Wednesday 22 June 2016

ನಮ್ಮ ಸ್ವಗತ

ಮಳೆಯಲ್ಲಿ ನಿನ್ನ ನೆನೆದು ನೆನೆದು
ನೆನೆವುದನ್ನೇ ರೂಢಿಯಾಗಿಸಿಕೊಂಡ ಮನ
ನೀ ಹತ್ತಿರವಿದ್ದಾಗ ನಿರ್ಭಾವುಕ


ಎಲ್ಲ ಚಂಚಲತೆಗಳ ಪರಿಚಯವಿರುವ
ನಿನ್ನ ಅಂಗೈಯ್ಯ ಮೇಲೊಂದು ಸಾಲು ಗೀಚಿ
ಗುಟ್ಟಾಗಿ ಹಿಡಿದಿಟ್ಟುಕೋ ಅಂದಾಗ
ಅದೇನು ನಾಚಿಕೆ ನಿನ್ನ ಕಣ್ಣಲ್ಲಿ?!!


ನಿನ್ನೆದುರು ಯಾವ ಕವಿತೆಗಳೂ ಮೂಡದೆ
ನೀನೇ ಕವಿತೆಯೆಂದು ಬೀಗುವಾಗ
ಮಾಗಿದ ಮೋಡದಂತಾಗಿ ಕರಗಿಬಿಡುತ್ತೇನೆ
ಸಂಪೂರ್ಣವಾಗಿ ನಿನ್ನನ್ನಷ್ಟೇ ತೋಯ್ಸಿ


ಬಾ ಕೈ ಚಾಚು ಕೊಡೆಯೊಂದಿಗೆ
ಕಣ್ಣಮುಚ್ಚಾಲೆಯಾಟವಾಡೋಣ ಮಳೆಯೊಂದಿಗೆ
ಸೋತು ಗೆಲ್ಲುವ, ಗೆದ್ದು ಸೋಲುವ
ಎಲ್ಲ ಸ್ವಾದಗಳನ್ನೂ ಸವಿದಷ್ಟೆ ಸವಿಯಾಗಿ
ಸವೆಸಿಬಿಡೋಣ ಪುನರಾಗಮನದ ಆಕಾಂಕ್ಷಿಗಳಾಗಿ!!


ಮಳೆ ಎಷ್ಟು ಉತ್ಸಾಹಿಯಾಗಿದೆಯೆಂದರೆ
ನಮ್ಮ ಏಕಾಂತಕ್ಕೆ ವಿಘ್ನ ಹಾಡಲೆಂದೇ
ಉಪ್ಪರಿಗೆ ಮೇಲೆ ಸದ್ದು ಮಾಡಿದಂತೆ
ಅದಕ್ಕೇನು ತಿಳಿಯಬೇಕು ನಮ್ಮ ಸ್ವಗತ!!



                                               - ರತ್ನಸುತ

Sunday 19 June 2016

ಕೈ ಜೋಡಿಸು ಬಾ

ಇಷ್ಟು ದಿನ ನನಗಾಗಿ ಕಾದು
ನಾ ಎದುರುಗೊಂಡಾಗ ಕೈಗಳತ್ತ ಗಮನ?
ಖಾಲಿಯಾಗಿರುವೆ ಗೆಳತಿ
ನೀನೇ ನನ್ನ ತುಂಬಬೇಕು
ಪರಿಪೂರ್ಣವಾಗುವ ಸುಖ ಸಿಗಲೆನಗೆ
ಕೊಂಚವೂ ಬಿಡದಂತೆ ತಬ್ಬಿಕೋ!!



ಅಡುಗೆ ಕೋಣೆಯ ಒಲೆಯ ಹೊಗೆ
ನಿನ್ನ ಹಣೆಗಂಟಿದ ಮಸಿ
ಪಕ್ವವಾದ ಗಂಜಿಯ ಘಮ
ನನ್ನ ಎದುರು ನೋಡುತ್ತಿರುವ ತಣಿಗೆ
ಎಲ್ಲವೂ ಆಗಲೇ ಹೊಟ್ಟೆ ತುಂಬಿಸಿವೆ
ಇನ್ನು ಮನಸು ತುಂಬುವ ಕೆಲಸ!!



ಒಂದೂ ಮಾತನಾಡದಂತೆ ಸುಮ್ಮನಿರು
ಹೇಳಬೇಕನಿಸಿದವುಗಳಿಗೆಲ್ಲ ಕಾವು ಸಿಗಲಿ
ರೆಪ್ಪೆ ಬಡಿತಕ್ಕೂ ಅರ್ಥವಿರಲಿ
ಪ್ರತಿ ಚಲನವನ್ನೂ ಸೂಕ್ಷ್ಮವಾಗಿ ಪರಿಗಣಿಸೋಣ
ನಂತರ ಎಲ್ಲವನ್ನೂ ವಿಷ್ಲೇಶಿಸಿದರಾಯ್ತು



ಮನೆಯೆಲ್ಲ ಒಮ್ಮೆ ಸುತ್ತಿ ಬರುವೆ ತಾಳು
ನಿನ್ನ ಒಂಟಿತನವ ಗೇಲಿ ಮಾಡಿದವುಗಳಿಗೆ
ಪ್ರಶ್ನೆಗಳ ಮಳೆಗರೆದವುಗಳಿಗೆ ಉತ್ತರಿಸಬೇಕು
ಕನ್ನಡಿಗೊಂದು ಎಚ್ಚರಿಕೆ ನೀಡದ ಹೊರತು
ನಿನ್ನ ಪೀಡಿಸುತ್ತಲೇ ಇರುತ್ತದೆ!!



ನನ್ನ, ನಿನ್ನ ಚೌಕಟ್ಟಿನಲ್ಲಿ ಬಂಧಿಸಿದ
ತೂಗು ಚಿತ್ತಾರವ ಕೆಳಗಿಳಿಸಿದವರಾರು?
ಅಲ್ಲಲ್ಲಿ ಪಸೆ ಮೂಡಿಸಿದ ಕಣ್ಣು ನನ್ನವೇ?
ಎಷ್ಟು ಪೋಲು ಮಾಡುತೀ ಮಾರಾಯ್ತಿ!!
ಸಾಲದ್ದಕ್ಕೆ ನನ್ನ ಬೆವರಿಗೆ ಬೆಲೆ ಕಟ್ಟುವುದು ಬೇರೆ...



ದೂರವಾಗಿ ಹತ್ತಿರವಾಗುವಲ್ಲಿಯ ಸುಖ
ಅದರ ಹಿಂದಿನ ನೋವು
ಅಡ್ಡ ಪರಿಣಾಮಗಳಿಗೆಲ್ಲ ಅಂತ್ಯ ಹಾಡಬೇಕು;
ಬದುಕು ದೊಡ್ಡದು ನೋಡು,
ನಿನ್ನ ಪಡೆದು ಇನ್ನಷ್ಟು ದೊಡ್ಡದಾಗಿದೆ
ಇದ ಅಲಂಕರಿಸೋಕೆ ಎಷ್ಟು ಬದುಕಿದರೂ ಸಾಲದು...
ನಿಜವಾದ ಬದುಕಿಗೆ ಹವಣಿಸುತ್ತಿರುವೆ
ಬಾ, ಕಟ್ಟಿಕೊಳ್ಳುವಲ್ಲಿ ಕೈ ಜೋಡಿಸು!!

                                           
                                                    - ರತ್ನಸುತ

Thursday 16 June 2016

"ಫಿರ್ ಮಿಲೇಂಗೆ ಚಲ್ತೆ ಚಲ್ತೆ"

ಇಲ್ಲಿ ಯಾರೂ ಪರಿಚಿತರಲ್ಲ
ಆದರೂ ಎಲ್ಲರೂ ಕೈ ಕುಲುಕುತ್ತಾರೆ
ಸಿಕ್ಕಾಗ ನಕ್ಕು
ನಕ್ಕ ಕೂಡಲೆ ಮಾತಿಗಿಳಿಯುತ್ತಾರೆ
ಕಾಲು ಎಳೆಯುತ್ತಾರೆ
ತೀರ ಆಪ್ತರೆನ್ನುವಂತೆ ಭಾಸವಾಗುತ್ತಾರೆ!!


ಇಲ್ಲಿ ಯಾರನ್ನೂ ನಂಬುವಂತಿಲ್ಲ
ದೋಚಿಬಿಡುತ್ತಾರೆ ಎಲ್ಲವನ್ನೂ
ಇದ್ದ ಹೃದಯವನ್ನೂ..
ಇಲ್ಲಿ ಎಲ್ಲರೂ ಹತ್ತಿರದವರಂತೆ ನಟಿಸಿ
ಏನನ್ನೋ ಸಾಧಿಸುತ್ತಿದ್ದಾರೆ
ನನ್ನ ವಿಪರೀತ ಬಾದಿಸುತ್ತಿದ್ದಾರೆ!!


ಇಲ್ಲಿ ನೆನ್ನೆ ಕಂಡವರು ಇಂದಿಗಿಲ್ಲ
ಇಂದು ಕಂಡವರು ನಾಳೆಗೆ...
ಎರಗಿಬಿಡುತ್ತಾರೆ ಒಮ್ಮೆಗೆ ಮಾಯವಾಗಿ
ಒಮ್ಮೊಮ್ಮೆ ಪುರುಸೊತ್ತು ಗುತ್ತಿಗೆ ಪಡೆದವರಂತೆ
ಇನ್ನೊಮ್ಮೆ ಪ್ರಪಂಚವೇ ಹೆಗಲಿಗೇರಿಸಿಕೊಂಡವರಂತೆ..


ಇಲ್ಲಿ ನನ್ನವರಿಲ್ಲ ಅನ್ನುವಂತಿಲ್ಲ
ಎಲ್ಲರೂ ನನ್ನವರಲ್ಲ
ಏನೂ ತಿಳಿಯದವರ ತಿಳಿದು
ಹೆಚ್ಚು ತಿಳಿದವರನ್ನು ಮರೆತುಬಿಡಬೇಕು
ನನ್ನದಲ್ಲದ ಊರನ್ನು ನನ್ನದಾಗಿಸಿಕೊಂಡು
ಕೊನೆಗೆ ಬಿಟ್ಟಿರಲಾಗದ ಸ್ಥಿತಿ ಚಿಂತಾಜನಕ!!


"ಫಿರ್ ಮಿಲೇಂಗೆ ಚಲ್ತೆ ಚಲ್ತೆ" ಅಂತ ಹೇಳಿ
ಅಲ್ಲಿಗೆ ಸಣ್ಣ ಬಿರುಕೊಂದ ಮೂಡಿಸಬೇಕು
ಕ್ರಮೇಣ ಮುರಿದು ಬಿದ್ದ ಜಾಗದಲ್ಲೇ
ನನ್ನೂರಿನ ನೆನಪೊಂದ ಕಸಿ ಮಾಡಿ
ಅಲ್ಲಿ ಮೂಡುವ ಚಿಗುರ ಕಂಡು ಸಂಭ್ರಮಿಸಬೇಕು!!


ಹಸಿವು ನೀಗಿಸಿಕೊಳ್ಳಲು ನೂರು ದಾರಿ
ಆದರೆ ಅಮ್ಮ, ಮಡದಿ, ಸೋದರಿಯರು ಸೋಕಿದ ಗಂಜಿ
ಪ್ರಾಣದೊಟ್ಟಿಗೆ ನಂಟು ಬೆಸೆದಿರುತ್ತದೆಯಾದ್ದರಿಂದ
ಯಾವ ರೂಮ್ ಅಟೆಂಡರ್ ಸರ್ವಿಸ್ಸೂ ಅದ ತಲುಪಲಾರದು!!


ಗಗನ ಸಖಿಯರು ಎಲ್ಲಿಯವೆರೆಗೆ?
ಅವರಿಗೂ ಒಮ್ಮೆ ನಮಸ್ಕರಿಸಿ ಸಂಸ್ಕಾರವಂತರಾಗಿ
ಭೂ ಸ್ಪರ್ಶವಾದೊಡನೆ ಅನಿಸುವುದು
"ಮಳೆ ಬಿದ್ದು ಸುಮಾರು ಕಾಲ ಆದಂತಿದೆ"
ಇನ್ನೇನು ಬಂದೆನಲ್ಲ, ಎಲ್ಲವೂ ಸರಿಹೋಗುತ್ತೆ
ಅಥವ ಸರಿಹೋಗಬಹುದು?
ಅಥವ ಸರಿಪಡಿಸಬಹುದು!!


ಎದೆ ಭಾರ ಮೆಲ್ಲೆ ಹಗುರ...
ಉದುರಿದ ರೆಕ್ಕೆಯಷ್ಟೇ ತೆಳುವಾಗಿ
ಮನೆಯತ್ತ ಹೆಜ್ಜೆಯಿಡುತ್ತೇನೆ!!


                                      - ರತ್ನಸುತ

Friday 10 June 2016

ಇಬ್ಬರೂ ಒಂದೇ ಥರ

ಅಲ್ಲಿ ಮಳೆಯಂತೆ
ಹೌದಾ ಗೆಳತಿ?
ಇಲ್ಲಿ ಬಿಸಿಲೋ ಬಿಸಿಲು!!


ನೀ ಮಳೆ ನೀರಲ್ಲಿ ಬಿಟ್ಟ
ಕಾಗದದ ದೋಣಿ
ನನ್ನ ತಲುಪುವುದಾದರೂ ಹೇಗೆ?


ಅಕ್ಷರಶಃ ಮೌನದಲ್ಲಿ
ಏನನ್ನಾದರೂ ಹೇಳುವೆನು
ಗುಡುಗುವ ಮೊದಲೇ ಗಮ್ಯವಾಗು!!


ಗೆಳತಿ, ಮಳೆಗೆ ಸಿಲುಕದಿರು
ಜ್ವರದ ಶಮನಕ್ಕೆ ಅಪ್ಪುಗೆಯ ಬಿಸಿಯ
ದೂರದಿಂದ ನೀಡಬಲ್ಲ ತಂತ್ರಜ್ಞಾನ ಇನ್ನೂ ಆವಿಷ್ಕಾರಗೊಂಡಿಲ್ಲ!!


ಮಳೆಗೆ ಹೇಳಿಟ್ಟಿರು
ಕೊಂಚ ನಾ ಮರಳುವನಕ ಕಾಯಲಿ
ಜೊತೆಗೆ ನೆಂದು ಬಹಳ ದಿನಗಳಾದವು


ಗೆಳತಿ, ಮೇಲೆ ಕಾಮನಬಿಲ್ಲು ಮೂಡಿದರೆ
ಒಂದು ಫೋಟೋ ತಗೆದು ಕಳಿಸು
ಇಲ್ಲಿಯ ಆಕಾಶಕ್ಕೆ ಬಣ್ಣದ ಪರಿಚವಾಗಿಸಬೇಕಿದೆ!!


ನಾ ಇಲ್ಲಿ ಮಳೆಯ ನೆನಪಲ್ಲಿ ತೋಯ್ದೆ
ನೀ ಅಲ್ಲಿ ತೋಯ್ದ ಸ್ಥಿತಿಯಲ್ಲಿ ನೆನೆದೆ
ಇಬ್ಬರಲ್ಲೂ ಒಂದೇ ಜ್ವರ
ಇಬ್ಬರೂ ಒಂದೇ ಥರ!!


                                              - ರತ್ನಸುತ

Thursday 9 June 2016

ಬಂದೇ ಬರುತಾನೆ

ಬಾಗಿಲಂಚಲಿ ಮುಂಗಾರಿನಾಗಮನ
ಮನೆ ಬಿಟ್ಟು ಊರಾಚೆ ಉಳಿದೆ ನಾ
ಗಂಜಿ ಕಾಯಿಸಿದ ನಂಜಿ ಕಾದಳು ಇರುಳ
ಹಗಲು ಮೂಡುವಲ್ಲಿಗೆ ಕೊಂಚ ಹುಸಿ ನಿದ್ದೆ
ಕಣ್ಣರಳಿಸಿ ನೋಡುತಾಳೆ ಒಲೆಯತ್ತ
ತುಂಬಿದ ಗಡಿಗೆ ತುಂಬಿತ್ತು
ಅತ್ತ ಹೊಸಿಲಾಚೆ ಮಳೆಯೂ ನಿಂತಿತ್ತು


ಒಲೆಯ ಬಾಯಲಿ ನಿಲ್ಲದ ಧೂಪ
ನೀರು ಕಾದವು ಮತ್ತೆ ತಣ್ಣಗಾದವು
ಮೈಯ್ಯ ಹಿಂಡುವ ಬೆಂಕಿಯ ತ್ರಾಸ
ಮೈ ಮುರಿದು ನಕ್ಕ ಹಸಿ ಕನಸು
ಬೆಚ್ಚಗಿರಲೊಪ್ಪದ ಹುಚ್ಚು ಕಣ್ಣು
ಮುಚ್ಚುವುದು ಹಾಗೇ ತೆರೆವುದು
ಹಿಂದು-ಮುಂದಿಲ್ಲ ಮೂಡಿದ ಭ್ರಮೆಗಳಿಗೆ!!


ಸೊಲ್ಲು ಮೂಡುವುದೇ ದೂರಲು
ಪ್ರಾಮಾಣಿಕತೆಯ ಕೊರತೆಯೆದೆ ಅದಕೂ
ಬಿಟ್ಟು ಹೋದ ಹೆಜ್ಜೆ ಗುರುತು ಮಾಸಲಿಲ್ಲ
ಅದು ಬಿದ್ದ ಮಳೆಗೊಂದಿಷ್ಟು ಚೌಕಟ್ಟು
ಬೂಟು ಬೂಟಿನ ನಡುವೆ ಹೆಜ್ಜೆಯ ಅಂತರ
ಒರಟು ಬೂಟಿಗೆ ಎಲ್ಲಿ ಗೆಜ್ಜೆ ಕಂಪು

ಚಂದ್ರಿಕೆಯ ಮೊಗದಲ್ಲಿ ರವಿಯ ಛಾಪು

ನೆನ್ನೆ ಕೂಗಿದ ಕೋಗಿಲೆ ಇಂದೂ
ಹೂವೂ ಅರಳಿದವು ದುಂಬಿಗೆ ಕಾಯದೆ
ನೀರು ಸೇದುವ ಹಗ್ಗಕೆ ನೇಣು ಬಿಗಿದ
ಬಿಂದಿಗೆಯ ಪಾಲಿಗೂ ಹೊಸ ದಿನ
ಮುಂಬೆರಳ ಗೀರುತ್ತ ಗೋರಿ ಕಟ್ಟುತ್ತಿಹಳು
ನಂಜಿ ಸಂಜೆಗೆ ಮತ್ತೆ ಕಾಯುತ್ತ
ಕತ್ತಲಲ್ಲಾದರೂ ಬೆಳಕು ಕಾಣುತ್ತಾ?!!


ಇತ್ತ ನಿಲ್ಲದ ಬಿಕ್ಕಳಿಕೆಯಲ್ಲಿ ಸತ್ತವನ
ಮತ್ತೆ ಎಚ್ಚರಿಸುತ್ತಲಿತ್ತು ಅರೆ ಮೋಡ
ಇಲ್ಲರ್ಧ, ಅಲ್ಲರ್ಧ ಸುರಿದು ಮುಗಿಸುತಲಿತ್ತು
ನಡುವೆ ಬಂಜೆ ನೆಲಕೆ ದಣಿವು..
ಪಾದ ಸವೆದಿದೆ, ಕೈ ಬೆರಳುಗಳು ಮೊಗದಿ
ಕಣ್ಣೀರ ಕವಡೆಯಾಟದಿ ಸೋತಿರಲು
ಮರಳಿ ಬರಲಾಗದು ಕ್ಷಮಿಸು ನಲ್ಲೆ!!


ಎದುರುಗೊಂಡರೆ ಏನ ಕೊಡಲಿ?
ಹೆದರಿಕೊಳ್ಳುತ ಹೇಗೆ ಇರಲಿ?
ನೀ ಬಿಡಿಸಿದ ರಂಗೋಲಿಯೂ ನನ್ನನ್ನು
ದ್ವೇಷಿಸಲು ಎಲ್ಲಿ ಪಾರಾಗಲಿ?
ತಾಳು ಮುಗಿಯಲಿ ಮುಂಗಾರು
ಮತ್ತೆರಡು ಮಾಸ, ಇನ್ನೆರಡು ಇರುಳು
ಬರುವೆನಾದರೆ ಹೋದವನಂತೆ ಅಲ್ಲ
ಬದಲಾಗಿ ಬರುವ ನೀ ಕಾದ ನಲ್ಲ!!


                                  - ರತ್ನಸುತ

ದಣಿವಾರಿ ಕೊಳದಲಿ

ದಣಿವಾರಿ ಕೊಳದಲಿ  ಕೆಂದಾವರೆ ಅರಳಿದೆ  ಮುಗಿಲೇರಿ ಬರದಲಿ  ಹನಿಗೂಡಲು ಇಳಿದಿದೆ  ರವಿಕಾಂತಿ ಸವಿಯುತ  ಹರಳಂತೆ ಮಿನುಗುತಾ  ಬೆರಗಲ್ಲೇ ತಯಾರಿಯಾಗುತಿದೆ  ಮನದಂಗಳ ಮುಂಜಾನೆಯ...