Friday, 29 January 2016

ನಿನ್ನ ಓದಿಗೆ

ಉಳಿಸಿಕೊಂಡ ಅಷ್ಟೂ ಮಾತನು
ಒಂದೇ ಉಸಿರಲಿ ಹೇಳಿ ಮುಗಿಸುವೆ
ತಡವಾದರೂ ಸರಿ ಬಿಡುವಾಗಿ ಬಾ
ನಡುವಲ್ಲಿ ತಡವರಿಸಿ ಮಾತು ಬಡವಾಗದಿರಲಿ


ಎರಡೂ ಕಣ್ಣಲ್ಲಿ ತಡೆದಿಟ್ಟ ಹೂವನ್ನು
ಅರಳಿಸುವ ಸರದಿಯಲಿ ಕಣ್ಣೀರು ಬಂದರೆ
ತಪ್ಪು ತಿಳಿದು ನೀನೂ ಬಿಕ್ಕಳಿಸಬೇಡ
ಅಳುವಿನ ಮಿತ ಸರಣಿ ಮೊದಲಾಗದಿರಲಿ


ಬೆಟ್ಟದೆತ್ತರದೊಲವ ನೆಲಮಾಳಿಗೆಯಲೊಂದು
ಗುಟ್ಟು ಬಿಚ್ಚಿಡುವಾಗ ಬೆಚ್ಚಿ ಬೀಳದಿರು
ನಾವೊಂದೇ ಎಂದಾದಮೇಲೆ ಮುಂದಾವುದೂ
ನಮ್ಮ ನಡುವೆ ಒಗಟಿನಂತುಳಿಯದಿರಲಿ


ಸಣ್ಣ ಮಳೆಯೊಂದಕ್ಕೆ ಪರಿಚಯಿಸಿಕೊಂಡು
ಮಿಂದು ಅದರೊಳಗೊಂದಾಗುವ ಗಳಿಗೆ
ಅಪ್ಪಿ ತಪ್ಪಿ ಮಿಂಚಿ ಮರೆಯಾದ ಮಿಂಚಿಗೆ
ಎದೆ ಕದಡಿ ನಗು ಮುದುಡಿ ಬರಡಾಗದಿರಲಿ


ಮಾತು ಮುಗಿಯದ ಮಾತಿನಾಳಕ್ಕೆ ಇಳಿದು
ಎತ್ತ ಸಾಗಿದರಲ್ಲಿ ತೆಕ್ಕೆಯಲೇ ಉಳಿದು
ಚುಕ್ಕಿ ಎಣಿಸುತ್ತ ಕತ್ತಲು ಅಪ್ಪಿಕೊಂಡಿರಲು
ಸಡಿಲಾಗಿಸುವ ಬೆಳಕು ಎದುರಾಗದಿರಲಿ


                                           - ರತ್ನಸುತ

Thursday, 28 January 2016

ಒಂದು ಹಗಲುಗನಸು

ಅದೊಂದು ರಾತ್ರಿ,
ಹಗಲಾಗಿದ್ದರೂ ಆಗಿದ್ದಿರಬಹುದು
ನಾನಿನ್ನೂ ನಿದ್ದೆ ಮಾಡುತ್ತಿದ್ದೆ
ತಲೆಯೂರಿದ ದಿಂಬಿನ ಕೆಳಗೆ ಸದ್ದು


ಎಚ್ಚರವಾಗಿ
ದಿಂಬನು ನಿಧಾನಕೆ ತಿರುವಿ ನೋಡಿದೆ
ಅಲ್ಲೊಂದು ನಿರ್ವಾತ ಪ್ರಾಣ
ಇನ್ನೇನು ಕೊನೆಗಾಣುವಲ್ಲಿತ್ತು


ಎಲ್ಲಕ್ಕೂ ಕೊನೆಯಿಡುವ
ತವಕದ ಉಸಿರು ಮಾತ್ರವೇ ಅಲ್ಲಿ
ನಿರಾಕಾರದ ದೇಹಕ್ಕೆ ಆಧಾರ


ಚೂರು ಮನಸು ಮಾಡಿ
ಮೆಲ್ಲಗೆ ತನ್ನ ಕೈ ಹಿಡಿಯಹೋದೆ
ದೇಹದ ಋಣ ತೀರಿದಂತೆ
ಮುರಿದು ನನ್ನ ಕೈ ಸೇರಿತು


ತಲೆ ಸವರಲು ಕತ್ತು ಸೀಳಿ
ಕಣ್ಣ ತೀಡಲು ಗುಡ್ಡೆ ಪುಟಿದು
ಎದೆ ಸವರಲು ಬಿರುಸು ಶ್ವಾಸ
ಅಂಗಾಲದು ನೀಲಿಗಟ್ಟಿ
ಸೆಟೆದ ಬೆರಳುಗಳೆಲ್ಲ ಉದುರಿ
ತುಟಿಯ ಬದಿಯಲೇ ಮಾತು ಸತ್ತು
ಶ್ರವಣ ಹವಣಿಸಿದ ಮಾತಿಗೂ ಮುನ್ನ
ಕಿವುಡು ಕವಿದು...


ನಿರ್ಭಾವುಕನಾಗಿ ನಿಬ್ಬೆರಗಾದೆ
ಒಂದೊಂದೇ ಕಳಚಿ ಬಿದ್ದು
ಕೊನೆಗೆ ಇದ್ದ ಆಕಾರವೂ ಇಲ್ಲದಾಗಿ
ಇಲ್ಲದ ಆಕಾರಗಳೂ ಸೋತು ಬಿದ್ದವು


ನಾ ಹಡೆದ ಆಪಕ್ವ ಕನಸುಗಳ
ಅಕಾಲಿಕ ಮರಣದ ಘೋಷವೇ ಸದ್ದು?
ಕನಸುಗಳೇ ಸತ್ತು ಬಿದ್ದದ್ದು?
ಎಚ್ಚರಗೊಂಡಿದ್ದರೆ ಉಳಿಯುತ್ತಿದ್ದವೇನೋ?
ಛೇ!! ನಿದ್ದೆಯಲ್ಲಿ ಎಚ್ಚರ ತಪ್ಪಿದೆ
ಆಕಾರ ನೀಡುವಲ್ಲಿ ಸೋತೂ
ಒಲಿದದ್ದ ಉಳಿಸಿಕೊಳ್ಳದಾದೆ!!


ಅಗೋ, ಬೆಳಕು ಹರಿದೇಬಿಟ್ಟಿದೆ
ಅಂದರೆ? ಹಗಲುಗನಸು?
ಕಳಚಿ ಬೀಳುವ ಮುನ್ನ
ಮತ್ತೊಮ್ಮೆ ದೃಢೀಕರಿಸಿಕೊಳ್ಳಬೇಕು
ಎಂದಿನಂತೆ, ನಾನು ನನ್ನನ್ನು!!


                                 - ರತ್ನಸುತ

Tuesday, 26 January 2016

ಕಣ್ಣೀರಿಗೆ ಕರಗುವ ಮುನ್ನ

ಕಣ್ಣಂಚಲಿ ಒಂದು ಕಣ್ಣೀರ ಕಾರ್ಖಾನೆ
ಸ್ಥಾಪಿಸಿಕೊಂಡವಳೇ ನೀನು?
ಎಷ್ಟೆಂದರೆ ಅಷ್ಟು ಕಣ್ಣೀರ ಸುರಿಸುವೆ
ಅಳುವುದಷ್ಟು ಸುಲಭವೇನು?


ನಕ್ಕಂತೆ ಅಳುವೆ, ಅತ್ತಂತೆ ನಗುವೆ
ಎಲ್ಲಕ್ಕೂ ಕಣ್ಣೀರೇ ಕೊಡುಗೆ
ಹಗುರಾಗಿ ಅವನು ಪರಿಗಣಿಸಬೇಕೇ?
ಗಂಭೀರ ಒಗಟಿದುವೇ ನನಗೆ


ಪಸೆ ಅಳಿಸುವಾಗ, ಕಣ್ಣೊರೆಸುವಾಗ
ನೀನೂ ಅಪ್ಪಟ ಹೆಣ್ಣಂತೆ
ಅಳು ತೀರಿದೊಡನೆ ತಾಳುವ ಮುನಿಸು
ಅಬ್ಬಾ ಥೇಟು ನನ್ನಂತೆ


ಒಂದೊಂದು ಹನಿಗೂ ಲೆಕ್ಕವಿಡುವವಳು
ಜಮಾ ಮಾಡುವೆ ಎಲ್ಲದಕ್ಕೂ
ತಪ್ಪಿಗೆ ತಕ್ಕ ಬೆಲೆ ತೆತ್ತ ನನ್ನ
"ಪ್ರೀತಿಸುವೆ" ಅಂದುಬಿಡು ಸಾಕು


ಎಲ್ಲಿಯದು ಹುಸಿ ಕೋಪ?
ಜಿನುಗುತಿಹ ಕಣ್ಣಲ್ಲಿ
ಶರಣಾದಂತೆ ಕಂಗೊಳಿಸಿದೆ
ನಿಮಿಷದ ಹಿಂದೆ
ನಾ ಬೇಡವಾಗಿದ್ದೆ
ಕಣ್ಣೀಗ ನನ್ನನ್ನೇ ಬೇಡುತ್ತಿದೆ!!


                            - ರತ್ನಸುತ

Monday, 18 January 2016

Broken Stone!!

I put down everything I need
On a rough piece of paper
And wonder where to begin with
And why do I do so?!!


Long awaiting things had no space
That's why I missed them
Not to mean they hold no value
They always remain within
And never get exposed for fame
They remain as remains of dream
With no definite shape
But with a definite value


Those fulfilled have lost their way
To haunt me as before
They strive as hard to end up with
Disappointed results
It's not always the same importance
I give to myself and thee
So what I have is all I gain
And what I don't is all I want


I've lost many papers like these
Some shred, unread sometimes
Ignored or immaterialized
Unwanted I feel though wanted
Thrown away in search of something
More precious among the thrown
With nothing left now, more to come


The crumbling sounds allover
Have something to say
I have no time for myself
How could I pay for it?
I hear no sound, I bear no voice
I'm as simple as a broken stone!!

ನನ್ನೊಂದಿಗೆ ನಾನು

ದಾರಿಗೆ ಅಡ್ಡಲಾಗಿ ಮಲಗಿ
ನಾ ಎತ್ತಲೂ ಹೋಗದಂತೆ
ನನ್ನ ಜುಟ್ಟು ಹಿಡಿದು
ನಿಯಂತ್ರಿಸುವ ನೆರಳೇ
ಮುಂದೆ ಸಾಗಲು ಬಿಟ್ಟುಬಿಡು
ಹಿಂದಿರುಗಿದರೆ ಸೋತವುಗಳೊಡನೆ
ಮೋಟು ಬೀಡಿ ಸೇದುತ್ತ
ಅದೇ ಸೋಲುಗಳ ಪರಾಮರ್ಶೆ,
ಹೊಗೆಯೂ ಅರೆ ಗಳಿಗೆ ಎದೆಯಲ್ಲಿ ಉಳಿಯಲಾರದು


ಒಮ್ಮೆ ಎತ್ತರಕ್ಕೆ ಹಿಗ್ಗಿ
ಇನ್ನೊಮ್ಮೆ ಕುಬ್ಜವಾಗುವ ನಿನ್ನ
ನನ್ನ ಸಮಾನಕ್ಕೆ ಎತ್ತಿ ಹಿಡಿದು-ಹಿಡಿದು
ತೋಳುಗಳು ರೋಸಿ ಹೋಗಿವೆ


ಪ್ರಯೋಗಶೀಲತೆಗೆ ನೀ ಕೊಡುವ
ಅದೇ ಎಂದಿನಂತಿನ ಸಪ್ಪೆ ಸಮ್ಮತಿಯಲ್ಲಿ
ಮುನ್ನುಗ್ಗುವ ಛಲಕೆ ಅಚಲತೆ ಬಡಿದು
ಅಲ್ಲೆ ನಿಂತುಕೊಂಡಾಗ ನೋಡಬೇಕು
ನಿನ್ನ ಅಮಾಯಕತನದಲ್ಲಿನ ಸೊಕ್ಕು


ನಿಶೆಯಲ್ಲಿ ನಶೆಯೇರಿಸಿಕೊಳಲು
ನಿನಗೆಂದೇ ಮೀಸಲಿಟ್ಟ ಖಾಲಿ
ಗಾಜಿನ ಲೋಟದ ಮುಖೇನ ನಿನ್ನ ನೋಡುವಾಗ
ಅದೇನು ಅಂಕುಡೊಂಕಾಟ ನಿನದು,
ಅಸಲು ಕುಡಿದದ್ದು ನಾನಾ ನೀನಾ ಎಂಬ ಶಂಕೆ
ಅಲ್ಲೇ ಮುಕ್ಕಾಲು ಭಾಗ ಅಮಲು ಪೋಲು!!


ನಿನ್ನ ಇರುವಿಕೆಯನ್ನು ಪ್ರಶ್ನಿಸಿ
ಅರ್ಧ ಆಯಸ್ಸು ಕಳೆದಿದ್ದೇನೆ
ಕೂದಲು ಬೆಳ್ಳಗಾಯಿತೆಂಬ ಚಿಂತೆಯಿಲ್ಲ
ಹಾಲು ದಂತ ಬಲಿತು ನೋಯುವಾಗ
ನಿನ್ನ ವಿರುದ್ಧ ಹಲ್ಲು ಮಸೆದ ಪ್ರಸಂಗಗಳು
ಒಂದೊಂದಾಗಿ ನೆನಪಾಗುತ್ತ
ಒಂದೊಂದೇ ಉದುರಿ ಬಿದ್ದವು
ನಾನಿನ್ನು ನಗಲಿಕ್ಕೂ ಅಸಮರ್ಥ


ನಾ ನಾಶವಾಗದ ಹೊರತು
ನೀ ನಾಶವಾಗಲಾರೆ ಎಂದರಿತು
ವಿನಾಶದ ಅಂಚಿಗೆ ತಲುಪಿದ್ದೇನೆ
ಅಲ್ಲೂ ನಿನ್ನ ಉತ್ಪ್ರೇಕ್ಷೆ,
ನಾನೇನೆಂಬುದ ನನಗೆ ತೋರುತ್ತಲೇ
ನೀನಾರೆಂಬುದು ರೂಪುಗೊಂಡಂತಿದೆ
ಇಗೋ ಒಂದು ಅಂತಿಮ ಸಾಲು
ಸಾಧ್ಯವಾದರೆ ಇಬ್ಬರೂ ಜೊತೆಗೆ ಓದೋಣ!!


                                           - ರತ್ನಸುತ

Thursday, 14 January 2016

ಅಮ್ಮನೊಡನೆ...


ಅಮ್ಮನೊಡನೆ ಮಗುವಾಗಿರಬೇಕು
ತಮಾಷೆಗೆ ಚಪ್ಪಾಳೆ ತಟ್ಟುತ್ತ ನಕ್ಕು
ದುಃಖಕ್ಕೆ ಬಳಬಳನೆ ಅತ್ತು
ರೇಗುತ, ರೇಗಿಸುತ, ರೋಧಿಸುತ್ತ
ಒಂದು ಹತ್ತಾದರೂ ಲಟ್ಟಣಿಗೆ ಮುರಿದೂ
ತಲೆ ಗಟ್ಟಿಗಿರಿಸಿಕೊಳ್ಳಬೇಕುಅಮ್ಮನೊಡನೆ ಮಗುವಾಗಿರಬೇಕು
ಹಸಿವಾದಾಗ ಬೇಕಾದ್ದ ಬೇಡಿ
ಅವಳಿಲ್ಲದಾಗ ನೊಂದು ಒದ್ದಾಡಿ
ಆಗಾಗ ಬಿಗಿದಪ್ಪಿ ಮುತ್ತಿಟ್ಟು
ಎಲ್ಲ ಹಿಂಜರಿಕೆ ಬದಿಗಿಟ್ಟು
ಹಬ್ಬಕ್ಕೆ ಕೊಡಿಸದ ಸೀರೆಯ ನೆಪದಲ್ಲಿ
ನೂರು ಬಾರಿಯಾದರೂ ಉಗಿಸಿಕೊಂಡುಅಮ್ಮನೊಡನೆ ಮಗುವಾಗಿರಬೇಕು
ತಡವಾಗಿ ಬಂದಾಗ ಮಾತು ತಡವರಿಸಿ
ತಪ್ಪುಗಳ ಮೇಲೆ ತಪ್ಪನ್ನು ಎಸಗಿ
ತಪ್ಪಾಯಿತೆಂದು ತಪ್ಪೊಪ್ಪಿಕೊಂಡಾಗ
ಕರುಳ ಕಿವುಚಿಕೊಂಡು ಕಿವಿ ಹಿಂಡುವಾಗ
ಆಕಾಶ ಭೂಮಿಯ ಒಂದಾಗಿಸಿ ಅಳಲು
ಮುಂದಾಗಿ ಅವಳೇ ಮುನಿಸನ್ನು ಬಿಡಲುಅಮ್ಮನೊಡನೆ ಮಗುವಾಗಿರಬೇಕು
ಹಠದಲ್ಲಿ ಯಾವುದೇ ರಾಜಿಯಿರದಂತೆ
ಚಟಗಳೆಲ್ಲವ ತಾನು ಅರಿತುಕೊಂಡಂತೆ
ಮೌನದ ಮಾತುಗಳ ತಿಳಿ ಪಡಿಸುವಂತೆ
ಒಪ್ಪಿಗೆಯ ಕೊನೆಯಲ್ಲಿ ಒಪ್ಪದ ಮನಸನ್ನು
ತೆರೆದು ತನಗೆ ಎಲ್ಲ ಒಪ್ಪಿಸಿ ಬಿಡುವಂತೆಅಮ್ಮನೊಡನೆ ಮಗುವಾಗಿರಬೇಕು
ನಾನಾಗಿ ಹೇಳದ ತಾನಾಗೇ ಅರಿತದ್ದ
ಸುಳ್ಳೆನ್ನುವ ನನ್ನ ತಾ ಸುಳ್ಳಾಗಿಸಲು
ಕ್ರೋಧವ ನಿಗ್ರಹಿಸಿ, ಪ್ರೀತಿಯ ಆಗ್ರಹಿಸಿ
ಹಾಲಾಹಲದ ಮನವ ಹಾಲಾಗಿಸಲು
ನನ್ನ ನನ್ನೊಳಗೆತನ್ನ ನನ್ನೊಳಗೆ
ನನ್ನ ತನ್ನೊಳಗೆ, ತನ್ನ ತನ್ನೊಳಗೆ
ಮರು ತಾಳಿಸುವ ತವಕ ಚಿರವಾಗುವಂತೆ!!                                       - ರತ್ನಸುತ 

Sunday, 10 January 2016

ಸುಮ್ನೆ ತಮಾಷೆಗೆ

ಉಪ್ಪು ತಿಂದೋರ ಮನೆಯಲ್ಲಿ
ತುಪ್ಪ ಕದಿಯೋದು ತಪ್ಪಲ್ಲ
ತಪ್ಪು ಮಾಡೋದ ಕಲಿದೋನ್ನ
ಹುಟ್ಸಿದ್ ಅಪ್ಪನೂ ಒಪ್ಪಲ್ಲ

ಉಪ್ಪು ಇಲ್ಲದೆ ಊಟಿಲ್ಲ
ತುಪ್ಪ ಇಲ್ಲದೆ ಹಬ್ಬಿಲ್ಲ

ಉಪ್ಪಾ.. ತುಪ್ಪ.. ತಪ್ಪಾ...
ಯಪ್ಪಾ.. ಹೇಳ್ರೋ ಸ್ವಲ್ಪ...     (1)ಗಾಂಧಿ ತಾತನ ಕಥೆಯಲ್ಲಿ
ಉಪ್ಪಿಗೆಷ್ಟೋಂದು ಬೆಲೆಯಿತ್ತು
ಸತ್ಯಾಗ್ರಹಗಳೇ ನಡೆದೋಯ್ತು...
ಸಾಲ ಮಾಡಿದ ಸರದಾರ
ಅಂದು ಮಾತ್ರವೇ ನೀಯತ್ತು
ಇಂದು ತುಪ್ಪ ತಿಂದರೆ ತಾಕತ್ತು...

ಕತ್ತೆಗಳು ಹೊತ್ತ, ಉಪ್ಪಿನ ರುಚಿಗಿಂತ
ಕತ್ತರಿ ಹಾಕುತ್ತ ಕದಿಯುವುದಾನಂದ

ಉಪ್ಪು ಇದ್ದರೆ ಹಸಿವಿಲ್ಲ
ತುಪ್ಪ ಇದ್ದರೆ ಸಿಹಿ ಎಲ್ಲ...

ಉಪ್ಪಾ.. ತುಪ್ಪ.. ತಪ್ಪಾ...
ಯಪ್ಪಾ.. ಹೇಳ್ರೋ ಸ್ವಲ್ಪ...      (2)ಉಪ್ಪು ಎಲ್ಲೆಲ್ಲೂ ಸಿಕ್ಕುವುದು
ಸಿಪ್ಪೆ ಸುಲಿದಷ್ಟೇ ಸುಲಭಕ್ಕೆ
ಯಾರೂನೂ ಪಡೆಯರು ಸಾಲಕ್ಕೆ...
ತುಪ್ಪ ತಿನ್ನೋರು ಕದಿಬೇಕು
ತಿಪ್ಪೆ ಸಾರಿಸೋ ಹಾಗಲ್ಲ
ತಿರುಪೆ ಎತ್ತಿದರೂ ಸಿಕ್ಕಲ್ಲ...

ತಪ್ಪಿದ್ದರೆ ಕ್ಷಮಿಸಿ, ಇದು ಕಳ್ಳನ ಹಾಡು-ಹಸೆ
ಸದ್ದು ಮಾಡದಿರಿ, ತಪ್ಪೀತು ತುಂಬು ಕಿಸೆ

ಉಪ್ಪಿನ ಮನೆ ಹಾಳಾಯ್ತು
ತುಪ್ಪವೇ ನನ್ನ ಪಾಲಾಯ್ತು...

ಉಪ್ಪಾ.. ತುಪ್ಪ.. ತಪ್ಪಾ...
ಯಪ್ಪಾ.. ಹೇಳ್ರೋ ಸ್ವಲ್ಪ...    (3)                                  - ರತ್ನಸುತ

Wednesday, 6 January 2016

ಕಪ್ಪೊಪ್ಪಿಗೆ

ನಿಜದ ನೆರಳು ಕಪ್ಪು
ಅಷ್ಟಾದ ಮಾತ್ರಕ್ಕೆ ಜರಿಯಬೇಡ
ಕಪ್ಪು ಪರಾವಲಂಬಿಯಲ್ಲ
ಬೆಳಕಿನ ಮೋಸದ ತುಣುಕು


ಕೋಗಿಲೆ ಕಪ್ಪಿಗೆ ಒಪ್ಪಿಗೆ
ಕಾಗೆಯದೇಕೋ ಕಡೆಗಣನೆ
ಕಪ್ಪು ಇದ್ದಿಲ ಅಟ್ಟಕ್ಕೇರಿಸಿ
ಕೆಂಡವ ಕೆನ್ನೆಗೆ ಹೋಲಿಸುವೆ


ಕಣ್ಣ ತೀಡುವ ಕಪ್ಪು ತಂಪು
ಕಪ್ಪಾದರೂ ನಾದಸ್ವರ ಇಂಪು
ಬಿಳಿ ಕರ್ಪೂರದ ಕೊನೆಯ ರೂಪ
ಮುಪ್ಪೇ ಇಲ್ಲದ ಕಪ್ಪು


ತಪ್ಪನು ಎತ್ತಿ ತೋರುವ ಕಪ್ಪು
ದೃಷ್ಟಿಗೆ ಕಪ್ಪು, ದೋಷಕೂ ಕಪ್ಪು
ಹುಟ್ಟುವ ಮುನ್ನ ರೆಪ್ಪೆಯ ಕಾವಿಗೆ
ಹತ್ತಿರವಾದ ಕೌತುಕ ಕಪ್ಪು


ಕೊಳೆಯಲು ಕಪ್ಪು, ತುಳಿಯಲು ಕಪ್ಪು
ಇಳಿಯಲು ಆಳಕೆ ಬೆಳೆವುದು ಕಪ್ಪು
ಹಣತೆಯ ಛಾಪು ತಿಳಿಯಲು ಅಲ್ಲಿ
ಮೂಡಲೇ ಬೇಕು ಸುಂದರ ಕಪ್ಪು


ನೆರಳಿನ ಆಟಕೆ ಬೆಂಬಲ ಕಪ್ಪು
ಬೆಳಕಿನ ಪಾಠಕೆ ಮುನ್ನುಡಿ ಕಪ್ಪು
ಎಲ್ಲ ತನ್ನೊಳ ಸೆಳೆದು ಕಡೆಗೆ
ಹೊರ ಚೆಲ್ಲುವು ಔದಾರ್ಯತೆ ಕಪ್ಪು


                                    - ರತ್ನಸುತ

Tuesday, 5 January 2016

ಫೋನ್ ಇನ್ ಲವ್


ಲಾಕ್ ಸ್ಕ್ರೀನಲ್ಲಿ ನಿನ್ನ
ಫೋಟೋಗ್ರಾಫು ಕಂಡು
ಅನ್ಲಾಕ್ ಮಾಡೋದಕ್ಕೆ ಕೈಯ್ಯೇ ಬಾರದು
ಇನ್ಕಮ್ಮಿಂಗ್ ಕಾಲು
ನಿನ್ನದಾಗದ ಹೊರತು
ರಿಸ್ಸೀವ್ ಮಾಡೋದಕ್ಕೆ ಮನಸೇ ಬಾರದುಕಾನ್ಟಾಕ್ಟ್ ಲಿಸ್ಟಲ್ಲಿ
ಫೇವ್ರೇಟ್ ಆದ ನೀನೇ
ಬೇಡವೆಂದರೂ ಸಿಗುವೆ ಫರ್ಸ್ಟ್ ರೋ ಅಲಿ
ಕನ್ಫೆಶ್ಷನ್ ಏನೇ ಇದ್ರೂ
ಪರ್ಮಿಶ್ಷನ್ ಕೇಳದೆ ನಾ
ಸೆಂಡ್ ಮಾಡುವೆ ಖಾಲಿ ಎಸ್ಸೆಂಮ್ಮೆಸ್ಸಲಿಹೆಲ್ಲೋ ಅಂತ ನೀನು
ಅನ್ನೋದಕ್ಕೂ ಮುನ್ನ
ಕಾಲರ್ ಟ್ಯೂನು ತುಂಬ ಚಂದ ಅನಿಸಿತು
ಮೊನ್ನೆ ಗ್ಯಾಪಿನಲ್ಲಿ
ಸಣ್ಣ ಸ್ಮೈಲು ಕೊಟ್ಟೆ
ಅಂದಿನಿಂದ ಅದುವೇ ರಿಂಗ್ ಟೋನಾಯಿತುಪ್ಲೇ ಸ್ಟೋರಿನಲ್ಲಿ ಸಿಗದ
ಫ್ರೀ ಗೇಮಂತೆ ನಾನು
ಬೇಕು ಅಂದರೆ ಡೌನ್ಲೋಡ್ ಮಾಡಿಕೋ
ಪ್ರೈವೇಟಾಗಿ ಒಂದು
ಲವ್ ಪೋಸ್ಟ್ ಹಾಕುತೀನಿ
ಇಷ್ಟ ಬಂದ ಸಾರಿ ಅದ ನೀ ಓದಿಕೋಫುಲ್ ಚಾರ್ಜ್ ಫೋನು ನಂದು
ಡ್ರೈನ್ ಔಟ್ ಆಗೋ ತನ್ಕ
ನಾನ್ ಸ್ಟಾಪ್ ಮಾತನಾಡು ವಾಯ್ಸ್ ಕಾಲಲಿ
ಲಾಸ್ಟ್ ಬಟ್ ನಾಟ್ ಲೀಸ್ಟ್
ಸ್ಟೇಟಸ್ ನಿನ್ನ ಹೆಸರೇ
ಬದಲಾಗದೆ ಉಳಿವುದು ವಾಟ್ಸಾಪಲಿ!!                                       - ರತ್ನಸುತ

ನೀರವ ಸ್ಥಿತಿಯಲ್ಲಿ ಯಾರಿವನೆನ್ನದಿರು

ನೀರವ ಸ್ಥಿತಿಯಲ್ಲಿ ಯಾರಿವನೆನ್ನದಿರು ನೀನಿರದೆ ಈ ಗತಿ ಸಿದ್ಧಿಸಿತು ಜೀವಕೆ ಹಾಡುಹಗಲಲ್ಲಿ ನೀ ಆವರಿಸಿಕೊಂಡಿರುವೆ ಕನಸೊಂದು ಬೀಳುತಿದೆ ಗೊತ್ತಿದ್ದೂ ಬಾವಿಗೆ ಬ...