Wednesday 23 December 2020

ಮನವೆಂಬ ಕೊಳದಲ್ಲಿ ಅಲೆಯಾಗಿ ಇಳಿದು

ಮನವೆಂಬ ಕೊಳದಲ್ಲಿ ಅಲೆಯಾಗಿ ಇಳಿದು 

ಬೊಗಸೆಲಿ ಬೆಳದಿಂಗಳ ಸುಧೆ ಮಾಡಿ ಸುರಿದೆ 
ತಿಳಿಗಾಳಿ ತಳಿರನ್ನು ಮಗುವಂತೆ ತಡವಿ 
ಹಿತವಾದ ಸಾಂಗತ್ಯ ಕೊಡುವಂತೆ ಸುಳಿದೆ 
ಮುಗಿಲಿಂದ ಹನಿಯೊಂದು ಇಳಿಜಾರಿ ಬಂದು
ಇಳೆಗೆಲ್ಲೋ ಕಳುವಾದ ಸಿರಿಯು ದೊರೆತಂತೆ 
ಬರಡಾದ ನೆಲವೀಗ ಹಸಿರಲ್ಲಿ ಮಿಂದು
ಅತಿಶಯವಾದ ನಗುವಲ್ಲಿ ತೂಗಿ ತೊನೆದಂತೆ 
ಉಸಿರೇ, ಉಸಿರ ಕರುಣಿಸೋ ನಿಟ್ಟುಸಿರೆ 
ಮಳೆಯೇ, ನೀ ಒಲವ ತಣಿಸೋ ಹೂಮಳೆಯೇ 

ಮಳೆಯೇ ನಿನ್ನ ಸಂಗಾತಿಯಾಗಿ 
ಅನುಗಾಲ ಹೀಗೇ ನೆನೆವಂತ ಆಸೆ 
ಬಿಡದೆ ಹನಿಯುತ್ತಿರೋ ವೇಳೆಯಲ್ಲಿ 
ಮರುಳಾಗಿ ಜಗವ ಮರೆವಂತ ಆಸೆ 
ದೂರಾದ ಮಿಂಚೊಂದು ಎಚ್ಚೆತ್ತು ಈಗ 
ಕಣ್ಣಲ್ಲಿ ಕೂತಂತೆ ಎದುರಾಗಲು ನೀನು 
ಸಾರಂಗಿಯ ತಂತಿಯ ಮೀಟುವಂತೆ 
ನಾ ನಿನ್ನ ಬಳಿಸಾರುವೆ 
ಮಿತಿ ಮೀರದಂತೆ ಗೆರೆ ಹಾಕಿಕೊಂಡು
ಗಡಿ ದಾಟೋ ಸುಖವನ್ನು ಸವಿಯೋದೇ ಚಂದ 
ಅತಿಯಾದ ಪ್ರೀತಿ ಜೊತೆಯಾಗುವಾಗ 
ಹರೆಯಕ್ಕೆ ಹುರುಪೊಂದು ದೊರೆತ ಹಾಗೆ.. 

ಉಸಿರೇ, ಉಸಿರ ಕರುಣಿಸೋ ನಿಟ್ಟುಸಿರೆ 
ಮಳೆಯೇ, ನೀ ಒಲವ ತಣಿಸೋ ಹೂಮಳೆಯೇ

ಪ್ರೀತಿ‌ ಗರಿಗೆದರಿದೆ, ಭೂಮಿ‌ ಕಿರಿದಾಗುತಿದೆ

ಪ್ರೀತಿ‌ ಗರಿಗೆದರಿದೆ, ಭೂಮಿ‌ ಕಿರಿದಾಗುತಿದೆ

ಏನೋ ಹೊಸತನವಿದೆ, ಎಲ್ಲ ಬದಲಾಗುತಿದೆ
ಆಕಾಶ ಅನ್ನೋದೆಲ್ಲ ಸುಳ್ಳು, ನೀಲಿ ಕೂಡ
ಮುಟ್ಟೋದು ತುಂಬಾ ಸುಲಭ ಈಗ ತೆಲಾಡೋ ಮೋಡ
ಎಲ್ಲ ತಂಟೆ ಬಿಟ್ಟು ಜಂಟಿ ಅಗೋ ಒಳ್ಳೆ ಕಾಲ..

ತಡ ಮಾಡಿ ಸಿಕ್ಕು, ಕಣ್ಣಲ್ಲೇ ನಕ್ಕು
ವಿಪರೀತ‌ ಕೋಪ ತಣ್ಣಗೆ ಮಾಡೋ ನಿನ್ನ ಚಾತುರ್ಯ
ನಡು ದಾರಿಯಲ್ಲಿ, ಕೈ ಬಿಟ್ಟರೂನು
ನಿನ್ನನ್ನು ಪತ್ತೆ ಹಚ್ಚಿ‌ ಬಿಡುವೆ ನನಗೇ ಅಶ್ಚರ್ಯ
ಗಮನ ಇಟ್ಟು ಕೇಳು, ಬೆಂದರೆ ಪ್ರೀತಿ ಕಾಳು
ಸುಗ್ಗಿ ಬಂದ ಹಾಗೆ ತಟ್ಟಿಕೊಳ್ಳೋ‌ಣ ಹೋಳಿಗೆ
ಬರೆದು ಕೊಟ್ಟೆ ಬಾಳು, ಬೇರೇನು ಬೇಕು ಹೇಳು
ನುಗ್ಗಿ ಹೊಡೆಯೋ ಗುಂಡಿಗೆಗೆ ಪ್ರೀತಿಯಾಯ್ತು ಮೆಲ್ಲಗೆ... 

ಬರಡಾಗಿ ನಾನು, ಪರಿಹಾರ ನೀನು 
ಮಳೆಯಂತೆ ನನ್ನ ಹಬ್ಬು ನಡೆಯಲಿ ಪ್ರೀತಿ ವ್ಯವಸಾಯ
ಅಪರಾಧಿ ನಾನು, ಉಪಕಾರಿ ನೀನು 
ಬದುಕೆಲ್ಲ ನಿನ್ನ ಮನದ ಸೆರೆಮನೆ ಮೀಸಲಿಡುತೀಯಾ? 
ಎಲ್ಲ ಕೆಲಸ ಬಿಟ್ಟು, ಒಂದೇ ಸಮನೇ ಪಟ್ಟು 
ನಿನ್ನ ವಿನಃ ಶೋಕ ಬರಹ ಏನನ್ನೇ ಗೀಚಲು 
ಬೇಲಿ ಹಾಕುವೆಯೇಕೆ, ಹಾರಿ ಬರುವೆನು ಜೋಕೆ 
ಎಲ್ಲ ಜನುಮ ನನ್ನ ಹೃದಯ ನಿನಗಾಗಿ ಮೀಸಲು... 

ಬಹುಶಃ... ಬಹುಶಃ...

 ಬಹುಶಃ ನೀ ನನ್ನ ಕಳೆದ ಜನುಮಕೆ ಪರಿಚಯ ಇರಬಹುದೇ 

ಈ ನನ್ನ ಮನಸು ನಿನ್ನನು ಗುರುತಿಸಿ ಮಿಡಿಯುತಿದೆ...  ಹೀಗೇತಕೋ   
ಬಹುಶಃ ಕಣ್ಣಲ್ಲಿ ಕಣ್ಣ ಇರಿಸುತ ಕುಳಿತರೆ ಸಿಗಬಹುದೇ  
ಈ ನನ್ನ ಒಲವ ವಿನಿಮಯ ನುಡಿಗಳು ಅನಿಸುತಿದೆ...  ಇಂದೇತಕೊ 

ಬಹುಶಃ...   ಬಹುಶಃ...  

ಗುಣವಾಗಿಸು ಆದ ಗಾಯವನು, ಮಾತಾಡುತ ನಡುನಡುವೆ 
ಏನಾದರೂ ಕೇಳು ಮರು ಮಾತಿರದೆ ತಂದು ನಾ ಕೊಡುವೆ 
ಉಸಿರಾಟದ ದಾಟಿ ಬದಲಿಸುವೆ ಎದುರಾಗಿ ಪ್ರತಿ ಬಾರಿ 
ಬಡಪಾಯಿಯ ಕಿಸೆಯಲಿ ಕನಸುಗಳ ನೀ ತುಂಬು ದಯೆ ತೋರಿ 
ಇಷ್ಟೇ ಆದರೆ ವಿಷಯ ಚನ್ನಾಗಿತ್ತು ಬೇರೆ ಏನೋ ಇದೆ 
ನಾನಲ್ಲದೆ ಹೃದಯ ನಿನ್ನಲಿ ನೆಲೆಯೂರಲು ಚಡಪಡಿಸುತಿದೆ..

ಬಹುಶಃ...   ಬಹುಶಃ...    

ಒಂದೂ ಮಾತನಾಡದೆ

ಒಂದೂ ಮಾತನಾಡದೆ 

ಹೊತ್ತು ಹೋಗು ನನ್ನನು 
ನಿನ್ನ ಊರಿಗೆ 
ಯಾವ ತಂಟೆಯಿಲ್ಲದೆ 
ಜಾರೋ ಆಸೆಯಾಗಿದೆ 
ಕಣ್ಣೀರಿಗೆ 
ಜೀವ ಭಾರವಾಗಲು 
ನೀಡು ನಿನ್ನ ತೋಳನು 
ಯಾನ ಪೂರ್ತಿ ಮಾಡಲು
ಚಾಚು ನಿನ್ನ ಕೈಯ್ಯನು 
ನಂಬುವೆ ನಿನ್ನ ನಾ ದೇವರನ್ನು ನಂಬಿದಂತೆ.. 

ಒಂದೂ ಮಾತನಾಡದೆ 
ಹೊತ್ತು ಹೋಗು ನನ್ನನು 
ನಿನ್ನ ಊರಿಗೆ 
ಯಾವ ತಂಟೆಯಿಲ್ಲದೆ 
ಜಾರೋ ಆಸೆಯಾಗಿದೆ 
ಕಣ್ಣೀರಿಗೆ... 


ಗೂಡು ಕಾಣಲೆಂದು ಬಂದ ಹಕ್ಕಿಗೆ 
ಕಾಡು ತನ್ನ ಮಡಿಲಲಿ, ನೀಡಿದಂತೆ ನೆಲೆಯನು 
ಮುಳ್ಳು ದಾರಿ ಸಿಕ್ಕಿದಾಗ ಹೆಜ್ಜೆಗೆ 
ರೆಕ್ಕೆ ಮೂಡಿ ಬಂದರೆ, ಮುಟ್ಟಬಲ್ಲೆ ಬಾನನು 
ನಿನ್ನದೇ ಕನಸಿನ ಭಾಗವು 
ನನ್ನಲಿ ಮೂಡಲು ನಿಂತಿದೆ 
ನಿನ್ನ ಪಾಲು, ನನ್ನ ಪಾಲು ಕೂಡ ಬೇಕು ಚಂದವಾಗಿ.. 

ಏನೋ ಮೋಡಿ ನೀ ಮಾಡಿ ಹೋದಂತೆ

 ಹ್ಮ್........ ಓ...   

ಏನೋ ಮೋಡಿ ನೀ ಮಾಡಿ ಹೋದಂತೆ
ಸಾಗಿ ಬರುವೆ ನಾ ನಿನ್ನ ನೆರಳಂತೆ 
ಓ ಸಖಿ, ನೀನೆಂದೂ ನನ್ನಾಕಿ
ಹ್ಮ್........ ಓ...   
ಊರು ದಾರಿ ಬೇರೆಲ್ಲೋ ಮರೆತೋಗಿ 
ಹಾಡಿ ಬರುವೆ ನಿನ್ನ ಸೆಳೆಯೋ ಮನಸಾಗಿ 
ಓ ಸಖಿ, ನೀನೆಂದೂ ನನ್ನಾಕಿ 
ಹ್ಮ್........ ಓ...
   
ಕಳುವಾದ ಹಾಗಿದೆ ಈ ನನ್ನ ಹೃದಯ 
ನಿನ್ನಲ್ಲಿಗೆ ಬರುವೆ ನೀಡು ಸಮಯ 
ನೀನಾಗಿಯೇ ಕೊಡು ಇಂಪಾದ ಕರೆಯ  
ನಾನಾಗಲೇ ನಿನಗೆ ಸೋತ ಇನಿಯ 

ಕಣ್ಣಲ್ಲೇ ಏನೇನೋ ಸಂದೇಶ ನೀಡುವೆ 
ಮುದ್ದಾಡೋ ವೇಳೆಲಿ ಕೈ ಜಾರಿ ಹೋಗುವೆ 
ಓ ಸಖಿ, ನೀನೆಂದೂ ನನ್ನಾಕಿ 

ಆಲಿಸು ನನ್ನ ನಿನಾದ

ಆಲಿಸು ನನ್ನ ನಿನಾದ 

ಜೀವಕೆ ನೀನೇ ಸುನಾದ 
ಈಗ ಉಸಿರಾಟ ಹಾಯಾಗಿದೆ 
ಮಾಡದೆ ಏನೂ ವಿಚಾರ 
ಸಾಗುವೆ ನಿನ್ನ ಪ್ರಕಾರ 
ದಾರಿ ಕಳುವಾಗಿ ನಿಂತಂತಿದೆ 
ಅಂದಾಜಿಗೂ ಮೀರಿದ, ಹಾರಾಟವು ನನ್ನಲಿ 
ಆರಂಭದ ಭಾವನೆ ಹೀಗಾಗಿದೆ 
ಈ ಪ್ರೀತಿಯು ಶುರುವಾಗಿದೆ 

ಓ.. 
ಆಲಿಸು ನನ್ನ ನಿನಾದ 
ಜೀವಕೆ ನೀನೇ ಸುನಾದ 
ಈಗ ಉಸಿರಾಟ ಹಾಯಾಗಿದೆ 
ಮಾಡದೆ ಏನೂ ವಿಚಾರ 
ಸಾಗುವೆ ನಿನ್ನ ಪ್ರಕಾರ 
ದಾರಿ ಕಳುವಾಗಿ ನಿಂತಂತಿದೆ 


ನಿನ್ನಲ್ಲಿ ಹೇಳಲಾಗದಂಥ ಮಾತು 
ತುಟಿಯಂಚಿನಲ್ಲೇ ಕೂತು 
ತಾಳಿದಂತೆ ಮುಗುಳು ನಗೆಯನ್ನು ಹೀಗೆ ನಾನು
ಕರೆದಂತೆ ಮೌನದಲ್ಲಿ 
ಬರಲೇನು ಛಾಯೆಯಾಗಿ 
ನೀ ಬಿಟ್ಟು ಹೋದ ತಾಣ ನನ್ನ ಧ್ಯಾನಕ್ಕೆ ಮೀಸಲೇನು 
ಮುಂಜಾನೆಯ ಇಬ್ಬನಿ, ಒದ್ದಾಟವ ತಾಳದೆ 
ನನ್ನಾಸೆಯ ಮೆಲ್ಲನೆ ನುಡಿವಂತಿದೆ
ಈ ಪ್ರೀತಿಯು ಶುರುವಾಗಿದೆ  

ಆಲಿಸು ನನ್ನ ನಿನಾದ 
ಜೀವಕೆ ನೀನೇ ಸುನಾದ 
ಈಗ ಉಸಿರಾಟ ಹಾಯಾಗಿದೆ 
ಮಾಡದೆ ಏನೂ ವಿಚಾರ 
ಸಾಗುವೆ ನಿನ್ನ ಪ್ರಕಾರ 
ದಾರಿ ಕಳುವಾಗಿ ನಿಂತಂತಿದೆ 
ಅಂದಾಜಿಗೂ ಮೀರಿದ, ಹಾರಾಟವು ನನ್ನಲಿ 
ಆರಂಭದ ಭಾವನೆ ಹೀಗಾಗಿದೆ 
ಈ ಪ್ರೀತಿಯು ಶುರುವಾಗಿದೆ 

ಅರೆ ಬರೆ ಕನಸಿದು ನನ್ನದಾಗಿದೆ

 ಅರೆ ಬರೆ ಕನಸಿದು ನನ್ನದಾಗಿದೆ 

ಪರಿಚಯ ಮಾಡಸೇ ನಿನ್ನ ಕೂಗುವೆ 
ಯಾವುದಾದರೂ ಒಳ್ಳೆ ಹೆಸರಿಡು ನನ್ನ ಪಾಡಿಗೆ 
ಬಿಡುಗಡೆ ನೀಡದ ನಿನ್ನ ಕಣ್ಣಲಿ 
ಸೆರೆಮೆನೆ ಅನುಭವ ಹೇಗೆ ಹೇಳಲಿ 
ಎಲ್ಲ ಆಲಿಸು ಮನಸು ನೀಡುತ ಎದೆಯ ಗೂಡಿಗೆ 

ಬಿಡುವೇ ಇರದೇ ಗಮನ, ಹರಿಸು ನನ್ನ ಕಡೆಗೇ 
ಆಗಲೇ ನಾನು ನಿನ್ನ ಗುಂಗಲಿ ಕಳೆದು ಹೋಗಿರುವೆ... 


ಹತ್ತಿರವಾಗಲು ನಾನು, ಒಗಟನ್ನು ಹೆಣೆಯುತ ಬರುವೆ 
ಬಿಡಿಸುವ ಭರದಲಿ ಆಗ ಮತ್ತೂ ದೂರ ಓಡದಿರು 
ಮೆಚ್ಚುಗೆ ಪಡೆಯಲು ಹೇಗೋ ಉತ್ತಮನಾಗಿಯೇ ನುಡಿವೆ 
ತಪ್ಪುಗಳನ್ನು ಹುಡುಕುತ ನನ್ನ ಬಯಲಿಗೆ ಎಳೆಯದಿರು 

ಎಲ್ಲೇ ಹೋಗು ಜೊತೆಗೆ, ನೆರಳಾಗಿ ಸಾಗಿ ಬರುವೆ 
ಆಗಲೇ ನಾನು ನಿನ್ನ ನಗುವಿಗೆ ಮಾರು ಹೋಗಿರುವೆ.. 


ಹಬ್ಬಿದೆ ಸಂಕಟವೇಕೋ, ಕೊರಳ ಬಿಗಿದಿದೆ ಬಳಸಿ 
ನಿನ್ನನು ಕಾಣದೆ ನಿಮಿಷವೇ ಆದರೂ ಸಾವು ಸುಳಿದಂತೆ 
ಕಬ್ಬಿಗನಾಗುವೆ ನಿನ್ನ ನೆನೆಯುತ ಕಾವ್ಯ ಬಿಡಿಸಿ 
ಏನೇ ಹೇಳು ಪ್ರೀತಿ ಸಿಕ್ಕರೆ ಜಗವ ಗೆದ್ದಂತೆ 

ಪ್ರೀತಿ ಒಂದೇ ಕೆಲಸ, ಬೇರೇನೂ ಬೇಡದು ಹೃದಯ 
ಆಗಲೇ ನಾನು ನಿನ್ನ ಪ್ರೀತಿಯ ದಾಸನಾಗಿರುವೆ 

ಎಲ್ಲ ಅರಿತವರೆದುರು ಏನೂ ಅರಿಯದವ

ಎಲ್ಲ ಅರಿತವರೆದುರು ಏನೂ ಅರಿಯದವ 

ಕೂಡಿ ಬೆರೆತವರೊಳಗೆ ದೂರವೇ ಉಳಿದವ 
ಯಾರೂ ಕೂಗದ ಹೆಸರ ತನಗಿಟ್ಟುಕೊಂಡವ 
ಯಾವ ಸಂತೆಯ ಗದ್ದಲವನೂ ಲೆಕ್ಕಿಸದವ 

ಯಾವ ರಂಗಿಗೂ ತಾನು ಅಂಟಿಕೊಳ್ಳಲೊಲ್ಲದವ 
ಮೌನವೂ ಸಂಗೀತವೆಂದು ತಲೆದೂಗಿದವ 
ಅವರಿವರ ಮಾತಿಗೆ ಕಿವಿಗೊಡದ ಇವ 
ತನ್ನ ತಾನರಿಯದವನೆಂದು ತಾನೇ ಹೇಳುವವ 

ಭವ-ಬಂಧನದ ಎಲ್ಲ ಭಾವ ಅಭಾವ 
ಪರಿಣಮಿಸದಂತುಳಿವುದಿವನ ಸ್ವಭಾವ 
ಹಗ್ಗಕ್ಕೂ ಹಾವಿಗೂ ಗಂಟು ಬೆಸೆಯುವವ 
ಮೋಹಕ್ಕೂ ಮುಕ್ತಿಗೂ ಅಂತರ ತಿಳಿದವ 

ಎಲ್ಲ ಅಂಕಿಯ ದಾಟಿ ಶೂನ್ಯ ಹುಡುಕಿದವ 
ಎಲ್ಲ ಅಂಕೆಯ ಮೀರಿ ತಳದಲ್ಲೇ ಉಳಿದವ 
ಸ್ಥಿತಿಯಲ್ಲೂ ಇವನ ಕಣ್ಣಿಗೆ ಎಲ್ಲ ಉತ್ಸವ 
ಮೆರೆಸುವವರೊಳಗೆ ನೆಲೆಸುವುದು ಅಸಂಭವ 

ಈ ಮರುಳನ ಬಾಳಿಗೆ

ಪಲ್ಲವಿ... 

ಈ ಮರುಳನ ಬಾಳಿಗೆ 
ಹೊಸತು ದಾರಿ ನೀ ತೋರಿದೆ 
ಈ ಕವಿದ ಕನಸಲ್ಲಿಯೂ 
ನಿನದೇ ಮಧುರ ಮಳೆಯಾಗಿದೆ 
ಕಳೆದ ಪ್ರತಿ ಕ್ಷಣವೆಲ್ಲವೂ 
ನವಿರು ನೆನಪಾದಂತಿವೆ 

ನೀ ಬಿಡಿಸಿದ ಮೌನಕೆ 
ಅರಳೋ ತುಟಿಯೇ ಮಾತಾಗಿದೆ 
ನೀ ಕಲಿಸಿದ ಹಾಡನೇ 
ಮನವು ಬಯಸುತ ಹಾಡಿದೆ 
ಕರಗೋ ಹಿಮವಾಗುತ್ತಲೇ 
ಬಳಿಗೆ ಹರಿದೆ ಮೆಲ್ಲಗೆ 

ಚರಣ ೧
ಆರಂಭವೇ ಹೀಗೆ ಆಹ್ಲಾದವಾಗಿ
ಅನುಭಂದದ ಸವಿ ಕೈ ಬೀಸಿ ಕೂಗಿ 
ನನ್ನಲ್ಲಿ ಈ ನಿನ್ನ ಸ್ವೀಕಾರವಾಗಿ 
ಸಂತೋಷವು ನಮ್ಮ ಅನುಯಾಯಿಯಾಗಿ  
ಬಾ ತೆರೆಯಲು ಬಾಗಿಲ
ಬೆಳಕು ಕೊಡುವ ಚೈತನ್ಯವೇ 
ಬಾ ಬೆರೆಯಲು ಕೂಡಲೇ 
ಒಲವ ಸೆಲೆಯ ಅಧ್ಯಾಯವೇ 

ಚರಣ ೨
ತಂಗಾಳಿ ಕೂಡ ತಂಪಾದ ಹಾಗೆ  
ನೀನೆಲ್ಲೇ ಕಾಲಿಟ್ಟರೂ 
ಖುದ್ದಾಗಿ ನೀನೇ ನೆರವಾದ ಹಾಗೆ 
ನಾನೆಲ್ಲೇ ಕಂಗೆಟ್ಟರೂ 
ಆಗಾಗ ಮೂಡಲಿ ಮುನಿಸು 
ಕಣ್ಣೋಟ ಸಮರವೇ ಸೊಗಸು 
ನಾ ಸೋತು ಶರಣಾಗುವೆ 
ನಾ ನಿನ್ನ ಸಮವಾಗುವೆ... 

ಪಲ್ಲವಿ 
ಈ ಮರುಳನ ಬಾಳಿಗೆ 
ಹೊಸತು ದಾರಿ ನೀ ತೋರಿದೆ 
ಈ ಕವಿದ ಕನಸಲ್ಲಿಯೂ 
ನಿನದೇ ಮಧುರ ಮಳೆಯಾಗಿದೆ 
ಕಳೆದ ಪ್ರತಿ ಕ್ಷಣವೆಲ್ಲವೂ 
ನವಿರು ನೆನಪಾದಂತಿವೆ 

ನುಡಿಸುವವರಿರದೆ ಕೊಳಲೊಳಗೆ ಉಳಿದ ನಾದ ನಾನು

ನುಡಿಸುವವರಿರದೆ ಕೊಳಲೊಳಗೆ ಉಳಿದ ನಾದ ನಾನು

ಬಿಡಿಸಕೊಳ್ಳಲು ಬರದ ನನ್ನೊಳಗ ಬಿಗಿ ಮೌನ ನೀನು
ಬಿಡಿ ನುಡಿಗಳ ನೆಪದ ಆಸರೆ ಬೇಕೆಮಗೆ ಮಾತಾಗಲು 
ಗಡಿಬಿಡಿ ಇಲ್ಲದೆ ಸಮಯ ಜರುಗಲಿ ಚಂದ ಹಾಡಾಗಲು 

ತಾಳ ತಂಬೂರಿ. ಮೇಳ ತುತ್ತೂರಿ ಯಾವೂ ಇಲ್ಲಿಲ್ಲ  
ಉಸಿರ ಏರಿಳಿತಕ್ಕೆ ಸರಿಯಾಗಿ ಸಿಗಬಹುದೇ ರಾಗ?
ಭಾವ ಸಾಗರದಲ್ಲಿ ಅಲೆಗಳಿಗೆ ಇಂದೇಕೋ ಆಲಸ್ಯ 
ತೀರದಲಿ ಗೀಚಿದವು ದಾಖಲಾಗಲು ಒಳ್ಳೆ ಯೋಗ!

ನಗು ಒಂದು ತಂತಿ, ಅಳುವಿಗೆ ನೂರಾರು ಜೋಪಾನ 
ಯಾವುದೇ ಆದರೂ ಮಿಡಿತಕ್ಕೆ ಕೊಂಡಿಯಾಗುವುದು
ಸಭೆ ತುಂಬ ಕಿವುಡರೇ ಹಾಡೆಂತು ಕೇಳೀತು? ಹಾಡುವ 
ಹಿಂದೆಂದೋ ಸತ್ತ ನೆರಳಿಗಾದರೂ ಜೀವ ಬಂದೀತು 

ಭಿನ್ನ ಅಭಿರುಚಿಗಳು ಬೆರೆತಾಗ ಹೊಸ ರುಚಿ ಹುಟ್ಟುವುದು 
ನಾನು ನೀನು ಕೂಡಿದ ಕ್ಷಣವೂ ಕೂಡ ಹಾಗೇನೇ 
ಒಪ್ಪೊತ್ತಿಗಾದರೂ ಕೊರಳಿಂದ ಹರಿಯಲಿ ಮೆಲ್ಲುಲಿ
ಕಾಲ ಮಿತಿಯ ವಿಸ್ತರಿಸಿಕೊಳ್ಳುವೆ ಬಡಿದು ಸಾವನ್ನೇ 

ಹೊಳ್ಳೆಯನು ಮುಚ್ಚಿ ಮೆಲ್ಲ ತೆರೆಯುತ್ತಾ ಮತ್ತೆಲ್ಲೋ 
ಮತ್ತಾವುದೋ ಹೊಳ್ಳೆಯ ಕಣ್ಣಿಗೆ ಬಟ್ಟೆ ಕಟ್ಟಿ 
ಆಟವಾಡುವ ನಿನ್ನ ಬೆರಳುಗಳ ಬೆರಗಿಗೆ ಸೋತು 
ಅನುರಾಗವೆಂಬ ಹೊಸ ರಾಗಮಾಲಿಕೆ ಹೊಸೆದೆ 

ನಾ ನುಡಿದರೆ ಸಾಲದು ನೀನೂ ಮಣಿದು ಮಾತಾಗು 
ನನ್ನ ಪಯಣಕೆ ದಿಕ್ಕು ತೋರುವ ಒಲವೆಂಬ ಶೃತಿಯಾಗು 
ಗೌಣವಾಗುವೆ ನಿನ್ನ ಹೊರತಾಗಿ ಸ್ಥಾಯಿ ತಲುಪದೆಲೆ 
ಉದ್ಭವಿಸುವೆಲ್ಲ ಅದ್ಭುತಗಳ ತದ್ಭವ ನೀನಾಗು 

ಕಣ್ಣಿನ ಗುರಿಗೆ ನಾ ಸರಿಯಾಗಿ ಸಿಗದೇ ಹೋಗಬಹುದು


ಕಣ್ಣಿನ ಗುರಿಗೆ ನಾ ಸರಿಯಾಗಿ ಸಿಗದೇ ಹೋಗಬಹುದು 
ಹಾಗಾಗಿಯೇ ಗುರಿಯ ಆಚೀಚೆ ಪ್ರತ್ಯಕ್ಷನಾಗುತ್ತೇನೆ 
ಎಂಥ ಗುರಿಕಾರರಾದರೂ ಗುರಿ ತಪ್ಪಿದಲ್ಲೂ ಸಂಭ್ರಮಿಸುತ್ತಾರೆ, ಕಾರಣ
ಆ ಕೇಂದ್ರ ಭಾಗವಿದೆಯಲ್ಲ, ಅದು ಹಂಬಲವಷ್ಟೇ 
ಬಾಣ ನೆಟ್ಟಲ್ಲೇ ಗುರಿಯಿಟ್ಟೆವೆಂಬುದು ನಂತರದ ಸಮಜಾಯಿಷಿ 

ಇಗೋ ಹಣೆಗೆ ಗುರಿಯಿಡು, ಎದೆಗೆ ನಾಟಬಹುದು 
ಬೇಡ, ಇನ್ನು ಮುಂದಕ್ಕೆ ಗುರಿಯಿಡುವಾಟ ಬೇಡ 
ಕೈಚಾಚು ದೂರದಲ್ಲಿ ಬಂದು ನಿಲ್ಲುತ್ತೇನೆ 
ಹೃದಯವಂತೂ ನಿನಗಾಗಿ ಅಂಗೈಯ್ಯಲ್ಲೇ ಕಾದಿದೆ
ದೋಚುವುದೇನು ಕಷ್ಟದ ಕೆಲಸವಲ್ಲ 
ಬದಲಿ ಹೃದಯ ಅನ್ನುವುದಿದೆ ನೋಡು, ಆ ಅದೇ 
ಏನೋ ತಕರಾರು ತೆಗೆವಂತಿದೆ, ಚೂರು ವಿಚಾರಿಸು 

ಕಾವ್ಯೋನ್ಮಾದ ಹೆಚ್ಚು ಕಾಲ ಬಾಳದು 
ನಶೆ ಇಳಿವುದಕ್ಕೆ ಮೊದಲೇ ಮತ್ತೆ ಓದುತ್ತೇನೆ 
ರೂಪಕಗಳು ಹೊಂದದೆ ಹೋಗಬಹುದೇನೋ?
ಅಲ್ಲಲ್ಲೇ ತಿದ್ದಿ ಮರು ಓದಿಗೆ ಸಜ್ಜಾಗುತ್ತೇನೆ 
ಅಥವಾ ರಾಗಬದ್ಧವಾಗಿ ಹಾಡಿ 
ಎದೆ ಮುಟ್ಟಿಸುವ ಯತ್ನ ಮಾಡಿದಾಗ 
ಮುಟ್ಟಿದೆನೆಂದು ಆರೋಪಿಸಿ ಜಗಳವಾಡು 

ಬೆನ್ನು ಬೆನ್ನಿಗೆ ಎಷ್ಟೇ ಬಿನ್ನಹ ಹಾಕಿದರೂ 
ಕಣ್ಣು ನಡೆಸುವ ಚಿಂತನೆ ಮಾತಿಗೂ ಮೀರಿದ್ದು 
ಹಾಗಾಗಿ ಎದುರು-ಬದುರು ಕೂತರೆ ಅನುಕೂಲ;
ಹೇಳಲಾಗದವುಗಳ ನೀನೇ ಗ್ರಹಿಸಿಬಿಡು 
ನನಗೊಪ್ಪುವ ಪ್ರತಿಕ್ರಿಯೆ ಸಿಕ್ಕಿತೆಂದು ನಾ ಹಿಗ್ಗುವೆ 
ಇವಿಷ್ಟೇ ಅಲ್ಲದೆ ಸಲ್ಲಾಪಕ್ಕೆ ಆಸ್ಪದವೂ, ಆಸ್ವಾದವೂ... 

ಈ ವಿಲಕ್ಷಣ ರಾತ್ರಿಗಳು ಕತೆ ಕಟ್ಟುತ್ತಿವೆ 
ನಮ್ಮ ಕುರಿತು ಊಹಾಪೋಹಗಳು ಹಬ್ಬುತ್ತಿವೆ 
ಇದಕ್ಕೆ ನಾವಲ್ಲದೆ ಬೇರಾರೂ ಕಾರಣರಲ್ಲ;
ಹೊಣೆ ಹೊರಲು ನಾ ತಯಾರಿದ್ದೇನೆ 
ಬಯಸಿ ಬಯಸಿ ಕತ್ತಲಾದಾಗ 
ಬೆಳಕಿಗಾಗಿ ತಪಗೈಯ್ಯುವುದು ಮೂರ್ಖತನ 
ತಾರೆಗಳು ಕೊಂಕಾಡಿದರೂ ಮೆರುಗು 
ವದಂತಿಗಳು ನಮ್ಮನ್ನು ಮತ್ತಷ್ಟು ಗಟ್ಟಿಯಾಗಿಸಿವೆ... 

ನಿದ್ದೆಗೆ ಜಾರಲು

ನಿದ್ದೆಗೆ ಜಾರಲು 

ಸದ್ದು ಮಾಡದೆ ಬರುವೆ 
ಕದ್ದು ಹೋಗಲು ನಿನ್ನ ಕನಸುಗಳನು
ಕಣ್ಣ ಗುಡ್ಡೆಯ ಮೇಲೆ 
ಹೊದ್ದ ರೆಪ್ಪೆಗೆ ಒಮ್ಮೆ 
ಸಣ್ಣ ಮುತ್ತನು ಕೊಟ್ಟು ಹಿಗ್ಗುತಿಹೆನು

ಎಚ್ಚರವಾಗಿಸದೆ 
ವಿಷಯವ ಮುಟ್ಟಿಸುವೆ 
ಉತ್ತರಿಸು ನಿನ್ನೊಳಗೆ ನಿನಗೆ ನೀನೇ 
ಮತ್ತಿರದ ರಾತ್ರಿಯಲಿ 
ಮದಿರೆ ನೆನಪುಗಳನ್ನು 
ಹೊತ್ತು ತರುವೆನು ಸ್ಮರಿಸು ಆಗ ನನ್ನೇ 

ಗಹನವಾಗಿಸದಂತೆ 
ಅತಿ ಸರಳ ಮಾರ್ಗದಲಿ 
ತುಸು ದೂರ ಕ್ರಮಿಸುವ ಕನವರಿಸುತ 
ಚಂದಿರನ ಕೈಚಾಚು 
ದೂರದಲಿ ನಿಲ್ಲಿಸಿ 
ತೃಪ್ತಿಗೊಳ್ಳುವವರೆಗೆ ಅನುಭವಿಸುತ 

ಸದ್ದು ಗದ್ದಲ ನಡುವೆ 
ಕಳುವಾಗದಿರಲೆಂದು 
ಪಿಸು ಮಾತುಗಳನೆಲ್ಲ ಬಚ್ಚಿ ಇಡುವೆ
ಹಸಿವೆಂದು ನೊಂದರೆ 
ಬೆಟ್ಟವೇರಿ ಒಂಟಿ 
ಮರದ ಎಲೆಮರೆ ಹಣ್ಣ ಕಿತ್ತು ತರುವೆ 

ಬೆಳಕು ಮೂಡುತಲಿದೆ 
ಎಲ್ಲ ಕಟ್ಟಿಟ್ಟು ಬುಟ್ಟಿಗೆ 
ತುಂಬಿ ಹೊತ್ತು ಹೋಗುವೆ ಇಂದಿಗೆ 
ಕಣ್ಣರಳಿಸಿ ನೋಡು 
ಕನ್ನಡಿಯ ಬಿಂಬವು 
ತನ್ನ ತಾ ನೋಡಿ ನಾಚಿತು ಮೆಲ್ಲಗೆ 

ಆ ಮೋಡ, ಈ ಸೋನೆ ಇದೆಲ್ಲ ವಿಶೇಷ

ಎಲ್ಲ ಹೊಸತಾಗಿ 

ಖುಷಿಯು ಅತಿಯಾದ ಹಾಗಿದೆ 
ಮಾತು ಮರೆತಂತೆ 
ನಾನೇ ಬದಲಾದ ಹಾಗಿದೆ 
ಹೀಗಾಗಲು ಈ ಮನ
ನೀನಲ್ಲವೇ ಕಾರಣ 
ಕರೆ ನೀಡದೆ ಬಳಿಸಾರುವೆ 
ನಾನಾಗಿಯೇ .... ಹೇsss 
ಏನಾಗಿದೆ (ನನಗೆ) ಏನಾಗಿದೆ 
ಅನುರಾಗವೀಗ ಶುರುವಾಗಿದೆ  

ಆ ಮೋಡ, ಈ ಸೋನೆ ಇದೆಲ್ಲ ವಿಶೇಷ 
ನೀ ಇರುವಲ್ಲೇ ನನ್ನ ಈ ನೆರಳ ವಿಳಾಸ 
ಅದೇಕೋ ಅದೇಕೋ ಅದೇ ಕಣ್ಣಿಗೆ ಸೋಲುವೆ 
ವಿಚಾರ ನೂರಾರು ಹೇಳೋದಾ ಬಿಡೋದಾ 
ಒದ್ದಾಡೋ ವೇಳೇಲೇ ಈ ಪ್ರೀತಿ ಆಗೋದಾ 
ನಿಧಾನ ನಿಧಾನ ಚೂರೇ ಚೂರು ಉಸಿರಾಡುವೆ 
ವಿಶೇಷವಾದ ಪ್ರೀತಿ ನನ್ನದು 
ಹೀಗಾಗಲು ಈ ಮನ
ನೀನಲ್ಲವೇ ಕಾರಣ 
ಕರೆ ಮಾಡದೆ ಬಳಿಸಾರುವೆ
ನಾನಾಗಿಯೇ .... ಹೇsss 
ಏನಾಗಿದೆ ಏನಾಗಿದೆ 
ಈ ಬಡಪಾಯಿ ಮನಕೆ ಏನಾಗಿದೆ.... 

ಕಲಾವಿದ ನಿರ್ಲಕ್ಷಕ್ಕೊಳಗಾದಷ್ಟೂ ಪ್ರಬಲನಾಗುತ್ತಿದ್ದಾನೆ


ಇವನಿಗೆ ಮಂಜು ಪರದೆಯ ಮೇಲೆ
ಚಿತ್ರ ಬಿಡಿಸುವುದೆಂದರೆ ಪಂಚ ಪ್ರಾಣ
ತಾನು ಎಳೆದ ಗೀಟು ಎಲ್ಲೂ ಕೂಡದೆ 
ತನ್ನಷ್ಟಕ್ಕೆ ತಾನು ಇದ್ದು ಬಿಡಬಹುದು 
ಅಥವ ಒಂದನೊಂದು ಕೂಡಿ 
ಪೂರ್ಣಾಕೃತಿ ಪಡೆದುಕೊಳ್ಳಬಹುದು 

ಯಾರೂ ಇವನ ಕಲಾವಂತಿಕೆಯ ಮೆಚ್ಚಿ 
ಅಥವ ತೆಗಳಿ ಮಾತನಾಡುವವರಿಲ್ಲ 
ಇವನಲ್ಲಿ ಮೂಡುವ ಭಾವಕ್ಕೆ ತಕ್ಕಂತೆ 
ಓರೆಕೋರೆಗಳು ಬಾಗಿ ಬೀಗುತ್ತವೆ 
ಮತ್ತು ಅವವುಗಳೊಳಗೇ ಸುಪ್ತವಾಗುತ್ತವೆ 
ಮೂಡಿದಷ್ಟೇ ಅವಸರದಲ್ಲಿ ನೇಪಥ್ಯಕ್ಕೆ ಸರಿದು 

ಇವನಲ್ಲಿ ಪ್ರದರ್ಶನಕ್ಕೂ ಸರಕಿಲ್ಲ 
ಆ ಕ್ಷಣ, ಆ ಗಳಿಗೆಗೆ ತಕ್ಕಂತೆ ಬಿಡಿಸಬಲ್ಲ;
ನೀರ ಮೇಲೋ, ಗಾಳಿಯಲ್ಲೋ 
ಕ್ಷಿತಿಜವನ್ನು ಎಳೆತಂದು ಇಬ್ಬನಿಗೆ 
ಮಳೆಬಿಲ್ಲನ್ನು ಒಲೆಯ ಮಸಿಗೆ ಸೇರಿಸುವ
ನಿರೂಪಮಾನ ಕಲೆ ಇವನದು 

ಯಾರೋ ಕದ್ದಿರಬಹುದಾದ ಗುಮಾನಿ 
ಅಥವ ಎರವಲು ಪಡೆದ ಸಬೂಬು
ಯಾವುದೂ ಇವನನ್ನು ಬಾಧಿಸುವುದಿಲ್ಲ;
ಬಿಡಿಸಿದ ಒಗಟನ್ನು ಮತ್ತೆ ಇವನೇ 
ಗೋಜಲಾಗಿಸಿಕೊಂಡು ಬಿಡಿಸಿ ಕೂರಬಹುದು  
ಅಥವ ಏನೂ ಅರಿಯದವನಂತೆ 
ನಿರ್ಲಿಪ್ತನಾಗಿ ಉಳಿದುಬಿಡಬಹುದು 

ಘೋಷ, ಜೈಕಾರಗಳು ಕೇಳುವುದಿಲ್ಲ 
ಪಾರಿತೋಷಕ, ಬಿರುದು ಕಾಣುವುದಿಲ್ಲ 
ಬೆರಳಂಚಲಿ ಬಣ್ಣದ ಕಲೆಯೂ 
ಕಣ್ಣಂಚಲಿ ಸಾರ್ಥಕತೆಯೂ ಗೋಚರಿಸುವುದಿಲ್ಲ;
ಒಳಗೇನೋ ಮಾರ್ಮಿಕ ತುಡಿತ 
ಸದಾ ಎಚ್ಚರಿಸಿದಂತೆ ತೊಳಲಾಡುತ್ತಾನೆ 
ಮೇಲ್ನೋಟಕ್ಕೆ ಶಾಂತ ರೂಪಿಯಾಗಿ 

ಯಾರಲ್ಲೂ ಹೇಳಿಕೊಳ್ಳಲಾಗದ ನೋವು
ಎಲ್ಲರಲ್ಲೂ ಹಂಚಿಕೊಳ್ಳಬಲ್ಲ ಖುಷಿ
ಎಲ್ಲವನ್ನೂ ಏಕ ಸ್ವರೂಪದಲ್ಲಿ 
ಅರ್ಥಾತ್ ನಿರ್ಭಾವುಕವಾಗಿ ವ್ಯಕ್ತಪಡಿಸುವ 
ಖಾಲಿತನದ ಅನಾವರಣ ಪ್ರತಿ ಸಲವೂ;
ಇದು ಕಲೆ ಎಂದವರಿಗೆ ಕಲೆ, ಇಲ್ಲವೆಂದವರಿಗೆ ಇಲ್ಲ 
ಕಲಾವಿದ ನಿರ್ಲಕ್ಷಕ್ಕೊಳಗಾದಷ್ಟೂ ಪ್ರಬಲನಾಗುತ್ತಿದ್ದಾನೆ... 

ದಣಿವಾರಿ ಕೊಳದಲಿ

ದಣಿವಾರಿ ಕೊಳದಲಿ  ಕೆಂದಾವರೆ ಅರಳಿದೆ  ಮುಗಿಲೇರಿ ಬರದಲಿ  ಹನಿಗೂಡಲು ಇಳಿದಿದೆ  ರವಿಕಾಂತಿ ಸವಿಯುತ  ಹರಳಂತೆ ಮಿನುಗುತಾ  ಬೆರಗಲ್ಲೇ ತಯಾರಿಯಾಗುತಿದೆ  ಮನದಂಗಳ ಮುಂಜಾನೆಯ...