ಬಳ್ಳಿ ತುಂಬ ಅರಳಿದ ಮೊಗ್ಗಿನ ಸುಮ ರಾಶಿ
ಎಲೆಗಳನ್ನೂ ನಾಚಿಸುವ ಹೂವಿನ ಮೈ ಬಣ್ಣ
ಒಮ್ಮೆ ಒಂಟಿ, ಒಮ್ಮೆ ಜಂಟಿ, ಮತ್ತೊಂದೆಡೆ ಇಡೀ ಬಳಗ
ಹಿತ್ತಲ ಕಣ್ಮರೆಯ ಚಿಗುರ ಧಟ್ಟ ದಾಸವಾಳ ಗಿಡ [೧]
ನೀರೆರೆಯದೆ, ಗೊಬ್ಬರದ ವಾಸನೆ ಕಾಣದ ಬಡಪಾಯಿ
ಆದರೂ ಸಿರಿವಂತಿಕೆ ಮೆರೆದ ಪ್ರತ್ಯಕ್ಷ ನಿದರ್ಶನ
ಹಬ್ಬಗಳಿಗೆ ಕಾಯದ ಮಡಿಲ ಚಿಗುರ ಮೊಗ್ಗು, ಹೂವು
ದಿನ ನಿತ್ಯ ಆರಾಧಕರ ಪೂಜೆಗೊಲಿದ ಕಾರಣ [೨]
ಕಿತ್ತಷ್ಟೂ ಕೈಸೇರುವುದು, ಕೊಸರಿನ ಸಿಳಿವಿಲ್ಲ
ಕಾವಲಿಡುವ ಚಿಂತೆ ಬೇಡ, ಕದಿವವರೂ ಇಲ್ಲ
ಒಂದು ಬೆರೆಳ ಕಿತ್ತು ನೆಟ್ಟರೊಂದು ಜೀವದಾನ
ಘನಿಕನೋ, ತಿರುಕನೋ, ಈರ್ವರಿಗೂ ಸಮ ಸನ್ಮಾನ [೩]
ಆಯುರ್ವೇದದ ಮೂಲಿಕೆಯಲ್ಲೊಂದು ಈ ಜೀವಿ
ಸೌಂದರ್ಯ ವರ್ದಕಗಳ ನಾಚಿಸುವ ಗುಣವತಿ
ಮಾರುಕಟ್ಟೆಯಲ್ಲಿ ಬೇಡಿಕೆಯಿರದ ಈ ಚೆಲುವಿಗೆ
ಯೋಗ್ಯತೆಗೂ ಮೀರುವ ಬೆಲೆ ಸಿಗುವಂತಾಗಲಿ ಪರಿಸ್ತಿತಿ [೪]
ರುಚಿಕರ ಮಧು ಅಮಲೇರಿಸಿ ಸೆಳೆವುದು ದುಂಬಿಗಳ
ಇರುವೆಗಳಿಗೆ ಜೀವನ ನಡೆಸಲು ಸೂಕ್ತ ತಾಣ
ಮಂಗಗಳಿಗೂ ಒಮ್ಮೊಮ್ಮೆ ಅನಿವಾರ್ಯ ಆಹಾರ
ಜಾನುವಾರುಗಳಿಗೆ ಸಿಕ್ಕರೆ ಸಿಹಿ ಹೂರಣ [೫]
ಗುಡಿ ದೇವರ ಶಿಲೆಗಳಿಗೆ ಅಲಂಕಾರ ಬೆರಗು
ಸತ್ತವರ ಎದೆ ಮೇಲೂ ನಗುವ ತ್ಯಾಗ ಮೂರ್ತಿ
ಮುಡಿಯೇರಲು ಹೆಚ್ಚಿಸುವುದು ಚೆಲುವೆಯರ ಚೆಲುವ
ಯಾಮಾರಿದವರ ಕಿವಿಗೆ ಉಡುಗೊರೆ ಈ ಹೂವ [೬]
ಅತಿ ಸರಳ ಸ್ವಭಾವ, ನಿಷ್ಚಂಚಲ ಕೋಮಲೆ
ದಿಢೀರ್ ನೆಂಟರ ಆಗಮನಕೆ ತಾಂಬೂಲ ಜೊತೆಗೂಡುವ ಹೂವು
ದುಂದು ವೆಚ್ಚ ವಹಿಸುವವರ, ತುರ್ತು ಎಟುಕಿಗೆ ಸಿಗುವ
ನಮ್ಮ - ನಿಮ್ಮೆಲ್ಲರ ಮನೆ ಮನೆಯ ದಾಸವಾಳ ಹೂವು ....... [೭]
--ರತ್ನಸುತ
'ಅತಿ ಸರಳ ಸ್ವಭಾವ, ನಿಷ್ಚಂಚಲ ಕೋಮಲೆ' ಎನ್ನುತ ತಾವು ನನ್ನ ಹಳ್ಳಿ ಮನೆಯ ಹಿತ್ತಲ ದಾಸವಾಳದ ದೊಡ್ಡ ಮರ ನೆನಪಿಸಿದಿರಿ ಭರತ ಮುನಿ. ಮನಸ್ಸಿಗೆ ಹತ್ತರವಾದ ಕವನವಿದು.
ReplyDelete