾರದೇ  ನೆನೆವುದೇ ಮರೆತ್ಹೊಗಲಿ  ಹೇಳದ ಆಸೆಗಳೆಲ್ಲಾ  ಒಂದೊಂದು ಸಂಪುಟವಾಗಲಿ 
ಹೆಸರಿಗೆ ನಾ ಹಾಡುವೆ  ಆ ಹಾಡು ಪದಗಳ ಜೋಡಣೆ  ಕೇಳಿ ನೀ ನಲಿಯುವೆ  ಅದಕಿಂತ ಬೇಕೇ ಪ್ರೇರಣೆ  ಕಾರಣ ಹುಡುಕುವ  ತಗಾದೆ ಏಕೆ ಬೇಡಾಗಿದೆ  "ಇಷ್ಟವಾದೆ" ಅಷ್ಟೇ ನೀನು  ಬಾಳಿಗೇನು ಬೇಕಾಗಿದೆ !!
                  --ರತ್ನಸುತ

ಮಾನವ ಯಂತ್ರ!!!

Image
ಸೂರ್ಯ ಹುಟ್ಟೋಕೂ ಮೊದ್ಲೇ ಎದ್ದು 
ಹೊಸ್ಲು ಸಾರ್ಸಿ, ಓಲೆ ಉರ್ಸಿ 
ನೀರ್ ಕಾಯ್ಸಿ, ಪೂಜೆ ಮುಗ್ಸಿ 
ಗಂಟೆ ಶಬ್ಧ ಕಿವಿಗ್ಬಿದ್ರೆ. 
ಆಗ ಚೂರು ಕದ್ಲೋರ್ ನಾವು
ದೇವ್ರ ಮುಖ ನೋಡೋಕ್ ಮುಂಚೆ 
ದರ್ಶ್ನ ಕೊಟ್ಟು ನಗೋಳ್ ನೀನು 

ತಿಂಡಿ ಮಾಡಿ, ಡಬ್ಬಿ ಕಟ್ಟಿ 
ತಟ್ಟೆಗಿಟ್ಟು ಮುಂದಿಟ್ರೂವೆ 
ತಿನ್ನೋಕ್ ಭಾರ ಅನ್ಸೋ ಹೊತ್ಗೆ 
ತುತ್ತು ಮಾಡಿ ಬಾಯ್ಗಿಟ್ಟೆ 
ಅವ್ಸ್ರದಲ್ಲಿ ಡಬ್ಬಿ ಮರ್ತು 
ಹಂಗೇ ಮನೆ ಬಿಟ್ವಿ ಅಂದ್ರೆ 
ಬಸ್ ಸ್ಟಾಂಡ್ ವರ್ಗೂ ಓಡಿ ಬಂದು 
ಟಾಟ ಹೇಳಿ, ಬ್ಯಾಗಲ್ಲಿಟ್ಟೆ 

ಆಫೀಸಿಂದ ಫೋನ್ ಮಾಡಿ 
"ಏನ್ ಮಾಡ್ತಿದ್ದೀಯ?" ಅಂದ್ರೆ 
ರಾಗಿ ಮಷೀನ್ಗ್ ಹೋಗ್ಬಂದೆ 
ಸೊಪ್ಪು, ತರ್ಕಾರಿ ತಂದೆ 
ಬಚ್ಚಲ್ ತೊಳ್ದು, ನೀರ್ ಸೇದಿ 
ಗಿಡಕ್ಕೆಲ್ಲಾ ನೀರ್ ಸುರ್ದೆ 
ಅವ್ರೇಕಾಯಿ ಸಿಪ್ಪೆ ಸುಲ್ದು 
ಇದ್ಕಿ ಸಾರು ಮಾಡ್ದೆ ಅಂದೆ 

ಸಂಜೆ ಮನೆಗ್ ಬರೋ ಹೊತ್ಗೆ 
ಒಗ್ದಿದ್ ಬಟ್ಟೆ ಮಾಡ್ಚಿಡ್ತಿದ್ದೆ 
ಬಟ್ಟೆ ಒಗ್ದಿದ್ ವಿಷ್ಯ ಮುಂಚೆ
ನನ್ನಿಂದ ಮುಚ್ಚಿಟ್ಟಿದ್ದೆ 
ನೆಂಟ್ರು-ಇಷ್ಟ್ರು, ಆಳು-ಕಾಳು 
ಯಾರ್ಗೂ ಮೋಸ ಆಗ್ದಿದ್ದಂಗೆ 
ಹೊತ್ತೊತ್ತಿಗ್ ಅಡಿಗೆ ಮಾಡ್ಹಾಕಿ 
ಕಾಪಿ ತಿಂಡಿ ಮಾಡ್ಕೊಟ್ಟಿದ್ದೆ 

ಅಪ್ಪ ತೋಟಕ್ಕೆ ಹೋಗಿ ಬಂದ್ರೆ 
ಮೈಕೈಗ್ ನೀರು, ಟವಲ್ಲು ಕೊಟ್ಟು 
ಊಟಕ್ ಎಲ್ರೂ ಕುಂತಾಗ 
ಮಾಡಿದ್ ಅಡ್ಗೆ ಸಾಲ್ದೆ ಬಂದು  
ತಂಗ್ಲು ನೀನ್ ತಿಂದೆ 
ಮಲ್ಗೋ ಮುಂಚೆ ಅರ್ಧ ಗಂಟೆ 
ಯಾವ್ದೋ ಹಾಕಿದ್ ಚಾನಲ್ ನೋಡ್ತಾ 
ಬಿಡಿ ಹೂವ ಕಟ್ಕೊಂಡು, ತೂಕಡ್ಸಿ ಬಿದ್ದೆ 

ಯಾವತ್ತೂ ಖಾಯ್ಲೆ ಬಿದ್ದೋಳಲ್ಲ 
ಅಪರೂಪಕ್ಕೆನಾರ ಉಷಾ…

ಹೀಗೊಂದು ಭಯಾನಕ ದೃಶ್ಯ!!!

ಅವಳ ಕಣ್ಣಲ್ಲಿ ಹಿಟ್ಲರ್ ಪಡೆಯನ್ನ ಒಂದೇ ಏಟಿಗೆ ದ್ವಂಸ ಮಾಡುವಷ್ಟು  ಕಿಚ್ಚು ಹಚ್ಚಿದ ಸಿಡಿ ಮದ್ದು ತುಂಬಿತ್ತು 
ಬಿಡಿ ಬಿಡಿಯಾಗಿ ಅಗ್ನಿ ಕುಂಡಗಳು  ಬೆಂಕಿ ಕಿಡಿಗಳ ಉಗುಳುವುದನ್ನ ಕಂಡು  ಬೆಚ್ಚಿ ಬೀಳದೇ ಇರುವಷ್ಟು ಛಲ ಛಿದ್ರ 
ಆ ನೋಟ ಬಾಣದಲ್ಲಿ ಬೆಟ್ಟವನ್ನೇ ಸೀಳಿ  ತುಂಡಾಗಿಸುವಷ್ಟು ಭಾವೋದ್ವೇಗ ಎದ್ದೋ, ಬಿದ್ದೋ,  ತಪ್ಪಿಸಿಕೊಂಡರೆ ಸಾಕಾಗಿತ್ತು 
ಅತ್ತಲಿಂದಿತ್ತಲಿಗೆ ಹೊರಳಿದ ಕಣ್ಗುಡ್ಡೆ  ನೋಟದ ಬೇಲಿ ಸೀಮೆ ನೆಟ್ಟು, ಬೆಂಕಿ ಹಚ್ಚಿ  ದಾಟದಂತೆ ಕಾಣದ ಮಂಡಲ ಹಾಕಿದಂತಿತ್ತು 
ವೀಕ್ಷಕ ವರ್ಗದಲ್ಲೊಬ್ಬನಾಗಿದ್ದ ನನಗೇ  ತಂತಾನೇ ಬೆವೆರು ಇಳಿದಿರಬೇಕಾದರೆ, ಪಾಪ  ಕೋಪಕ್ಕೆ ಗುರಿಯಾದ ಆತ? ದೇವರೇ ಕಾಪಾಡಲಿ!!!  
ಆ ಕ್ಷಣಕೆ, ಆ ನತದೃಷ್ಟ ನನಗೆ ಕಂಡದ್ದು  ಕಬ್ಬಿಣದ ಸಲಾಕೆಗೆ ತಿವಿದು ಇದ್ದಿಲ ಉರಿಯಲ್ಲಿ  ತಿರುವಿ, ತಿರುವಿ ಸಮವಾಗಿ ಬೇಯಿಸಿದ ತಂದೂರಿನಂತೆ  
ಅವಳು, ಮಾಂಸ ಬೇಯುವ ಮುನ್ನವೇ  ಕಸಿದು, ಕಿತ್ತು, ಕಚ-ಕಚ ಅಗಿದು  ಮೂಳೆ ಸಮೇತ ತಿನ್ನಲು ಸಜ್ಜಾದ ಹಸಿದ ಹೆಮ್ಮಾರಿಯಂತೆ !!
                                                           --ರತ್ನಸುತ

ನಿವೇದನೆ

ಕಣ್ಣಂಚಿನ ಕಿರು ನೋಟದಿಂದ
ಭಾರಿ ಪ್ರಮಾಣದ ಆಘಾತ
ತುಟಿ ಅಂಚಿನ ನಸು ನಗೆಯಿಂದ
ನಷ್ಟ ತುಂಬಲಾಗದ ಅಪಘಾತ
ತುರ್ತು ಪರಿಸ್ಥಿತಿಯಲ್ಲಿ ಬೇಕಿರುವುದು
ನಿನ್ನ ಉಸಿರಿನ ಬೆಂಬಲವೇ
ಹಾಗೂ ಬದುಕುಳಿಯಲು, ಪ್ರೀತಿಯಲಿ
ಬೀಳದೆ ಹೋದರೆ ದಾರುಣವೇ!!  

ಸಂಭಾವಿತನ ಸಂಭಾವನೆಯಲ್ಲಿ
ಚಿಟಿಕೆಯಷ್ಟು ಪೋಲಿತನವು
ಸಂಬಾಳಿಸಿ ನಾ ನಿನ್ನೆದುರಾದರೆ
ಕಣ್ಣ ಮಿಟುಕಿಗೆಲ್ಲಾ ಮರುವು
ವಿನಿಮಯವಾಗುವ ವೇಳೆ ಏತಕೆ
ವಿನಾಕಾರಣದ ಅಡಚಣೆಯು?
ಮರು ತಯಾರಿಗೆ ಸಮಯದಭಾವ
ಈಗಲೇ ಮುಗಿಯಲಿ ಅಭಿನಯವು

ಮಾತಿನ ತಿರುವಲಿ ಕೊಂಕಿನ ಕೊಕ್ಕಿ
ಸಿಕ್ಕಿ ಬೀಳಲೇ ಸರಸದ ವೇಳೆ
ಅರ್ಥವಾಗದ ಪದಗಳ ಬಳಸಿ
ವಿವರಿಸುವೆ ನಾ, ಸಿಗುವೆಯಾ ನಾಳೆ?
ಮೌನದಲ್ಲಿಯೇ ಸಮ್ಮತಿ ಸೂಚಿಸಿ
ತೊಲಗಿಸಲು ಗೊಂದಲದ ಹುಳುವ
ಸುತ್ತಿ-ಬಳಸಿ ಹೇಳಿ ಮುಗಿಸುವೆ
ಅರಿತುಕೊಳುವೆಯಾ ನನ್ನ ಈ ಒಲವ

                                --ರತ್ನಸುತ

ತವಕ - ಸೋತು ಗೆಲ್ಲುವನಕ!!!

ಅದ್ದಿಕೊಂಡು ಕಣ್ಗಾಡಿಗೆಯ ಬರಣಿಯಲಿ    ಬಿಗಿದಪ್ಪಿಕೊಂಡ ಕುಂಚವ ಎಳೆದು ಕಣ್ಣಿಗೆ  ಏರು ಪೇರಾದ ರೇಖೆಯ ಸರಿಪಡಿಸಲು  ಕಿರು ಬೆರಳ ಅಂಚನು ನೇವರಿಸಿ ಮೆಲ್ಲಗೆ  ಮೆಲ್ಲುಸಿರ ಊದಿ, ರೆಪ್ಪೆಗಳು ಬಡಿಯಲು  ಕಣ್ಣಂಚಿನಿಂದ ಹೊಮ್ಮುವ ಹನಿಯ ತಡೆದು  ಮತ್ತೆ ತೆರೆದ ಕಣ್ಣಿನ ಸೀಮೆ ಕೆದರಿರಲು  ಮತ್ತೊಮ್ಮೆ ಕುಂಚ ಹಿಡಿವ ತುಂಟ ತವಕ 
ರವಿಕೆಯ ಕೊನೇ ಕೊಂಡಿಗೆ ಕೈ ಎಟುಕದೆ  ಒಬ್ಬಳೇ ಒದ್ದಾಡುವುದ ಕದ್ದು ನೋಡಿ  ಯಾರೂ ಇರದುದ್ದ ಖಾತರಿ ಪಡಿಸಿ  ನಿನ್ನ ಹುಡುಕಾಟದ ಕಣ್ಣಿಗೆ ಸಿಕ್ಕಿ  ಸನ್ನೆಯಲೇ ಅಪ್ಪಣೆಯ ಕೊಟ್ಟು ಬೆನ್ತೋರಲು  ಸನಿಹಕೆ ಒಂದೇ ಉಸಿರಲ್ಲಿ ಓಡಿ  ಕೊನೆ ಹೆಜ್ಜೆಯ ಸುಧಾರಿಸುತ ಇಟ್ಟು  ಕಂಪಿಸಿ ಕೊಂಡಿಯನು ಸಿಕ್ಕಿಸುವ ತವಕ 
ಎಂಜಲು ಮಾಡಿದ ಗಾಜಿನ ಲೋಟದ ಕೆನೆಗಟ್ಟಿದ ಹಾಲ ನಿನ್ನ ತುಟಿ ಸೋಕಿಸಿ  ಒತ್ತಾಯಿಸಿ ಕುಡಿಸಿ, ಕೊನೆ ತೊಟ್ಟನು ಉಳಿಸಿ  ಹಾಲ ಮೀಸೆಯ ನೀ ಒರೆಸುವ ವೇಳೆ  ತುಟಿ ಲೇಪದ ಅಚ್ಚಿಗೆ ತುಟಿಯ ಒತ್ತಿ  ಲೋಟವನು ಮೆಲ್ಲಗೆ ಮೇಲಕ್ಕೆ ಎತ್ತಿ  ತಳದ ತಳಮಳದ ಆ ಕೊನೆಯ ಹನಿಯ ಮಂದ ಗತಿಯಲಿ ಹಿಡಿದು ಹೀರುವ ತವಕ  
ಏಕಾಂತ ಇರುಳ, ನೀಳ ಮೌನ ವಿಹಾರ  ದೋಣಿಯ ಆಚೆ ತುದಿಯಲಿ ನಿನ್ನ ಮುಂಗೋಪ  ಗುಮ್ಮ ಕಥೆಗಳ ಬೇಡದ ಕಿವಿಗೆ ಊದಿರಲು   ಬೆದರಿ ನೀ ನಡುಗಲು ಆಯ ತಪ್ಪಿತು ದೋಣಿ  ಇಬ್ಬರನು ತಂದು ನಿಲ್ಲಿಸಿತು ಅದರ ಮಧ್ಯ  ಅಂತರವೇ ಇರದಂತೆ ಅಧರಗಳ ಮಧ್ಯ  ಮುಂದುವರೆಯುವ ಮುನ್ನ, ನಡುವ ಮೆಲ್ಲ ಚಿವುಟಿ  ಬೈಗುಳದ ಹರಿವಿಗೆ ಕಿವಿಯಾಗುವ ತವಕ 
ಒಂದೇ ದಿಂಬಿಗೆ, ಒಂದಾದ ಇಬ್ಬರು  ಪಿಸುಗುಡುತ ಸಾರಿದ ಪ್…

ಅಗಲಿದ ಮನೆ ದೇವರು !!

ಎಂದೂ ನಿನ್ನ ಕೈಗೆ 
ಅಷ್ಟು ಸಲೀಸಾಗಿ ಸಿಕ್ಕವನಲ್ಲ 
ನಿನ್ನ ಹಳೇ ವೇದಾಂತವ ಕೇಳಿ, 
ತಲೆಯಾಡಿಸಿ, ದಣಿಯುವಷ್ಟು ತಾಳ್ಮೆ 
ಕುದಿ ರಕ್ತಕ್ಕಿರಲಿಲ್ಲ 

ನಿನ್ನ ಬಿರುಕು ಕೈಗಳು 
ನನ್ನ ಕೆನ್ನೆ ಸವರಿದಾಗೆಲ್ಲಾ 
ಒರಟು ಗೆರೆಗಳ ಅದೃಶ್ಯಗೊಳಿಸಲು 
ನನ್ನ ಮೃದು ಕೈಗಳಿಂದ 
ಉಜ್ಜಬೇಕಾಗುತ್ತಿತ್ತು ಮುಖವ 

ಇಂದಿಗೂ ನೆನಪಿದೆ ಆ 
ಬಿಸ್ಕತ್ತು, ಏಲಕ್ಕಿ ಬಾಳೆ ಹಣ್ಣನ್ನು 
ನಿನ್ನ ಕೋಣೆಯ ಬೀರೂವಿನಿಂದ 
ತಂದು ಕೊಡುತ್ತಿದ್ದ ದೃಶ್ಯ 
ಮೂರು ಹೆಜ್ಜೆ ಇಡುವಷ್ಟರಲ್ಲೇ ನಿನಗೆ ಆಲಸ್ಯ 

ಕಣ್ಗಳಲಿ ಏನೋ ಕೇಳಬಯಸುವ ಆಸೆ 
ಅಷ್ಟರಲ್ಲೇ ಮಾತು, 
ಒಂದು ಏದುಸಿರು 

ಅಂಟಿ ಕೂತಾಗ, 
ಆ ಆತ್ಮೀಯತೆ 
ನೆರೆ ನೆಂಟರಿಷ್ಟರ ಹಿಡಿದು 
ತುಸು ದೂರದ ವಿಚಾರ 

ಪಾದ ರಕ್ಷೆಯ ಮೇಲೆ 
ಅನುಭವದ ತೂಕ ಹೆಜ್ಜೆಯ ಗುರುತು 
ಮಂಚದ ಮೇಲೆ, 
ಬಿಳಿಗೂದಲ ಕೂಸಿನ ಮೈ ಮರೆತ ನಿದ್ದೆ 
ಊಟ, ಕೆಲಸ, ಮಾತು ಎಲ್ಲವೂ ಮಿತ 

ನೆನಪಿನ ನೂರಾರು ಗರಿಗಳ ಮಧ್ಯೆ 
ನೀನೂ ಸೇರಿಕೊಂಡೆ ವಿನೂತನ ಬಣ್ಣವ ತಾಳಿ 
ಕಾಣಸಿಕ್ಕಾಗೆಲ್ಲ ಕಣ್ಣಲ್ಲಿ ನೀರು ಜಿನುಗಿಸಿ 
ನಿನ್ನೊಡನೆ ನಡೆಸಿದ ಸಂದರ್ಶನಗಳ 
ಮತ್ತೆ ಮರುಕಳಿಸಿ 

ಮುಂದೊಮ್ಮೆ ಧರಿಸಬೇಕಾಗಿ ಬರುವುದು 
ನಿನ್ನ ಪಾದ ರಕ್ಷೆಗಳನ್ನೇ 
ಅದೇ ಮಂಚದ ಮೇಲೆ, 
ನೀ ಕಂಡ ಕನಸುಗಳ ಜಾಡಿನಲಿ ನಡೆದು 
ಕಥೆಯಾಗ ಬೇಕಿದೆ ನಿನ್ನ ನಂತರದ ಬಾಳ ಪುಟಗಳಲ್ಲಿ 

ನಿನ್ನ ಅಗಲಿಕೆಯಿಂದ ಉಂಟಾದ ಖಾಲಿತನಕ್ಕೆ 
ಯಾವ ದೇವರ ಪ್ರತಿಷ್ಟಾಪಿಸುವುದೋ ತಿಳಿಯೆ !!
"ಉಸಿರಾಡಿ ದಣಿದೆಯಾ??" ಮಲಗು ಇನ್ನು ನಿಶ್ಚಿಂತೆಯಲಿ 
ಅಗೋಚರ ಮಾರ್ಗದರ್ಶಿಯಾಗ…

ಅನುಸಂಧಾನ

ಮೌನ ವಹಿಸುವ ನಿನ್ನ ಹೊಗಳಲು  ಮಾತಿಗೆ ಕೀಳರಿಮೆ ತರಿಸಿದೆ  ನಿನ್ನ ನಡೆಯ ಎತ್ತಿ ಹಿಡಿಯಲು  ಹಂಸಕೂ ಮುಜುಗರ ಪಡಿಸಿದೆ  ಕಮಲ ಕಣ್ಣಿಗೆ ಹೊಲಿಸಿರಲು  ಲೆಕ್ಕಿಸದೆ ಹೋದೆ ಅದರ ತಳಮಳ  ಸಂಪಿಗೆ ಮೂಗಿನ ಹೋಲಿಕೆಗೆ   ಪ್ರಶ್ನೆ ಎದ್ದಿತು "ಎಲ್ಲಿ ಪರಿಮಳ?"
"ಕ್ಷಿತಿಜವೂ ಕೈ ಚಾಚು ದೂರ"  ಹೀಗೆ ಹುಸಿ ನುಡಿಯಾಡಿದವನಿಗೆ 
ಹೆಜ್ಜೆ ಇಡಲೂ ತೋಚದಾಗಲು  ಇದು ಭೂಮಿಯ ಶಾಪವೇ? ನೂರು ಕವಿತೆಯ ಹೋಗಳು ಹಾಡಿಗೆ  ಬೇಡಿಕೆ ಇರದಂತೆ ತೋಚಿದೆ  ನಿನ್ನ ಕಂಠವ ಜೇನು ಅನಲು  ಕೋಗಿಲೆಗೆ ಕೋಪವೇ?
ಸಪ್ಪೆಯಾಗಿದೆ ಸಂಜೆ ಬಾನು  ಒಪ್ಪುವಂತಿಲ್ಲ ಅರಳು ಹೂವು  ಬೀಸು ಗಾಳಿಗೆ ಮುಗ್ಧತೆಯ ಕೊರತೆ  ರಾತ್ರಿ ರಮ್ಯಕೆ ಭಯದ ಕಾವು  ಕಾಮನ ಬಿಲ್ಲಿಗೆ ಒಂದೇ ಬಣ್ಣ  ಅದು, ನೀಲ್ಗಟ್ಟಿ ಕಾಣದಾಗಿದೆ  ಛಂದಸ್ಸು ಮರೆತವು ಅಡ್ಡಾದಿಡ್ಡಿ ಪದಗಳು  ಮಾತ್ರೆ-ಗುಳಿಗೆ ಸಾಲದೆ 
ತೀರ ಮರಳಿನ ಮೇಲೆ ಗೀಚಲು  ನಿರುತ್ಸಾಹಿ ಅಲೆಯ, ಅಸಾಧಾರಣ ನಡೆ  ಅದೇಕೋ ಅಳಿಸದೇ ದೂರುಳಿಯಿತು  ಮಾತು ಬಿಟ್ಟಿದ್ದರಿಂದಲೇ ? ಭೋರ್ಗರೆದು ಸುರಿದ ಮಳೆಯಲಿ  ನಾ ಮಿಂದೆ ಖುಷಿಯಲಿ ಆದರೆ  ಸದ್ದಿಲ್ಲದೇ ತಾ ರದ್ದಿಯೇನಿಸಿತು  ನೀ ನೆನಪಾದ ಕೂಡಲೇ!!
ನಿನ್ನ ನಂಟಿಗೆ ಪ್ರಕೃತಿಯನೇ  ಗಂಟು ಬಿಗಿದು ಸ್ವಂತವಾಗಿಸೆ  ನಿನ್ನ ಅರೆಕ್ಷಣ ಅಗಲುವಿಕೆಗೆ  ಎಲ್ಲವೂ ನಿಸ್ವರೂಪಿಯೇ   ರೂಢಿಯಾಗಿದೆ ಹೋಲಿ ಬರೆವುದು  ಹೋಲಿಕೆಗೆ ಸ್ಪಂದಿಸದ ಪದಗಳ  ನಿನ್ನ ಪರಿಚಯ ಮಾಡಿಸದೆ  ಮುಂದುವರೆಯಲು ಸಾಧ್ಯವೇ?
                            --ರತ್ನಸುತ

ಮನದಾಸೆ ನೂರಾರು, ಬರೆದುಕೊಂಡೆ ಚೂರು!!

ಆ ಕಣ್ಣುಗಳು ಹುಡುಕಾಡಿದ ರೀತಿಗೆ  ನನ್ನನ್ನೇ ನಿರೀಕ್ಷಿಸಿರಬೇಕೆಂದು ಹುಸಿ ಭಾವಿಸಿ  ನೋಟಕೆ ಎದುರಾಗಿ  ಒಂದಿಷ್ಟು ಆರಾಮು ನೀಡುವುದಾದರೆ  ಅಷ್ಟೇ ಸಾಕೆನಿಸುವಷ್ಟು ಉದಾರಿ ಆಗುವಾಸೆ 
ಕಾಲ್ಬೆರಳು ನೆಲವ ಗೀಚಿ  ನಿಂತಲ್ಲೇ ಹೊಂಡವಾಗಿಸುವಾಲೋಚನೆಯಲ್ಲಿರಲು    ಅಂಗೈಯ್ಯ ಚಾಚಿ ಗೀಚಿಸಿಕೊಂಡು  ಮೃದು ಬೆರಳ ಕಾಲ್ಗಿಚ್ಚ ಕೆನ್ನೆಗೆ ಸವರುತ  ಹಠದಿ ಒಪ್ಪದ ಮನಕೆ ವಾದ ಮಂಡಿಸುವಾಸೆ 
ಗಾಳಿಗೆ  ಹಾರುವ ದಾವಣಿಯ ಅಂಚಿಗೆ  ನೀ ಉಡುವ ಮೊದಲೇ ನನ್ನ ಪರಿಚಯ ಮಾಡಿಸಿ  ಅಪರಿಚಿತನಂತೆ ನಿನ್ನ ಹಾದಾಗ  ಗುರುತು ಹಿಡಿದು ನನ್ನ ಮುಖಕೆ ಹಾರುವ ವೇಳೆ  ಉನ್ಮತ್ತನಾಗಿ ಸಾಯುವ ಆಸೆ 
ಒಮ್ಮೆ ಸಿಕ್ಕಿ, ಮತ್ತೊಮ್ಮೆ ಸಿಗದ ನಿನ್ನ  ಸಿಕ್ಕಲ್ಲಿಯೇ ಸಿಗುವೆ ಎಂಬ ಭ್ರಾಂತಿಯ ಹಿಡಿದು  ಇದ್ದ ಕೆಲಸಗಳೆಲ್ಲವನು ತೊರೆದು  ನೆನ್ನೆ ಕೊಂಡ ಮೊಗ್ಗಿಗೆ ನೀರು ಚಿಮುಕಿಸಿ ಹಿಡಿದು  ದಿನ ಮುಳುಗುವವರೆಗೆ ಕಾಯುವ ಆಸೆ  
ಪ್ರೇಮ ನಿವೇದನೆ ಗುಟ್ಟಾಗಿ ನಡೆಸಿ  ಬೇಟಿಗೆಂದು ನೀ ಹೇಳಿ ಕಳಿಸುವ ವೇಳೆ  ಕಿವಿಗೆ ಹತ್ತಿಯ ತುರುಕಿ, ಬಾಯಿ ಹೊಲಿದು  ನಿನ್ನ ಬೈಗುಳಗಳಿಗೆ ಸಮ್ಮತಿಯ ಉಡುಪು ತೊಡಿಸಿ  ನಾನೂ ಪ್ರೆಮಿಯೆಂದು ಬೀಗುವಾಸೆ ....
                                          --ರತ್ನಸುತ

ಹಳ್ಳಿ ಮನೆ !!!

ಹೆಂಚಿನುಪ್ಪರಿಗೆ 
ಬಿಡದೆ ಸುರಿದ ಮಳೆ 
ಗುಡಾಣದಲಿ ಹೆಗ್ಗಣ-
-ಗಳ ನಿಲ್ಲದ ಚಕಮಕಿ 
ಕಬ್ಬಿಣದ ಗೂಟ 
ಗುದ್ದಲಿ, ಕೊಡಲಿ ಜೋತು 
ಜೊತೆಗೆ ಮುರಿದ ಕೊಡೆ 
ಬಿರುಕು ಬಿಟ್ಟ ಗೋಡೆ 

ಬತ್ತ ಹೊಟ್ಟಿನ ಮೂಟೆ 
ಹಕ್ಕಿ ಪಿಕ್ಕೆಯ ಘಮ 
ಅಲ್ಲಿಲ್ಲಿ ತೊಟ್ಟು ತಾಳ
ಹಾಕಿಸಿದ ಮಾಳಿಗೆಯ ತೂತು 
ವರ್ಷಗಟ್ಟಲೆ ತಿರುವದ 
ತೂಗು ಪಂಚಾಂಗದ ಪುಟ 
ಮೆಲ್ಲ ಗಾಳಿಯ ಬೀಸಿಗೆ 
ತೆರೆದ ತೊದಲು ನುಡಿ 

ಧೂಳು ಮೆತ್ತಿದ 
ಅಜ್ಜನ ಕಾಲದ ಖುರ್ಚಿ 
ಮಸಿಯಾಗಿ ಚೆಲ್ಲಾಡಿದ 
ತುಂಡು ಬಟ್ಟೆ 
ಮುಸುರೆ ತಿಕ್ಕದೆ ಉಳಿದ 
ಒಂದೆರಡು ಗಡಿಗೆ 
ಪಾಚಿಗಟ್ಟಿದ ಗೋಡೆ 
ಬಚ್ಚಲ ಬದಿಗೆ 

ಕಾಲಿಗೆ ಸಿಕ್ಕ 
ಆಟದ ಕನ್ನಡಕ
ಡಬ್ಬಿಯಲಿ ಕೂಡಿಟ್ಟ ಗೋಳಿ 
ಹಂಸ ಕೈಪಿಡಿಯ 
ಮರದ ಊರ್ಗೋಲು 
ಸೋಲುಣಿಸಿ ಕೈತಪ್ಪಿದ 
ಬಣ್ಣದ ಬುಗುರಿ 

ಗಾಜೊಡೆದ ಚಿತ್ರ ಪಟ 
ಗಾಳಿಪಟದ ನೂಲು 
ಚಿಣ್ಣಿ-ದಾಂಡನು 
ಬಚ್ಚಿಟ್ಟ ಚೀಲ  
ಹಿತ್ತಲ ಪಾಯ್ಕಾನೆ 
ಬಯಲ ಉಚ್ಚೆ, ಸ್ನಾನ 
ತಟ್ಟಿದ ಬೆರಣಿ 
ಗುರುತಿನ ಚಪ್ಪಡಿ ಕಲ್ಲು 

ಮೂಗಿಗೆ ಬಿಗಿದ 
ಕರವಸ್ತ್ರವನೂ ದಾಟಿ 
ಸವಿ ನೀಡಿದವು ಹಳೇ 
ನೆನಪುಗಳ ಘಾಟು 
ಮಾತ್ರವಲ್ಲದೇ 
ನೀಡಿದವು ಎಂದಿನಂತೆ 
"ಮರೆತೆಯಾ?" ಎಂದನುತ 
ಸೂಕ್ಷ್ಮದಲಿ ಏಟು !!! 

                    --ರತ್ನಸುತ

ಹೀಗೊಂದೆರಡು ಸಾಲುಗಳು !!!

ಹೀಗೊಂದು ಜಾಡು 
ದಿಕ್ಕು ದೆಸೆ ಇಲ್ಲದೆ
ಏದುಸಿರಿಟ್ಟು ಓಡಿಸಿ 
ಯಾವುದೋ ಹಳ್ಳಕ್ಕೆ ಬೀಳಿಸಿ 
ಮೊಣ ಕಾಲು-ಕೈಯ್ಯಿ
ತರಚಿಕೊಂಡು, ಕೀವು ಕಟ್ಟಿ 
ನೆತ್ತಿಯ ಸುಟ್ಟ ಜ್ವರ
ಅಡ್ಡಗಾಲಿನ ನೋವು

ಹೀಗೊಂದು ಇರುಳು
ತಮ್ಮ ನೆರಳಿಗೆ ತಾವೇ 
ಬೆಚ್ಚಿ ಬೀಳುವ ಹಾಗೆ
ಅಸಹಾಯಕರ ಮಾಡಿ
ಮೊಂಡು ಈಟಿಯ ಕೊಟ್ಟು
ಕಾಳಗಕೆ ದೂಡಿ
ನಿದ್ದೆ ಬರಿಸದೆ
ಒದ್ದಾಟಕೆ ಮಣಿಸಿತು

ಹೀಗೊಂದು ಮಾತು
ಆಯ ತಪ್ಪಿ ಹೊರಬಂದು
ಕಾಯ್ದುಕೊಂಡ ಗತ್ತಿಗೆ
ಕುತ್ತನು ತಂದು
ಜೋಡಿಕೆಗೆ ಸಿಗದೇ
ತನ್ನಿಷ್ಟಕೆ ಹರಿದಾಡಿ
ಹೆಸರಿಗೆ ಮಸಿ ಬಳಿದು
ಕೆಸರೆರಚಿತು ಮುಖಕೆ

ಹೀಗೊಂದು ಮೌನ
ಮೃತ್ಯು ಅವತಾರದಲಿ
ಕುತ್ತಿಗೆಯ ಹಿಚುಕಿ
ಹೊರಗೆ ತೋರ್ಪಡಿಸದೇ
ಒಳಗೊಳಗೇ ಚಿವುಟಿ
ಆವರಣವ ತನ್ನ ತೆಕ್ಕೆಯಲಿ 
ಸೆರೆಹಾಕಿ 
ಅಸ್ತಿತ್ವವನು ಮೆರೆಯಿತು 

ಹೀಗೊಂದು ಸಾಲು
ಇಕ್ಕಟ್ಟಿನಲ್ಲೂ ಸರಾಗವಾಗಿ
ಅಡೆ ತಡೆಗಳಿಂದ
ಅವಿರೋಧವಾಗಿ ಹರಿದು
ತಟ್ಟಿದೆದೆಯ ತೆರೆದೊಡನೆ
ತೆಪ್ಪಗೆ ತೇಪೆ ಹಾಕಿಕೊಂಡು
ತನ್ನದೇ ತಾಳ ಹಿಡಿದು
ಕವಿತೆ ಸಾಲಾಯಿತು .....

                 --ರತ್ನಸುತ

ದತ್ತು ಪುತ್ರಿ!!

Image
ಅಪ್ಪಿ ತಪ್ಪಿ ನನ್ನ ಕೈಗೆ 
ಸಿಕ್ಕಿತೊಂದು ಲೇಖನಿ 
ಬರೆಯಲಿಕ್ಕೆ ಮಡಿಲು ಸಿಗದೇ 
ಗೋಡೆ ಆಯ್ತು ಹಾಳೆ 
ಗೇಚಿಕೊಂಡು ಸಾಗಿದೆ 
ಹೊಸತೊಂದು ಲಿಪಿಯ ಹಿಡಿದು 
ನನ್ನಿಷ್ಟ-ಕಷ್ಟಗಳನು  
ಅಪೂರ್ಣ ಬರೆದು ಮುಗಿಸಿ 

ಮಾಲೀಕ ಇದ ಗಮನಿಸಿ
ಹಲ್ಲು ಮಸೆದುಕೊಂಡು 
ಥಳಿಸಿದ ಎಳೆಗೂಸು ನನ್ನ 
ಲೇಖನಿಯ ಕಸಿದು
ಅರ್ಥವಾಗಲಿಲ್ಲ ಅಲ್ಲಿ  
ಭಾವನೆಗಳು ಅವನಿಗೆ 
ಸುಣ್ಣ ಬಳಿಸಿ, ಬಿಟ್ಟ ಅಳಿಸಿ 
ನೋವು ನನ್ನ ಮನಸಿಗೆ 

ಮುಂದೊಮ್ಮೆ ಬೆರಳ ಹಿಡಿದು 
ಅಕ್ಕಿ ಎದೆಯ ಮೇಲೆ ಬರೆಸೆ
ಕಂಬ ಮರೆಗೆ ನಿಂತು 
ಅಂದುಕೊಂಡೆ ನಾನು ಹೀಗೆ 
"ಅಂದು ನಾ ಬರೆದದ್ದೇ 
ತಪ್ಪಾಗಿ ಕಂಡವರಿಗೆ 
ಈಗೇಕೆ, ಹೀಗೇಕೆ 
ಒತ್ತಾಯದ ಬಗೆ?"

ಅಸಲಿಗೆ "ನಾನು" 
ದತ್ತು ಪಡೆದ ಹೆಣ್ಣು 
ಅಕ್ಕಿಯ ಕೆದಕಿದ "ಆತ"
ಹರಕೆ ಹೊತ್ತು ಪಡೆದ ಗಂಡು 
ನಾನೀಗ ವಂಶದ 
ಕೊಂಡಿ ಕಳಚಿಕೊಂಡ ಆಳು 
"ಆತ" ವಂಶ ಬೆಳಗೋ ದೀಪ 
ಪಿತ್ರಾರ್ಜಿತ "ವಾರಸ್ದಾರ" 

"ನಾನು" ಸಣ್ಣ ಬರಹಗಾತಿ 
"ಆತ" ಖ್ಯಾತ ಉಧ್ಯಮಿ 
ಮುದಿ ಒಡೆಯನ ಕೊನೆಗಾಲಕೆ 
ಬಿಟ್ಟುಕೊಟ್ಟ ವ್ಯವಹಾರ 
"ಆತ" ಜರಿದ ಜನಕನ 
"ಬೆಪ್ಪ" ಮೂರ್ಖನೆಂದು 
ತಪ್ಪಿತಸ್ತ "ಅಪ್ಪ" ಅತ್ತ 
ನನ್ನ ಕಣ್ಣೀರ ಕಥೆಯೊಂದ ಓದಿಕೊಂಡು ...... 

                                     --ರತ್ನಸುತ

ಹೀಗೊಂದು ಯುಗಳ ಗೀತೆ!!!

(Boy)ಕಣ್ಣಿನೊಳಗೆ ನೇರ ನೋಡಲಾಗದೆ
ಮಂದಹಾಸ ಮೂಡುವುದಕೆ ಏನಿದೆ ?
(girl)ಹೀಗೆ ಮಾತನಾಡಿಕೊಂಡು ಮುಗಿಯದೇ
ನಾಚಿಕೊಂಡು ಮೌನವಹಿಸಬೇಕಿದೆ
(boy)ಗಾಳಿಯಲ್ಲೂ ಮೂಡಬಹುದೆ ಕಲ್ಪನೆ ?
ಈ ರೀತಿಗಿನ್ನೂ ನಾನು ಪಳಗಬೆಕಿದೆ
(girl)ಕನಸ್ಸಿನೂರು ದೂರದಲ್ಲಿ ಕಂಡಿದೆ
ವಿಳ್ಹಾಸ ಇನ್ನು ಪತ್ತೆ ಹಚ್ಚಬೇಕಿದೆ

(boy)ವಿಚಾರ ಮಾಡೊ ಮುನ್ನವೇ
ಪ್ರಚಾರವಾಗೋ ಹಾಗಿದೆ
ಸಮಾಚಾರ ತಿಳಿಯುತ
ಮನಸ್ಸು ತೆಲಿದಂತಿದೆ
(girl)ಹೊಸ ಅಲೆಯ ಜೊತೆಯಲೇ
ಹಳೆ ದೋಣಿ ಚಲಿಸಿದೆ
ನಾ ನನ್ನ ತಡೆವ ಮುನ್ನವೇ
ನಿನ್ನೊಲುಮೆ ತೀರ ಸೇರಿದೆ
(boy)ಸಮಾರಂಭದೊಂದಿಗೆ ಸದಾ ಕಾಲ ಉಳಿಯಲಿ
(Girl)ನಿನ್ನ ಅಗಲಿ ಬಾಳುವ ಭಯ ಚೂರು ಎದೆಯಲಿ

(girl)ಆತಂಕವೆಂದು ಸುಮ್ಮನೆ
ನಿನ್ನತ್ತ ಸರಿದು ಬರುವೆನು
ನಿನ್ನನ್ನು ಸೋಕಿದಾಗಲೇ
ನಾ ಚಿಂತೆ ಗಿಂತೆ ಮರೆವೆನು
(boy)ನಾ ಪೋಲಿ ಚೂರು ಆದರೂ 
ನೀ ಒಪ್ಪಬೇಕು ನಿಜವನು
ನೀ ಸಿಕ್ಕಿದಾಗಿಲಿಂದಲೇ
ನಾ ಪೂರ್ತಿತಿದ್ದುಕೊಂಡೆನು 
(girl)ಕರಾಳ ಕತ್ತಲಲ್ಲಿಯೂ ನಾ ಬೆಚ್ಚದಿವುವೆ ಖಂಡಿತ
(Boy)ಈ ಕೈಯ್ಯ ಹಿಡಿದು ನಡೆದು ಬಾ, ನನ್ ಹೆಸರನೇ ಜಪಿಸುತ..... 

                                                               --ರತ್ನಸುತ

ಕುಡುಕರ ಬೋಧನೆ!!!

ನೆನ್ನೆಗಳು ಇಂದಿನ ಫ್ಲ್ಯಾಷ್ಬ್ಯಾಕ್(flashback) ಸ್ಟೋರಿ
ನಾಳೆಗಳ ಕಾಣೋಕೆ ಕನಸೊಂದೆ ದಾರಿ
ಎಣ್ಣೆ ಏಟಿಗೆ ಸಿಕ್ಕಿ ನೆನಪುಗಳು ಹಸಿರು
ಏನೇ ಹಚ್ಚಿದರೂ  ಇದು ನ್ಯಾಚುರಲ್ ಕಲರ್ಉ
ರಾಖಿ ಕಟ್ಟಿದ ಸಿಸ್ಟರ್ಗಳೇ ಬನ್ನಿ
ಪಾಠ ಕಳಿಸಿದ ಲವ್ ಟೀಚರ್ಸ್ಉ ಬನ್ನಿ
ಅವರವರ ಗೆಳೆಯರೆ ಜೋಪಾನ ಕೇಳಿ
ಮದುವೆ ಆಗುವ ವರೆಗೆ ಒಂದ್ಚೂರು ತಾಳಿ !!

ಖಾಲಿಯಾಗುವ ಜೀಬಿಗಳಿಗೊಂದು ಗುಂಡಿ
ಪರ್ಸಿನ ಕಾಸು ಓಡುವ ಚಕ್ರ ಬಂಡಿ
ಹುಡುಗೀರ ಸ್ಮೈಲಿಗೆ ಹಾರ್ಟ್ಉ ಪಂಚರ್ರು
ಇಲ್ಲೊಬ್ಬ ಸೆಂಚುರಿ ಹೊಡೆದ ಪ್ಲೇಯರ್ಉ
ಇರಬೇಕು ಕಾಮ, ಅಲ್ಪ ವಿರಾಮ
ಕಟ್ಕೊಂಡ ಮೇಲೆ ಇದೆ ಪಂಗ ನಾಮ !!!

ಒಡೆದಾಡಿದ ವೈರಿ ಬನ್ನಿ ಕುಣಿಯೋಣ
ನಾಳೆ ಹೇಗೋ ಏನೋ ಫ್ರೆಂಡ್ಸ್ ಆಗ್ಬಿಡೋಣ
ತಾಳ ನಮ್ಮದೇ ಇಲ್ಲಿ ಲಿರಿಕ್ನಮದೇ 
ಏಕೆ ನಿಂತೆ ಹೀಗೆ ಕ್ವಾರ್ಟರ್ಉ ತರದೇ  
ಲೈಫ್ ಒಂದು ಡ್ರಾಮ, ಆಗ್ಬೇಡ ಗುಮ್ಮಾ
ಇದ್ದಷ್ಟು ದಿನ ಹಂಚಿ ಬಾಳೋಣಧರ್ಮ !!

                                       --ರತ್ನಸುತ

ಬೀದಿ ದೀಪದ ಲೋಪ ವೈಖರಿ!!

Image
ಬೀದಿ ದೀಪದ ಕೆಳಗೆ 
ರೆಕ್ಕೆ ಮುರಿದ ಕೀಟ 
ಇದ್ದ ಒಂದು ರೆಕ್ಕೆ ಬಡಿದು 
ಕಂಬದಡಿಗೆ ಅವಿತು 
ಕಾದಿತ್ತು ಅನವರತ 
ನೆರವನ್ನು ಬಯಸಿ 
ದೀಪ ಉರಿದರೆ ತಮ್ಮವರು  
ಬರುವರೆಂದನಿಸಿ 

ಹೂವಬುತ್ತಿ ಹೊತ್ತು 
ಸಂಜೆ ಹೊತ್ತಿಗೆ ಇಳಿದಳು ಅಜ್ಜಿ 
ಬೀದಿ ಕೊನೆಯ ಶಿವನ- 
-ಗುಡಿಯ ಪೂಜೆಯ ವೇಳೆಗೆ  
ಅಜ್ಜಿ ಪಂಜು ಮರೆತಿದ್ದಳು 
ದೀಪ ಉರಿದ ವಿನಹ 
ದೇವರಿಗಿಲ್ಲ ಹೂವು
ವ್ಯಾಪಾರ ಕಹಿ ಬೇವು 

ಹರಿದ ಚೀಲದ ತುಂಬ
ಕನಸಿನ ಪುಸ್ತಕಗಳ ತುಂಬಿ 
ಕಪ್ಪು ಮಸಿ ಕಂಗಳಲಿ 
ನಾಳೆ ಬೆಳಕನು ಬಯಸಿ 
ಪುಟ್ಟ ಹೃದಯಗಳು ಜ್ಞಾನ -
- ದಾಸೋಹಿಯಾಗಿರಲು 
ಬೆಳಕು ಬಾರದೆ ಅಂದು 
ಆಸೆಗಳಿಗೆ ನಿರಾಸೆ 

ಗಂಡನ ಹಂಗು ಕಳೆದ 
ನತದೃಷ್ಟೆ ಆಕೆ 
ನೆರಳೊಂದೇ ಆಸರೆ, ಆದರೆ 
ಈ ಧರೆಗೆ ಗ್ರಹಣ ಹಿಡಿಯಬೇಕೆ ?!!
ಕಗ್ಗತ್ತಲಲ್ಲಿ ನೆರಳು 
ಹೊರ ಬಾರದಾಗಿತ್ತು 
ಕಾಮಾಂಧರ ಹಸಿವ ಸದ್ದಿಗೆ ಬೆಚ್ಚಿ 
ಪ್ರಾಣವೇ ಮುಷ್ಟಿಯಲಿತ್ತು !!

ಹಾದವರೆಲ್ಲರೂ ಅಪರಿಚಿತರೇ,
ಅಲ್ಲಿ ಒಬ್ಬರನ್ನೊಬ್ಬರು 
ಗುರುತು ಹಿಡಿಯದೇ ಸೋತು 
ಮೌನ ಆವರಿಸಿತ್ತು 
ಒಂದು ಇರುಳಿನ ಈ 
ಘೋರ ಚಿತ್ರಣ ಕಂಡು 
ತಾನೆಷ್ಟು ಉಪಕಾರಿ ಅನಿಸಿ 
ದೀಪವು ಒಳಗೊಳಗೇ ಉಬ್ಬಿತ್ತು !!

                          --ರತ್ನಸುತ

ಕಾರ್ಪೊರೇಟ್ (ಅ)ಸಂವಾದ

ಮ್ಯಾನೇಜರ್ ಟು ಎಂಪ್ಲೋಯೀ (ಕೆಲಸಕ್ಕೆ ಸೇರಿದ ಹೊಸತರಲ್ಲಿ) 
----------------------------- ನೋಡು ಮಗು ಇದು ನಿನಗೆ Goldenಉ ಅವಕಾಶ  ನಿನ್ನ ಶುರು ಇಲ್ಲಿದೆ, ಗುರಿ ಮೇಲೆ ಆಕಾಶ  ಅಂಬೆಗಾಲಿನ ನಡೆ ಓಟವಾಗಲಿ ಮುಂದೆ  ಈ Feildಅಲಿ ನಾನು, ನೀನು ಎಲ್ಲರೂ ಒಂದೇ 
ಮೂರು ತಿಂಗಳವರೆಗೆ Trainingಉ ನಿನಗೆ  Projectಉ ಸಿಗುವುದು ಅದೆಲ್ಲದರ ಕೊನೆಗೆ  Dedication ಅನ್ನುವುದೊಂದಿದ್ದರೆ ಸಾಲದು  ಚುರುಕಾಗಿ ಇರಬೇಕು ಈ Gameನೊಳಗೆ 
ನಾನು Managerಉ ನೀ ನನ್ನ ಕೈ ಕೆಳಗೆ  ಕೆಲೆಸ ಹೇಳಿದ Timeಗೆ ಮುಗಿಸು ಆಗ  Increment ಜೊತೆಗೆ Promotionಉ ಉಂಟು  ಕೆಲಸ ಒಂದನು ಬಿಟ್ಟು ಬಿಡು ಬೇರೆ ನಂಟು 
Recognition ಅನ್ನುವುದು ಸುಲಭದ ಮಾತಲ್ಲ ನನ್ನ ಮಾತಿಗೆ "No" ಅಂದವರು ಉಳಿದಿಲ್ಲ  ವರ್ಷ ಕಳೆಯುವ ಹೊತ್ತಿಗೆ ಕೊಡುವೆ Onsiteಉ  ಕೆಲಸ ಹೆಚ್ಚಾದರೂ ಮಾಡದಿರು Complaintಉ 
ಎಂಪ್ಲೋಯೀ ಟು ಮ್ಯಾನೇಜರ್ (3 ವರ್ಷದ ಬಳಿಕ)  ----------------------------- ಎಲ್ಲಿ ಉಳಿಯಿತು ಗುರುವೇ ನಿನ್ನ Promiseಉ  ಮೂರು ವರ್ಷವೇ ಕಳೆಯಿತು ಪಡೆದು Successಉ  ನೀನು Bikeಅನು ಮಾರಿ ಹೊಸತು Carಅನು ಕೊಂಡೆ  ನಾನಂತೂ City Busಇನಲೇ ಆಸೆಗಳ ಕೊಂದೆ 
ಮನೆಯವರ ಮುಖ ನೋಡಿ ತಿಂಗಳುಗಳೇ ಕಳೆದು  ಈಗೀಗ ನನ್ನ ಗುರುತು ಹಿಡಿದರೆ ಹೆಚ್ಚು  Shiftಅಲ್ಲಿ ಕೆಲಸ ಮಾಡುವ ನನಗೆ ಈ ನಡುವೆ  ಬೆಳಕು ಕಂಡರೆ ಸಾಕು ಹಿಡಿವುದು ಹುಚ್ಚು 
ನನ್ನ Seatಇಗೂ ನನ್ನ ಮೇಲಿದೆ ಸಿಟ್ಟು  "ಬಿಟ್ಟು ತೊಲಗು …

ಈ ಸ್ವತಂತ್ರ ದಿನದಂದು

ಜನಸಾಮಾನ್ಯ ಬಿಕ್ಕಿದ್ದಾನೆ 
ಹೆಚ್ಚಿದ ಈರುಳ್ಳಿ ಏಟಿಗೆ 
ಅದರ ರೇಟಿಗೆ 

ಬೆಳೆದ ರೈತ ತೃಪ್ತನಾದ 
ತುಂಬಿದ ಹೊಟ್ಟೆಗೆ 
ಚಿಲ್ಲರೆ ನೋಟಿಗೆ 

ಸದನದಲಿ ನಿಲ್ಲದ ಕಲಾಪ 
ಆರ್ತಿಕ ಬಿಕ್ಕಟ್ಟಿಗೆ 
ರುಪಾಯಿ ಮೌಲ್ಯ ಕುಸಿತಕೆ 

ಇದರ ನಡುವೆ ತೊಗರಿ ದುಬಾರಿ 
ತಟ್ಟು ಒಬ್ಬಟ್ಟಿಗೆ 
ವರಮಹಾಲಕ್ಷ್ಮಿ ಹಬ್ಬಕೆ 

ಹಬ್ಬವಾಗದೆಂದು ತಿಳಿದು 
ಮುನಿದ ಮಡದಿ ತವರಿಗೆ 
ಯಾರಿಲ್ಲಾ ಪತಿಯ ನೆರವಿಗೆ 

ಹೆಮ್ಮೆಯಿಂದ ಪ್ರಜೆಗಳೆಲ್ಲಾ 
ಒಂದಾದರು ಇಂದಿಗೆ ( ಮಾತ್ರ??) 
ನಾವು ಭಾರತೀಯರೆಂಬ 
ಏಕಮತದ ಹೆಮ್ಮೆಗೆ !!!! 

                                 -- ರತ್ನಸುತ

ಸ್ವತಂತ್ರ ಹನಿಗಳು !!!

ಸ್ವತಂತ್ರ ದಿನಾಚರಣೆಯಂದು
ವಾಹನ ಚಾಲಕರ
ಘೋರ ಪ್ರತಿಭಟನೆ
ಅಡ್ಡಿ ಪಡಿಸಿ
ಕೇಕೆಹಾಕುತ್ತಾ ನಗುತ್ತಿದ್ದ
ಕೆಂಪು ನಿಶಾನೆಯ
ದೀಪಗಳ ವಿರುದ್ಧ !!
****
ಸ್ವತಂತ್ರ ದಿನಾಚರಣೆಯಂದು
ಪ್ರಣಯ ಕವಿತೆ ಬರೆಯಬಹುದೆ??
ಒಲ್ಲೆ ಎಂದ ಬೆರಳುಗಳ ಒತ್ತಾಯಿಸಿ ಬಿಡಬಹುದೇ??
ಗೊತ್ತಿದ್ದೂ ಮರೆತ ಸಂಗತಿ ಆಗಲೇ ಹೊಳೆದಿದ್ದು
ಸರ್ವರ ಸ್ವತಂತ್ರ ಸರ್ವರ ಹಕ್ಕು
ಬರೆದೆ ಪ್ರಣೆಯ ಕವಿತೆಯನ್ನೇ !!!
****
****
ಗಾಂಧಿ ಇಂದು
--------------
ಗಾಂಧಿ ಪಟದ ಧೂಳಿಗೆ
ಮುಕ್ತಿ ನೀಡಿದ ಸುದಿನ
ಗೋಡೆ ಬಿಟ್ಟು ಕೆಳಗಿಳಿದನು
ಜನ್ಮ ಪಾವನ !!

ದ್ವಜದ ಹಾರಾಟ ಕಂಡು
ಇನ್ನೂ ನಕ್ಕನು
ಸಿಹಿ ಹಂಚಿದ ಮಕ್ಕಳೊಡನೆ
ತಾನೂ ಬೆರೆತನು

ಹೂವಿನ ಹಾರವೂ ಬಾಡಿತು
ದಿನ ಮುಗಿವ ಹೊತ್ತಿಗೆ
ಮತ್ತೆ ಜೋತು ಬಿದ್ದ ಗಾಂಧಿ
ಗೋಡೆಯ ಮೊಳೆಗೆ

ಸ್ವಾಂತಂತ್ರ್ಯ ತಂದು ಕೊಟ್ಟ ನಮಗೆ
ಆ ದಿನ
ಆ ಋಣಕೆ ತಾನೂ ಸ್ವತಂತ್ರನಾದ
ಈ ದಿನ !!

                      --ರತ್ನಸುತ

ಮುನ್ಸ್ಕೋಬೆಡಿ ಪ್ಲೀಸ್ !!!

ಮನಸಿಗೆ ಲೈಟಾಗಿ ಲವ್ ಆದಹಾಗಿದೆ
ಯಾವ್ದಕ್ಕೂ ಟಚ್ಚಲ್ಲಿರಿ
ಬೇಸಿಗೆ ಬಿಸಿಲಿದು ಸರಿಯಿಲ್ಲ
ದಯವಿಟ್ಟು ಸ್ವಲ್ಪ ಹುಷಾರಾಗಿರಿ
ದಾರೀಲಿ ಆಗಾಗ ಸಿಗ್ತಾಯಿರಿ
ಮಾತಾಡ್ದೆ ಬೈಕೊಂಡು ಒಯ್ಯ್ತಾಯಿರಿ
ಸೇಫ್ಟಿಗೆ ಕಣ್ಗಪ್ಪು ಹಚ್ಕೊಂಡಿರಿ !!!

ಇಷ್ಟ್ರಲ್ಲೇ ನಾನು ಲೆಟ್ಟೆರ್ರು ಕೊಡಬಹುದು
ಮೆಟ್ಟೊಂದು ಹಿಡ್ಕೊಂಡಿರಿ
ಹೇಳಿದ ಟೈಮಿಗೆ ಬರಬೇಕು
ಹಾಗಾಗಿ ಗಡಿಯಾರ ಕಟ್ಕೊಂಡಿರಿ
ಕಣ್ಣಲ್ಲಿ ಕಣ್ಣಿಟ್ಟು ಮಾತಾಡಲು ಭಯ
ಸ್ವಲ್ಪ ಕಣ್ಮುಚ್ಚ್ಕೊಂಡಿರಿ
ತುಂಬಾ ನೆನಪಾದಾಗ ಕರೆ ಮಾಡುವೆ
ನಿಮ್ಮ ಫೋನ್ ನಂಬರ್ ಕೊಟ್ಟ್ಹೋಗಿರಿ

ಅಮ್ಮ ಅಪ್ಪನ ಮಾತು-ಕಥೆಗೆ ಕಳಿಸುವೆ
ಊರು ಮನೆ ವಿಳ್ಹಾಸ ಕೊಡಿ
ನೀವೇ ವರದಾನ, ವರದಕ್ಷಿಣೆ ಅಂತ 
ಏನೂ ಬೇಡ ಬಿಡಿ 
ಜಾಸ್ತಿ ಮಾತಾಡಿ ಬೇಜಾರು ತರ್ಸಿದ್ರೆ
ಒಂದ್ಚೂರು ಕ್ಷಮ್ಸಿಬಿಡಿ
ಪ್ರಶ್ನೆ ಕೇಳದೆಯೆ ಉತ್ತರಕೆ ಕಾದಿರುವೆ
ಉತ್ತರಿಸಿ ಪಾಸ್ಮಾಡ್ಬಿಡಿ

                              --ರತ್ನಸುತ

ನೀ ಸತಾಯಿಸಿದಿರುಳು !!!

Image
ಇಳಿಸಂಜೆಯ ಹೂವು 
ಬಿರಿದಿತ್ತು ಆ ಹೊತ್ತು 
ನೀ ಬರುವ ದಾರಿಯನು 
ಎದುರು ನೋಡಿ 
ಚಿಮುಕಿಸಿದ ನೀರ್ಹನಿಯು 
ಅಂಚಿನಲ್ಲಿ ವಾಲಿತ್ತು 
ಜಾರ ಬಿಡದಂತೆ 
ದಳಗಳನು ಬೇಡಿ 

ದುಂಬಿಗಳ ಅಧರವನು 
ಘಾಸಿಗೊಳಿಸಿತು ಹೂವು 
ಇದ್ದಷ್ಟೂ ಮಧುವನ್ನು 
ಕಾಯ್ದಿರಿಸುತ 
ಎಲೆಗಳೆಲ್ಲವೂ ಮಿರಿದು 
ಹಸಿರೆದ್ದು ನಾಚಿದವು 
ನಿನ್ನ ಬಣ್ಣನೆ ನುಡಿಯ 
ಶೇಖರಿಸುತ 

ಗುಚ್ಚದೊಳಗಿನ ಹೂವು 
ಮತ್ತೊಂದಕೆ ಮೆತ್ತಿ 
ಉತ್ಪತ್ತಿಸಿತು ಅಲ್ಲಿ 
ಪ್ರೇಮ ಶಾಖ 
ಸ್ವಾಭಾವಿಕ ಕೆಂಪು 
ಕಂಗೊಳಿಸುವ ಬಣ್ಣ 
ಇನ್ನೂ ಲಜ್ಜೆಯ ಮೆರಗು 
ಹೆಚ್ಚ ಬೇಕಾ?!!

ಅತ್ತಲಾಚೆಯ ಹಿಡಿದು 
ಇತ್ತಲ ತುದಿವರೆಗೆ 
ನೋಟ ವಿಸ್ತರಿಸಿರಲು 
ಸ್ತಬ್ಧ ನುಡಿಯು 
ಹುಲ್ಲಿನಡಿ ಇರುವೆಯ 
ಮಣ್ಣಿನ ಉಪ್ಪರಿಗೆ 
ಅಪ್ಪಳಿಸದಂಥ 
ಹಗುರ ನಡೆಯು 

ಕತ್ತಲಾವರಿಸಲು 
ಹೂಗಳು ಕಂಪಿಸಿತು 
ಮುಗಿಲತ್ತ ಮುಖ ಮಾಡಿ 
ಕಂಬನಿಯ ಸಹಿಸೆ 
ನಿನ್ನ ಆಗಮನದಲಿ 
ಚೇತರಿಕೆ ಹೂಗಳಿಗೆ 
ಧನ್ಯವಾಯಿತು ಕಂಬನಿ 
ನೀನು ಒರೆಸೆ !!!

              --ರತ್ನಸುತ

ಧುಸ್ವಪ್ನ !!!

ನನ್ನ ತುಂಟತನದ ಹಿಂದೆ
ಗಂಭೀರ ವಿಚಾರಗಳು
ತೆರೆದುಕೊಂಡ ಸುಳುವು ಹಿಡಿದು
ವಿಚಾರವಾದಿಯಾದವನು
ಗುರುವಾಗಿಸಿಕೊಂಡ ಎನ್ನ
ನನಗೇ ಅರಿಯದ ಹಾಗೆ
ಉನ್ನತನಾಗಿಸಿದ ನನ್ನ

ಕಾಣೆಯಾದವ ಒಮ್ಮೆ
ಪ್ರತ್ಯಕ್ಷ ಆಚಾನಕ್ಕು
ಹರಿದ ಬಟ್ಟೆ, ಗಡ್ಡ ಬಿಟ್ಟು
ಮೈಯ್ಯಿ ನಾರುತಿತ್ತು ಕೆಟ್ಟು
ಬುದ್ಧಿ ಹೀನ ಸ್ಥಿತಿಯಲ್ಲಿ
ಗುರುತು ಹಿಡಿದನು ನನ್ನ
ಕಾಲಿಗೆ ಬೀಳುವ ಮುನ್ನ

"ಭೂಮಿ ಗುಂಡಾಗಿದೆ
ಆದರೂ ಇದೇ ಕೊನೆಯಾಗಲಿ
ಮತ್ತೆ ನೀ ಕಣ್ಣಿಗೆ ಸಿಕ್ಕರೆ
ಕೊಲೆ ಒಂದು ನಡೆದ್ಹೋಗಲಿ"
ಹೀಗಂದು ಮಾಯವಾದ
ಇಷ್ಟೆಲ್ಲಾ ನಡೆದು ಹೋಯ್ತು
ಎಚ್ಚರವಾಗುವ ಮುನ್ನ !!!

("ಒಲವೇ ಜೀವನ ಲೆಕ್ಕಾಚಾರ" ಸಿನಿಮಾದ ಪ್ರೇರಣೆಯ ಸಾಲುಗಳು, ಅದು ಯಾಕೆ ಪ್ರೇರೇಪಿಸಿತೋ ದೇವರೇ ಬಲ್ಲ)


                           --ರತ್ನಸುತ 

ಗಂಟೆ ಹನ್ನೆರಡರ ಕವನ !!!

ಊರೆಲ್ಲಾ ಮಲಗಿರಲು 
ಗಂಟೆ ಹನ್ನೆರಡಾಯಿತು
ಮಣ್ಣ ಹೊದಿಕೆ ಮೆಲ್ಲ ಸರಿಸಿ
ಮುಚ್ಚು ಕಣ್ಣುಗಳನು ತೆರೆಸಿ
ಅಕ್ಕ ಪಕ್ಕ ಹಾಸಿಗೆಯಲಿ
ಇನ್ನೂ ಮಲಗಿಹರನ್ನು
ಮೆಲ್ಲ ತಟ್ಟಿ ಎಬ್ಬಿಸುತ
ಕೈ ಕೈ ಬೆಸೆದುಕೊಂಡು
ಹುಣಸೆ ಮರದೆಡೆ ಸಾಗಿ
ತಲೆ ಕೆಳಗಾಗಿ ತೂಗಿ
ಹೂಳಿಕ್ಕುತಲಿ ಕೂಗಿ
ಹಾದವರ ಹೆದರಿಸುತ
ಹೆದರಿದವರ ಮೈಯ್ಯೇರಿ
ಕುಣಿಸುವವರು ನಾವು

ದೆವೆರೆನಿಸಿಕೊಂಡವರ
ನಂಬಿಕೆ ಹೆಚ್ಚಿಸುವವರು
ಹೊಟ್ಟೆ ಪಾಡು ಮಾಂತ್ರಿಕರಿಗೆ 
ಹಿಟ್ಟು ನೀಡುವವರು
ಬೇವಿನ ಮರ ಬೋಳಾಗಲು
ಅಮಾವಾಸ್ಯೆ ಜೋರಾಗಲು
ಮೂರ್ದಾರಿ ಭಯವೆನಿಸಲು
ನರಬಲಿಗಳ ಜರುಗಿಸಲು
ಬೇಕು ಬೂಧಿ ಹಂದರ
ನಗುವ ಅಸ್ತಿ ಪಂಜರ
ನಮ್ಮ ತೃಪ್ತ ಹಸ್ತ ಅಸ್ತು
ಅಷ್ಟ ತಂತ್ರ ಸಿದ್ಧಿ ಗಸ್ತು 
ಉಸಿರಾಡುವ ಪಿಶಾಚಿಗಳು
ಹಗಲು ಮೈಯೇರುತಾವೆ
ಪೈಶಾಚಿಕ ಇರುಳ ಲೋಕ 
ಆಳುವವರು ನಾವು 

ನಮಗೂ ಉಂಟು ಭಯ, ಭಕ್ತಿ
ಕಂಪಿಸಬಲ್ಲ ಶಕ್ತಿ
ನಮ್ಮ ನಂಬಿ ಹೆಸರಾದರು 
ಕತೆಗಾರರು ನೂರು 
ವಾಸ್ತವದಲಿ ಕಟುಕರಲ್ಲಾ
ಕೊಡುವರು ಹುಸಿ ರೂಪ
ಗಾಳಿಯಾಗಿ, ಬೆಂಕಿಯಾಗಿ
ಹಾವಿಯಾಗಿ, ಕೊರೂಪರಾಗಿ 
ಸತ್ತವರು ನಾವು ಮನುಷ್ಯರಾಗಿಯೇ
ಎರಡು ಕಾಲು, ಕೈಯ್ಯಿ ಕಿವಿ, ಕಣ್ಣು
ಅದೇ ಆಕಾರ
ನಮ್ಮಲ್ಲೂ ಇದೆ, ಮಾನವ
ಪೈಶಾಚಿಕ ಪ್ರಧಾನ ಶಕ್ತಿ
ಉಳಿದ ಆತ್ಮಗಳು ನಮ್ಮ
ಆಜ್ಞೆಯಂತೆ ಇಲ್ಲಿ

ನಾವೂ ಬರಿ ಬಲ್ಲೆವು
ಪ್ರಣಯ ಕಾವ್ಯ, ಗೀತೆಗಳ
ನಮಗೂ ಆಗಿದ್ದುಂಟು
ನೆರೆ ಊರಿನ ಸ್ಮಶಾಣದ
ಗೋರಿಯ ಮೇಲೆ ಒಲವು 
ಹೋದ ಪ್ರಾಣ ಮತ್ತೆ ಪಡೆದು 
ನೀಡುವಷ್ಟು ನಿಷ್ಕಲ್ಮಶ ಪ್ರೀತಿ
ಆದರೇನು ಮಾಡುವುದು
ಕೈಗಳು ಕಟ್ಟಿರುವರು
ಮುಕ್ತಿಗೊಳಿಸಿ ಪಿಂಡವಿರಿಸಿ
ತೆರಳಿಸಲು ಕೈಲಾಸಕೆ

ಅವನ ಅವಳು!!

ಕಣ್ಸನ್ನೆಯಲಿ ಕರೆದ ಅವನೇ "ಅವನು"
ಕಣ್ಗಾಡಿಗೆಯ ಹಾಗೆ ಕರಗಿದಳು "ಅವಳು"
ಕಣ್ಣೋಟ ಬೆರೆವುದಕೆ ಕಾರಣಗಳುಂಟೇ?
ಆಗಾಗ ಮಧ್ಯಸ್ತಿಕರ ತರಲೆ ತಂಟೆ
ಬೆಸೆದಾಗ ಮನಸುಗಳು "ಸೋ" ಎಂದ ಮಳೆಯು
ನೆನೆಸಿತು ಹಸಿ ಬಯಕೆಗಳು ಚಿಗುರಲೆಂದೇ 
ಹಿಂದೆಲ್ಲಾ "ಅವ" ಬೇರೆ "ಆಕೆ" ಬೇರೆ
ಆದರೀಗೀಗ ಎರಡು ದೇಹ, ಉಸಿರು ಒಂದೇ !!

                                          --ರತ್ನಸುತ

ಇಷ್ಟವಾಗುತ್ತಾಳೆ ಅವಳು !!!

ದೀಪಾವಳಿಗೆ ಸುಟ್ಟ ಕಜ್ಜಾಯ
ಮುಗಿಯುತ್ತಾ ಬಂದಿರಲು
ಕೊನೆಗುಳಿದೊಂದನು ಮನಸಾರೆ ಸವಿದಂತೆ

ಪಕ್ಕದ ಬೀದಿಯ 
ಖಾಲಿ ಸೀಸಾ ಅಂಗಡಿಗೆ ಓಡಿ 
ಹಳೆ ತಗಡು ಡಬ್ಬ ಮಾರಿ, ಹತ್ತಿ ಮಿಠಾಯಿ ತಿಂದಂತೆ 

ಹಸಿದಾಗ ಪಾತ್ರೆ ತೀಡಿ
ಸಿಕ್ಕ ಮುಷ್ಟಿಯಷ್ಟು ಅನ್ನವ
ನೀರು ಮಜ್ಜಿಗೆಯೊಡನೆ ಕಲೆಸಿ, ಸೊರೆದುಕೊಂಡು ಕುಡಿದಂತೆ

ರಾಮನವಮಿ ಬೇಸಿಗೆಯ
ದಾರಿ ಮಧ್ಯದಲಿ ಸಿಕ್ಕ 
ಗುಡಿಯಲ್ಲಿ ಹಂಚುತಿದ್ದ ಬೆಲ್ಲದ ಪಾನಕದಂತೆ

ದಿನಸಿ ಕೊಂಡು ತಂದು 
ಮಿಕ್ಕ ಚಿಲ್ಲರೆಯ ಮರಳಿಸಲು 
ಕಿಸೆಯಲ್ಲಿ ಒಂದು ನಾಣ್ಯ ಅರಿವಿಲ್ಲದೆ ಉಳಿದಂತೆ

ದೂರ ನೆಂಟರು ಸಿಕ್ಕಿ 
ಮುದ್ದು ಮಾತನಾಡಿಸಲು
ನಾಚಿಕೊಂಡು ಬುಜಕೆ ಅಪ್ಪಳಿಸುವ ಪುಟ್ಟ ಮಗುವಂತೆ

"ಶುಭಂ"ಗೊಂಡ ಸಿನಿಮಾದಂತೆ
ಖಾಯಂಗೊಂಡ ನೌಕರಿಯಂತೆ
ನೋಯುವ ಮೈಯ್ಯಿಗೆ ಸಿಕ್ಕ ಮೆತ್ತನೆಯ ಹಾಸಿಗೆಯಂತೆ!!!

                                                            --ರತ್ನಸುತ

ಚೆಲ್ಲಾಪಿಲ್ಲಿ ಹನಿ ಕವನ/ ಕಥೆಗಳು

ಮೌನಿಯಾಗಿ ಪರಿಚಿತಳಾದ ಅವಳ
ವಾಚಾಳಿ ರೂಪದಲ್ಲಿ ಒಪ್ಪಲು
ಮನಸ್ಸು ಹಿಂದೇಟ್ಹಾಕಿದ್ದು

ನನ್ನಂತೆ ಅವಳೂ ನಟಿಸಿಬಿಟ್ಟಳಾ
ಎಂಬ ಸಂದೇಹದಿಂದ !!
****

ಕಲರವ ಆಲಿಸಿ 
ಕವನವ ಪಟಿಸುತ 
ಹರಿಯಿತು ಖುಷಿಯ ಹನಿಯೊಂದು 
ಅಪ್ಪಣೆ ಕೇಳದೆ 
ಬಾಚಿತು ಬೆರಳು 
ಹಾಳೆಯೆದೆಗೆ ಮುದ್ರಿಸಲೆಂದು !!
ಮುದ್ರಿತ ಮಡಿಲಲಿ 
ನಿದ್ರಿಸದಾಕ್ಷರ 
ಹಾಡಿಗೆ ಸ್ಪೂರ್ತಿಯ ಸೆಲೆಯಾಗಿ 
ಹರಿಯಿತು ಕೊರಳಲಿ 
ತಟ್ಟುತ ಎದೆಗಳ 
ರುಚಿಕಟ್ಟಾಯಿತು ಮಾಗಿ !!
****

ಮಳೆ ನೀರಿಗೆ ಸಿಕ್ಕಿ 
ಕೊಚ್ಚಿ ಹೋಗುತ್ತಿದ್ದ 
ಇರುವೆಗೆ ಆಸರೆಯಾಗಿದ್ದು 
ಮರಕೆ ಬೇಡವಾಗಿ 
ತೊಲಗಿಸಿಕೊಂಡ ಹಣ್ಣೆಲೆ 

ನಿಂತ ಉಸಿರ ಮತ್ತೆ ಪಡೆದು 
ದಡದೆಡೆ ತಡವಡಿಸಿತೆಲೆ 
ಎದೆಯುಸಿರು ಬಿಟ್ಟು ಇರುವೆ 
"ಅಮ್ಮ" ಅಂದ ಕೂಡಲೆ !!!
****


ಅವಳ ಭಾವಚಿತ್ರವ ಕಂಡೊಡನೆ 
ಪ್ರೀತಿ ಯುಂಟಾಗಿದ್ದು 
ಅವನ ಮೂರ್ಖತನದಿಂದ 

ಅವಳ ಮರ್ಮದಿಂದಲ್ಲಾ 
ತಂತ್ರಜ್ಞಾನದ ತಲೆಹರಟೆಯಿಂದ !!
****

ನಾಜೂಕು ನಡೆ ಹೊತ್ತು 
ಬಳುಕುತ್ತಾ ಆಕೆ ಹೋಗಿದ್ದು 
ಪೆಟ್ಟಿ ಅಂಗಡಿಗೆ.
ಕೊಂಡದ್ದು ಸಿಗರೇಟು.
ಹಚ್ಚಿ ಸೇದಿ,
ತಟ್ಟಿದ ಧೂಪ ಕಿಡಿ 
ಸುಟ್ಟಿದ್ದು ನನ್ನ ಮನಸನ್ನ !!!
****


ಈ ದಿನವ 
"ಆ ದಿನ"ಗಳಾಗಿ 
ನೆನಪಿಡಲು ಬೇಕು 
ಆ ದಿನಗಳಂತೆ ನಸೀಬು 

ಹಿಂದಿನಂತೆ ಸವಾಲುಗಳು 
ಇಂದು ಇರದಾಗಿವೆ 
ಪಳಗಬೇಕು ಇನ್ನೂ ನಾನು 
ನೀಡಲು ಜವಾಬು !!
****


ಕನಸಿನ 
ಕವಲಲಿ 
ಕಾವ್ಯ 
ಕುಸುರಿ