ಸದ್ಗುರು

ಒಂದೇ ಬಚ್ಚಲ ಕೋಣೆಯಲ್ಲಿ
ಲಂಗೋಟಿ ಕಟ್ಟಿಕೊಂಡು
ನಾ ಅವಗೆ, ಅವ ನನಗೆ
ಬೆನ್ನು ತಿಕ್ಕಿದ ನೆನಪು
ಇಂದಿಗೂ ಪ್ರಸ್ತುತ

ಅವನ ಶರಾಯಿಯಲ್ಲಿ
ಉಳಿದ ಚಿಲ್ಲರೆ ಕಾಸು
ನನ್ನ ಜೇಬ ತುಂಬಿಸಲು ಸಾಕಾಗಿತ್ತು
ಬೆಂಡು, ಪುರಿ, ಬತಾಸು
ಅಷ್ಟಾದರೂ, ಮಿಕ್ಕ ಚಿಲ್ಲರೆ ಬೋನುಸ್ಸು

ಬೆದರಿದ ರಾತ್ರಿಗಳಿಗೆ
ಮರುದಿನ ದರ್ಗಾದಲ್ಲಿ ಯಂತ್ರ ಕಟ್ಟಿಸಿ
ಹಾಗೆ ಸಂತೆ ಸುತ್ತಿಸಿ
ಊರಾಚೆ ಮಾರಮ್ಮನ ಗುಡಿಯಾಗೆ
ಮಂತ್ರಿಸಿದ ನಿಂಬೆಹಣ್ಣು ತಂದು
ಶರಬತ್ತು ಮಾಡಿಸಿ ಕುಡಿಸಿದಾಗ
ದಿನಾಲೂ ಕೆಟ್ಟ ಕನಸ ನಿರೀಕ್ಷೆ

ಅಮ್ಮ ಮೆಲುಕು ಹಾಕುತ್ತಾರೆ
ಅಪ್ಪ ನನಗೆ ಸುಳ್ಳು ಹೇಳಿ
ಯಾಮಾರಿಸಿದ ಗಟನೆ
ಕಾಗೆಯ ತೋರಿಸಿ
ಕೋಗಿಲೆ ಅಂದಿದ್ದರಂತೆ
ನಾ ಅಳು ನಿಲ್ಲಿಸಲು ಬೇಗನೆ

ತಾ ಮಣ್ಣಲ್ಲೆ ಸವೆದು
ನನ್ನ ಬಿಟ್ಟ ಆಕಾಶಕ್ಕೆ ಹಾರಲು
ಒಮ್ಮೆ ಈ ದೇಶ, ಒಮ್ಮೆ ಆ ದೇಶ
ಅಂಕಿ ಲೆಕ್ಕಕ್ಕೆ ಅವ ಬಳಸನು
ಗಣಕ ಯಂತ್ರ
ಬಳಕೆಗೆ ತಲೆ, ಕೈ-ಬೆರಳು ಮಾತ್ರ

ಸಾಲಗಾರರಿಗೆ ಸುಳ್ಳು ಹೇಳಿಸುವ
ಸಣ್ಣ ತಪ್ಪನು ಮಾಡಿಹನು
ಆದ ತಪ್ಪಿಗೆ ಎಷ್ಟೋ ಬಾರಿ
ನನ್ನೆದುರಲ್ಲೇ ಬಿಕ್ಕಿಹನು

ಅವನ ಮೀರಿದ ನನ್ನ ಎತ್ತರ
ತಲೆ ಬಾಗಿಸಲೆಂದೇ ಇರಬಹುದು
ಅವನ ಹೆಜ್ಜೆಯ ಹಿಂಬಾಲಿಕೆಯಲಿ
ಬದುಕಿನ ಪಾಠ ಕಲಿಬಹುದು !!

                                -- ರತ್ನಸುತ 

Comments

Popular posts from this blog

ಜೋಡಿ ಪದ

"ಪಾಸ್ವರ್ಡ್" - RESET ಆಗ್ತಿರ್ಲಿ ಆಗಾಗ!!!

ಗರುಡ ಪ್ರಯತ್ನ ೩