ಕಣ್ಮುಂದೆ ದಾರಿ ಬೆನ್ಹಿಂದೆ ನೆನಪು

ಬೆಳಕು ಕತ್ತಲೆಯೊಳಗೆ ಮುಚ್ಚಿ ಮರೆಯಾಗಿದೆ 
ಪುಟ್ಟ ಕೂಸಿಗೆ ಕಣ್ಣ ಮುಚ್ಚಾಲೆ 
ಕನಸು ಬೀಳದೆ ಎಲ್ಲೋ ಕೊಚ್ಚಿ ಕಳೆದೋಗಿದೆ 
ಬರೆಯಬೇಕೇ ಒಂದು ಕರೆಯೋಲೆ ??
ಮನಬಿಚ್ಚಿ ಕೂಗಿ ಕರೆದಾಗಲೂ 
ಮನಸಿಟ್ಟು ಕೂತು ಬರೆದಾಗಲೂ 
ಸಿಗಲಿಲ್ಲ ಬೆಳಕು
ಬರಲಿಲ್ಲ ಕನಸು 

ಕಾಮನ ಬಿಲ್ಲಿಗೆ ಏಳು ಬಣ್ಣದ ಸಾಲು 
ಕೊಡಬಾರದೇ ಒಂದು ಸಾಲವಾಗಿ 
ಮುಗಿಲಿನ ಬೇಲಿಗೆ ಜಾರದ ಹನಿಗಳು 
ಬೇಕಾಗಿವೆ ಚೂರು ಬಹಳವಾಗಿ 
ಕನ್ನಡಿಯಲೊಂದು ನಗು ಮುಖವು ಬೇಕು 
ಎಲ್ಲಿ ಸಿಗಬಹುದು ಮಾಯಾ ದರ್ಪಣ 
ದಾರಿಯೂ ಒಂದು ಗುರಿ ಮುಟ್ಟಬೇಕು 
ಪಯಣ ಬೆಳೆಸಲು ಇಲ್ಲದ ಕಾರಣ 

ಸಾಗರ ದಾಟುವ ಛಲವಿದೆ ಆದರೆ 
ಕೊಡದಾಗಿವೆ ಅಲೆ ಬೆಂಬಲವನು 
ಮಂದಿರ ಕಟ್ಟುವ ಬಲವಿದೆ ಆದರೆ 
ಅಲ್ಲಗಳೆದಿದೆ ಮನ ಹಂಬಲವನು 
ಹೆಸರಾಗಲೆಂದೇ ಉಸಿರಾಟವಾಡಿ 
ಮಣ್ಣಾಗಬೇಕೆ ಬಡ ದೇಹ ??
ಕೊನೆ ಗಳಿಗೆಯಲ್ಲೂ ಕೊನೆಗಾಣಲಿಲ್ಲ 
ಇನ್ನೂ ಜೀವಂತ ವ್ಯಾಮೋಹ !!

                             --ರತ್ನಸುತ 

Comments

  1. ವ್ಯಾಮೋಹ ಜೀವಂತವಾಗಿದ್ದರೇನೇ ಪಯಣಕೂ ಇಂಧನ ಗೆಳೆಯ!

    ReplyDelete

Post a Comment

Popular posts from this blog

ಜೋಡಿ ಪದ

"ಪಾಸ್ವರ್ಡ್" - RESET ಆಗ್ತಿರ್ಲಿ ಆಗಾಗ!!!

ಗರುಡ ಪ್ರಯತ್ನ ೩