ಕಪ್ಪೊಪ್ಪಿಗೆ

ನಿಜದ ನೆರಳು ಕಪ್ಪು
ಅಷ್ಟಾದ ಮಾತ್ರಕ್ಕೆ ಜರಿಯಬೇಡ
ಕಪ್ಪು ಪರಾವಲಂಬಿಯಲ್ಲ
ಬೆಳಕಿನ ಮೋಸದ ತುಣುಕು


ಕೋಗಿಲೆ ಕಪ್ಪಿಗೆ ಒಪ್ಪಿಗೆ
ಕಾಗೆಯದೇಕೋ ಕಡೆಗಣನೆ
ಕಪ್ಪು ಇದ್ದಿಲ ಅಟ್ಟಕ್ಕೇರಿಸಿ
ಕೆಂಡವ ಕೆನ್ನೆಗೆ ಹೋಲಿಸುವೆ


ಕಣ್ಣ ತೀಡುವ ಕಪ್ಪು ತಂಪು
ಕಪ್ಪಾದರೂ ನಾದಸ್ವರ ಇಂಪು
ಬಿಳಿ ಕರ್ಪೂರದ ಕೊನೆಯ ರೂಪ
ಮುಪ್ಪೇ ಇಲ್ಲದ ಕಪ್ಪು


ತಪ್ಪನು ಎತ್ತಿ ತೋರುವ ಕಪ್ಪು
ದೃಷ್ಟಿಗೆ ಕಪ್ಪು, ದೋಷಕೂ ಕಪ್ಪು
ಹುಟ್ಟುವ ಮುನ್ನ ರೆಪ್ಪೆಯ ಕಾವಿಗೆ
ಹತ್ತಿರವಾದ ಕೌತುಕ ಕಪ್ಪು


ಕೊಳೆಯಲು ಕಪ್ಪು, ತುಳಿಯಲು ಕಪ್ಪು
ಇಳಿಯಲು ಆಳಕೆ ಬೆಳೆವುದು ಕಪ್ಪು
ಹಣತೆಯ ಛಾಪು ತಿಳಿಯಲು ಅಲ್ಲಿ
ಮೂಡಲೇ ಬೇಕು ಸುಂದರ ಕಪ್ಪು


ನೆರಳಿನ ಆಟಕೆ ಬೆಂಬಲ ಕಪ್ಪು
ಬೆಳಕಿನ ಪಾಠಕೆ ಮುನ್ನುಡಿ ಕಪ್ಪು
ಎಲ್ಲ ತನ್ನೊಳ ಸೆಳೆದು ಕಡೆಗೆ
ಹೊರ ಚೆಲ್ಲುವು ಔದಾರ್ಯತೆ ಕಪ್ಪು


                                    - ರತ್ನಸುತ

Comments

Popular posts from this blog

ಜೋಡಿ ಪದ

"ಪಾಸ್ವರ್ಡ್" - RESET ಆಗ್ತಿರ್ಲಿ ಆಗಾಗ!!!

ಗರುಡ ಪ್ರಯತ್ನ ೩