Thursday 22 August 2013

ಅಗಲಿದ ಮನೆ ದೇವರು !!

ಎಂದೂ ನಿನ್ನ ಕೈಗೆ 
ಅಷ್ಟು ಸಲೀಸಾಗಿ ಸಿಕ್ಕವನಲ್ಲ 
ನಿನ್ನ ಹಳೇ ವೇದಾಂತವ ಕೇಳಿ, 
ತಲೆಯಾಡಿಸಿ, ದಣಿಯುವಷ್ಟು ತಾಳ್ಮೆ 
ಕುದಿ ರಕ್ತಕ್ಕಿರಲಿಲ್ಲ 

ನಿನ್ನ ಬಿರುಕು ಕೈಗಳು 
ನನ್ನ ಕೆನ್ನೆ ಸವರಿದಾಗೆಲ್ಲಾ 
ಒರಟು ಗೆರೆಗಳ ಅದೃಶ್ಯಗೊಳಿಸಲು 
ನನ್ನ ಮೃದು ಕೈಗಳಿಂದ 
ಉಜ್ಜಬೇಕಾಗುತ್ತಿತ್ತು ಮುಖವ 

ಇಂದಿಗೂ ನೆನಪಿದೆ ಆ 
ಬಿಸ್ಕತ್ತು, ಏಲಕ್ಕಿ ಬಾಳೆ ಹಣ್ಣನ್ನು 
ನಿನ್ನ ಕೋಣೆಯ ಬೀರೂವಿನಿಂದ 
ತಂದು ಕೊಡುತ್ತಿದ್ದ ದೃಶ್ಯ 
ಮೂರು ಹೆಜ್ಜೆ ಇಡುವಷ್ಟರಲ್ಲೇ ನಿನಗೆ ಆಲಸ್ಯ 

ಕಣ್ಗಳಲಿ ಏನೋ ಕೇಳಬಯಸುವ ಆಸೆ 
ಅಷ್ಟರಲ್ಲೇ ಮಾತು, 
ಒಂದು ಏದುಸಿರು 

ಅಂಟಿ ಕೂತಾಗ, 
ಆ ಆತ್ಮೀಯತೆ 
ನೆರೆ ನೆಂಟರಿಷ್ಟರ ಹಿಡಿದು 
ತುಸು ದೂರದ ವಿಚಾರ 

ಪಾದ ರಕ್ಷೆಯ ಮೇಲೆ 
ಅನುಭವದ ತೂಕ ಹೆಜ್ಜೆಯ ಗುರುತು 
ಮಂಚದ ಮೇಲೆ, 
ಬಿಳಿಗೂದಲ ಕೂಸಿನ ಮೈ ಮರೆತ ನಿದ್ದೆ 
ಊಟ, ಕೆಲಸ, ಮಾತು ಎಲ್ಲವೂ ಮಿತ 

ನೆನಪಿನ ನೂರಾರು ಗರಿಗಳ ಮಧ್ಯೆ 
ನೀನೂ ಸೇರಿಕೊಂಡೆ ವಿನೂತನ ಬಣ್ಣವ ತಾಳಿ 
ಕಾಣಸಿಕ್ಕಾಗೆಲ್ಲ ಕಣ್ಣಲ್ಲಿ ನೀರು ಜಿನುಗಿಸಿ 
ನಿನ್ನೊಡನೆ ನಡೆಸಿದ ಸಂದರ್ಶನಗಳ 
ಮತ್ತೆ ಮರುಕಳಿಸಿ 

ಮುಂದೊಮ್ಮೆ ಧರಿಸಬೇಕಾಗಿ ಬರುವುದು 
ನಿನ್ನ ಪಾದ ರಕ್ಷೆಗಳನ್ನೇ 
ಅದೇ ಮಂಚದ ಮೇಲೆ, 
ನೀ ಕಂಡ ಕನಸುಗಳ ಜಾಡಿನಲಿ ನಡೆದು 
ಕಥೆಯಾಗ ಬೇಕಿದೆ ನಿನ್ನ ನಂತರದ ಬಾಳ ಪುಟಗಳಲ್ಲಿ 

ನಿನ್ನ ಅಗಲಿಕೆಯಿಂದ ಉಂಟಾದ ಖಾಲಿತನಕ್ಕೆ 
ಯಾವ ದೇವರ ಪ್ರತಿಷ್ಟಾಪಿಸುವುದೋ ತಿಳಿಯೆ !!
"ಉಸಿರಾಡಿ ದಣಿದೆಯಾ??" ಮಲಗು ಇನ್ನು ನಿಶ್ಚಿಂತೆಯಲಿ 
ಅಗೋಚರ ಮಾರ್ಗದರ್ಶಿಯಾಗಿರು, ಓ ಚೈತನ್ಯ ಸಿರಿಯೇ !!

(ವೆಂಕಟಪ್ಪಣ್ಣ ತಾತನ ವಿದಾಯದ ವೇಳೆ )                                                     

                                                         --ರತ್ನಸುತ 

1 comment:

  1. ಅವರ ಪಾದ ರಕ್ಷೆಗಳೇ ನಮಗೂ ರಕ್ಷೆ. ತಾತನ ಅನುಗ್ರಹ ನಮ್ಮ ಮೇಲೂ ಇರಲಿ.

    ReplyDelete

ದಣಿವಾರಿ ಕೊಳದಲಿ

ದಣಿವಾರಿ ಕೊಳದಲಿ  ಕೆಂದಾವರೆ ಅರಳಿದೆ  ಮುಗಿಲೇರಿ ಬರದಲಿ  ಹನಿಗೂಡಲು ಇಳಿದಿದೆ  ರವಿಕಾಂತಿ ಸವಿಯುತ  ಹರಳಂತೆ ಮಿನುಗುತಾ  ಬೆರಗಲ್ಲೇ ತಯಾರಿಯಾಗುತಿದೆ  ಮನದಂಗಳ ಮುಂಜಾನೆಯ...