Thursday, 16 June 2016

"ಫಿರ್ ಮಿಲೇಂಗೆ ಚಲ್ತೆ ಚಲ್ತೆ"

ಇಲ್ಲಿ ಯಾರೂ ಪರಿಚಿತರಲ್ಲ
ಆದರೂ ಎಲ್ಲರೂ ಕೈ ಕುಲುಕುತ್ತಾರೆ
ಸಿಕ್ಕಾಗ ನಕ್ಕು
ನಕ್ಕ ಕೂಡಲೆ ಮಾತಿಗಿಳಿಯುತ್ತಾರೆ
ಕಾಲು ಎಳೆಯುತ್ತಾರೆ
ತೀರ ಆಪ್ತರೆನ್ನುವಂತೆ ಭಾಸವಾಗುತ್ತಾರೆ!!


ಇಲ್ಲಿ ಯಾರನ್ನೂ ನಂಬುವಂತಿಲ್ಲ
ದೋಚಿಬಿಡುತ್ತಾರೆ ಎಲ್ಲವನ್ನೂ
ಇದ್ದ ಹೃದಯವನ್ನೂ..
ಇಲ್ಲಿ ಎಲ್ಲರೂ ಹತ್ತಿರದವರಂತೆ ನಟಿಸಿ
ಏನನ್ನೋ ಸಾಧಿಸುತ್ತಿದ್ದಾರೆ
ನನ್ನ ವಿಪರೀತ ಬಾದಿಸುತ್ತಿದ್ದಾರೆ!!


ಇಲ್ಲಿ ನೆನ್ನೆ ಕಂಡವರು ಇಂದಿಗಿಲ್ಲ
ಇಂದು ಕಂಡವರು ನಾಳೆಗೆ...
ಎರಗಿಬಿಡುತ್ತಾರೆ ಒಮ್ಮೆಗೆ ಮಾಯವಾಗಿ
ಒಮ್ಮೊಮ್ಮೆ ಪುರುಸೊತ್ತು ಗುತ್ತಿಗೆ ಪಡೆದವರಂತೆ
ಇನ್ನೊಮ್ಮೆ ಪ್ರಪಂಚವೇ ಹೆಗಲಿಗೇರಿಸಿಕೊಂಡವರಂತೆ..


ಇಲ್ಲಿ ನನ್ನವರಿಲ್ಲ ಅನ್ನುವಂತಿಲ್ಲ
ಎಲ್ಲರೂ ನನ್ನವರಲ್ಲ
ಏನೂ ತಿಳಿಯದವರ ತಿಳಿದು
ಹೆಚ್ಚು ತಿಳಿದವರನ್ನು ಮರೆತುಬಿಡಬೇಕು
ನನ್ನದಲ್ಲದ ಊರನ್ನು ನನ್ನದಾಗಿಸಿಕೊಂಡು
ಕೊನೆಗೆ ಬಿಟ್ಟಿರಲಾಗದ ಸ್ಥಿತಿ ಚಿಂತಾಜನಕ!!


"ಫಿರ್ ಮಿಲೇಂಗೆ ಚಲ್ತೆ ಚಲ್ತೆ" ಅಂತ ಹೇಳಿ
ಅಲ್ಲಿಗೆ ಸಣ್ಣ ಬಿರುಕೊಂದ ಮೂಡಿಸಬೇಕು
ಕ್ರಮೇಣ ಮುರಿದು ಬಿದ್ದ ಜಾಗದಲ್ಲೇ
ನನ್ನೂರಿನ ನೆನಪೊಂದ ಕಸಿ ಮಾಡಿ
ಅಲ್ಲಿ ಮೂಡುವ ಚಿಗುರ ಕಂಡು ಸಂಭ್ರಮಿಸಬೇಕು!!


ಹಸಿವು ನೀಗಿಸಿಕೊಳ್ಳಲು ನೂರು ದಾರಿ
ಆದರೆ ಅಮ್ಮ, ಮಡದಿ, ಸೋದರಿಯರು ಸೋಕಿದ ಗಂಜಿ
ಪ್ರಾಣದೊಟ್ಟಿಗೆ ನಂಟು ಬೆಸೆದಿರುತ್ತದೆಯಾದ್ದರಿಂದ
ಯಾವ ರೂಮ್ ಅಟೆಂಡರ್ ಸರ್ವಿಸ್ಸೂ ಅದ ತಲುಪಲಾರದು!!


ಗಗನ ಸಖಿಯರು ಎಲ್ಲಿಯವೆರೆಗೆ?
ಅವರಿಗೂ ಒಮ್ಮೆ ನಮಸ್ಕರಿಸಿ ಸಂಸ್ಕಾರವಂತರಾಗಿ
ಭೂ ಸ್ಪರ್ಶವಾದೊಡನೆ ಅನಿಸುವುದು
"ಮಳೆ ಬಿದ್ದು ಸುಮಾರು ಕಾಲ ಆದಂತಿದೆ"
ಇನ್ನೇನು ಬಂದೆನಲ್ಲ, ಎಲ್ಲವೂ ಸರಿಹೋಗುತ್ತೆ
ಅಥವ ಸರಿಹೋಗಬಹುದು?
ಅಥವ ಸರಿಪಡಿಸಬಹುದು!!


ಎದೆ ಭಾರ ಮೆಲ್ಲೆ ಹಗುರ...
ಉದುರಿದ ರೆಕ್ಕೆಯಷ್ಟೇ ತೆಳುವಾಗಿ
ಮನೆಯತ್ತ ಹೆಜ್ಜೆಯಿಡುತ್ತೇನೆ!!


                                      - ರತ್ನಸುತ

No comments:

Post a Comment

ದಣಿವಾರಿ ಕೊಳದಲಿ

ದಣಿವಾರಿ ಕೊಳದಲಿ  ಕೆಂದಾವರೆ ಅರಳಿದೆ  ಮುಗಿಲೇರಿ ಬರದಲಿ  ಹನಿಗೂಡಲು ಇಳಿದಿದೆ  ರವಿಕಾಂತಿ ಸವಿಯುತ  ಹರಳಂತೆ ಮಿನುಗುತಾ  ಬೆರಗಲ್ಲೇ ತಯಾರಿಯಾಗುತಿದೆ  ಮನದಂಗಳ ಮುಂಜಾನೆಯ...