Posts

Showing posts from November, 2013

ಓದ್ಕೊಂಡ್ರಿ.... ಅನುಭವ್ಸಿ!!

ನದಿಯೊಂದು ನನ್ನರಸಿ 
ಬಂದಿರಲು ಬಳಿಸಾರಿ
ಅಡ್ಡಗಟ್ಟಿದ ಮೂರ್ಖ ಕಡಲು ನಾನು 
ತಾನಾಗೇ ಹಣತೆಯಲಿ 
ಬೆಳಕೊಂದು ಹೊಮ್ಮಿರಲು 
ಅಡಿಯಲ್ಲಿ ಅರಸಿದೆ ಕತ್ತಲನ್ನು 

ನಗುವಲ್ಲಿ ನನಗೊಂದು 
ಬಿಲ್ಲೆಯಷ್ಟಿದೆ ನೋವು 
ಎದ್ದು ಕಂಡಿತು ಅದುವೇ ಮೆಟ್ಟಿ ನಗುವ 
ಸುತ್ತ ಕೆಂಡದ ಸಾಲು 
ಕೀಳಬೇಕಿದೆ ಕಾಲು 
ನನ್ನ ನೆರಳೇ ಕಸಿಯಿತೆನ್ನ ಬಲವ 

ಗುಡ್ಡವೇರಿದೆ ಈಗ 
ಇಳಿಜಾರುವ ಸರದಿ 
ಹಿಂದೆ ಅನುಭವ, ಮುಂದೆ ಹೊಸ ಪರೀಕ್ಷೆ 
ತುದಿಗಾಲಿನ ಬೆವರು 
ಹಿಂಜರಿಕೆಯ ಒಡಲು 
ಇಂದೇಕೋ ಈ ರೀತಿ ಹೊಸ ತಮಾಷೆ 

ಬಿಸಿಲು, ಶೀತಲ ಗಾಳಿ 
ಮಳೆ, ಮಂಜಿಗೆ ಅಂಜಿ 
ಕುಸಿತ ಕಂಡತು ಬಂಡೆ ತುಸು ತಳದಲಿ 
ದೇವರಿದ್ದರೂ ತಾನೇ 
ಏನು ಮಾಡುತ್ತಾನೆ 
ಬಂಡೆಯೊಳಗೆ ಬೆಚ್ಚಗೆ ಮಲಗಲಿ 

ನಾನಿಟ್ಟ ಗುರಿಯಲ್ಲಿ 
ಹಲವರ ಗುರಿಯಿತ್ತು 
ಅದಕೆ ತಪ್ಪಿತು ನನ್ನ ಡೊಂಕು ಬಾಣ 
ನನ್ನ ಬಗ್ಗೆ ನನಗೆ 
ಕೊಲ್ಲುವಷ್ಟಿದೆ ಕೋಪ 
ಆದರೂ ನನಗೆ ನಾ ಪಂಚಪ್ರಾಣ 

ಕಥೆಗೊಂದು ಹೆಸರಿಲ್ಲ 
ಪುಟವೊಂದೂ ಉಳಿದಿಲ್ಲ 
ದಿಕ್ಕು ದಿಕ್ಕಿಗೆ ಹಾರಿ ಹೋದೆ ನಾನು 
ಕೊಸರು ಜೀವನದಲ್ಲಿ 
ಕುಸುರಿಯೆಂಬುವ ಪದಕೆ 
ಜಾಗ ಮೀಸಲು ಇಡದೆ ನಷ್ಟವೇನು?

ಸ್ಪರ್ಧೆ ಮುಗಿಯುವ ಹೊತ್ತು 
ಈಗ ಓಟ ಬೆಳೆಸಿ 
ಯಾರ ಗೆಲ್ಲಲಿ ಹೇಳಿ ಈ ಜಗದಲಿ 
ನಿಮ್ಮ ಕೋಪಕೆ ನಾನು 
ಗುರಿಯಾಗುವ ಮುನ್ನ 
ಈ ಪಯಣ ಇಲ್ಲಿಗೆ ಅಂತ್ಯಗೊಳಲಿ !!

                                   -- ರತ್ನಸುತ

ಮನಸಾರೆ !!

ಮಾತನಾಡಿಸೋ ಮುನ್ನ
ಬೆಚ್ಚುವ ನಿನ್ನ
ನೇವರಿಸುವ ಸಾಹಸಿ ಆಗಲಾರೆ
ಮಾತಿಗೆ ನಾಚಿ
ನೀರಾಗುವ ನಿನ್ನ
ಮುತ್ತಿನ ಮುತ್ತಿಗೆ ದೂಡಲಾರೆ

ಬೇಕು ಬೇಕೆಂದೇ
ಬದಲಾಗುವ ನಿನ್ನ
ಹೇಗೋ ಹಾಗೆ ಸ್ವೀಕರಿಸಲಾರೆ
ಸಾಕೆಂದ ಮಾತ್ರಕ್ಕೆ
ಸಾಕು ಮಾಡುತ ನಿನ್ನ
ಬೇಕುಗಳಿಗೆ ಬ್ರೇಕು ಹಾಕಲಾರೆ

ಏರಿದ ನಿಷೇಧವ 
ತಲೆ ಬಾಗಿ ಒಪ್ಪಿಕೊಂಡು
ಎಲ್ಲೆ ಮೀರದೆ ನಿನ್ನ ಸೇರಲಾರೆ 
ಮರುವಲ್ಲೂ ಮರೆತಂತೆ 
ತುಂಟಾಟಕಾದರೂ 
ಬಾಳಲ್ಲಿ ನಿನ್ನೊಮ್ಮೆ ಮರೆಯಲಾರೆ 

ಅನವರತ ಒದ್ದಾಟವ 
ನಸುನಗುತ ಅನುಭವಿಸಿ 
ನೆನಪಲ್ಲೇ ನಿನ್ನಿರಿಸಿ ಬದುಕಲಾರೆ 
ನೀ ಕೊಟ್ಟ ಕನಸುಗಳ 
ಪಟ್ಟಿಯಲಿ ನಾನಿರದೇ 
ಆ ಕನಸ ನನ್ನಲ್ಲಿ ಇರಿಸಲಾರೆ 

ದುಮ್ಮಾನವಾದಾಗ 
ಸುಮ್ಮಾನೆ ಅಳುತಲಿ 
ಕಣ್ಣೀರ ಒರೆಸಿ ಬಿಡಲಾರೆ 
ನನ್ನೋಳು ನೀನಂತ 
ನಿನ್ನೋನು ನಾನಂತ 
ಇಟ್ಟ ಆಣೆ ಕೈಯ್ಯ ಬಿಡಲಾರೆ 

ನಿನ್ನ ಮಾತಿಗೆ ಎದುರು 
ನಿನ್ನ ಕೋಪದ ಡಮರು
ಎರಡನ್ನೂ ಒಮ್ಮೆಲೆಗೆ ಸಹಿಸಲಾರೆ 
ಪ್ರೀತಿಯೆಂಬ ಚಿಗುರು 
ಬಾಳಿನುದ್ದಕೂ ಪಸರು-
-ಆಗಬೇಕು ಜೊತೆಗೆ ನಾಟು ಬಾರೆ...... !!


                                    -- ರತ್ನಸುತ

ದೂರಿ ದೂರಿ ದೂರಮ್ಮ !!

Image
ದೂರಿ ದೂರಿ ದೂರಮ್ಮ
ಮಲ್ಗೋ ನನ್ನ ಕಂದಮ್ಮ
ಚಂದಾ ಮಾಮಾ ಬರ್ತಾನೆ
ಬೆಣ್ಣೆ ಹೊತ್ತು ತರ್ತಾನೆ
ನಿನ್ನ ಕೆನ್ನೆ ಗಿಂಡ್ತಾನೆ
ಬೆಣ್ಣೆ ಸವ್ರಿ ಹೋಗ್ತಾನೆ

ದೂರಿ ದೂರಿ ದೂರಮ್ಮ
ಕಣ್ಣು ಮುಚ್ಚು ಕಂದಮ್ಮ
ಸರಿ ತಿನ್ಸಿ ಆಗೈತೆ
ಸ್ನಾನ ಮಾಡ್ಸಿ ಆಗೈತೆ
ನಿದ್ದೆ ಚಾಮಿ ಬರ್ತಾನೆ
ಕನ್ಸಲ್ಲಾಟಾಡಿಸ್ತಾನೆ

ದೂರಿ ದೂರಿ ದೂರಮ್ಮ
ಲಾಲಿ ಹಾಡು ಕೇಳಮ್ಮ
ಗುಮ್ಮ ಬಂದ್ರೆ ಬೈತಾನೆ
ಕಣ್ಣು ಕಿತ್ಕೊಂಡ್ಹೋಗ್ತಾನೆ !!
ಈಗ ತಾಚಿ ಮಾಡಿದ್ರೆ
ಚಾಕಿ ಗೀಕಿ ಕೊಡ್ತಾನೆ

ದೂರಿ ದೂರಿ ದೂರಮ್ಮ
ತರ್ಲೆ ಆಟ ಬೇಡಮ್ಮ
ಅಮ್ಮ ಅಡ್ಗೆ ಮಾಡ್ತೌಳೆ
ಈಗ ಮಾಮಾನೇ ಅಮ್ಮ
ಒಂದು ಮುತ್ತು ಕೊಡ್ತೀನಿ
ಆಮೇಲ್ಗೊಂಬೆ ತರ್ತೀನಿ

ದೂರಿ ದೂರಿ ದೂರಮ್ಮ
ಮಲ್ಗೋ ನಿನ್ನ ದಮ್ಮಯ್ಯ
ನಂಗೇ ನಿದ್ದೆ ಬರ್ಸ್ಬಿಟ್ಟೆ
ಬಟ್ಟೆ ಎಲ್ಲಾ ನೆನ್ಸ್ಬಿಟ್ಟೆ
ಈಗ ಮಲ್ಗ್ತೀನಂತೀಯಾ ?
ಇಲ್ಲ ಸತಾಯಿಸ್ತೀಯಾ ?

                   -- ರತ್ನಸುತ

ನಾನು ಹೆಸರಿಲ್ಲದವಳು ಸ್ವಾಮಿ !!

Image
ಕಾರ್ಮುಗಿಲು ದುರುಗುಟ್ಟುತಿತ್ತು 
ಕಪ್ಪೆಗಳು ವಟರುಗುಡುತಲೇ ಇದ್ದವು 
ಗೋಡೆಗಂಟಿದ ಸಿನಿಮಾ ಪೋಸ್ಟರ್ರು ಹರಿದಿತ್ತು 
ನಾಯಕಿಯ ನಡು ಭಾಗವೊಂದ ಬಿಟ್ಟು 
ಲೈಟು ಕಂಬಗಳಿಗಿಲ್ಲ ಕಂಬಳಿಯ ಹಂಗು 
ತಂತಿ ಮೇಲೆ ಕೂತ ಕಾಗೆಗಳಿಗೂ 
ಎಂದಿನಂತೆ ಸಂಜೆ ಸೂರ್ಯನ ಮುಳುಗಡೆ 
ಹಸಿದ ಹೊಟ್ಟೆಯ ಒಳಗೆ ಸಣ್ಣ ಕೂಗು 

ನೆನ್ನೆ ಸುರಿದ ಮಳೆಗೆ ಗುಂಡಿಗಳು ತುಂಬಿ 
ಕಕ್ಕುತಿದ್ದವು ಆಚೆ ಉಕ್ಕು ನೀರ 
ಫುಟ್ಪಾತಿನ ಮೇಲೆ ಬೈಕುಗಳ ಸಂಚಾರ 
ನಡೆದವರು ಕಡು ಬಡವರೇ ತೀರಾ 
ಸಿಗ್ನಲ್ಲಿನಲಿ ಜೋರು ಹಾರನ್ನು ಶಬ್ಧ
ಗಾಜು ಮೇಲೆತ್ತಿ ಏ.ಸಿ ಒಳಗೆ ಕೂತವರು 
ಹೊರಗಿನ ಗಜಿಬಿಜಿಯ ಕೆಳಿಯಾರೇ ?
ತಟ್ಟಿ ನೋಡುವೆ ಒಮ್ಮೆ ಕೇಳುತಾರೆ 

"ತಂದೆ ಅಲ್ಲದ ತಂದೆ ನನ್ನ ಜನಕ 
ನಿಮ್ಮೊಳಗೆ ತನ್ನ ಕಾಣೆಂದ ತಿರುಕ 
ಒಂದು ಕೊಂಡರೆ ಹತ್ತು ರೂ, ಮತ್ತೊಂದು ಫ್ರೀ 
ಪ್ರೀತಿ ಸಂಕೇತ ಇದು ಪ್ಲೀಸ್ ತಗೊಳ್ರಿ"
ಮಸಿಯೆದ್ದ ಕೈಯ್ಯಿ, ಗೀಜು ತುದಿಗಣ್ಣು 
ಮಾಸಲು ಬಟ್ಟೆ, ನಾರಿದ ಮೈಯ್ಯಿ 
ಕಾರಿನೊಳ ಮಗು ಅತ್ತಿತು ಗುಮ್ಮಳೆಂದು 
ಸಿಟ್ಟಿಗೆದ್ದವರಂದರು "ಹೋಗು ಮುಂದೆ ಮುಚ್ಚಿಕೊಂಡು" 

ಸಿಗ್ನಲ್ಲು ಹಸಿರಾಗಿ ಮುಂದುವರೆಯಿತು ಅಲ್ಲಿ 
ಕಾರುಗಳ ತೇರು, ಫುಟ್ಪಾತು ಬೈಕುಗಳ ಪಾಲು  
ಲಂಗಕೆ ಬಿಗಿದ ಚೀಲ ಜಣಗುಡುತಲಿತ್ತು 
ಓಡಿ ಹೋದೆ ಅವ್ವಳ ಬಳಿಯಲ್ಲಿ ಕೂತು 
ತುಂತುರು ಛೇಡಿಸಿತು ವ್ಯಾಪಾರ ಕಂಡು 
"ನಾನೀಗ ಬಂದೆ, ಏನು ಮಾಡುವೆ?" ಎಂದು 
ಲಾಭ ದಕ್ಕುವುದಿರಲಿ ಅಸಲು ಬರಲಿ
ಬೇಗ ಸಿಗ್ನಲ್ಲು ಕೆಂಪೆದ್ದು ಬಿಡಲಿ 

ಕೆಮ್ಮುತ್ತಲ…

ನೀವು ನಾನು

ನೀವು ಬೆಟ್ಟ
ನಾನು ಕೀಟ
ನಿಮ್ಮ ಸಮ ನಾನಲ್ಲ

ನೀವು ಮರ
ನಾನು ಗರಿಕೆ
ನಿಮ್ಮ ಜೋಡಿ ನನಗಲ್ಲ

ನೀವು ಪೊಟರೆ
ನಾನು ಗುಂಡಿ
ನನ್ನಿಂದೇನೂ ಹಿತವಿಲ್ಲ

ನೀವು ಮುಗಿಲು
ನಾನು ನೀಲಿ
ನೀವಿಲ್ಲದೆ ನಾ ಏನಿಲ್ಲ

ನೀವು ಮಣ್ಣು
ನಾನು ಋಣ
ನೀವಿಡದೆ ನನಗುಳಿವಿಲ್ಲ

ನೀವು ಕಿಚ್ಚು
ನಾನು ಉರಿ
ಹಚ್ಚದೆ ಬೆಳಕು ನನದಲ್ಲ

ನೀವು ಬಿಸಿಲು
ನಾನು ನೆರಳು
ನಿಮ್ಮಾಟಕೆ ಸೊಲುವೆನಲ್ಲ

ನೀವು ನೀವೇ
ನಾನು ನಾನೇ
ನಿಮ್ಮವನಾಗುವುದೆನ್ನ ಹಂಬಲ !!

                        -- ರತ್ನಸುತ

ಹೆಸರ ಕೂಗುವ ಮುನ್ನ !!

ಮಾತೊಂದಿದೆ 
ಹೇಳಲಾಗದೆ, ನುಂಗಲಾಗದೆ 
ನಾಲಿಗೆ ತುದಿಯಲ್ಲಿ 
ಜೀಕಾಡುತ್ತ, ಯಾರೋ ದೂಡುತ್ತಿರುವಂತೆ  /ಕಾತರ/

ಕಚ್ಚಿಕೊಂಡ ತುಟಿಗಳ
ನೆತ್ತರ ಮಡುವಲಿ ದೀರ್ಘ ಉಸಿರು 
ತುಟಿ ದಾಟುವ ಪಿಸುಗುಟ್ಟಲಿ 
ಆಗಬಹುದೇ ಅಸಡ್ಡೆ ಏಂಜಲ ಸಿಂಚನ ?  /ಕೀಳರಿಮೆ/

ಮಾತೆಲ್ಲ ನನ್ನಲ್ಲೇ ಉಳಿಸಿ  
ಅನರ್ಥ ಮೌನವೀವೆ 
ಆದಷ್ಟೂ ಫಲಿಸಲಿ, ಮಿಕ್ಕವು 
ಚಿದಂಬರ ರಹಸ್ಯವಾಗಿ ಉಳಿಯಲಿ  /ಚೇತರಿಕೆ/

ಬಾಯಿಗೆ ಬೀಗವ ಜಡಿದು 
ಸಪ್ತ ಸಾಗರ ಸೇರುವೆಡೆಯಲಿ 
ಕೀಲಿ ಕಳೆದ ಪುರುಷ ಶಾಕುಂತಲೆಯಾಗುವೆ 
ಆ ಮತ್ಸ ಈಜುವ ದಿಕ್ಕನು ಮರೆತು  /ಮರುಳು/

ಹಾಡುಗಳೆಲ್ಲ ಕಂಪಿಸಿವೆ, ಚಿಂತಿಸಿವೆ 
ವಿನಂತಿಸಿಕೊಂಡಿವೆ ಹೊರಹೊಮ್ಮಲು 
ನಿರಾಧಾರವಾಗಿ, ನಿರಾಕಾರವಾಗಿ
ಕಾಯಾಗಿ, ಮಾಗಿ ತಲೆಬಾಗಿ  /ಅಸಹಾಯಕತೆ/

ನಾಲಿಗೆ ತುಂಡಾಗಿದೆ 
ಕಿರುನಾಲಿಗೆ ಸದ್ದಿಗೆ ಅಡ್ಡಗಾಲು 
ಕೊರಳು ತಿರುಚಿಕೊಂಡ ಕೊಳಲು 
ಇಷ್ಟೂ ತೊದಲು ನಿನ್ನ- 
-ಹೆಸರೊಮ್ಮೆ ಹಿಡಿದು ಕೂಗಿಕೊಳಲು ............. /ಅಸಲಿಯತ್ತು/

                                          -- ರತ್ನಸುತ

ಗೊಂದಲ ನೂರು, ಯಾರು ಕೇಳೋರು?!!

ಜೇಬಲಿ ಬಳಪದ ಚೂರು 
ಗೀಚುವ ಹಂಬಲ ನೂರು 
ನಾಲ್ಕು ಗೋಡೆಯ ಬರಹ ನನ್ನದು 
ಇಣುಕಿ ಓದೋರ್ಯಾರು?

ಬಾನಲಿ ಹುಣ್ಣಿಮೆ ತೇರು 
ನಕ್ಷತ್ರಗಳೂ ಸುಮಾರು 
ಚಂದಿರ ತಪ್ಪಿದ ಲೆಕ್ಕವ ಹಿಡಿದು  
ಎಣಿಸಿ ಕೊಡುವವರಾರು?

ನಿಲ್ಲುವ ತಾಣವೇ ಊರು 
ಸೋರುವುಪ್ಪರಿಗೆ ಸೂರು 
ಆಸೆ ಬಿತ್ತುವ ಕನಸಿನ ಕನಸನು 
ಪೋಷಿಸಿ ಬೆಳೆಸೋರ್ಯಾರು?

ನಡೆದರೆ ಬೀಳಿಸುವವರು  
ಬಿದ್ದರೆ ಮೆಟ್ಟುವವರು 
ಚಾಚಿವೆ ಸಾವಿರ ಕೈಗಳು ಆದರೆ 
ಒಲಿತನು ಮಾಡೋರ್ಯಾರು?

ನೆನಪಾದರು ನನ್ನವರು 
ಭ್ರಮೆಯಾದರು ಉಳಿದವರು 
ನಂಬಿಕೆಗಳ ಮೂಡಿಸುತಲೇ ಹಿಂದೆ 
ಹುಸಿಯಾದರು ಹಲವಾರು 

ಆ ದಡ ನನ್ನ ತವರು 
ಈ ತೀರದಿ ಯಾರಿಹರು?
ಹಿಂದಿರುಗುವ ಆಲೋಚನೆಗಳಿಗೆ 
ನಡೆಸ ಬೇಕೆ ತಯಾರು?

ನಾನೆಂಬುದು ನನ್ನ ಪೊಗರು 
ಪೊಗರಿಲ್ಲದೆ ನಾ ಯಾರು ?
ಒಗಟಲ್ಲದ ಈ ನೇರ ಪ್ರಶ್ನೆಗೆ 
ಉತ್ತರಕ್ಕೆಲ್ಲಿದೆ ಬೇರು?

ಮನಸಿದು ಮುಪ್ಪಿನ ಬಿದಿರು 
ಖಾಲಿತನದ ಪೊದರು 
ಹೂ ಅರಳಿದ ಬಿದಿರಿನ ಒಡಲೊಳಗೆ 
ತುಂಬುವರ್ಯಾರು ಉಸಿರು?

ನೆನ್ನೆಗಳಲ್ಲ ನವಿರು 
ಇಂದಿಗೆ ಈ ಉರಿ ಬೆವರು 
ಕಾರ್ಮುಗಿಲಿಚ್ಛಿಸುವ ಮರುಭೂಮಿಯ 
ಮರುಳನ್ನದವರು ಯಾರು?

                            -- ರತ್ನಸುತ

ಕಗ್ಗತ್ತಲ ಸುತ್ತ !!

ತಲೆದಿಂಬಿನೋಳಗೊಂದು ತುತ್ತೂರಿ ಸದ್ದು
ನಿದ್ದೆಗೊಡದೆ ಎಬ್ಬಿಸುತ್ತಿದೆ ಒದ್ದು 
ಸರಿಹೊತ್ತಲಿ ಎಚ್ಚರಾಗೋದು ಏನು ?
ಕತ್ತಲೊಡನೊಂದಿಷ್ಟು  ಮಾತಾಡಲೇನು ?

ಕಿಟಕಿ ಆಚೆ ಚಂದ್ರ ನೋಡಿಹನು ಕದ್ದು
ಹೊರಗೆ ಬೀದಿ ನಾಯಿಗಳ ಬೊಗಳು ಸದ್ದು 
ಆರಿಸಿದ ದೀಪವನು ಮರು ಬೆಳಗಲೇನು ?
ಪೆದ್ದನನಿಸಿಕೊಳ್ಳದೆ ಮಲಗಲೇನು ?

ಎಲ್ಲಿ ಹೋಯಿತೋ ಜಾರಿ ಹೊದ್ದಿದ್ದ ರಗ್ಗು ?
ಹಾಸಿಗೆಯೂ ಸರಿಯಿಲ್ಲ, ಬರೀ ಉಬ್ಬು ತಗ್ಗು 
ಎದೆಯ ತಟ್ಟುವ ಕೈ ಇರಬಾರದೇನು ?
ಹೀಗೇಕೆ ನಾನಾದೆ ಮರುಭೂಮಿ ಮೀನು ?

ತಾಪ ಹೆಚ್ಚಿದೆ ಗಂಟಲಾಯಿತೊಣ ಹುಲ್ಲು 
ಸೊಳ್ಳೆ ಎರಡು ಸತ್ತಿವೆ ಲೋಟದಲ್ಲೂ 
ದಾಹ ನೀಗಲು ನೀರ ನೇರ ಕುಡಿದೇನು ?
ನಿಷ್ಠೂರ ಮಾಡುವುದೇ ನಾಲಿಗೆ ತಾನು ?

ನಾನೊಬ್ಬನೇ ಇದ್ದು ಮಲಗಿದ್ದು ಸುಳ್ಳು 
ಜೊತೆಗೆ ಇದ್ದರಲ್ಲ ಆಜು-ಬಾಜಿನಲ್ಲೂ !!
ನಾನಿರುವ ಈ ಜಾಗ ನಿಜದ ಸೂರೇನು ?
ಭಯದಲ್ಲಿ ಅದುರುತ್ತ ಬೆವೆತು ಹೋದೇನು !!

ಬಿಟ್ಟ ಕಣ್ಣನು ಮುಚ್ಚೆ ಎಚ್ಚರಾದೀತೇ ?
ಎಚ್ಚರದಿ ನಿಜವೆಂಬುದು ಕಂಡೀತೇ ?
ಅಷ್ಟರಲೆ ಅಪ್ಪಳಿಸಿತೊಂದು ಕತ್ತಲ ಅಲೆ 
ಹೊತ್ತಾಯಿತು ಮೊಳಗಿತು ಬೆಳಕ ಶಾಲೆ !!

                                   -- ರತ್ನಸುತ

ಕನ್ನಡ-ಕಲ್ಪವೃಕ್ಷ

ಕೋಗಿಲೆ ಮುಕ್ಕಿ ಜಾರಿದ ಹಣ್ಣಿಗೆ 
ಕರಿಮಣ್ಣಿನ ಮಡಿಲಾಸರೆಯು 
ಗಾಳಿ, ಬೆಳಕು, ತೇವದ ಈವಿಗೆ 
ಋಣರೂಪಕ ಬೇರು, ಚಿಗುರು 
ಬಲಿತ ಕಾಂಡ, ಕವಲೊಡೆದ ರೆಂಬೆ  
ಚಾಚಿತು ತಾ ನೆರಳಿನ ತೋಳು 
ಕನ್ನಡ ಕಲ್ಪವೃಕ್ಷದ ಮಡಿಲಲಿ 
ಧನ್ಯ ಕನ್ನಡಿಗರ ಬಾಳು !!

                            -- ರತ್ನಸುತ

ನಾ ಸತ್ತ ದಿನದಂದು !!

ಯಾರು ಹೆತ್ತ ಮಗನೋ ಏನೋ?
ನೆತ್ತರು ಮಾತ್ರ ನನ್ನಂತೆಯೇ ಇತ್ತು
ಕೆಂಪಾಗಿ ಹರಿದು, ಕಪ್ಪು ಹೆಪ್ಪಾಗಿ
ಒದ್ದಾಟ ನರಳಾಟವೂ ಜೊತೆಗೂಡಿ

ನನ್ನಂತವನೇ ಅಂದಮೇಲೆ
ನನ್ನವನೇ ತಾನೇ?
ಅಣ್ಣನೋ, ತಮ್ಮನೋ ಪರ ಜನ್ಮನದಲ್ಲಿ
ಇಹ ಜನ್ಮಕೆ ಆದನೊಂದಿಷ್ಟು ದೂರ

ತುಟಿ ಪಟಿಸುತಿತ್ತು ಅಮ್ಮ... ಅಮ್ಮ...
ಮುಷ್ಟಿಯಲಿ ಹಿಡಿದಿಟ್ಟ ಅಲ್ಪ ಪ್ರಾಣ
ಅರೆದೆರೆದ ಕಣ್ಣಿಗೆ ಕಂಡವರೇ ದೇ-
-ವರೂ ಎಚ್ಚರಗೊಳ್ಳದ ಹೀನನಾದ

ಮಾರುದ್ದ ದೂರದಲಿ ಸೈಕಲ್ಲು ಹಾರಿತ್ತು
ಡೊಂಕಾದ ಗಾಲಿಗಳು ಅಲ್ಲೆರಡು
ಜೇಬಿಂದ ಚೆಲ್ಲಿದ ಚಿಲ್ಲರೆಗೆ ಅರಳಿದವು 
ನರಳಿದವನ ಪಾಲಿಗೆ ಕಣ್ಕುರುಡು

ಜನ ಜಂಗುಳಿಯ ಲೊಚಗುಡುವ ಸದ್ದಲ್ಲಿ 
ಕೊನೆಯುಸಿರ ಸದ್ದೂ ಮರೆಯಾಗುತಿತ್ತು
ನಾನೂ ಸಾಮಾನ್ಯರಂತೆಯೇ,ಸರಿಯಿಲ್ಲ
ಜಾರಿಕೊಳ್ಳುವ ಬುದ್ಧಿ ನನ್ನಲ್ಲೂ ಇತ್ತು

ಪ್ರಾಣ ಹಾರಿತು ತಾನು ನನ್ನ ಛೇಡಿಸುತ
ನನ್ನೊಳಗೆ ತನ್ನತನವ ಕಂಡು ಬಿಕ್ಕಿ
ಬಡಪಾಯಿ ದೇಹವು ಅನಾಥವಾಯಿತು ಅಲ್ಲಿ 
ಇನ್ನು, ಒಂದೆರಡು ಹನಿ ಹರಿಸುವುದು ಬಾಕಿ

ಅಲ್ಲಿ ಸತ್ತವನು ಬೇರಾರೂ ಅಲ್ಲ
ನಾನು, ಅವನು, ಇವನು ಇಡೀ ಆವರಣ
ನಾಯಿ, ಕಾಗೆ, ಬಸ್ಸು, ಕಾರು, ರಸ್ತೆ
ಗಿಡ, ಮರ, ಚಪ್ಪಲಿ, ಮನಸ್ಸು ಎಲ್ಲ

ಇನ್ನೆಲ್ಲಿ ನಿದ್ದೆ ?
ಇದ್ದುದ್ದನ್ನೆಲ್ಲವ ನಿಶ್ಚಲ ಕಣ್ಣಿಗೆ ಧಾರೆಯೆರೆದು
ಎಚ್ಚರವಾಗಬೇಕು ಇನ್ನಾದರು ನಿಕ್ರುಷ್ಟ ಕಣ್ಣುಗಳು
ಕಣ್ಣೀರ ಕಾರಣವ ಹುಡುಕದೆ, ಕರುಣೆಯಿಂದ !!!

                                                 -- ರತ್ನಸುತ

ಸಾಂದರ್ಭಿಕ ಸೋಪಾನ !!!

ಆಕೆ ಮುನಿಸಿಕೊಂಡಾಗ
ಮೂಗು, ಕೆಂಡ ಸಂಪಿಗೆ 
ಕಣ್ಣು, ಕಿಡಿ ಕಾರುವ ಕುಂಡ 
ಕೆನ್ನೆ, ಲಾವಾ ರಸ ಹರಿದ ಹಾದಿ 
ತುಟಿ, ಕಚ್ಚಿದ ಹಲ್ಲಿಗೆ ಬೆಚ್ಚಿದ ಬಳ್ಳಿ 
ನುಡಿ, ಅಪಶೃತಿಯ ಹಾಡು
ನಡೆ, ಭೂ ಕಂಪನಕೆ ಕಂಪನ 
ಮೈ, ಕಾಡ್ಗಿಚ್ಚ ಕಾನನ 
ಕೈ, ಅದರಿದ ಆಯುಧ 

ಆಕೆ ನಾಚಿಕೊಂಡಾಗ 
ಮೂಗು, ಅರಳು ಮಲ್ಲಿಗೆ 
ಕಣ್ಣು, ರಾತ್ರಿಯ ಮಿನುಗು ಚುಕ್ಕಿ
ಕೆನ್ನೆ, ಮುಸ್ಸಂಜೆ ಬಾನು 
ತುಟಿ, ಸುರಪಾನದ ಉಚಿತ ಮಳಿಗೆ 
ನುಡಿ, ನೊರೆ ಹಾಲಿನ ಪೇಯ 
ನಡೆ, ತಾಳಕೆ ಬೆರಗು ವೈಖರಿ 
ಮೈ-ಸೂರಿನ ತುಪ್ಪದ ಪಾಕ 
ಕೈ ಸೋಕಲು ಕಾಣ್ವುದು ನಾಕ 

ಆಕೆ ಅಚ್ಚರಿಗೊಂಡಾಗ 
ಮೂಗು, ಮೂರ್ಸುತ್ತು ಮಲ್ಲಿಗೆ 
ಕಣ್ಣು, ಬತ್ತಿ ಏರಿಸಿದ ಉರಿ ದೀಪ 
ಕೆನ್ನೆ, ಅಂಕು ಡೊಂಕು ಮಣ್ಣ ಜಾಡು 
ತುಟಿ, ಕುತೂಹಲದ ಕೂಸು 
ನುಡಿ, ಬರೀ ತೊದಲು 
ನಡೆ, ಮೋಹಕ ಮಜಲು 
ಮೈ, ಶಿಲೆಯ ನಿಲುವು 
ಕೈ, ಕೆನ್ನೆ ಸಲುವು 

ಆಕೆ ನಟಿಸುವಾಗ 
ಮೂಗು, ನಟನೆಯ ಸುಳುವು 
ಕಣ್ಣು, ಕಾಡಿಗೆ ಗೂಡು 
ಕೆನ್ನೆ, ಕೃತಕ ಹೂಬನ 
ತುಟಿ, ಒತ್ತಾಯದ ನಗೆ ಸಿಂಚನ 
ನುಡಿ, ತಾತ್ಕಾಲಿಕ ಸದ್ದು 
ನಡೆ, ಬೇಕನಿಸದ ಮುಗಿಲು 
ಮೈ, ನನ್ನದಲ್ಲದ ಆಸ್ತಿ 
ಕೈ-ಕೊಡುಗೈಯ್ಯ ಕುಸ್ತಿ  

ಆಕೆ ಅಳುವಾಗ 
ಮೂಗು, ಉಸಿರಿಗಿಕ್ಕಟ್ಟು ಮೂಸೆ
ಕಣ್ಣು, ಉಕ್ಕಿದ ಕಡಲು 
ಕೆನ್ನೆ, ಮಳೆಗಾಲದ ನೆಲ 
ತುಟಿ, ಕಂಬನಿಗೆ ಜಾರು ಸ್ಥಳ 
ನುಡಿ, ಬಿಕ್ಕಳಿಕೆ ಬಂಧು 
ನಡೆ, ನುಡಿಯಂತೆ ನೊಂದು 
ಮೈ- ಮನಸಿಗೆ ಘಾಸಿ 
ಕೈ ಬಯಸಿತು ಪ್ರೀತಿ 

ಆಕೆ ನಾನಾದಾಗ 
ಮೂಗು, ದಾರಿಗೊಂದು ದಿಕ್ಸೂಚಿ 
ಕಣ್ಣು, ಬದುಕಿಗೆ ಕಾವಲು 
ಕೆನ್ನೆ, ಕಾವ್ಯ ಫಲಕ 
ತುಟಿ…

ಒಮ್ಮೆ, ಮತ್ತೊಮ್ಮೆ, ಮಗದೊಮ್ಮೆ !!!

ಅಷ್ಟು ದೂರ ಕ್ರಮಿಸಿ 
ಮರೆಯಾಗುವ ತಿರುವಿನಲ್ಲಿ 
ಸಣ್ಣದೊಂದು ಖುಷಿಯ ಕೊಟ್ಟೆ 
ಚೂರು ನಿದಾನಿಸಿ 
ಹಿಂದಿರುಗಿ ನೋಡದರೆ 
ಹೊಣೆಯಾಗುವೆ ಆಘಾತಕೆ 
ಗದ್ದಲ ಎಬ್ಬಿಸಿ ಎದೆಯಲಿ 
ಮೌನವ ನಿವಾರಿಸಿ 

ಹತ್ತಿರದಲಿ ಅಷ್ಟು ದೂರ 
ದೂರದಲ್ಲಿ ಹತ್ತಿರದ 
ಭಾವ ಸ್ಪರ್ಶದೊಳಗೆ ಎನಿತು 
ವಿಶೇಷವಿದು ಕಾಣೆ ?!!
ಮನದ ಪುಟ್ಟ ಅರಮನೆಯಲಿ 
ದೀಪ ಹೊತ್ತು ಬಂದವಳೇ 
ಈವರಿಗಿನ ಅಚ್ಚರಿಯ 
ಪ್ರವೇಶ ನಿನ್ನದೇನೆ !!

ಸೋಲುವ ಪದಗಳ ಹಿಂಡು 
ಸಾಗಿವೆ ಸೊರಗುತ ನೊಂದು 
ಸಾಟಿಯಿಲ್ಲದಂಥ ನಗೆಯ 
ಎದುರು ಸೆಣಸಿ ಸೋತು !
ಕಾವಲ ಕಣ್ಣನು ದಾಟಿ 
ಹೃದಯದ ಬಾಗಿಲ ತಟ್ಟಿ 
ಗದ್ದಿಗೆ ಹಿಡಿಯುವುದೇ
ನೀ ಪಟ್ಟು ಬಿಡದೆ ಕೂತು ?!!

ನಂತರ ಆನಂತರ 
ಈ ಹೊತ್ತಿನ ಈ ವಿವರ
ಸಲ್ಲಿಸುವ ಸರದಿಗೆ 
ಸಾಲದಾಯ್ತು ಸೊಲ್ಲು 
ಕೊಂಚ ಸುಧಾರಿಸಿ 
ಮೊದಲಾಗುವೆ ಮಾತಿಗೆ 
ವದಂತಿಗಳನು ಬದಿಗಿಟ್ಟು 
ವಿನಂತಿಯನ್ನು ಕೇಳು 

ಹುರುಳಿಲ್ಲದ ನನ್ನ  
ಕವಲೊಡೆದ ದಾರಿ 
ಪಯಣ ಎಲ್ಲಿಗೋ ಏನೋ 
ಗೊತ್ತು ಗುರಿಯಿಲ್ಲ !
ಕ್ಷಿತಿಜದಲಿ ನಾನು 
ಕೈ ಹಿಡಿವೆ ನಿನ್ನ 
ನಾ ಭೂಮಿ, ನೀ ಬಾನು 
ಕ್ಷುಲ್ಲಕ ಮಿಕ್ಕೆಲ್ಲ !!

               -- ರತ್ನಸುತ

ಸದ್ಗುರು

ಒಂದೇ ಬಚ್ಚಲ ಕೋಣೆಯಲ್ಲಿ
ಲಂಗೋಟಿ ಕಟ್ಟಿಕೊಂಡು
ನಾ ಅವಗೆ, ಅವ ನನಗೆ
ಬೆನ್ನು ತಿಕ್ಕಿದ ನೆನಪು
ಇಂದಿಗೂ ಪ್ರಸ್ತುತ

ಅವನ ಶರಾಯಿಯಲ್ಲಿ
ಉಳಿದ ಚಿಲ್ಲರೆ ಕಾಸು
ನನ್ನ ಜೇಬ ತುಂಬಿಸಲು ಸಾಕಾಗಿತ್ತು
ಬೆಂಡು, ಪುರಿ, ಬತಾಸು
ಅಷ್ಟಾದರೂ, ಮಿಕ್ಕ ಚಿಲ್ಲರೆ ಬೋನುಸ್ಸು

ಬೆದರಿದ ರಾತ್ರಿಗಳಿಗೆ
ಮರುದಿನ ದರ್ಗಾದಲ್ಲಿ ಯಂತ್ರ ಕಟ್ಟಿಸಿ
ಹಾಗೆ ಸಂತೆ ಸುತ್ತಿಸಿ
ಊರಾಚೆ ಮಾರಮ್ಮನ ಗುಡಿಯಾಗೆ
ಮಂತ್ರಿಸಿದ ನಿಂಬೆಹಣ್ಣು ತಂದು
ಶರಬತ್ತು ಮಾಡಿಸಿ ಕುಡಿಸಿದಾಗ
ದಿನಾಲೂ ಕೆಟ್ಟ ಕನಸ ನಿರೀಕ್ಷೆ

ಅಮ್ಮ ಮೆಲುಕು ಹಾಕುತ್ತಾರೆ
ಅಪ್ಪ ನನಗೆ ಸುಳ್ಳು ಹೇಳಿ
ಯಾಮಾರಿಸಿದ ಗಟನೆ
ಕಾಗೆಯ ತೋರಿಸಿ
ಕೋಗಿಲೆ ಅಂದಿದ್ದರಂತೆ
ನಾ ಅಳು ನಿಲ್ಲಿಸಲು ಬೇಗನೆ

ತಾ ಮಣ್ಣಲ್ಲೆ ಸವೆದು
ನನ್ನ ಬಿಟ್ಟ ಆಕಾಶಕ್ಕೆ ಹಾರಲು
ಒಮ್ಮೆ ಈ ದೇಶ, ಒಮ್ಮೆ ಆ ದೇಶ
ಅಂಕಿ ಲೆಕ್ಕಕ್ಕೆ ಅವ ಬಳಸನು
ಗಣಕ ಯಂತ್ರ
ಬಳಕೆಗೆ ತಲೆ, ಕೈ-ಬೆರಳು ಮಾತ್ರ

ಸಾಲಗಾರರಿಗೆ ಸುಳ್ಳು ಹೇಳಿಸುವ
ಸಣ್ಣ ತಪ್ಪನು ಮಾಡಿಹನು
ಆದ ತಪ್ಪಿಗೆ ಎಷ್ಟೋ ಬಾರಿ
ನನ್ನೆದುರಲ್ಲೇ ಬಿಕ್ಕಿಹನು

ಅವನ ಮೀರಿದ ನನ್ನ ಎತ್ತರ
ತಲೆ ಬಾಗಿಸಲೆಂದೇ ಇರಬಹುದು
ಅವನ ಹೆಜ್ಜೆಯ ಹಿಂಬಾಲಿಕೆಯಲಿ
ಬದುಕಿನ ಪಾಠ ಕಲಿಬಹುದು !!

                                -- ರತ್ನಸುತ

ಕುಪ್ಪಳಿಸಿ ಕುಪ್ಪಳಿಯಲಿ!!

Image
ಅಗೋ ನೋಡ, ಬಿಳಿ-ಬಿಡಿ ಮೋಡ 
ನೀಲಿಗಟ್ಟಿದ ಬಾನ ನಡುವೊಂದು ಜಾಡ 
ಹಾಗೊಮ್ಮೆ ಕಣ್ಹೊರಳಿ ದಣಿವೆದ್ದು ಬರಲಿ 
ವಿರಮಿಸಲು ಜೋಡಿ ರೆಪ್ಪೆಯ ನೆರಳು ಸಿಗಲಿ 

ಕೂಡಲೇ ಹಾರಲಿ ಅಪರಿಚಿತ ಹಕ್ಕಿ 
ಗುರುತಿಗೆ ಹೆಸರಿನ ಅರಿವೊಂದೇ ಬಾಕಿ 
ಮಗ್ನತೆಯ ಮಜಲಿನಲಿ ಒಂದೊಂದು ಸಾಲು 
ಏಕಾಂಗಿಯ ತೆಕ್ಕೆಗೆ ಹಸಿರ ತೋಳು  

ಇಂಪಿಸಲಿ ಕೊರಳು ಆಲಿಸುವ ಕಿವಿಗೆ
ದೂರದಿ ಮದವೇರಲಿ ಸುಡುವ ರವಿಗೆ
ಆಗಲೇ ಕಾತರಿಸಿ ಮೂಡಲಿ ಚಂದ್ರ 
ಚುಕ್ಕಿ-ರೇಖೆಯ ಜೊತೆಗೆ ಹಿಡಿದೊಂದು ಲಾಂದ್ರ 

ಗಾಳಿ ಬಳುಕುತ ಬರಲಿ ಎದೆ ಕದವ ಕದಡಿ 
ಬೇಸರಿಕೆಯ ಬನದಿ ಹೂವೊಂದು ಅರಳಿ 
ಮಸಿ ಬೆರಳು ಮತ್ತೊಮ್ಮೆ ಹಿಡಿಯಲಿ ಮಸಿಯ 
ಖಾಲಿ ಹಾಳೆಯ ಎದೆಗೆ ಅಕ್ಷರವೇ ಇನಿಯ 

ಸುತ್ತ ಮುತ್ತಲೂ ಕೆತ್ತಿಕೊಂಡ ಕಲ್ಲು ಬಂಡೆ 
ಕಾವ್ಯಕಾರಣಕೊಂದು ಕೈಲಾಸವಾಗಲಿ 
ಕುಪ್ಪಳಿ ಅಂದೊಡನೆ ಕುಪ್ಪಳಿಸುವ ಮನಕೆ 
ಕು.ವೆಂ.ಪುತನವೆಂಬ ಸ್ಪೂರ್ತಿ ತಾ ಇರಲಿ !!

                                         -- ರತ್ನಸುತ

ಸ್ವ(ಅ)ತಂತ್ರ ಭಾರತದಲ್ಲಿ !!

ಇಬ್ಬರು ಜಗಳಕ್ಕೆ ನಿಂತಾಗ 
ಗುಂಪು ಕಟ್ಟಿದವರಲ್ಲಿ ನಾನೂ ಒಬ್ಬ 
ಆ ರೋಮಾಂಚಿತ ದೃಶ್ಯಾವಳಿಯಲ್ಲಿ 
ನನಗೆಲ್ಲಿಲ್ಲದ ಖುಷಿ 
ನಾನಿರದಂತೆ ಲೋಕ ಇದ್ದಾಗ 
ನನಗೆ ನನ್ನ ಮೇಲೆ ಅನನ್ಯ ಭಾವ 
ನಾಗರಿಕನಂತೆ ನಟಿಸಿ 
ಅಲ್ಲಿಂದ ಜಾರಿಕೊಂಡೆ 

ಜಗಿದ ಬಬ್ಬಲ್ ಗಮ್ಮನು 
ಮೇಜಿನಡಿ, ಕುರ್ಚಿಯಡಿ 
ಅಂಟಿಸಿದವರಲ್ಲಿ ನಾನು ಹೊರತಲ್ಲ  
ನಿರ್ಜನ ಪ್ರದೇಶದ ಗೋಡೆಗಳ ಮೇಲೆ 
ಚಿತ್ತಾರ ಬಿಡಿಸುವಾಗ, ಅಪರಿಚಿತರ- 
-ಕಣ್ಣಿಗೆ ಬಿದ್ದು ನಾಚುವ ಅಸಹಾಯಕ ನಾನು 
ಸಮರ್ಥನೆಗೆ ಇದ್ದೇ ಇದೆ ನನ್ನ ಬಳಿ 
ಅಭಿವ್ಯಕ್ತಿ ಸ್ವಾತಂತ್ರದ ವಿತಂಡತನ

ನನ್ನದಲ್ಲದ ಹುಳುಕು ಹುಡುಕುವಾಗ 
ಮೈಯ್ಯೆಲ್ಲ ಕಣ್ಣು 
ನಿಂದನೆಗೆ ಸಿಕ್ಕವರ ಪಾಲಿಗೆ ಈ ನಾಲಿಗೆ 
ಹರಿತವಾದ ಕತ್ತಿ 
ಒಳ ಬಿರುಕುಗಳೆಷ್ಟೋ ಲೆಕ್ಕವೇ ಇಲ್ಲ 
ಲೆಕ್ಕ ಹಾಕಲು ನನಗೆ ಒಳಗಣ್ಣಿಲ್ಲ 
ನನ್ನ ತಪ್ಪುಗಳಿಗೆ ನನ್ನ ಮಾಫಿ 
ಅನ್ಯರಿಗೆ ನಾ ಘಡಾಫಿ 

ದೇಶ ಹೀಗಿರುವುದೇ ಅನುಕೂಲಕರ 
ಇಲ್ಲವೆ, ಬೂಟಾಟಿಕೆಗೆಲ್ಲಿ ಬೆಲೆ ?
ತೋರ್ಬೆರಳಿಗೆ ಕೆಲಸವಿಲ್ಲದೆ 
ಕಚ್ಚಿಕೊಳ್ಳಲಷ್ಟೇ ಬಳಸಬೇಕಿತ್ತು
ನೆರಳಿಗೂ ತಲೆ ಮರೆಸಿಕೊಳ್ಳಲು 
ಕಾರಣವಿದೆ ನನ್ನಿಂದ 
ಇನ್ನು ನನ್ನ ಪುಂಡತನಕ್ಕೋ,  
ಎಲ್ಲಿ ಲಂಗು-ಲಗಾಮು ??

ಜೇಬು ಜಣಗುಡಲು ತೇಗು ಹೊಟ್ಟೆ 
ಇಲ್ಲದಿದ್ದರೆ ತಣ್ಣೀರು ಬಟ್ಟೆ 
ಸಂಗ್ರಾಮದಲಿ ನನ್ನದೂ ಒಂದು ಕಲ್ಲು 
ಬಸ್ಸಿಗೋ, ಸರ್ಕಾರಿ ಕಚೇರಿಗೋ!!
ನೆನ್ನೆ ಮುಗಿದವು ಇಂದು ಮುಗಿದವು 
ಪತ್ರಿಕೆಗಳಲ್ಲಿ ಮುಖ್ಯಾಂಶಗಳಾಗಿ 
ಇಂದಿನ ಬಗ್ಗೆ ಚಿಂತೆ ನನಗಿಲ್ಲ 
ನಾಳೆಗೆ ಬಂದೇ ಬರುತ್ತವೆ
ಸ್ವಾರಸ್ಯಕರ ಸುದ್ದಿಗಳ…

ಹಬ್ಬದ್ಸೀರೆ !!

ಇನ್ನೂ ನೆನ್ಪದೆ 
ಅಪ್ಪ ಅವ್ವ ಕಿತ್ತಾಡಿ 
ಮೂರ್ದಿನ ಮಾತ್ಬುಟ್ಟು 
ನಾಕ್ನೇ ದಿನ ಹಬ್ಬ ಮಾಡಿದ್ದು 

ತೂತ್ಬಿದ್ ಜೇಬಲ್ಲಿ 
ಮೂರ್ಕಾಸಿಲ್ದಿದ್ರೂ 
ಸಾಲ-ಸೋಲ ಮಾಡಿ 
ಅಪ್ಪ ಪಟಾಕಿ ತಂದಿದ್ದು 
ಕಜ್ಜಾಯ ಮಾಡಿದ್ದು 

ಆವತ್ತೇ ಅವ್ವಗೆ 
ತವ್ರಿಂದ ತಂದ ಸೀರೆಗೆ 
ಸವ್ತಿ ಸಿಕ್ಕಿದ್ದು 
ದೀಪಾವಳಿ ನೆನ್ಪ್ಗೆ 
ಅಪ್ಪ ಸೀರೆ ಕೊಡ್ಸಿದ್ದು 

ಸುರ್ಸುರ್ಬತ್ತಿ ಕಿಡಿ ಹಾರ್ಸಿದ್ನಾನು
ಸೀರೆ ಸುಟ್ಟಿದ್ದು 
ಅವ್ವ ಅತ್ತಿದ್ದು 
ಅಪ್ಪ ಹೊಡ್ದಿದ್ದು 

ಅವ್ಗೆ 
ಹೊಸ ಸೀರೆ ತಂದಾಗೆಲ್ಲ 
ಗೆಪ್ತಿ ಆಯ್ತದೆ 
"ಆ ದಿನ" 

"ಇನ್ನೂ ಎತ್ತಿಟ್ಟೌಳೆ 
ಬೀರೂನಾಗೇ ಜೋಪಾನ್ವಾಗಿ  
ಕದ್ದು ಕದ್ದು ನೋಡ್ತಿರ್ತಾಳೆ 
ಅವಾಗವಾಗ" 
ಅಪ್ಪ ಹಿಂಗಂತಿರ್ತಾರೆ 
ತಮಾಸೆಗ್ಸಿಕ್ದಾಗ !!

                      --ರತ್ನಸುತ

ಹೊಸ ಒಗ್ಗರಣೆ !!

ಇಷ್ಟು ದಿನ ಕಳೆದರೂ, 
ಎಷ್ಟು ಮಾತಾಡಿಕೊಂಡರೂ, 
ಇಷ್ಟಿಷ್ಟೇ ಉಳಿದು ಬಿಡುತ್ತಲ್ಲ 
ಎಷ್ಟೇ ಕೊನೆಗಾಣಿಸಲೆತ್ನಿಸಿದರೂ !! 
ನಾಳೆಗಷ್ಟೂ ಮಾತಾಡೋಣ 
ಎಳ್ಳಿನ ತುದಿಯಷ್ಟೂ ಉಳಿಸದೆ 
ಕಷ್ಟವಾಗಬಹುದು ಚೂರು 
ಇಷ್ಟವಾಗಿಸಿಕೊಳ್ಳೋಣ 

ಕೊಂಡರಾಯ್ತು ಕಡಲೇಕಾಯಿ 
ನೀ ಸುಲಿ, ನಾನೂ ಸುಲಿವೆ 
ಹೊಟ್ಟೆ ಕೆಟ್ಟರೂ ಚಿಂತೆಯಿಲ್ಲ 
ಮಾತು ಮುಂದೋ, ಕಾಳು ಮುಂದೋ
ನೋಡಿಯೇ ಬಿಡೋಣ 
ಒಟ್ಟಾರೆ ಮುಗಿಸಬೇಕು ಇವತ್ತಿಗೆ 
ನಾಳೆಗೇನೂ ಉಳಿಸದಂತೆ "ಮಾತನ್ನು"
"ಕಾಳನ್ನಲ್ಲ"!! 

ಹಾಗೆ ಮೌನ ವಹಿಸಿ ನೀ 
ವ್ಯರ್ಥ ಮಾಡುವುದೇಕೆ ಸಮಯ?
ಮತ್ತೆ ನೆನ್ನೆಯ ಹಾಗೆ ತೆಗೆಯದಿರು ರಾಗ 
ಸಾಕಾಗಿದೆ ನನಗೀ ತಗಾದೆ!!
ಇಗೋ ನಿಲ್ಲಿಸಿದೆವು ನೆನ್ನೆಗೆ 
ಇಷ್ಟರ ವರೆಗೆ ಮಾತ್ರ 
ಇನ್ನೂ ಬಾಕಿ ಉಳಿದವುಗಳ ಕಕ್ಕಲು ಬಿಡು, 
ನೀನೂ ಕಕ್ಕು
ನಿನ್ನ ಮೌನವ ಪಕ್ಕಕ್ಕೆ ಕುಕ್ಕು 

ಮತ್ತೆ ಕಣ್ಣೀರೇ ಮೊದಲಾಯ್ತು 
ನನ್ನ ಬೆರಳೇನು ಟಿಶ್ಯೂ ಪೇಪರ್ರೇ?
ನಿನ್ನ ಕೆನ್ನೆಗೆ ನನ್ನ ತುಟಿಗಿಂತ 
ಬೆರಳಿನ ಪರಿಚಯವೇ ಹೆಚ್ಚಿದೆ!!
ಸಾಕು ಮಾಡು ಮಾರಾಯ್ತಿ 
ಮಾತಿಗೆ ಮುಂದಾಗು ಈಗಲಾದರೂ 
ಮನಸಿಗೆ ಸಹಿಸಲಾಗುತ್ತಿಲ್ಲ ಈ 
ಪರಿಚಿತ ದೊಂಬರಾಟ  

ಅಬ್ಬಾ ಕೊನೆಗೂ ನಕ್ಕೆಯಲ್ಲ!! 
ಹಿಂದೆಯೇ ಅನ್ನುತ್ತೀಯ 
"ಅವಸರ ಏಕೆ ನಲ್ಲ, 
ಮಾತನಾಡಲು ಇದೆಯಲ್ಲ ಜೀವಮಾನವೆಲ್ಲ!!"
ಅಯ್ಯೋ ನನ್ನವ್ವ 
"ದೂರಾಗೋಣ ನಾಲ್ಕು ಮಾತಾಡಿ,
ಹಂಚಲಾಗದ ವಿಷಯಗಳ ಹಂಚಿಕೊಂಡು" ಅಂದಿದ್ದೆ 
ಈಗ ನಿನ್ನ ಮಾತಿನರ್ಥ?? // ದ್ವಂದ್ವ 

ಕೊನೆಗೂ ಮತ್ತದೇ ಹಳೇ ಸಾರಿಗೆ 

ಹಾಗೇ ಕರ್ಗೋಗ್ತಾ!!

ಕಾಮನ ಬಿಲ್ಲಿದೆ ಕಣ್ಣೆದುರಲ್ಲಿ  ಕರಗಲು ಕಾರಣವಿದೆ ಅದಕೆ  ಹನಿಯುವ ಹೊತ್ತಿಗೆ ಕೆನ್ನೆ ಕೇಳಿತು  "ಮಡಿಲಾಗಲಿ ನಾ ಯಾವುದಕೆ?"
ಕಬ್ಬಿನ ಮಾತನು ಕಿವಿ ಆಲಿಸಲು  ಆಲೆ ಮನೆಯೇ ತಾನಾಯ್ತು  ಕಿವಿಯ ಆಲೆಗೆ ಜಾರಿತು ಬೆಲ್ಲ  ಸಿಕ್ಕಿ ಬಿದ್ದರೆ ಏನಾಯ್ತು?!!
ಕುರುಳಿನ ಸಾಗರ ತಿಳಿ ತಂಗಾಳಿ  ಮರುಳಾಗಲು ನಾ ತೀರದಲಿ  ಮೈ ಮರೆತು ಕನವರಿಸುತಲಿರಲು  ಮಿತಿ ಮೀರದೆ ನಾ ಹೇಗಿರಲಿ?!!
ಬಳೆಯ ಸದ್ದಿಗೆ, ಮುದ್ದಿಸೋ ಮಳೆಯ  ಹೋಲಿಸಿ ಬರೆವ ಕಾತರವು  ಸಾಮ್ಯವೇ ಇಲ್ಲದ ರೂಪಕ ನೀಡಿ  ದಕ್ಕುವುದೇ ಒಪ್ಪುವ ಗೆಲುವು?!!
ಬೆನ್ನೀರದು ಬೆನ್ನಿಗೆ ಅಂಟಿರುವುದು  ಬೆವರಿಗೆ ಪರಿಚಯಿಸದೆ ಇರಲಿ  ಬೆರಳಿದೋ ಸಜ್ಜಾಗಿದೆ ಮುಂದಾಗಲು  ಬಾಚುವ ತನಕ ಕಾದಿರಲಿ 
ಮುನ್ನೋಟದ ಮುನ್ನುಡಿಯ ಪದವೇ  ಪ್ರೇರಣೆ ಆಯ್ತು ಮುನ್ನಡೆಗೆ  ಚಂದಿರ ಮಡಿಲಲಿ ಕಾಣಿಸುವಂತ್ಯಕೆ  ಮುಂಗಡ ಪಡೆಯಲೇ ಬಾಡಿಗೆಗೆ?!!
ಬೇಯುವ ಮನಸಿದೆ ಕಾವಿಗೆ ಕೊರತೆ  ಇರಲಾರದು ಒರಗಿ ನೋಡು  ಇಷ್ಟವಾದರೆ ನಿನ್ನದೇ ಕವನ  ಇಲ್ಲವೇ ಹೊಸೆಯುವೆ ಹೊಸ ಹಾಡು !!
                                   -- ರತ್ನಸುತ

ಪುರಾಣ!! ಸರೀನಾ ??

ಸೀಮೆ ಹಾಕಿಕೊಂಡ ಕಡಲು
ತನ್ನ ತಾನೇ ಮೀರುವುದು
ಅನಿವಾರ್ಯಕೋ, ಅನುಕೂಲಕೋ ?
ಅಭಿಮಾನಕೋ, ಅನುಕಂಪಕೋ ?
ಕಿನಾರೆ ಸಾರುವ ಕಥೆ
ವಿಸ್ಮಯಕಾರಿ, ಭಯಾನಕ, ಭೀಕರ !!

ನೋಡುವ ಕಣ್ಣಿಗೆ
ಗೀಚುವ ಬೆರಳಿಗೆ
ಅಲೆಗಳೇ ಎಲ್ಲ, ಕಡಲ ವ್ಯಾಪ್ತಿ
ಆದರದರೊಡಲ ಗರ್ಭದಲಿ
ಕಂಪನ, ತಲ್ಲಣಗಳ
ಕಂಡವರ್ಯಾರು, ಉಂಡವರ್ಯಾರು ?

ಹರನ ಆತ್ಮಲಿಂಗವ
ಸ್ಪರ್ಶಿಸಿದ ಕೈ
ಒಂದು ಸೆರಗಿಗೆ ಆಸೆ ಪಟ್ಟರೆ
ಕೈ ಅಶುದ್ಧವೋ, ಆತ್ಮವೋ ??

ಒಬ್ಬನ ಉತ್ತಮನೆಂದು ಬಿಂಬಿಸಲು
ಮತ್ತೊಬ್ಬನ ನಿಕೃಷ್ಟನಾಗಿಸೋದು ಪುರಾಣ
ನನ್ನ ಸುತ್ತಲ ಜಗತ್ತು
ನಿಕೃಷ್ಟವಾಗೇ ಇರಲಿ ನಾನೂ ಸೇರಿ
ಪುರಾಣದ ಪಾಲಿಗೆ ಸತ್ತಂತಿರುವುದೇ ಲೇಸು !!

                                             -- ರತ್ನಸುತ