Friday, 28 December 2012

ನಾ ಕಂಡ ಇಬ್ಬನಿಯ, ಕಾಣದ ಕಥೆ

ಹೂಗಳ ಕಣ್ಗಳ ದಳಗಳ ತುದಿಗೆ
ಏಕೆ ಜಾರದೆ ಉಳಿದೆಯೇ ಇಬ್ಬನಿ!!?
ನವಿರು ಒಡಲ ಜರಿದೆ ನೀರಾಗುತ
ಹೊಸ್ತಿಲಲುಳಿದೆಯಾ ಚಿಂತಿಸಿ ನೀ!!?

ತಡೆಯಿತು ಪಾಪ ಹಿಡಿಯುತ ದಳವು
ಬಿಟ್ಟ ಗುರುತುಗಳ ಅಳಿಸುತಲಿ
ಜಾಡಿಸಿ ಒದ್ದೆ ಕೋಮಲ ಮಡಿಲ,
ಅಳಿಸದ ಗುರುತನ್ನಿಡಿಯುತಲಿ

ಹುಟ್ಟಿಸಿ ತಪ್ಪಿಗೆ, ಬಿಕ್ಕಲು ಕೊಡದೆ
ಹಿಡಿದಿಟ್ಟಿತು ದುಃಖದ ಹೊರೆಯ
ಒರಟಿಗೆ ನೀನು ಸಿಕ್ಕಿದರೆ
ಶಪಿಸುತಲಿ ತಡೆಗಟ್ಟಿದ ಪೊರೆಯ

ವಾಲಾಡುವೆ ತುಸು ಮೆಲ್ಲನೆ ಗಾಳಿಗೆ
ಹಿಂಗುವ ಅವಸರವೇ ನಿನಗೆ?
ಮಿಟುಕಿಸದೆ ಕಣ್ತೆರೆದು ನೋಡಿವೆ
ದಳಗಳು ನಿನ್ನನು ಕೊನೆಗಳಿಗೆ

ಜಾರಿದವೆಷ್ಟೋ ಮಣ್ಣಿನ ಒಡಲಿಗೆ
ಹಾರಿದವೆಷ್ಟೋ ಪಕ್ಕದ ಮಡಿಲಿಗೆ
ನೀನಾದರು ಮಿನುಗಿ, ಸಿಂಚನವಾಗುವೆಯಾ,
ಅಂಜನವಾಗುತ ಹೊತ್ತವುಗಳಿಗೆ?

ಮತ್ತೇ ಹೊಸದಾಯಿತು ಮುಂಜಾನೆ
ಮತ್ತೇ ಬಸಿರಾದವು ತರು ಲತೆಗಳು
ಮತ್ತೆ ಸಂದಿಸುವ "ಋಣವಿದ್ದರೆ"
ಮಂಜಿನ ಮುಸುಕಿನ ಬೆಳಕಿನೊಳು........

                                  --ರತ್ನಸುತ

Friday, 21 December 2012

ಹೆಣ್ಣೇ!!!....... ಕವಿಯಾಗಿಸಿದೆ ನನ್ನ??


ಬೆನ್ನುಡಿಯಾಗುವೆ ಏಕೆ ಬಾಲೆ?
ನನಗಿಲ್ಲ ಮುಂದೊಂದು, ಹಿಂದೊಂದು ಕಣ್ಣು
ಬರೆಯಿಸಿಕೊಳ್ಳಲು ನನಗಿಲ್ಲ ಚಿಂತೆ
ಬೇಸರ ಇಷ್ಟೇ, ಓದಲಾಗದಲ್ಲ ಅದನ್ನು !!

ಆಟವಾಡುವೆ ಸರಿ, ಬಾರಿ ಘಟಿ ನೀ
ಅದರಲ್ಲೂ, ಕಣ್ಣಾ-ಮುಚ್ಚಾಲೆಯಲಿ ಫಟಿಂಗಿಣಿ
ಕಟ್ಟಿರುವೆ ಬಟ್ಟೆಯ ಕಣ್ಮುಚ್ಚಿಸಿ ನನಗೆ
ಪರಿಣಿತ ನಾನಲ್ಲ, ಸೋಲುವುದು ಖಂಡಿತ, ಕೇಳೆ ತರುಣಿ!!

ಮೆಚ್ಚಿ ನಾ ಬರೆದ, ಒಂದೊಂದು ಪದವೂ
ಚುಚ್ಚು ನಿಂದನೆಯ ಹೊತ್ತು ಛೆಡಿಸಿವೆ ನನ್ನ
ನಿನ್ನ ನೆರಳೆನಾದರೂ ಸೋಕಿತೇ ಅದಕೆ,
ಹಾಗೆ ಸ್ವಭಾವಿಸಲು ಹೋಲುತ ನಿನ್ನ ??!!

ಹಾಗೊಮ್ಮೆ ಬಿಟ್ಟ ಗುರುತನ್ನೂ ಅಳಿಸಿ ಹಾಕುವೆ
ಯಾವುದೇ ಸೂಕ್ಷ್ಮ ಸುಳಿವನ್ನೂ ನೀಡದೆ
ಮೈ ತುಂಬ ಕಣ್ಣು, ಕಿವಿ, ಮೂಗನ್ನು ಇರಿಸಿದೆ
ಹೇಗಾದರೂ ನಿನ್ನ ಸ್ಪರ್ಶಿಸುವ ಸಲುವೇ

ಪಾದ ಕಿರು ಬೆರಳಿಗೆ, ಹೆಬ್ಬೆರಳ ಕಾಟ
ರಂಗೋಲಿ ಬಿಡಿಸಲಾರಂಬಿಸಲು ಪೀಕಲಾಟ
ಹಿಂಬಾಲಕನಾಗುವುದು ಅದಕಿಡದ ಮೀಸಲು
ಗಂಡಸ್ತಿಕೆಯ ಪ್ರಶ್ನಿಸುವ ಗೊಂದಲಾಟ

ಉದುರಿದೆ ಕೇಶ, ವಯಸ್ಸನು ಹೆಚ್ಚಿಸಿ
ಮುದುಡಿದೆ ಅದರವು ಮೌನವನು ಸೂಚಿಸಿ
ಸಂಕೋಚದ ಅಲೆಗಳು ಮನವ ತಟ್ಟಿವೆ
ತೀರದಲಿ ಗೀಚಿದ ಬಯಕೆಗಳ ಅಳಿಸಿ

ಇನ್ನಾದರು ತುಂಬು ಬಾ, ಮುನ್ನುಡಿಯ ಹಾಳೆ
ನಾನಾಗುವೆ ಫಲಕ,ನೀ ಪ್ರಣಯ ಶಾಲೆ
ಕೈಯ್ಯಾರೆ ತಿದ್ದು ನೀ ನನ್ನ ಮಡಿಲಕ್ಷರವ
ಕವಿಯೇ ನಾ, ನೀ ಮೆಚ್ಚುಗೆಯ ಕವಿತೆ ಮಾಲೆ......


                                               --ರತ್ನಸುತ

Tuesday, 11 December 2012

ಹೊಸತಾಗಲಿ ಕನ್ನಡಕೆ ಹೊಸ ವರುಷ

ಹೊಸ ವರುಷದ ಹೊಸ ಕನಸಿನ ಕವನ
ಹೊಸತನ ತರುವುದೇ ಹೊಸಬರ ಮಿಲನ?
ಹೊಸ ಬರವಸೆಯಲ್ಲಿ, ಹಸಿರಾಗಿ, ಚಿಗುರಲಿ ನಮ್ಮತನ
ಹೊಸ ಆಲೋಚನೆಯ, ಆಚರಣೆ, ಆಗಿಸುವ ಸುದಿನ

ಹೊಸ ವರುಷದ ಹೊಸ ಹಸಿವಿನ ಕವನ
ಕನ್ನಡಿಗರೇ ಇರಲಿ ನುಡಿ ಗಮನ!!


ಅಭಿರುಚಿಗಳ ಬೆಳೆಸಿ
ನವರಸಗಳ ಬೆರೆಸಿ
ಸವಿಯಾದ ನುಡಿಯ ಹಿರಿಮೆ ಸಾರೋಣ
ಅನುಬಂಧವ ಬಿಗಿಸಿ
ಅಭಿಮಾನವ ತೋರಿಸಿ
ಕನ್ನಡಿಗರು ನಾವು ಒಂದೇ ಅನ್ನೋಣ

ಒಂದೇ ನಾಡಿನ, ಒಂದೇ ಹಾಡಿನ, ಪದಗಳ ಹೂರಣ
ನಾನು ನೀನು ನಾವಾಗೋಣ, ನೋವೋ ನಲಿವೋ ಜೊತೆಯಾಗೋಣ
ತನು, ಮನಗಳ ತುಂಬಿಸೋಣ

ಹೊಸ ವರುಷದ ಹೊಸ ಕದನದ ಕವನ
ಗೆಲುವಿಗೆ ಬೇಕಿದೆ ಸ್ವಾರ್ತದ ಮರಣ
ಒಲವಿನ ಬಲವನ್ನ, ಛಲವನ್ನ, ಎಲ್ಲೆಡೆ ಹಂಚೋಣ
ನಾಳೆಯ ನಮ್ಮವರ, ನಮ್ಮೆದೆಯ ಮೇಲ್ಗಡೆ ಮೆರೆಸೋಣ

ಹೊಸ ವರುಷಕೆ ಹರಿಯಲಿ ಹೊಸ ಕಿರಣ
ಆಗಲಿ ಕನ್ನಡತನದ ಹೊಸ ಜನನ...................

                                         --ರತ್ನಸುತ

Saturday, 8 December 2012

ಹೀಗೂ ಒಂದು ಕವನ!!!??

ಮೌನವೇ ರಾಗ, ಏಕಾಂತವೇ ಭಾವ
ನಡುವೆ ಒದ್ದಾಟವೇ ಒಂದು ಹಾಡು 
ಗೀಚುವುದೇ ಸಾಲು, ತೋಚುವುದೇ ಪದ್ಯ 
ಹೀಗಿದೆ ಏಕಾಂಗಿ ಕವಿಯ ಪಾಡು 

ಕಂಡದ್ದೇ ಸ್ಪೂರ್ತಿ, ಅಂದುಕೊಂಡದ್ದೇ ಅರ್ಥ 
ತಾನಾಗೆ ಹರಿದ ಅಕ್ಷರದ ಕಾಲುವೆ 
ಮಿಂದಷ್ಟೇ ಖುಷಿ, ಸಹಿಸಿಕೊಂಡಷ್ಟೇ ಸಹನೆ 
ತೂಗಾಡಿ ಕಟ್ಟಿಕೊಂಡ ಪದಗಳ ಸೇತುವೆ 

ಬಂದಷ್ಟೇ ನಿದ್ದೆ, ತಿಂದಷ್ಟೇ ಹಸಿವು 
ಬಾರದ ನೆನಪುಗಳ ಕಣ್ಣಾ ಮುಚ್ಚಾಲೆ 
ಸಿಕ್ಕಷ್ಟೇ ಗೆಲುವು, ಸಾಕಷ್ಟು ಸೋಲು 
ಒಂದಿಷ್ಟು ತಿದ್ದುಪಡಿ ಹಾಳೆ ಮೇಲೆ 

ಒತ್ತಾಯದ ಸಮಯ, ಅದೇ ಹಳೆ ವಿಶಯ 
ಮಂಕಾದ ವಿಸ್ತಾರದಾವರಣ ಸುತ್ತ
ಮಾಡೆಂದು ಬಿಟ್ಟದ್ದ; ಬಿಟ್ಟು ಬೇರೆಲ್ಲ-
-ಯೋಚನೆಯ ಸೂಚನೆ ನೀಡುವ ಚಿತ್ತ

ಅಲ್ಲೊಂದು ಸದ್ದು, ಆ ಕಿವಿಯ ವೊದ್ದು 
ಗಮನವ ಸೆಳೆಯುವ ಧುಸ್ಸಾಹಾಸ ಯತ್ನ 
ಕವಿ ಕಿವುಡನಲ್ಲ, ಆದರೂ ಸ್ಪಂದಿಸದೆ 
ಮುಂದುವರಿಸಿದ ಅವನ ನಿರಾಕಾರ ಸ್ವಪ್ನ 

ಮುಗಿದಿತ್ತು ಬರಹ, ಮಳೆ ಹನಿಯ ತರಹ 
ಭೂಮಿಯ ದಾಹವ ನೀಗಿಸದ ಹಾಗೆ 
ಹಣೆಯಿಟ್ಟು ಬೆವರ, ಜಾರಲು ಬಿಡದೆ 
ಒಡಲಲ್ಲೇ ಕೂಡಿಟ್ಟುಕೊಂಡರೆ ಹೇಗೆ?
ಜಾರಲು ಬಿಡಿ ಯಾವುದಾದರು ರೂಪ ತಾಳಲಿ, ಈ ಕವಿತೆ ಹಾಗೆ......

                              --ರತ್ನಸುತ 

Friday, 7 December 2012

ಆಸೆಯ ಭಾವ ಒಲವಿನ ಜೀವ {ನಕಲು ಪದ್ಯ}

ಕಾವ್ಯದ ಪ್ರೀತಿ, ಪ್ರಾಸದ ಕ್ರಾಂತಿ
ಹಾಡಾಗಿ ಹೊಮ್ಮಿದೆ
ಹಾಡುತ ಸೋಲಿಸುವವಳೆಲ್ಲೆಂದು ಕೇಳಿದೆ


ಕಾವ್ಯದ ಪ್ರೀತಿ, ಪ್ರಾಸದ ಕ್ರಾಂತಿ
ಹಾಡಾಗಿ ಹೊಮ್ಮಿದೆ    {೧}


ಆಸೆಯ ದೋಣಿಯಲಿ ಹೂವಿನ ಹಾಸಿಗೆಯ
ಮಡಿಲಲಿ ಕನಸಿಗೆ ಜಾಗವು ಎಲ್ಲಿದೆ
ಒಂಟಿ ಯಾನದಲಿ ಪ್ರಾಯದ ಬಿಂದಿಗೆಯು
ಅರೆ-ಬರೆ ತುಂಬಿದೆ, ಕುಲುಕಲು ಚೆಲ್ಲದೇ?
ಕಡಲಿಗೂ ಇಂಥ ಒಂಟಿ ದೋಣಿ ಯಾನ ಬೇಡವಾಗಿದೆ.......

ಕಾಣದ ಶಾಂತಿ, ಕಾಮನೆ ಮೀಟಿ
ಮೀನಾಗಿ ಹೋಗಿದೆ
ಮನದ ಸರೋವರವು ಈಜುಗೊಡದೆ ತೆರೆದಿದೆ


ಕಾವ್ಯದ ಪ್ರೀತಿ, ಪ್ರಾಸದ ಕ್ರಾಂತಿ
ಹಾಡಾಗಿ ಹೊಮ್ಮಿದೆ     {೨}


ಕಲ್ಲಿಗೆ ಸ್ಪರ್ಶಗಳ ಸ್ಪಂದನೆಯಾಗಿರಲು
ಸೋಕದ ಬೆರಳಿಗೆ ಕಾಯುತ ನಿಂತಿದೆ
ನಾಚುವ ಕಲೆಯನ್ನು ತಾ ಕಲಿತಾಗಿರಲು
ನಿನ್ನಯ ಸೋಕಿಗೆ ಕರಗಿ ನೀರಾಗಿದೆ
ಹೆಸರಿಗೆ ಮಾತ್ರವಲ್ಲಿ ಕಲ್ಲು ಶಿಲೆಯ ಗುರುತು ಉಳಿದಿದೆ.....

ನೆರಳಿಗೆ ನಾಟಿ, ನನ್ನನೆ ದಾಟಿ
ನಿನ್ನಲ್ಲಿ ಸೇರಿದೆ
ಸವಿದ ಜೆನಿಗೂ ಸಿಹಿ ನೀನೆಂದು ಸಾರಿದೆ.....


ಕಾವ್ಯದ ಪ್ರೀತಿ, ಪ್ರಾಸದ ಕ್ರಾಂತಿ
ಹಾಡಾಗಿ ಹೊಮ್ಮಿದೆ     {೩}                                --ರತ್ನಸುತ

Tuesday, 4 December 2012

"ಚಂದುಟಿಯ ಪಕ್ಕದಲಿ" ನಕಲು ಪದ್ಯ
ಅಂಬರದ ಅಂಗಡಿಗೆ, ಆಟಿಕೆಯ ತಾರೆಗಳ
ಕೊಟ್ಟು ಬರುವ ಜೊತೆಗೆ ಬರ್ತೀಯಾ?
ನಡುವೆಲ್ಲೋ ಕಳೆದ್ಹೊಗಿ, ನಾ ಉಗುರು ಕಚ್ಚಿದರೆ
ಹಿಂದಿರುಗದೆ ಪಕ್ಕ ಇರ್ತೀಯ?

ಸಹವಾಸ ಸಾಕಾದ್ರು ನಗ್ತೀಯ?
ವನವಾಸ ಅಂದ್ರೂನು ಒಪ್ತೀಯ?
ಏನಾದ್ರೂ ನೀ ನನ್ಗೆ ಸಿಕ್ತೀಯ?

ಅಂಬರದ ಅಂಗಡಿಗೆ .......... {೧}

ನೀ ತೀಡಿದ ಕಾಡಿಗೆಯ ಕಪ್ಪು ನನ್ನನು-
-ನಾಚಿಸಿದೆ ನಿನಗದರ ಸುಳಿವಾದ್ರು ಸಿಕ್ತಾ?
ಕಣ್ತುಂಬ ಕನಸನ್ನು ನೀ ತುಂಬಿಕೊಂಡಿರಲು
ನಾ ಕೊಟ್ಟ ಕನಸಿಂದ ಕಣ್ಣೀರು ಬಂತಾ?

ಬೈದಾದ್ರು ಸರಿ ಮಾತಾಡ್ತೀಯ?
ತಡವಾದ್ರು ಒಂದ್ಚೂರು ಕಾಯ್ತೀಯ?
ಇಷ್ಟೆಲ್ಲಾ ಆದ್ಮೇಲು ನಂಬ್ತೀಯ?


ಅಂಬರದ ಅಂಗಡಿಗೆ .......... {೨}

ಹೊತ್ತಲ್ಲದ್ಹೊತ್ತಿನಲ್ಲಿ ನಿದ್ದೆ ಬರುತಿರಲಿಲ್ಲ
ನಿನಗೂನು ಹೀಗೆಲ್ಲ ಆಗಿದ್ದು ಉಂಟಾ?
ಸಲಿಗೆಯ ನೆಪದಲ್ಲಿ ಕಾಲೆಳೆಯುವ ಆಸೆ
ಕರೆಯದಿರು ನೀ ನನ್ನ "ಛಿ ಪೋಲಿ ತುಂಟ"

ಪ್ರಶ್ನೆಗೆ ಪ್ರಶ್ನೇನ ಕೇಳ್ತೀಯ!!
ಕೊಡೊ ಉತ್ರ ಸರಿ ಇಲ್ಲ ಅಂತೀಯ!!
ನಾ ಸೋತ್ರೂ ನೀನ್ಯಾಕೆ ಅಳ್ತೀಯ?


ಅಂಬರದ ಅಂಗಡಿಗೆ .......... {೩}

ಓಡಾಡದೆ ಸುಮ್ನೆ ಒಂದೆಡೆಗೆ ಕೂತ್ಕೊಂಡು
ಇತ್ಯರ್ಥ ಮಾಡೋಣ ನಮ್ಮಿಬ್ರ ಪ್ರೀತಿ 
ಒದ್ದಾಡದೇ ಒಳ್ಗೆ ಎಲ್ಲಾನು ಹಂಚ್ಕೊಂಡ್ರೆ
ಸ್ವಲ್ಪ ಸುದಾರ್ಸುತ್ತೆ ನಮ್ಗಳ್ ಪಜೀತಿ 

ಜಂಬಾನ ಪಕ್ಕಕ್ಕೆ ಇಡ್ತೀಯ!!
ತನ್ಪಾಡಿಗ್ ಪ್ರೀತಿನ ಬಿಡ್ತೀಯ!!
ನಾ ಸಾಯ್ದೆ ನೀ ಹೇಗೆ ಸಾಯ್ತೀಯ?.......

ಅಂಬರದ ಅಂಗಡಿಗೆ .......... {೪}


                                                    --ರತ್ನಸುತ

Saturday, 1 December 2012

ನಾ ನೆನೆದು ಸೋಲುವೇನು
ನಿನ್ನ ಕಿರುನಗೆಯ, ದಿನ ಹೀಗೆ
ನಾ ಕರೆದು ಕಾಯುವೆನು
ನಿನ್ನ ಪ್ರತಿದ್ವನಿಗೆ, ಸದಾ ಹೀಗೆ

ಇರುಳು ಹರಿಯುವ ಸೂಚನೆ ನಿದಾನಿಸ ಬೇಡವೇ
ಕಾದು ಪಡೆದಿರೋ ಪ್ರೀತಿಯ ಸಂಬಾಳಿಸ ಬೇಡವೆ?

ನಾ ನೆನೆದು..................
................................
................................
...................., ಸದಾ ಹೀಗೆ

ನಿನ್ನ ಒಪ್ಪಿಗೆ  ಪಡೆಯಲು ನಾನಾಗುವೆ ನಾಸ್ತಿಕ
ಪೂಜೆ ಮನದಲಿ ನಿನ್ನದೇ ಈ ಉಸಿರಿನ ಮೂಲಕ.....{೧}


ನೋವು ಸಹಜ ಬಿಡು, ಬಾಳ ದಾರಿಯಲಿ
ಬೇಗ ಕೈಯ್ಯ ಹಿಡಿ, ಪ್ರೆಮದೂರಿನಲಿ
ಕಾಲ ಸರಿಯುವ ಮುನ್ನವೇ ತಯಾರಿಸು ಮನಸನು
ಓಡಿ ಹೋಗಲು ಒಪ್ಪಿಗೆ, ನೀ ಕೇಳದೆ ಯಾರನು...... {೨}


ನಾ ನೆನೆದು ಸೋಲುವೇನು.............


ನೀರವ ಸ್ಥಿತಿಯಲ್ಲಿ ಯಾರಿವನೆನ್ನದಿರು

ನೀರವ ಸ್ಥಿತಿಯಲ್ಲಿ ಯಾರಿವನೆನ್ನದಿರು ನೀನಿರದೆ ಈ ಗತಿ ಸಿದ್ಧಿಸಿತು ಜೀವಕೆ ಹಾಡುಹಗಲಲ್ಲಿ ನೀ ಆವರಿಸಿಕೊಂಡಿರುವೆ ಕನಸೊಂದು ಬೀಳುತಿದೆ ಗೊತ್ತಿದ್ದೂ ಬಾವಿಗೆ ಬ...