ಒಂದು ಹಗಲುಗನಸು

ಅದೊಂದು ರಾತ್ರಿ,
ಹಗಲಾಗಿದ್ದರೂ ಆಗಿದ್ದಿರಬಹುದು
ನಾನಿನ್ನೂ ನಿದ್ದೆ ಮಾಡುತ್ತಿದ್ದೆ
ತಲೆಯೂರಿದ ದಿಂಬಿನ ಕೆಳಗೆ ಸದ್ದು


ಎಚ್ಚರವಾಗಿ
ದಿಂಬನು ನಿಧಾನಕೆ ತಿರುವಿ ನೋಡಿದೆ
ಅಲ್ಲೊಂದು ನಿರ್ವಾತ ಪ್ರಾಣ
ಇನ್ನೇನು ಕೊನೆಗಾಣುವಲ್ಲಿತ್ತು


ಎಲ್ಲಕ್ಕೂ ಕೊನೆಯಿಡುವ
ತವಕದ ಉಸಿರು ಮಾತ್ರವೇ ಅಲ್ಲಿ
ನಿರಾಕಾರದ ದೇಹಕ್ಕೆ ಆಧಾರ


ಚೂರು ಮನಸು ಮಾಡಿ
ಮೆಲ್ಲಗೆ ತನ್ನ ಕೈ ಹಿಡಿಯಹೋದೆ
ದೇಹದ ಋಣ ತೀರಿದಂತೆ
ಮುರಿದು ನನ್ನ ಕೈ ಸೇರಿತು


ತಲೆ ಸವರಲು ಕತ್ತು ಸೀಳಿ
ಕಣ್ಣ ತೀಡಲು ಗುಡ್ಡೆ ಪುಟಿದು
ಎದೆ ಸವರಲು ಬಿರುಸು ಶ್ವಾಸ
ಅಂಗಾಲದು ನೀಲಿಗಟ್ಟಿ
ಸೆಟೆದ ಬೆರಳುಗಳೆಲ್ಲ ಉದುರಿ
ತುಟಿಯ ಬದಿಯಲೇ ಮಾತು ಸತ್ತು
ಶ್ರವಣ ಹವಣಿಸಿದ ಮಾತಿಗೂ ಮುನ್ನ
ಕಿವುಡು ಕವಿದು...


ನಿರ್ಭಾವುಕನಾಗಿ ನಿಬ್ಬೆರಗಾದೆ
ಒಂದೊಂದೇ ಕಳಚಿ ಬಿದ್ದು
ಕೊನೆಗೆ ಇದ್ದ ಆಕಾರವೂ ಇಲ್ಲದಾಗಿ
ಇಲ್ಲದ ಆಕಾರಗಳೂ ಸೋತು ಬಿದ್ದವು


ನಾ ಹಡೆದ ಆಪಕ್ವ ಕನಸುಗಳ
ಅಕಾಲಿಕ ಮರಣದ ಘೋಷವೇ ಸದ್ದು?
ಕನಸುಗಳೇ ಸತ್ತು ಬಿದ್ದದ್ದು?
ಎಚ್ಚರಗೊಂಡಿದ್ದರೆ ಉಳಿಯುತ್ತಿದ್ದವೇನೋ?
ಛೇ!! ನಿದ್ದೆಯಲ್ಲಿ ಎಚ್ಚರ ತಪ್ಪಿದೆ
ಆಕಾರ ನೀಡುವಲ್ಲಿ ಸೋತೂ
ಒಲಿದದ್ದ ಉಳಿಸಿಕೊಳ್ಳದಾದೆ!!


ಅಗೋ, ಬೆಳಕು ಹರಿದೇಬಿಟ್ಟಿದೆ
ಅಂದರೆ? ಹಗಲುಗನಸು?
ಕಳಚಿ ಬೀಳುವ ಮುನ್ನ
ಮತ್ತೊಮ್ಮೆ ದೃಢೀಕರಿಸಿಕೊಳ್ಳಬೇಕು
ಎಂದಿನಂತೆ, ನಾನು ನನ್ನನ್ನು!!


                                 - ರತ್ನಸುತ

Comments

  1. ಮತ್ತೊಮ್ಮೆ ದೃಢೀಕರಿಸಿಕೊಳ್ಳಬೇಕು
    ಎಂದಿನಂತೆ, ನಾನು ನನ್ನನ್ನು!!
    ಹಾಗೆಯೇ ಅವರವರ ಅಂತರಂಗವನೂ ಸಹ!

    ReplyDelete

Post a Comment

Popular posts from this blog

ಜೋಡಿ ಪದ

"ಪಾಸ್ವರ್ಡ್" - RESET ಆಗ್ತಿರ್ಲಿ ಆಗಾಗ!!!

ಗರುಡ ಪ್ರಯತ್ನ ೩