ಹಳ್ಳಿ ಮನೆ !!!

ಹೆಂಚಿನುಪ್ಪರಿಗೆ 
ಬಿಡದೆ ಸುರಿದ ಮಳೆ 
ಗುಡಾಣದಲಿ ಹೆಗ್ಗಣ-
-ಗಳ ನಿಲ್ಲದ ಚಕಮಕಿ 
ಕಬ್ಬಿಣದ ಗೂಟ 
ಗುದ್ದಲಿ, ಕೊಡಲಿ ಜೋತು 
ಜೊತೆಗೆ ಮುರಿದ ಕೊಡೆ 
ಬಿರುಕು ಬಿಟ್ಟ ಗೋಡೆ 

ಬತ್ತ ಹೊಟ್ಟಿನ ಮೂಟೆ 
ಹಕ್ಕಿ ಪಿಕ್ಕೆಯ ಘಮ 
ಅಲ್ಲಿಲ್ಲಿ ತೊಟ್ಟು ತಾಳ
ಹಾಕಿಸಿದ ಮಾಳಿಗೆಯ ತೂತು 
ವರ್ಷಗಟ್ಟಲೆ ತಿರುವದ 
ತೂಗು ಪಂಚಾಂಗದ ಪುಟ 
ಮೆಲ್ಲ ಗಾಳಿಯ ಬೀಸಿಗೆ 
ತೆರೆದ ತೊದಲು ನುಡಿ 

ಧೂಳು ಮೆತ್ತಿದ 
ಅಜ್ಜನ ಕಾಲದ ಖುರ್ಚಿ 
ಮಸಿಯಾಗಿ ಚೆಲ್ಲಾಡಿದ 
ತುಂಡು ಬಟ್ಟೆ 
ಮುಸುರೆ ತಿಕ್ಕದೆ ಉಳಿದ 
ಒಂದೆರಡು ಗಡಿಗೆ 
ಪಾಚಿಗಟ್ಟಿದ ಗೋಡೆ 
ಬಚ್ಚಲ ಬದಿಗೆ 

ಕಾಲಿಗೆ ಸಿಕ್ಕ 
ಆಟದ ಕನ್ನಡಕ
ಡಬ್ಬಿಯಲಿ ಕೂಡಿಟ್ಟ ಗೋಳಿ 
ಹಂಸ ಕೈಪಿಡಿಯ 
ಮರದ ಊರ್ಗೋಲು 
ಸೋಲುಣಿಸಿ ಕೈತಪ್ಪಿದ 
ಬಣ್ಣದ ಬುಗುರಿ 

ಗಾಜೊಡೆದ ಚಿತ್ರ ಪಟ 
ಗಾಳಿಪಟದ ನೂಲು 
ಚಿಣ್ಣಿ-ದಾಂಡನು 
ಬಚ್ಚಿಟ್ಟ ಚೀಲ  
ಹಿತ್ತಲ ಪಾಯ್ಕಾನೆ 
ಬಯಲ ಉಚ್ಚೆ, ಸ್ನಾನ 
ತಟ್ಟಿದ ಬೆರಣಿ 
ಗುರುತಿನ ಚಪ್ಪಡಿ ಕಲ್ಲು 

ಮೂಗಿಗೆ ಬಿಗಿದ 
ಕರವಸ್ತ್ರವನೂ ದಾಟಿ 
ಸವಿ ನೀಡಿದವು ಹಳೇ 
ನೆನಪುಗಳ ಘಾಟು 
ಮಾತ್ರವಲ್ಲದೇ 
ನೀಡಿದವು ಎಂದಿನಂತೆ 
"ಮರೆತೆಯಾ?" ಎಂದನುತ 
ಸೂಕ್ಷ್ಮದಲಿ ಏಟು !!! 

                    --ರತ್ನಸುತ 

Comments

Post a Comment

Popular posts from this blog

ಜೋಡಿ ಪದ

"ಪಾಸ್ವರ್ಡ್" - RESET ಆಗ್ತಿರ್ಲಿ ಆಗಾಗ!!!

ಗರುಡ ಪ್ರಯತ್ನ ೩