Sunday 19 June 2016

ಕೈ ಜೋಡಿಸು ಬಾ

ಇಷ್ಟು ದಿನ ನನಗಾಗಿ ಕಾದು
ನಾ ಎದುರುಗೊಂಡಾಗ ಕೈಗಳತ್ತ ಗಮನ?
ಖಾಲಿಯಾಗಿರುವೆ ಗೆಳತಿ
ನೀನೇ ನನ್ನ ತುಂಬಬೇಕು
ಪರಿಪೂರ್ಣವಾಗುವ ಸುಖ ಸಿಗಲೆನಗೆ
ಕೊಂಚವೂ ಬಿಡದಂತೆ ತಬ್ಬಿಕೋ!!



ಅಡುಗೆ ಕೋಣೆಯ ಒಲೆಯ ಹೊಗೆ
ನಿನ್ನ ಹಣೆಗಂಟಿದ ಮಸಿ
ಪಕ್ವವಾದ ಗಂಜಿಯ ಘಮ
ನನ್ನ ಎದುರು ನೋಡುತ್ತಿರುವ ತಣಿಗೆ
ಎಲ್ಲವೂ ಆಗಲೇ ಹೊಟ್ಟೆ ತುಂಬಿಸಿವೆ
ಇನ್ನು ಮನಸು ತುಂಬುವ ಕೆಲಸ!!



ಒಂದೂ ಮಾತನಾಡದಂತೆ ಸುಮ್ಮನಿರು
ಹೇಳಬೇಕನಿಸಿದವುಗಳಿಗೆಲ್ಲ ಕಾವು ಸಿಗಲಿ
ರೆಪ್ಪೆ ಬಡಿತಕ್ಕೂ ಅರ್ಥವಿರಲಿ
ಪ್ರತಿ ಚಲನವನ್ನೂ ಸೂಕ್ಷ್ಮವಾಗಿ ಪರಿಗಣಿಸೋಣ
ನಂತರ ಎಲ್ಲವನ್ನೂ ವಿಷ್ಲೇಶಿಸಿದರಾಯ್ತು



ಮನೆಯೆಲ್ಲ ಒಮ್ಮೆ ಸುತ್ತಿ ಬರುವೆ ತಾಳು
ನಿನ್ನ ಒಂಟಿತನವ ಗೇಲಿ ಮಾಡಿದವುಗಳಿಗೆ
ಪ್ರಶ್ನೆಗಳ ಮಳೆಗರೆದವುಗಳಿಗೆ ಉತ್ತರಿಸಬೇಕು
ಕನ್ನಡಿಗೊಂದು ಎಚ್ಚರಿಕೆ ನೀಡದ ಹೊರತು
ನಿನ್ನ ಪೀಡಿಸುತ್ತಲೇ ಇರುತ್ತದೆ!!



ನನ್ನ, ನಿನ್ನ ಚೌಕಟ್ಟಿನಲ್ಲಿ ಬಂಧಿಸಿದ
ತೂಗು ಚಿತ್ತಾರವ ಕೆಳಗಿಳಿಸಿದವರಾರು?
ಅಲ್ಲಲ್ಲಿ ಪಸೆ ಮೂಡಿಸಿದ ಕಣ್ಣು ನನ್ನವೇ?
ಎಷ್ಟು ಪೋಲು ಮಾಡುತೀ ಮಾರಾಯ್ತಿ!!
ಸಾಲದ್ದಕ್ಕೆ ನನ್ನ ಬೆವರಿಗೆ ಬೆಲೆ ಕಟ್ಟುವುದು ಬೇರೆ...



ದೂರವಾಗಿ ಹತ್ತಿರವಾಗುವಲ್ಲಿಯ ಸುಖ
ಅದರ ಹಿಂದಿನ ನೋವು
ಅಡ್ಡ ಪರಿಣಾಮಗಳಿಗೆಲ್ಲ ಅಂತ್ಯ ಹಾಡಬೇಕು;
ಬದುಕು ದೊಡ್ಡದು ನೋಡು,
ನಿನ್ನ ಪಡೆದು ಇನ್ನಷ್ಟು ದೊಡ್ಡದಾಗಿದೆ
ಇದ ಅಲಂಕರಿಸೋಕೆ ಎಷ್ಟು ಬದುಕಿದರೂ ಸಾಲದು...
ನಿಜವಾದ ಬದುಕಿಗೆ ಹವಣಿಸುತ್ತಿರುವೆ
ಬಾ, ಕಟ್ಟಿಕೊಳ್ಳುವಲ್ಲಿ ಕೈ ಜೋಡಿಸು!!

                                           
                                                    - ರತ್ನಸುತ

No comments:

Post a Comment

ದಣಿವಾರಿ ಕೊಳದಲಿ

ದಣಿವಾರಿ ಕೊಳದಲಿ  ಕೆಂದಾವರೆ ಅರಳಿದೆ  ಮುಗಿಲೇರಿ ಬರದಲಿ  ಹನಿಗೂಡಲು ಇಳಿದಿದೆ  ರವಿಕಾಂತಿ ಸವಿಯುತ  ಹರಳಂತೆ ಮಿನುಗುತಾ  ಬೆರಗಲ್ಲೇ ತಯಾರಿಯಾಗುತಿದೆ  ಮನದಂಗಳ ಮುಂಜಾನೆಯ...