ಮನಸಾರೆ !!

ಮಾತನಾಡಿಸೋ ಮುನ್ನ
ಬೆಚ್ಚುವ ನಿನ್ನ
ನೇವರಿಸುವ ಸಾಹಸಿ ಆಗಲಾರೆ
ಮಾತಿಗೆ ನಾಚಿ
ನೀರಾಗುವ ನಿನ್ನ
ಮುತ್ತಿನ ಮುತ್ತಿಗೆ ದೂಡಲಾರೆ

ಬೇಕು ಬೇಕೆಂದೇ
ಬದಲಾಗುವ ನಿನ್ನ
ಹೇಗೋ ಹಾಗೆ ಸ್ವೀಕರಿಸಲಾರೆ
ಸಾಕೆಂದ ಮಾತ್ರಕ್ಕೆ
ಸಾಕು ಮಾಡುತ ನಿನ್ನ
ಬೇಕುಗಳಿಗೆ ಬ್ರೇಕು ಹಾಕಲಾರೆ
 
ಏರಿದ ನಿಷೇಧವ 
ತಲೆ ಬಾಗಿ ಒಪ್ಪಿಕೊಂಡು
ಎಲ್ಲೆ ಮೀರದೆ ನಿನ್ನ ಸೇರಲಾರೆ 
ಮರುವಲ್ಲೂ ಮರೆತಂತೆ 
ತುಂಟಾಟಕಾದರೂ 
ಬಾಳಲ್ಲಿ ನಿನ್ನೊಮ್ಮೆ ಮರೆಯಲಾರೆ 
 
ಅನವರತ ಒದ್ದಾಟವ 
ನಸುನಗುತ ಅನುಭವಿಸಿ 
ನೆನಪಲ್ಲೇ ನಿನ್ನಿರಿಸಿ ಬದುಕಲಾರೆ 
ನೀ ಕೊಟ್ಟ ಕನಸುಗಳ 
ಪಟ್ಟಿಯಲಿ ನಾನಿರದೇ 
ಆ ಕನಸ ನನ್ನಲ್ಲಿ ಇರಿಸಲಾರೆ 
 
ದುಮ್ಮಾನವಾದಾಗ 
ಸುಮ್ಮಾನೆ ಅಳುತಲಿ 
ಕಣ್ಣೀರ ಒರೆಸಿ ಬಿಡಲಾರೆ 
ನನ್ನೋಳು ನೀನಂತ 
ನಿನ್ನೋನು ನಾನಂತ 
ಇಟ್ಟ ಆಣೆ ಕೈಯ್ಯ ಬಿಡಲಾರೆ 
 
ನಿನ್ನ ಮಾತಿಗೆ ಎದುರು 
ನಿನ್ನ ಕೋಪದ ಡಮರು
ಎರಡನ್ನೂ ಒಮ್ಮೆಲೆಗೆ ಸಹಿಸಲಾರೆ 
ಪ್ರೀತಿಯೆಂಬ ಚಿಗುರು 
ಬಾಳಿನುದ್ದಕೂ ಪಸರು-
-ಆಗಬೇಕು ಜೊತೆಗೆ ನಾಟು ಬಾರೆ...... !!


                                    -- ರತ್ನಸುತ 

Comments

Popular posts from this blog

ಜೋಡಿ ಪದ

"ಪಾಸ್ವರ್ಡ್" - RESET ಆಗ್ತಿರ್ಲಿ ಆಗಾಗ!!!

ಗರುಡ ಪ್ರಯತ್ನ ೩