Tuesday 30 July 2013

ಹೀಗೊಂದು ಹಂಸ ಕೊಳ!!

















ಸೂಜಿ ಕಣ್ಣಿನ ನೋಟ
ಮಂಜು ಪರದೆಯ ಆಟ
ಕುಂಚವ ನಾಚಿಸುವ ಬೆರಳಿನಂಚು
ಕಂಚು ಕಂಠದ ಕೂಗು
ಕೊಂಚ ಅರಳಿದ ಮೊಗ್ಗು
ಸ್ವಚ್ಛ ಹಾಳೆಯ ಮುಖದ ಗಲ್ಲ ಮಚ್ಚೆ

ಜೇನು ಸಕ್ಕರೆ ನಗೆಯ
ಮಿಂಚು ಮೂಡಿಸೋ ನಡೆಯ
ಕೊಂಚ ಕೊಂಚವೇ ಹೊಂಚು ಹೂಡಿ ದೋಚಿ
ದಣಿವು ಎಂಬುದ ಮರೆತು
ತಣಿಯೆ ನಿಂತಿದೆ ಮನವು
ರಮ್ಯ ಮಾತಿನ ಮರೆಯ ಮೌನ ಮೆಚ್ಚಿ

ಕುರುಳು ಮೋಡದ ಸಾಲು
ಹೆಣೆದ ಜಡೆಯ ಬಾಲ
ಬೀಸು ಚಾಟಿಯ ಏಟು ಕಾಮನೆಗಳಿಗೆ
ಇಷ್ಟವಾಗಿಸೋ ಮುನಿಸು
ಸ್ಪಷ್ಟ ನುಡಿಯ ವರಸೆ
ಪ್ರೇಮ ಗಂಗೆಯ ಹರಿವು ಹೃದಯದೊಳಗೆ

ಕುತ್ತಿಗೆಯ ಇಳಿಜಾರು
ರಹದಾರಿಯೆದೆಯೆಡೆಗೆ
ನನ್ನೆಲ್ಲಾ ಕನಸುಗಳ ಬೆಚ್ಚಗಿರಿಸೆ
ಹಠದ ಕೊನೆಯಲ್ಲೊಂದು
ಬಿಟ್ಟು ಕೊಡುವ ಗುಣ
ನನ್ನೆಲ್ಲಾ ತುಂಟತನಗಳನು ಸಹಿಸೆ

ಶಾಂತ ಚಿತ್ತದ ಕೊಳದಿ
ಹಂಸ ಎಬ್ಬಿಸಿದಲೆಗೆ
ಅಂತರಂಗ ತರಂಗಗಳಿಗೆ ನಿತ್ಯ ಪುಳಕ
ನಿಲ್ಲದಾ ಪ್ರೇಮ ಸುಧೆ
ಹರಿಸಿದಳು  ಬಾಳಲಿ
ಸ್ವರ್ಗವಾಸಿ ನಾನು ಒದಗಿದರೂ ನರಕ

                                 --ರತ್ನಸುತ

Monday 29 July 2013

ತೊಟ್ಟು ಹನಿಗಳು !!

ರಣರಂಗದಲ್ಲಿ
ಮರಣ ಮೃದಂಗ ಬಾರಿಸುತ್ತಿದ್ದವನ
ಕಣ್ಣಿಂದ ಜಾರಿದ ಕಂಬನಿ
ಕೊನೆ ಉಸಿರೆಳೆಯುತ್ತಿದ್ದ ಸೈನಿಕನ ಪಾಲಿಗೆ
ಗಂಗಾ ಜಲವಾಯಿತು
****
ಅಂದು
ರಾಜ್ಯ ಹಾಳಾಗಲು ರಾಜ ಕಾರಣ
ಇಂದು
ರಾಜಕಾರಣ
****
ಇಗೋ-ಅಗೋ ಎಂದು
ಸತಾಯಿಸುವ ಮಳೆಗಿಂತ
ನಿಗದಿತ ಸಮಯವಿರದಿದ್ದರೂ
ದಿನಕ್ಕೊಮ್ಮೆಯಾದರೂ ಬಂದೇ ಬರುವುದೆಂಬ
ನಂಬಿಕೆ ಉಳಿಸಿಕೊಂಡಿದ್ದ ಖಾಸಗಿ ಬಸ್ಸು ಲೇಸು
****
ಅಲೆಗಳೆದ್ದು
ಕಡಲಿನೊಳಗೆ ಮತ್ತೆ ಬಿದ್ದವು
ಕಡಲ ಮಡಿಲ ನೌಕೆ ಮೇಲೆ
ತೀರ ತಲುಪಲೆಂದು
****
ಮಂಡಿ ಊರಿದಾಗ
ಬೆನ್ನು ಬಾಗಿದಾಗ
ಒಡಲ ಹಾಸಿದಾಗ
ದೇವರಿಗೆ ಕಾಣಸಿಗುವುದು
ಬೆನ್ನ ಹಿಂದಿನ ಗುಟ್ಟು
ಮುಖವಾಡ ಬರೇ
ಬಣ್ಣದ ರಟ್ಟು

            --ರತ್ನಸುತ

Wednesday 24 July 2013

ಶ್!!!

ಬಲ್ಲವನು ಹನಿ
ಬಲವಿಲ್ಲದವರು ಸಾಗರ
ಉಳ್ಳವನು ಧಣಿ
ಉಳಿಯಲಾಗದವರು ಸಾವಿರ
ಉರಿದವನೇ ದೀಪ
ಸುತ್ತ ಕರಗಿದವರು ಹಲವರು
ಹಸಿದವನೇ ಹುಲಿ
ಬೇಟೆ ಬಲಿಪಶುಗಳು ಕೆಲವರು

ಅಲೆಮಾರಿಯ ಹಾಡು-ಪಾಡು

ಕಥೆಯೊಳಗೆ ಉಪಕಥೆಗಳಾಗಿ
ಕವಿತೆ ಹುಟ್ಟ ಬಹುದು
ಬರೆದುಕೊಳ್ಳದೆಯೇ ಅವು
ಕಥೆಯೊಳಗೇ ಉಳಿಯ ಬಹುದು
ಹುಟ್ಟಿನಲ್ಲೇ ಸತ್ತ ಕವಿತೆಗಳಿಗೆ
ಇಟ್ಟ ಹೆಸರು ವ್ಯರ್ಥ
ಇಡದ ಹೆಸರಿನೊಡನೆ ಉಳಿದವೇ
ಬದುಕಿಗರ್ಥ

ಸಾಲಾಗಿ ಸುಲಿದ ಅಕ್ಷರಗಳ
ಹೊಸ ಅವತಾರ
ನೆನ್ನೆ ಪೆಚ್ಚು ಮೋರೆ ಹೊತ್ತವು
ನಡೆಸಿದಂತಿವೆ ಹುನ್ನಾರ
ಅದೇ ತಂಗಲು ಇಂದು
ಹೊಸ ರುಚಿ ಕೊಟ್ಟವು
ರುಚಿಸಬಹುದೆಂಬವುಗಳೆ
ಕೈ ಕೊಟ್ಟವು

ಗುರುತಿಗೆಂದೇ ಗುರಿಯಿಟ್ಟು
ತಪ್ಪಿದ ಗುರಿ ಗುರುತಾಗಿ
ಮಾಡಿಕೊಂಡ ಅವಾಂತರದೆಡೆ
ಗುರಿ ಮಾಡದ ನೋಟ
ಮೂಗಿನ ನೇರಕ್ಕೆ ನಡೆದು
ಹಳ್ಳಕೆ ಮುಗ್ಗರಿಸಿರಲು
ಪಾಠಗಳ ಪರಿಶೀಲಿಸಬೇಕೆಂದು
ಕಲಿತೆ ಪಾಠ

ಮರ್ಮಗಳ ಬೇಧಿಸದೆ
ಕರ್ಮವೆಂದು ಸುಮ್ಮನಾ-
-ದವುಗಳಿಗೆ ಹೆಸರಿಡಲು
ಒಲ್ಲೆ ಎಂದ ಮನಸು
ಹಸಿವಿರದೇ ತುರುಕಿಕೊಂಡು
ಅಜೀರ್ಣಕೆ ಕಕ್ಕಿಕೊಂಡ
ಅತಿ ಆಸೆಯ ಒತ್ತಾಯದ
ತುತ್ತಲ್ಲವೇ ತಿನಿಸು ?!!

ನಿಂತಲ್ಲೇ ನೀರಾಗಿ
ಕೊಳೆತ ಬುಡ ಬೇರಾಗಿ
ರೆಂಬೆ ಬುಜಗಳ ಹೊರದೆ
ನಂಟುಗಳು ಮುರಿದು ಬಿದ್ದು
ಹೆಮ್ಮರದ ಬದುಕಿಗೆ
ಮುಂಬರುವ ಮಿಂಚನ್ನು
ಎದುರಿಸೋ ಛಲವಿರದಿರುವುದೇ
ಪ್ರಾಣ ಹೀರೋ ಮದ್ದು

ಮೊಳೆಗೆ ಸಿಕ್ಕರೂ ಕಾಸು 
ಹೊಸಲು ದಾಟದ ಹೊರತು
ಬೆಲೆ ಇಹುದು ಅದಕೆ
ನಿತ್ಯ ಪೂಜೆ ನಮಸ್ಕಾರ
ಜೇಬಿನಲಿ ಜಣಗುಡುವ
ಕಾಂಚಾಣದ ಪಾಲಿಗೆ
ಬಯಕೆ ತೀರಿಸಿಕೊಳುವ
ಸಲುವೇ ಬಹಿಷ್ಕಾರ

ಉಳಿವುದಾದರೆ ಉಳಿಯುವ
ಉಣಸೇ ಮರದಂತೆ
ಇದ್ದಷ್ಟೂ ದಿನ ಉಳಿಗೆ
ಉಳಿ ಸೋಕದಂತೆ
ಉಳ್ಳವರಿಗೂ ಒಲಿದು
ಇಲ್ಲದವರಿಗೂ ಒಲಿದು
ಬಿದ್ದು ಹೋಗುವ ಮರಕೆ
ಉಂಟೇನು ಚಿಂತೆ ?!!

ಮೀನಿಗೆ ಮಂಚವೆಕೆ ?
ಬಾನಿಗೆ ಕುಂಚವೆಕೆ ?
ಅವರವರು ಪಡೆವುದೇ
ಅವರವರ ಪಾಡು
ಎಲ್ಲೋ ಮೊದಲಾಗಿ
ಇನ್ನೆಲ್ಲೋ ಕೊನೆಗೊಳ್ಳುವುದು
ಹೀಗೇ ಇರಬೇಕಲ್ಲವೇ 
ಅಲೆಮಾರಿಯ ಹಾಡು ??

                      --ರತ್ನಸುತ

Tuesday 23 July 2013

ಇದ್ದಲಾಟ























ಕಿಡಿ ಸೋಕಿ ಹಸಿದ ಇದ್ದಲ 
ಒಡಲ ಚಡಪಡಿಕೆ 
ಮೆಲ್ಲ ಸವರಿದ ತಿಳಿ ಗಾಳಿ 
ಬೆಂಬಲ ಅದಕೆ 
ಹಸಿವು ನೀಗಿದವೂ ಕೂಡ 
ಜೊತೆಯಾದವು ಅಲ್ಲಿ 
ತೇಗುತ ಸಿಡಿದು 
ಕಿಡಿ ಹನಿಗಳ ಚಿಮ್ಮಿಸಿ 

ಕೃಷ್ಣ ಸುಂದರಿ ತನ್ನ 
ಇನಿಯನೆದೆಗೆ ಒರಗಿ 
ಶೃಂಗಾರವನ್ನಾಲಿಸಿರುವಂತೆ
ಭಾಸ 
ಎದೆ ಬಿರಿದು ಕೆಂಪಾಗಿ 
ಕಪ್ಪು ಗಲ್ಲಕೆ ಮೆತ್ತಿ 
ಸುಂದರಿಯ ನಾಚಿಸಿದಂತಿತ್ತು 
ಆ ಸರಸ 

ಸಂಜೆ ನಡುಕಕೆ ಹೆದರಿ
ಅಗ್ನಿ ಚಾದರ ಹೊದಿಕೆ 
ಶಾಖ ಸ್ಪರ್ಶಕೆ ಉಬ್ಬಿ 
ತುಂಡಾದ ರವಿಕೆ 
ಬಿರುಕು ಬಿಟ್ಟಲ್ಲೆಲ್ಲಾ 
ಜ್ವಾಲೆಯ ಮುತ್ತಿಗೆ 
ಆಗ ಸುತ್ತಲೂ ಆವರಿಸಿತು
ಬಿರು ಬೇಸಿಗೆ 

ಹಬ್ಬದಬ್ಬರ ಅಲ್ಲಿ 
ಒಬ್ಬೊಬ್ಬರಾಗಿ 
ಬೆಂದು ಉಗಿದರು ಕೆಂಡ 
ಮಂಡಲದ ಒಳಗೆ 
ಬಂಢರಲ್ಲಿನ ಬಂರೂ
ಅಡಿಗೆ ಸಿಲುಕಿದರು 
ಬುಗ್ಗೆಯಾಗಲು ಕಾದು 
ಸಣ್ಣ ಕೆದಕುವಿಕೆಗೆ

ತ್ರಾಣವೆಲ್ಲವ ತೀಡಿ 
ಪ್ರಾಣವಾಗಿವೆ ಮೇಲೆ 
ಭೂದಿ ಪರದೆಯ ಅಡಿಗೆ 
ಅವಿತು ಉರಿದು 
ಜಲ ಸೋಕಲು 
ರಾಗದಲೆ ಮುಕ್ತಿ ಸಿದ್ಧಿ
ವೇಷ ಕಳಚಿ 
ಮೂಲ ರೂಪವನು ಪಡೆದು 

                   --ರತ್ನಸುತ 

Monday 22 July 2013

ದೇವರ ಆಟ !!!

ನನ್ನ ಜೀವನದ ಮಹತ್ತರ ಕ್ಷಣ. ಬಹಳ ದಿನಗಳ ಕನಸು ನನಸಾಗಿತ್ತು. "ಹೌದು" ನಾನೂ ಕಾರಿನ ಮಾಲಿಕನಾಗಿದ್ದೆ.

ನಾನು ಬೆಳೆದಿದ್ದೆಲ್ಲಾ ಅತ್ತೆ ಮಾವನ ಹಂಗಿನಲ್ಲೇ, ಅವರೇ ನನ್ನ ಸಾಕು ತಾಯಿ ತಂದೆ ಅಂದರೆ ತಪ್ಪಲ್ಲಾ .

ಕಾರು ಕೊಂಡ ಮರು ದಿನವೇ ನನ್ನ ತಂದೆಯೊಂದಿಗೆ ಮಾವನ ಮನೆಗೆ ಹೊರಟೆ .
ಹಿಂದಿನಿಂದಲೂ ಮಾವ ಹೇಳುತ್ತಿದ್ದರು "ನೀನು ಕಾರ್ ಕೊಂಡಾಗ ನನ್ನ ಒಂದು ರೌಂಡ್ ಹಾಕ್ಸ್ತೀಯೇನೋ?!!" ಅಂತ, ಆ ಕ್ಷಣ ಕೊನೆಗೂ ಬಂದಿತ್ತು .


ಬಾಗಿಲು ಬಡಿದೆ, ಅತ್ತೆ ಬಾಗಿಲು ತೆರೆ
ದ್ಲು. ಆಗೆಷ್ಟೇ ಎಲ್ಲಾ ಕೆಲಸ ಮುಗಿಸಿ ಸುಸ್ತಾದಂತೆ ಕಾಣ್ತಿದ್ದಿದ್ರಿಂದ ತೊಂದ್ರೆ ಯಾಕ್ ಕೊಡೋದು ಅಂತ  ಕಾಫಿ-ಗೇಫಿ ಬೇಡ ಅಂದ್ವಿ.

"ಮಾವ ಎಲ್ಲಿ?" ನಾ ಕೇಳಿದೆ
"ಒಳಗೆ ರೂಂ ಅಲ್ಲಿ ಮಲಗಿದ್ದಾರೆ, ನೆನ್ನೆಯಿಂದ ಸ್ವಲ್ಪ ಗ್ಯಾಸ್ ತ್ರಬಲ್ಲು, ಡಾಕ್ಟರ ಕಡೆ ತೋರ್ಸಿದ್ದಾಯ್ತು, ಈಗಷ್ಟೇ ಮಲಗಿದ್ರು" ಅಂದ್ಲು ಅತ್ತೆ.
ಮಾತಾಡ್ಸೋಣ ಅಂತ ರೂಂ ಬಾಗಿಲು ತೆರೆದೆ. ಆಯಾಸದಲ್ಲಿ ಮಲಗಿದ್ದವರ ಕಂಡು ಎಚ್ಚರಿಸುವ ಮನಸಾಗದೆ ಹಿಂದಿರುಗಿದೆ.


ಇನ್ನೇನು ಹೊರಡೋ ಸಮಯ. 

"ಮಾವ ಏಳೋ ತನ್ಕ ತಾಳೋ" ಅಂದ್ಲು ಅತ್ತೆ.
"ಹೊಸ ಕಾರು,ನಂಗೂ ಅಷ್ಟಾಗಿ ಓಡಿಸಿ ಅಭ್ಯಾಸ ಇಲ್ಲಾ, ಅದ್ಕೆ ಬೇಗ ಬೆಳ್ಕಿದ್ದಂಗೇ ಮನಗೆ ಹೋಗ್ಬೇಕು" ಅಂದೆ, ಅಪ್ಪ ಕೂಡ ತಲೆ ಆಡ್ಸಿದ್ರು.


ದಾರಿಯಲ್ಲೇ ದೊಡ್ಡಮ್ಮನ ಮನೆ, ಅವರನ್ನೂ ಮಾತಾಡಿಸುವ ಅಂತ ಅವರ ಮನೆಗೆ ಹೋಗಿ ಇನ್ನೇನು ಐದು ನಿಮಿಷ ಆಗಿತ್ತು ಅಷ್ಟೇ. ಅತ್ತೆ ಕಡೆಯಿಂದ ಕರೆ ಬಂತು.
ಅತ್ತೆ ಗಾಬರಿ ಆಗಿದ್ಲು. "ನಿನ್ ಮಾವ ಹೆಂಗೆಂಗೋ ಆಡ್ತಿದಾರೆ, ಬೇಗ ಬಾ" ಅಂತ ಲೈನ್ ಕಟ್ ಮಾಡಿದ್ಲು.
ನನಗೂ ಗಾಬರಿಯಾರಿ ಅಪ್ಪನಿಗೆ ವಿಷಯ ತಿಳಿಸಿದೆ.
ನನ್ನ ದೊಡ್ಡಮ್ಮನ ಮಗ "ನೀನು ಕಾರ್ ಓಡಿಸುವುದು ಬೇಡ" ಅಂತ ಹೇಳಿ ತಾನೇ ಡ್ರೈವ್ ಮಾಡ್ದ.


ಮನೆ ತಲುಪುವಷ್ಟರಲ್ಲಿ ಮಾವ ವಿಲಿ-ವಿಲಿ ಒದ್ದಾಡ್ತಿದ್ರು, ಎದೆ ಹಿಡ್ಕೊಂಡು ಚೀರಾಡ್ತಿದ್ರು.
ಬೇಗ ಆಸ್ಪತ್ರೆಗೆ ಕರೆದೊಯ್ಯುವ ಅಂತ ಮಾವನನ್ನ ಹಿಂದಿನ ಸೀಟಲ್ಲಿ ನನ್ನ ಹೆಗಲಿಗೆ ಒರಗಿಸಿ ಕೂರ್ಸಿದ್ರು.
ನಾನು ಆಗಾಗ ಅವರನ್ನ ತಟ್ಟಿ ಮಾತಾಡಿಸುವ ಪ್ರಯತ್ನ ಪಡ್ತಿದ್ದೆ, ಹತ್ತು ಬಾರಿ ಕೂಗಿದ್ರೆ ಒಮ್ಮೆ "ಆ" ಅಂತ ಅಂತಿದ್ರು .


ಆಸ್ಪತ್ರೆ ಬಂತು, ಸ್ಟ್ರೆಚ್ಚೆರ್ ಮೇಲೆ ಮಾವನನ್ನ ಎಮರ್ಜೆನ್ಸಿ ವಾರ್ಡ್ ಗೆ ಸಾಗಿಸಲಾಯ್ತು.
ಆ ಹೊತ್ತಿಗಾಗ್ಲೇ ಒದ್ದಾಟ ಜೋರಾಗಿತ್ತು.
ಡಾಕ್ಟರ, "ಕೈ ಕಾಲು ಹಿಡಿದುಕೊಳ್ಳಿ" ಅಂದ್ರು
ನಾನು ಕಾಲುಗಳನ್ನ ಹಿಡಿದೆ. ಅಪ್ಪ, ಅಣ್ಣ ಕೈ ಹಿಡ್ಕೊಂಡ್ರು.
ಡಾಕ್ಟರ್: "ಸ್ಮೋಕ್ ಮಾಡ್ತಿದ್ರ ಇವ್ರು?" ಇಂಜೆಕ್ಷನ್ ಅಲ್ಲಿ ಔಷದಿ ತುಂಬಿಸ್ಕೊಳ್ತಾ ಕೆಲಿದ್ರು.
ಹೌದು ಅಂದೆ.
ಸೂಜಿ ಚುಚ್ಚುತ್ತಲೇ ಮಾವ ಕೈ ಒದರಿದ್ರು, ರಕ್ತ ಛಲ್ಲಂತ ಚಿಮ್ಮಿತ್ತು, ಒದ್ದಾಟ ಇನ್ನೂ ಜೊರಾಯ್ತು.
ಡಾಕ್ಟರ "ಸ್ವಲ್ಪ ಎಲ್ರೂ ಹೊರಗಡೆ ಇರಿ" ಅಂದ್ರು 


ನಂಗೆ ಎದೆಯುಸಿರು ಶುರುವಾಯ್ತು. ಅಪ್ಪ ನನ್ನ ಸಮಾದಾನ ಪಡ್ಸಿದ್ರು.


ಹತ್ತು ನಿಮಿಷ ಕಳೆದು ಹೊರ ಬಂದ ಡಾಕ್ಟರ್ "ಅಮ್ ಸಾರೀ" ಅಂತ ಹೇಳಿ ಹೊರ್ಟೋದ್ರು.


ಆ ವೇಳೆಗೆ--


ಅಪ್ಪಳಿಸಿದ ಧಟ್ಟ ಅಲೆ
ಉಸಿರಾಟಕೆಡೆಗೊಡುತ್ತಿದ್ದಂತೆಯೇ
ಮತ್ತೊಂದಲೆ ಎದ್ದಿತ್ತು


ಒರೆಸುವ ಮುನ್ನವೇ
ಹಿಂದೆ ಸಾಲುಟ್ಟಿ

ಕಣ್ಣ ಹನಿ ಉಕ್ಕಿತ್ತು


ಚೀರಾಡುವ ಕೊರಳು
ನೋವ ಮೀರಿಸಲಾಗದ ಎತ್ತರಕ್ಕೆ
ಚೀರಿತ್ತು


ಹೃದಯ ಸಿಡಿದು ಬಿಡುವಷ್ಟು
ದುಃಖದ ಸಿಡಿಮದ್ದು
ಎದೆಯಲ್ಲಿ ತುಂಬಿತ್ತು


ಒಂದು ಜೀವ ಉಸಿರಾಟ ಮರೆತಿತ್ತು
ಮತ್ತೊಂದು ಜೀವ ಉಸಿರಾಡುತಲೇ ಸತ್ತಿತ್ತು ...... :((((
                                 

                                              --ರತ್ನಸುತ

Friday 19 July 2013

ಅಲ್ವಿದಾ!!!

ಅಂದು ನಾವು ಸೇರಲೇ ಬೇಕಾದ ಅನಿವಾರ್ಯ ಪರಿಸ್ಥಿತಿ. ಆ ಹೊತ್ತಿಗೆ ತಿಳಿ ನೀಲಿ ಆಗಸ ಗೊಚರಿಸಿತ್ತು.
ಒಬ್ಬರನ್ನೊಬ್ಬರು ಕಂಡೂ ಕಾಣದಂತೆ ನಟಿಸಿದೆವು, ನಾ ಮುಂದೆ ಹೊರಟೆ ಆಕೆ ಹಿಂಬಾಲಿಸಿದಳು.
ಒಂದು ಮರದ ಮರೆಯ ಏಕಾಂತ ಸ್ಥಳದಲ್ಲಿ ನಮಗೆಂದೇ ಸಿದ್ದಪಡಿಸಿದಂತಿತ್ತು ಮೇಜು, ಕುರ್ಚಿ.
ನಾ ಕುಳಿತೆ, ಆಕೆ ನನ್ನ ಎದುರು ಅಸಹಾಯಕಳಂತೆ ಕುಳಿತಳು.
ನಿಮಿಷಗಳುರುಳಿದವು ಮಾತಿನ ಸುಳಿವಿರದೇ, ಬೀಸು ಗಾಳಿ ಬಿರುಸಾಗಿ ಅವಳ ಕೂದಲ ಕದಡಿತು, ನನ್ನ ಮನಸನ್ನು ಕೂಡ. 

ಕೆಲ ಹೊತ್ತು ಕಳೆದು ಮಾಣಿ ಆರ್ಡರ್ ಕೇಳಲು ಬಂದ, ನಾನು ಎರಡು ಚಹಾ ಹೇಳಿದೆ (ಆಕೆಗೆ ಚಹಾ ಅಂದರೆ ಇಷ್ಟ)
ಆಕೆ, "ಚಹಾ ಬೇಡ, ಕಾಫಿ" ಅಂದಳು (ನನಗೆ ಕಾಫಿ ಅಂದರೆ ಇಷ್ಟ)
ಬಿಸಿ ಲೋಟಗಳು ನಿಮಿಷದಲ್ಲೇ ನಮ್ಮ ಮುಂದಿದ್ದವು, ಅಷ್ಟರೊಳಗೆ ನೀಲಿ ಆಗಸಕ್ಕೆ ಗ್ರಹಣ ಹಿಡಿದಂತೆ ಮೋಡಗಳು ಕವಿದವು.
ಪ್ರಯಾಣ ಬೆಳೆಸಿ ಬೆಂದ ಮೋಡಗಳು ಬೆವರಿ ಮಳೆಯಾಗಿಸಿದವು,ಇನ್ನೂ ಇಬ್ಬರ ತುಟಿ ಬಾಗಿಲು ಬಿಚ್ಚಿರಲಿಲ್ಲ.
ಮಳೆ ಜೋರಾಯಿತು, ಹಣ್ಣೆಲೆಗಳೆಲ್ಲಾ ಉದುರಿ ಸುತ್ತಲೂ ಚೆಲ್ಲಾಡಿದವು, ಇದ ಗಮನಿಸುತ್ತಲೇ ಕಾಫಿ ಕುಡಿವುದ ಮರೆತೆವು.

ಮಳೆ ಅಬ್ಬರ ಕಡಿಮೆಯಾಗಿ ತುಂತುರು ಹಿಡಿಯಿತು, ನಿಂತ ನೀರ ಮೇಲೆ ಗುಳ್ಳೆಗಳನ್ನೆಬ್ಬಿಸಿ,
ಮರದೆಲೆಗಳು ಆಗ ತಾನೇ ತಮ್ಮೊಡಲ ಹನಿಗಳ ಬೀಳ್ಗೊಡುಗೆಯಲ್ಲಿ ತೊಡಗಿದ್ದವು.
ಮಾತಿಗೆ ಎದುರು ನೋಡುತ್ತಲೇ ಪಾಪ ಮಳೆಯೂ ನಿಂತಿತ್ತು, ಆದರೆ ಮಾತಿಗೆ ಆ ಪ್ರಜ್ಞೆ ಇರಲಿಲ್ಲಾ.

ಸಹನೆ ಮೀರಿದ ಮಾಣಿ ಲೋಟಗಳನ್ನ ತೆರವುಗೊಳಿಸಿದ, ಅದು ತಿಳಿದೂ ತಿಳಿಯದಂತೆ ನಟಿಸಿದೆವು. 
ಒಬ್ಬರನ್ನೊಬ್ಬರು ನೋಡುವ ಛಲವಿಲ್ಲದೆ; ನೋಟ ಬೇರೆಡೆ ಎಲ್ಲೋ ನೆಡುವ ಪ್ರಯತ್ನ ಸಫಲವಾಯಿತು. 
ಸಮಯವೂ ಮೀರಿತ್ತು, ಗಮನಕ್ಕೆ ಬಂದ ಇಬ್ಬರೂ ಎದ್ದು ಹೊರಡಲು ಸಜ್ಜಾದೆವು. ಈ ಬಾರಿ ಆಕೆ ಮುಂದೆ, ನಾ ಹಿಂದೆ. 

ನ್ಯಾಯಾದೀಶರು ಕೊಟ್ಟ ಗಡುವು ಮುಗಿದಿತ್ತು, ಇನ್ನೇನಿದ್ದರೂ ಒಂದು ಸಹಿ ಹಾಕುವ ಸರದಿ ಇಬ್ಬರದ್ದೂ. 
ಮುಂದೆ; ನಾನೊಂದು ತೀರ, ಅವಳೊಂದು ತೀರ. 
ದೂರಾಗಿಸಲು ಸಹಿ ಹಾಕಿದ ಕಾಗದವೇ ಸಾಕ್ಷಿ ಪತ್ರ. 

ಕೊನೆಗೊಮ್ಮೆ ಅವಳ ನೋಡಬೇಕನಿಸಿ ತಿರುಗಿದೆ. ಅವಳೂ ತಿರುಗಿದಳು. 
ಪರಸ್ಪರ ಯಾವುದೇ ಅಹಂಗಳು ತಡೆಯಲಿಲ್ಲ, ಅದು ನಮ್ಮ ಜೀವನದ ನಿಷ್ಕಲ್ಮಶ, ಸ್ಮರಣೀಯ ಕ್ಷಣಗಳಲ್ಲೊಂದು. 
ಆಗ ಜಿನುಗಿದ ಕಂಬನಿಯೇ ನಮ್ಮಿಬ್ಬರ ಪ್ರೇಮ ಕೂಸು,
ಅದ ಅಲ್ಲೇ ಒರೆಸಿಕೊಂಡು ಮಾಡಿದೆವು ಭ್ರೂಣಹತ್ಯೆ. 

ಮತ್ತೆ ಇಬ್ಬರಿಗೂ ಪ್ರೀತಿ ಹುಟ್ಟಿತ್ತು, ಆದರೆ ಸಂದರ್ಭ ಅನಾವರಣಗೊಳಿಸಲು ಸೂಕ್ತವಾಗಿರಲಿಲ್ಲ. 
ಹೇಳಬೇಕನಿಸಿದ್ದು ಮತ್ತೊಮ್ಮೆ "I LOVE YOU"

ಆದರೆ ........ 

ಅಪಸ್ವರವ ನುಡಿಸಿ
ವಿಷ ಬಡಿತ ಬಡಿಸಿದ್ದ 
ಹೃದಯ ಹಾಡಿತ್ತು 

ಹಠವನ್ನು ಜಯಿಸದೇ 
ಸೋಲನ್ನೇ ಸವರಿದ್ದ 
ಪ್ರೀತಿ ಪರಿತಪಿಸಿತ್ತು 


ಮುದ್ದು ಬರಿಸದೇ 
ಸದಾ ದೂರುಳಿಸುತಿದ್ದ 
ಮೌನ ನುಡಿದಿತ್ತು 

ಹೆಸರನ್ನು ಬೆಸೆಯದೇ 
ನಿತ್ಯ ಅಳಿಸುತ್ತಿದ್ದ 
ಉಸಿರು ಪಿಸುಗುಟ್ಟಿತ್ತು 

ಬಿಟ್ಟು ಕೊಡಲಾಗದೇ 
ಎಂದಿನಂತೆ ನೊಂದು 
ಮನಸು ಬಿಕ್ಕಿತು 

ಅಲ್ವಿದಾ.... ಅಲ್ವಿದಾ..... (ಮತ್ತೆ ಸೇರುವ ತನಕ)

                                                --ರತ್ನಸುತ 

Wednesday 17 July 2013

ಕಲಾವಿದನ ನೆನೆಯುತ!!

ಹುಟ್ಟೋ ಸೂರ್ಯನ ತಡೆದು ನಿಲ್ಲಿಸಿ
ಕತ್ತಲಲ್ಲೇ ಬೆವರು ಹರಿಸಿ
ಎಷ್ಟು ಯುಗಗಳ ಕಳೆದು ಆಯಿತೋ
ವಿಶ್ವ ರೂಪದ ಸ್ಥಾಪನೆ
ಹುಟ್ಟು ಸಾವಿನ ನಡುವೆ ಜೀವನ
ಪ್ರೇಮ ಪ್ರಾಸದ ಮಿಶ್ರ ಗಾಯನ
ನೂಲು ಸೂಜಿಯ ಏಕೀಕರಣವೇ
ಕಲಾವಿದನ ಕಲ್ಪನೆ

ಜೀವ ಮುಕ್ತಿಗೆ ಪ್ರಾಣ ಪ್ರಾಪ್ತಿ
ಕಲ್ಲಿನೊಳಗೆ ಶಿಲೆಯ ಮೂರುತಿ
ಕೆತ್ತಲೆಂದು ಕೊಟ್ಟನೋಬ್ಬನ
ಕೈಗೆ ಉಳಿ-ಸುತ್ತಿಗೆಯನು
ತನ್ನ ಪಾಡಿಗೆ ಇದ್ದ ನೀರಿಗೆ
ಕಡಲ ಆಸೆಯ ಹರಿವು ಕೊಟ್ಟು
ಹಬ್ಬದಾವರಣದನಾವರಣಕೆ
ನೀಡಿದ ಖುಷಿ ಅಲೆಯನು

ಸಕಲ ಜೀವ ಸಂಕುಲದಲಿ
ಕುಲ ವ್ಯಾಕುಲಗಳ ಸುಳಿಯನಿಟ್ಟು
ಸಿಕ್ಕಿಕೊಳ್ಳದ ವಿವೇಕವಿಟ್ಟ
ಮನುಕುಲದ ಪಾಲಿಗೆ
ಗಮ್ಯವೆಂಬ ಗುಟ್ಟನಿರಿಸಿ
ತಾರತಮ್ಯದ ತಾಳ ಬೇರೆಸಿ
ಸಮಾನತೆಯ ಒಗಟನಿರಿಸಿದ
ಬಿನ್ನಮತಗಳ ಸಾಲಿಗೆ

ನೂರು ಕವಲಿನ ಬಾಳ ದಾರಿ
ಮೂರು ಹಾಳೆಯ ಗ್ರಂಥ ನೀಡಿ
ಬರೆಯಿರೆಂದನು ಇಂದಿನ ದಿನಚರಿ
ನೆನ್ನೆಯನು ನೆನಪಾಗಿಸಿ
ಮುಂಬರುವ ಹಾಳೆಯೊಳಗೆ
ಬರೆವುದೇನೋ ಎಂಬ ಗೊಂದಲ
ಕನಸ ಕಾಣುವ ಗೀಳು ಕೊಟ್ಟನು
ಕಲಾತ್ಮತೆಯ ನಿರೂಪಿಸಿ

ಪ್ರಶ್ನೆಯಿಟ್ಟನು ಉತ್ತರಿಸಲು
ಬದುಕು ಕೊಟ್ಟನು ಉದ್ಧರಿಸಲು
ಮನಸ ಕೊಟ್ಟನು ಮಾನವೀಯತೆಯನ್ನು
ಪೋಷಿಸಿಕೊಳ್ಳಲು
ಕಂಬನಿಯ ಕಡಲೊಳಗೆ ಕುಳಿತನು
ಉಕ್ಕಿ ಬಂದು ನೆರವಾಗಲು
ನೋವು ನಲಿವಿಗೆ ಹೆಗಲ ಕೊಟ್ಟು
ಜೊತೆಗಾರನಾಗಲು !!!

                        --ರತ್ನಸುತ

Tuesday 16 July 2013

ಹಳ್ಳಿ ಹೈದನ್ ಪ್ರೀತಿ ವರ್ಸೆ

ಪಾಪಸ್ಕಳ್ಳಿ, ಹಲ್ಸಿನ್ ಸಿಪ್ಪೆ
ಒರ್ಟು ಮಾತ್ನಂಗೆ
ಮೌನದಷ್ಟೇ ಹಿತ ಐತೆ
ಕಾಣಿಸ್ದಂಗೆ ಒಳ್ಗೆ
ಮಾತಿನ ಚಾಟಿ ಏಟು ಕೊಟ್ಟೆ
ಬೆಣ್ಣೆ ಸವ್ರಿದ್ ಮೌನ
"ನಾನ್ ನಿನ್ನೌಳು ಅಲ್ಲಾ" ಅಂದೇ
ಅಂದ್ರೆ, ನಾನ್ ನಿನ್ನೌನಾ??!!

ಕಾಗೆ ಬಣ್ಣ ನಿಂದು ಅಂದ್ರೇ
ಸಿಟ್ಟ್ಯಾಕೇ ಮೂದೇವಿ ??
ನಾನೂ ಕಾಗೆ, ನನ್ ಕಣ್ಣಿಗೆ
ನೀನೇ ಕಪ್ ಶ್ರೀದೇವಿ
ಪ್ಯಾಟೆ ಹುಚ್ಚು ಹಿಡ್ಸ್ಕೊಂಡೀಯ
ಹಳ್ಳಿ ಹುಡುಗ್ರೇ ಮೇಲು
ಕಟ್ಕೋ ನನ್ನ ಆಮೇಲ್ನೋಡು
ಬಂಗಾರ ನಿನ್ ಬಾಳು

ಅಪ್ಪ ಮಾಡಿಟ್ಟೌರೆ ಆಸ್ತಿ
ನಾನೋಬ್ನೇ ವಾರುಸ್ದಾರ
ರಾಜ ರಾಣಿ ಹಂಗೆ ಇರ್ತೈತ್
ನಮ್ಮಿಬ್ರ ಸಂಸಾರ
ನಿನ್ನಪ್ಪ ಸಿಡಿ ಮೂತಿ ಸಿದ್ದ
ಅವ್ನ್ಕಂಡ್ರೆ ನಂಗ್ ಭಯ
ನೀನೇ ಒಸಿ ಹೇಳ್ಬಾರ್ದಾ
ಯಾವ್ದಾರಾ ಉಪಾಯ

ಕಬ್ಬಿನ್ ಗದ್ದೆ ಐತೆ ನಮ್ಗೆ
ಫಾರಿನ್ ಟೂರು ಯಾಕೆ ??
ಊರ್ನಾಗೇ ಟೆಂಟ್ ಇಲ್ವಾ
ಕದ್ದು ಪಿಚ್ಚರ್ ನೋಡೋಕೆ
ಸಿಕ್ಬಿದ್ರೆ ಒಳ್ಳೆದಾಯ್ತು
ದ್ಯಾವ್ರು ನಡ್ಸ್ದಂಗ್ ಆಟ
ಬೇಗಾ "ಸರಿ" ಅಂತ ಒಪ್ಕೊಡ್
ತಾರೆ ಹಾಲಿನ್ ಲೋಟ

ಇದ್ದಿದ್ ಇದ್ದಂಗ್ ಹೇಳ್ದೆ ಅಂತ
ಬ್ಯಾಸ್ರ ಬ್ಯಾಡೇ ಚನ್ನಿ
ಕೈ ಬಿಡಾಕ್ಕಿಲ್ಲಾ ಅಂತ
ಆಣೆ ಮಾಡ್ಹೇಳ್ತೀನಿ
ನಿಂಗೆ ಇಷ್ಟ ಅಂತ ನೋಡು
ಬರ್ದೇ ಒಂದು ಪದ್ಯ
ಕದ್ದಿದ್ದಲ್ಲಾ ಸ್ವಂತದ್ ಕಣೇ
ನಂಬು ನನ್ ಮಾತ್ ಸತ್ಯ .......

                     --ರತ್ನಸುತ 

ತೊಟ್ಟು ಹನಿಗಳು !!!

ಜಗದೊಳಗಿನ ಯಾವ ಹೂವನ್ನೂ
ನಿನ್ನ ಮುಡಿಯೇರಿಸಲೊಲ್ಲೆ!!
ಬಾಡುವವುಗಳಿಗೆ ನಿನ್ನ ಸೋಕುವ ಹಕ್ಕಿಲ್ಲ,
ಬಾಡದ "ಹೂ"ಯಾವುದೂ ಈವರೆಗೂ ಸಿಕ್ಕಿಲ್ಲಾ!!

*****
ತೀರದ ಮರಳಿನ ಮೇಲೆ
ಎರಡು ಸಾಲಿನ ಹೆಜ್ಜೆ ಗುರುತು
ಆ ಎರಡೂ ನಿನ್ನವೇ,
ಆ ಎರಡೂ ನನ್ನವೇ,
ದೇಹ ನೆರಳಿನ ಗುರುತು, ಒಂದೇ ಅಲ್ಲವೇ?!!

*****
ಹಸಿದಾಗಿನ ಮೊದಲ ತುತ್ತು,
ಹೊಟ್ಟೆ ತುಂಬಿದಾಗಿನ ಮೊದಲ ತುತ್ತು
ಎರಡಕ್ಕೂ ಬಿನ್ನ ಮೊದಲುಗಳ
ವಿಭಿನ್ನ ಸ್ವೀಕಾರವಿದೆ!!

*****
ನಾಲಿಗೆ,
ಹೊಲಿಗೆಯ ಸೂಜಿಯಂತೆ
ಮಾತು,
ಹಿಂಬಾಲಿಸಿದ ನೂಲಿನಂತೆ
ಒಂದಾಗಿಸ ಬಲ್ಲದು ಎರಡ
ಚುಚ್ಚಿ ನೋಯಿಸ ಬಲ್ಲದು ಕೂಡ

                           --ರತ್ನಸುತ

Monday 15 July 2013

ಎಲ್ಲಿ ಉಳಿದವೋ ಕಾಣದಂತೆ !!!

















ಎಲ್ಲಿ ಮೇಣದ ದೀಪ ?
ಎಲ್ಲಿ ಕೈ ಸರಪಳಿ ?
ಎಲ್ಲಿ ಕಂಬನಿ ಮೆತ್ತಿದ ಆ ಕೆನ್ನೆಗಳು ?
ಎಲ್ಲಿ ಆಕ್ರೋಶದ
ಒಮ್ಮತದ ಘೋಷಣೆ ?
ಎಲ್ಲಿ ಸಂಚಲನದ ಸನ್ನಿವೇಶಗಳು ?

ಒಂದು ಧ್ವನಿ ಮುರಿಯಿತು ಮೌನದ ಕೋಟೆಯ
ನಿದ್ದೆಯಿಂದೆಚ್ಚರಿಸಿತ್ತೆಲ್ಲರ ಘರ್ಜಿಸಿ
ನೆತ್ತರರಿಸಿದ ಬೆತ್ತದೇಟನೂ ಲೆಕ್ಕಿಸದೆ
ಅಸಹಾಯಕತೆಯ ಇಡೀ ದಂತ ಕಥೆಯಾಗಿಸಿ
ಎಲ್ಲಿ ಆ ಪ್ರತಿಧ್ವನಿ ?
ಎಲ್ಲಿ ಆ ಶಪತ ?
ಎಲ್ಲಿ ಕುಲ-ಧರ್ಮಗಳ
ಮೀರಿದ ಸೆಳೆತ ?

ಒಂದು ಜೀವದ ಉಸಿರಿನೋರಾಟವನು ಕಂಡು
ಕೋಟಿ ಹೃದಯಗಳು ನಿಟ್ಟುಸಿರು ಇಟ್ಟ ಪರಿ
ಆಡಳಿತ ಲೋಪಗಳ ಕೈಗನ್ನಡಿಯ ಬಿಂಬ
ಬದಲಾವಣೆಯ ಕಿಚ್ಚು ಹೊತ್ತು ಉರಿಸಿದ ಉರಿ
ಎಲ್ಲಿ ಆ ಜ್ವಾಲೆ ?
ಎಲ್ಲಿ ಆ ಶಕ್ತಿ ?
ಎಲ್ಲಿ ಕಾಣದೆ ಅಡಗಿದೆ
ದೇಶ ಭಕ್ತಿ ?

ಉರಿ ಬೆವರ ಹರಿಸಿದವರಲ್ಲಿ ಉಳಿಯದ ನಾಣ್ಯ
ಉರುಳಿತೇ ನಾಯಕರ ದುರಾಸೆಯ ಕಿಸೆಗೆ !!
ಹಸಿದ ಹೊಟ್ಟೆಯ ಬಗೆದು ಕಣ್ಣು ಮುಚ್ಚಿದ ತಿರುಕ
ಬಾರದೇ ದೂರುಳಿದ ಶುಕ್ರ ದೆಸೆಗೆ
ಎಲ್ಲಿದೆ ಪರಿಹಾರ ?
ಎಲ್ಲಿದೆ ನವೀಕಾರ ?
ಘನಿಕರನುಕೂಲಕ್ಕೆ
ಸಮಯ-ಗಡಿಯಾರ !!

ಒಂದು ನಾವೆಲ್ಲರೂ ಬಂಧು-ಬಳಗ ಎಂದು
ಸಾರಿದವರ ನುಡಿ ಶಾಸನವ ಸೇರಿದೆ
ಮಾರಣ ಹೊಮದಲಿ ಶರಣಾದ ಶಾಂತಿಯ
ನಡು ಬೀದಿ ಬೆತ್ತಲೆ ಮೆರವಣಿಗೆಯಾಗಿದೆ
ಎಲ್ಲಿದೆ ಐಕ್ಯತೆ ?
ಎಲ್ಲಿ ಸಮಾನತೆ ?
ಎಲ್ಲಿದೆ ನಮ್ಮ
ನಾಳೆಗಳಿಗೆ ಭಧ್ರತೆ ?!!

                   --ರತ್ನಸುತ 

Saturday 13 July 2013

ನಾನೂ ಕತ್ತಲು!!



















ಬೆಳಕು ಜಾರಿ, ಕತ್ತಲು ತೂರಿ

ಮೇಣ ಕರಗುವ ವೇಳೆಯದು
ಮನೆಯ ಸುತ್ತಲೂ ಸುಣ್ಣದ ಗೋಡೆಯ
ಇದ್ದಲ ಬರಹ ಕಾಣಿಸದು
ಹಬ್ಬವು ಇನ್ನೂ ತಿಂಗಳು ದೂರ
ದೇವರ ನೆನೆಯುವ ಹೊತ್ತಲ್ಲಾ
ಗೂಟಕೆ ಜೋತ ಮಕ್ಕರಿ ಕೆಕ್ಕರಿಸಿ
ನೋಡುತಲಿದೆಯಲ್ಲಾ??

ಅಟ್ಟದ ಮೇಲೆ ಸದ್ದಿನ ಪರಿಚಯ

ಪರಿಚಿತವೆಂಬಂತಿರಲಿಲ್ಲಾ
ಒಬ್ಬನೇ ನಾನು ದೀಪಕೆ ಕಾವಲು
ಆದರೆ ಬೆಳಕು ಬೆದರಿಹುದಲ್ಲಾ ??
ತೊಟ್ಟಿಕ್ಕುವ ತೊಟ್ಟಿಯ ಹನಿಗಳಿಗೆ
ಹೊತ್ತು - ಗೊತ್ತಿನ ಅರಿವೆಲ್ಲಿ
ಏನೂ ಕೆಲಸವ ಒಲ್ಲದ ನನಗೆ
ತೊಟ್ಟುಗಳ ಎಣಿಸುವ ಖೂಲಿ

ನನ್ನ ನೆರಳಿಗೂ ನನ್ನಾಸರೆ

ನಾನಿದ್ದೆಡೆಯೇ ತಾ ಅಂಟಿತ್ತು
ಮಬ್ಬಿನ ಶರ ಮುನ್ನುಗ್ಗಿ ಸೀಳಿತು
ಮಬ್ಬನೇ ಮತ್ತೆ ಮುದ್ದಿಸಿತು
ತಬ್ಬಿಬ್ಬಾದರೆ ತಬ್ಬುವೆನ್ಯಾರ ??
ನಾನೊಬ್ಬನೇ ನನಗಾಗಿರಲು
ಬೆಚ್ಚಿತು ನನ್ನ ಕೆಚ್ಚೆದೆ ಕೊರಳು
ಭಯವೆಂಬುದು ಬಿಗಿದಪ್ಪಿರಲು

ಎಂದೋ ಕೆಡವಿದ ಆಟದ ಗೊಂಬೆ

ಸೇಡಿನ ಹೊರೆ ಹೊತ್ತಿರಬಹುದೇನೋ
ಮುರಿದ ಕೈಯ್ಯಲೇ ಅಸ್ತ್ರವ ಹಿಡಿದು
ಬೆನ್ನ ಹಿಂದೆ ನಿಂತಿದೆ ತಾನು ??
ಕಪ್ಪು ಇರುವೆ ಸೈನ್ಯದ ಮುತ್ತಿಗೆ
ತಪ್ಪಿಸಿಕೊಳ್ಳಲಿ ಎಲ್ಲಿ ??
ಸುತ್ತಲೂ ತಾನೇ ಬೆಳೆದು ಹಬ್ಬಿದೆ
ಸುಟ್ಟು ಕರಕಳಾದ ಬೇಲಿ

ತೆಂಗಿನ ಗರಿ ಮುರಿದು ಬಿತ್ತೊಂದು

ಹಿಂದೆಯೇ ಶಬ್ಧವ ನುಂಗಿದ ಮೌನ
ಯಾರೋ ಹಿಡಿದರು ನನ್ನ ಕೈಯ್ಯ
ನಾನೇ ಅಂದರೂ ನಂಬದ "ನಾ"
ಬಿಟ್ಟ ಕಣ್ಣುಗಳಿಗೆ ಮುಚ್ಚಲು ಭಯ
ಉಸಿರಿನ ಏರಿಳಿತವು ಜೋರು
ಮೆಲ್ಲಗೆ ಬೆಳಕೂ ಮಾಯವಾಯಿತು
ಈಗ "ಕತ್ತಲು" ನನ್ಹೆಸರು.......

                              --ರತ್ನಸುತ 

Friday 12 July 2013

ಹಸಿ ಹನಿಗಳು !!

ತುಟಿಗಳು ಪರಿಚಯಿಸಿಕೊಳ್ಳುವ ವೇಳೆ
ಪರಿಚಿತ ಕಣ್ಣುಗಳಿಗೇನು ಕೆಲಸ ?
ಮುಚ್ಚಿಕೊಂಡವು "ಮುಂದುವರಿಸಿ" ಎನುತ !!

****
ಒಬ್ಬ ಎಳೆದನು ಮಗ್ಗ
ಸೀರೆಯಾಗಿಸಲು
ಒಬ್ಬ ಎಳೆದನು ಸೀರೆ
ಮೊಗ್ಗನರಳಿಸಲು!!

****
ಬಿಂದು ಕಿರಣದ ಮಿಲನ
ಕಾಮನ ಬಿಲ್ಲಿನ ಜನನ
ಮಳೆಯ ತುಂತುರು ಗಾನ
ಇಳೆಯ ನರ್ತಿಸುವದನ
ಬಿರುಕಿಗುನ್ಮತ್ತ ಪಾನ
ಮಣ್ಣು ಹಸಿದ ಶ್ವಾನ
ಆಗ ಹಸಿವಿನ ಶಮನ
ಇದುವೇ ಹಸಿರಿನ ಕಥನ

****
ಆಷಾಡಕೆ ತವರಿಗ್ಹೊರಟ ಮಡದಿಯ ತಡೆದು
ಸೆರಗಂಚನು ಸುರುಳಿ, ಗಂಡ ಬೇಡಿದ
"ಒಂದು ಮುತ್ತು ಕೊಡೇ!!"
ಸುಕ್ಕು ಹಿಡಿದ ಸೆರಗ ಬಿಡಿಸಿಕೊಂಡುಳು
ನಾಚಿ ಮುತ್ತಿಟ್ಟು ಹೇಳಿದಳು
"ಇದೇ ಕಡೆ !!"

****
ರೆಪ್ಪೆ ಬಡಿತಕೆ ನೋಡು
ದೀಪ ಬಳುಕುತ್ತಿದೆ
ಒಂದು
ಜೋರಾಗಿ ಬಡಿದು
ಬೆಳಕನ್ನು ನಂದಿಸು
ಇಲ್ಲವೇ
ನನ್ನಂತೆ ಕಣ್ಮುಚ್ಚಿ
ಕತ್ತಲೆಯ ಸ್ವಾಗತಿಸು

               --ರತ್ನಸುತ 

Thursday 11 July 2013

ತೊಟ್ಟು ಹನಿಗಳು !!!

ಇರದ ಕಾರಣವನ್ನೇ
ಕಾರಣವಾಗಿಸೋ ಕಲೆ
ಕವಿತೆಗೇ ಇರಬೇಕು!!
ಇಲ್ಲವಾದರೆ, ಇದ್ದಕ್ಕಿದ್ದಂತೆ
ಎಲ್ಲಂದರಲ್ಲಿ ಪ್ರತ್ಯಕ್ಷವಾಗುವುದಕೆ
ಏನನ್ನಬೇಕು ?!!

*****
ನಾ ಊರು ಬಿಟ್ಟಾಗಲೆಲ್ಲಾ
ನೀ ಮೇಲೆ ಜೇಬಿಗೆ ಕಾಸು ಇಟ್ಟಾಗ,
ಅಪ್ಪ
"ನೋಟಿನ್ನೂ ಹಸಿಯಾಗಿತ್ತು
ನಿನ್ನ ಕೈ ಮಸಿಯಾಗಿತ್ತು
ಹಣೆ ಬೆವರು ಬಿಸಿಯಾಗಿತ್ತು
ಕಣ್ಣು ಕನಸುಗಳ ಬಸಿರಾಗಿತ್ತು"


*****
ಮುಖದಲ್ಲಿದ್ದರೇನು ಲಕ್ಷಣ ??
ತುಟಿ ಅರಳಲು ಹುಡುಕುತಿದೆ ಕಾರಣ


*****
ಮತ್ತದೇ ಚಂದಿರ
ರೂಪ ಬದಲಿಸಿ ಬಂದಂತೆ,
ನೀನು ನನಗೆ
ಹೊಸ, ಹೊಸ ಪದಮಾಲಿಕೆ
ಕಟ್ಟಿ ಕೊಡಲೇ ನಿನಗೆ?!!


*****
ನಾನಲ್ಲದ ನನ್ನೊಳಗೊಬ್ಬ
ನಿನ್ನ ಹೊಗಳುತ್ತಾ ಬರೀತಾನೆ
ಅವ ಇರೋದು ನನ್ನಲ್ಲೇ
ಅನ್ನೋದನ್ನೂ ಮರಿತಾನೆ
ಕದ ಬಡಿತಾನೆ, ತಲೆ ಕೆರಿತಾನೆ
ಅಡೆ ತಡೆಗಳನ್ನೆಲ್ಲಾ ಮುರಿತಾನೆ
ಕೊನೆಗೆ ನನ್ನ
ನಾನೇ ನಂಬದ ಕವಿ ಮಾಡ್ತಾನೆ
ಯಾರವ್ನು??


*****
"ನೋಡಲ್ಲಿ ಮಿನುಗುವ ನಕ್ಷತ್ರ" ಅಂದಾಗ
ನಿನ್ನ ಕಣ್ಣಲ್ಲಿ ಉದಾಸೀನವಿತ್ತು
ಆಗಷ್ಟೇ ಜಾರಿದ ನಿನ್ನ ಕಂಬನಿ
ನಕ್ಷತ್ರ ಮಿನುಗನ್ನೂ ಮೀರಿಸಿತ್ತು


*****
ಕವಿಯನ್ನ ಕೆಣಕಿದವಳಿಗೆ
ಪಾಪಕ್ಕೆ ಪ್ರಾಯಶ್ಚಿತ
ಕವಿತೆ ಬರೆಯಲು ಕೊಟ್ಟ
ಕಾರಣವೇ ಇರಬೇಕು!!

                  --ರತ್ನಸುತ 

Wednesday 10 July 2013

ಶಿಲ್ಪ-ಶಿಲ್ಪಿ ಸ್ಟೋರಿ

















ವರ್ಷಗಟ್ಲೇ ಕೆತ್ತಿದ್ ಶಿಲೆಗೆ

ಕೊನೆ ಸ್ಪರ್ಶ ಕೊಡೋ ಹೊತ್ನಲ್ಲಿ
ಮೂಗು ಮುರ್ದ ಶಿಲ್ಪಿ

ತಟ್ಟಿದ್ ಸುತ್ಗೇ ತಲೆ
ಮೊಟ್ಕಿದ್ ಉಳಿ ಅಂಚು
ಬಿಕ್ಕಿದ್ ಶಿಲ್ಪಿ ಮನ್ಸು

ರಾಜ ಖಡ್ಗ ಕೈಗೆತ್ಕೊಂಡ
ಶಿಲ್ಪಿ ಭಯಕೆ ಊರು ಬಿಟ್ಟ
ಶಿಲೆಗೆ ಸಿಕ್ತು ಕುರೂಪಿ ಪಟ್ಟ

ಸುತ್ಲೂ ಎಲ್ಲೂ ಸಿಗ್ಲಿಲ್ವಂತೆ
ಮುರ್ಕೊಂಡ್ಚೂರಾಗ್ ಬಿದ್ದ ಮೂಗು
ಹುಡ್ಕಾಡಿದ್ರೂ ಕೊನೆವರ್ಗೂ

ಶಿಲೆಗ್ ಸಿಕ್ತು ಅರ್ಮನೆ ಮೂಲೆ
ಜೇಡ ಕಟ್ಟಿದ್ ಗೂಡಿನ್ ಮಾಲೆ
ಕೆಡ್ಕಾಗಿದ್ದು ನೋಡು ಅಲ್ಲೇ!!

ಅರ್ಮನೆಗೆ ಬೆಂಕಿ ಬಿತ್ತು
ರಾಜಾ, ರಾಣಿ, ಮಕ್ಳು ಸತ್ರು
ಊರ್ಗೂರೇ ಬೊಬ್ಬೆ ಇಟ್ರು

ಶಿಲ್ಪಿ ಕಾಡಾನೆ ಕೈಲ್ಸತ್ತ
ಮಂತ್ರಿ ರಾಜ್ಯಾನೇ ಮಾರ್ಬಿಟ್ಟ
ಮೂಗಿಲ್ದ್ ಶಿಲೆನ್ಹಂಗೇ ಬಿಟ್ಟ

ಗೈಡು ಹೇಳಿದ್ ಸ್ಟೋರಿ ಇದು
ಗಮ್ನಾ ಇಟ್ಟು ಕೇಳಿ ಮತ್ತೆ
"ಮೂಗೆಲ್ಲಿ?" ಅಂತ ಕೇಳ್ಬಾರ್ದು !!

                       --ರತ್ನಸುತ

ಕೊನೇ ಹನಿ!!

ಉಸಿರಿಗೆ ಎದೆ-ಭಾರವಾಯ್ತೋ?
ಎದೆಗೆ ಉಸಿರು ಭಾರವಾಯ್ತೋ? ಗೊತ್ತಿಲ್ಲಾ !!
ಆದ್ರೆ
ಭಾರವಾದ ದೇಹ ಹಗುರಾಯ್ತು
ಎದೆ ಮೇಲೆ ತುಳಸಿ ಚಿಗುರಾಯ್ತು !!

                             --ರತ್ನಸುತ 

Tuesday 9 July 2013

ರೊಟೀನ್ ಹನಿಗಳು !!

ದಾರಾವಾಹಿಯ ನೋಡುತ್ತಾ ಹೆಚ್ಚಿದ ಈರುಳ್ಳಿಗೆ
ತಾನು ಕಣ್ಣೀರಿಗೆ ಹೊಣೆಯಲ್ಲಾ ಎಂಬ ಸಮಾದಾನವಿತ್ತು !!
*****

ಮಾರುಕಟ್ಟೆಯಲ್ಲಿ ಸತ್ತು ನಾರುತ್ತಿದ್ದ ಹೆಗ್ಗಣಕ್ಕೆ
ಸಹಭಾಗಿಯಾಗಿದ್ದ ತ್ಯಾಜ್ಯ ವಿಲೆವಾರಿಗೊಂಡು
ಕಾಗೆ, ಹದ್ದುಗಳ ಕೊಕ್ಕಿನ ಕುಕ್ಕು ತಕ್ಕ ಮಟ್ಟಿಗೆ ತಪ್ಪಿತು !!

*****


ಕೊಡ ತುಂಬಿತೆಂದು ಅತ್ತ ನಲ್ಲಿ ನಿಲ್ಲಿಸುವ ಹೊತ್ತಿಗೆ (ಉತ್ತರಾಖಂಡ ಸಮಸ್ಯೆ)
ಇತ್ತ ಒಲೆಯ ಮೇಲಿನ ಹಾಲು ಉಕ್ಕಿ ಹೋಯಿತು (ಬೋಧಗಯಾ ಸಮಸ್ಯೆ) 

*****

ಅತ್ತ ಮಗು ಗುಂಡಿನ ಸದ್ದು ಕೇಳಿದೊಡನೆ 
ಅಳುವುದನ್ನ ಒಮ್ಮೆಲೆ ನಿಲ್ಲಿಸಿತು 
ಮತ್ತೆಂದೂ ಅದು ಅಳಲೇ ಇಲ್ಲಾ !! (ಜಮ್ಮು ಕಾಶ್ಮೀರದ ಉಗ್ರತೆಯ ನೆನೆದು)

*****

ಅಕ್ಕಿ ಬೆಲೆ ಇಳಿಮುಖವಾದರೆ 
ಅನ್ನದ ಬೆಲೆ ಇಳಿಮುಖವಾದೀತೇ ??

*****

-:ಇದೀಗ ಬಂದ ಸುದ್ದಿ:- 
ಮುರಿಯಲು ಒಂದು ರೆಕಾರ್ಡು 
ಛಾಪಿಸಿದನೊಬ್ಬ ದುಬಾರಿ ವೆಡ್ಡಿಂಗ್ ಕಾರ್ಡು 

*****

-:ಮುಖ್ಯಾಂಶಗಳು:-
ಯಡಿಯೂರಪ್ಪ ಜೊತೆ ಬಿ.ಜೆ.ಪಿ ವರಿಷ್ಟರ ಸಂದಾನ 
ಆಗುವುದೇ ರಾಣ್ಬೀರ್ ದೀಪಿಕಾ ಕಲ್ಯಾಣ ??
ಸಭೆಯಲಿ ನಿದ್ದೆಗೆ ಜಾರಿ ಪ್ರಧಾನಿಗೆ ಅವಮಾನ 
ಕ್ರಿಕೆಟ್ ವೀರರಿಗೆ ತಲಾ ಕೋಟಿ ರುಪಾಯಿ ಬಹುಮಾನ 
ದೇಶದಲ್ಲಿ ಏರು ಪೇರಾಗುತ್ತಿದೆ  ಹವಾಮಾನ 
ಇಲ್ಲಿಗೆ ಈ ವಾರ್ತಾ ಪ್ರಸಾರ ಮುಗಿಸೋಣ
ಮತ್ತೆ ನಾಳೆ ಬೇಟಿಯಾಗೋಣ  


                                        --ರತ್ನಸುತ 

ಅಪ್ಪ ಹೇಳಿದ ಸುಳ್ಳು!!
















ಕಪ್ಪು ಕೋಗಿಲೆ, ಒಪ್ಪಬೇಕು ನೀ
ಅಪ್ಪ ಹೇಳಿದ ಸುಳ್ಳು
ಕಾಗೆ ತೋರಿಸಿ "ನೀನು" ಅಂದನವ ಯಾಕೆ?
ಹೇಳುವೆ ತಾಳು!!

ಅಂಬೆಗಾಲ ನಾ ಇಟ್ಟೆ ಮೊದಲಿಗೆ
ತೆವಲುತಾ ಮನೆಯ ತುಂಬಾ
ಮಗನ ಸಾಧನೆ ಕಂಡು ಅಪ್ಪನಿಗೆ
ಹೇಳಿಕೊಳ್ಳಲು ಜಂಭ

ಹೊಸಲು ದಾಟುವ ಯತ್ನ ಮಾಡಿದೆ
ಅಮ್ಮ ಕುದಿಸಿದಳು ಪಾಯಸ
ಅಪ್ಪ ಊದಿದ ಖುಷಿಯ ಕಹಳೆಯ
ಅವರ ಆ ನಡೆ ಸಮಂಜಸ

ತಮ್ತಮ್ಮ ಸಡಗರದಿ ಮರೆತರು
ನನ್ನ ಒಬ್ಬಂಟಿಯಾಗಿಸಿ
ಹಿಡಿತ ತಪ್ಪಿ ಮೂಗು ಕೊಟ್ಟು
ಬಿದ್ದೆ ನೆಲಕೆ ಮುಗ್ಗರಿಸಿ

ಭೂಮಿಯಾಕಾಶ ಒಂದು ಮಾಡಿತು
ನನ್ನ ನೋವಿನಾಕ್ರಂದನ
ಯತ್ನವೆಲ್ಲವೂ ವಿಫಲವಾಯಿತು
ನೀಡಲೆನಗೆ ಸಾಂತ್ವನ

ಕೇಳಿ ಬಂದಿತು ಮಧುರ ವಾಣಿ
ಹುಣಸೇ ಮರದೊಳಗಿಂದಲೆಲ್ಲೋ
ಮೂಗು ಸೋರುತಲಿದ್ದರೂ ನಾ
ಸುಮ್ಮನಾದೆ, ಮುಂದೆ ಕೇಳು

ಹಠವ ಮಾಡಿದೆ ಅಪ್ಪ ನನ್ನನು
ಆಚೆ ಕರೆದೊಯ್ಯಲಿ ಎಂದು
ಸುತ್ತಲೂ ನೋಡಿದೆ ಕಾಣದೆ ಹೋಯಿತು
ಕೋಗಿಲೆ ಒಂದೂ

ಮತ್ತೆ ಬಿಕ್ಕುವ ಸುಳಿವು ಕೊಟ್ಟೆ
ಅಪ್ಪನಿಗೆ ಏರಿತು ತಲೆ ಬಿಸಿ
ಅಷ್ಟರಲ್ಲೇ ಹಾರಿತೊಂದು ಕಾಗೆ
ಅದೇ ಕೋಗಿಲೆ!! ಅಂದನದನು ತೋರಿಸಿ .......


                                 --ರತ್ನಸುತ 

Monday 8 July 2013

Oops!! Miss ಆದ್ಲು

ಕಣ್ಣೊಳಗೆ ಬಿಟ್ಕೊಂಡೆ Love ಎಂಬ ಲಸಿಕೆ
ಎದೆಯಲ್ಲಿ Violinನ್ನುಗಳ ಲವಲವಿಕೆ
ಹೆಚ್ಚಾಗಿದೆ ನಡುವೆ Dreamzಅಲ್ಲಿ ಎಣಿಕೆ
ಮೊಂಡುತನಕೂ ಬಂತು Changeಆಗೋ ಬಯಕೆ

Cardಅಲ್ಲಿ Roseಇಟ್ಟು ಮುಂದಿಟ್ಟೆ ನಡುಗಿ
I thought, "ಆಕೆ ನಾಚುತ್ತಾಳೆ ಕರಗಿ"
ಆಕೆಗೂ ಇತ್ತೇನೋ ಚೂರು Feelingsಉ
Silent ಆದಳು for a second ಆ ಹುಡುಗಿ

ಚಾಚಿದಳು handಅನ್ನು ನನ್ನ directionಇಗೆ
ಧರಿಸಿದ್ದಳು ring ಅವಳ ring fingerಇಗೆ
Ohh Nooo!! ಅಷ್ಟರಲೇ Engage ಆಗಿದ್ದಳಾಕೆ
ಒಡೆದು ಹೋಯಿತು ನನ್ನ "HEART" ಎಂಬ ಮಡಿಕೆ

                                          --ರತ್ನಸುತ

Sunday 7 July 2013

ಕರುನಾಡು

ಕರುನಾಡಿನ ಎದೆಯ ಕರಿಮಣ್ಣಿನ ಜಾಡು
ಮಲೆನಾಡ ಬಿಗಿದಪ್ಪಿದ ಅಚ್ಚ ಹಸಿರ ಕಾಡು
ಜೇನು ಧಾರೆಯ ಮೀರಿಸುವ ಅಕ್ಕರೆಯ ನುಡಿ
ಒಮ್ಮೆಯಾದರು ಕನ್ನಡಿಗನಾಗಿ ನೀ ನೋಡು

ಬಂಗಾರದೆಳೆಯ ಇತಿಹಾಸದ ಮೆರಗು
ಬೆಟ್ಟ ಗುಡ್ಡಗಳ ಸವರಿ ಹರಿದ ಜಲ ಜಿನುಗು
ಅಂತರಾಳದ ತಳದಿ ಬೇರೂರಿದ ಸಂಸ್ಕೃತಿ
ನೆನ್ನೆ, ಇಂದು, ನಾಳೆಗಳಿಗೆ ಭದ್ರತೆಯ ಬೆರಗು

ಉಳಿ ಕೆತ್ತಿನೊಳಗೊಂದು ಶಿಲೆಯಾಗಬಹುದೆಂಬ
ನಂಬಿಕೆಯ ನಿರ್ಮಿತ ಶಿಲ್ಪಿ ಕಲೆ ಬೀಡು
ಜನಪದವೇ ಸಂಗೀತಮಯವಾಗಿದೆ ಇಲ್ಲಿ
ದಾಸ ಜಂಗಮರ ಕಂಠ ಸಿರಿಯ ಹಾಡು

ತೀಡಿದರೆ ಗಂಧ, ಬೇಡಿದರೆ ಬರಹ
ಮೂಡುವುದು ಅಕ್ಷರದ ರೇಷಿಮೆಯ ಸಾಲು
ಕಡಲ ತೀರದ ಅಲೆಯ, ಆಸೆ ಬೀಸಿದ ಬಾಲೆಯ
ನಿರಾಸೆಗೊಳಿಸದ ನೌಕೆಯ ಧನ್ಯತೆಯ ಬಾಳು

ಬಗೆದರೆ ಗರ್ಭ ನಿಧಿ, ಮುಗಿದರೆ ಜೀವ ನದಿ
ಸಮೃಧ ಬೆಳೆ ಬಾಳುವ ಚೇತನದ ನೆಲ
ಯಾರೇ ಬಂದರೂ ಬೇದ ತೋರದ ಮಡಿಲು
ಹೆಜ್ಜೆ ಇಟ್ಟಲ್ಲಿ ಹಾಸುತಲಿ ಹೂವಿನ ದಳ

ವನ್ಯ ಮೃಗ ರಾಶಿ, ಸಸ್ಯ ಸಿರಿ ಕಾಶಿ
ತಾಂತ್ರಿಕ ತೊಟ್ಟಿಲನು ತೂಗಿದ ತಾಯಿ
ಸಾದನೆಯ ಸಾಧನವ ಸಮ ಹಂಚಿದ ಧರಣಿ
ತಿದ್ದುವವರ ಲೇಖನಿಯ ಹೊಕ್ಕ ಶಾಯಿ

ಗಡಿಯಲ್ಲಿ ಗುಡುಗಿದ ಅಪಸ್ವರದ ಗುಡುಗು
ಗಂಡೆದೆಗಳ ಗೆಲ್ಲಲಾಗದೆ ಸೋತವು ಕೊನೆಗೆ
ಸಹೃದಯಶೀಲ ಅಭಿಮಾನವ ಹೆಚ್ಚಿಸಿದೆ
ಅನುಮಾನವೇ ಇಲ್ಲ "ಕನ್ನಡ ಮಣ್ಣೆಡೆಗೆ"

ಕಲ್ಪ ವೃಕ್ಷ ಕನ್ನಡಿಯ ಬಿಂಬದೊಳಗೆ
ಧರ್ಮ ಸಕಲವೂ ಒಂದೇ ಕನ್ನಡತನದಲ್ಲಿ
ಚೆಲುವ ಕನ್ನಡ ನಾಡು ಉದಯವಾಗಲಿ
ಹೃದಯ ಹೃದಯದೊಳಗೆ ಕನ್ನಡದ ನೆತ್ತರರಿಯಲಿ

                                            --ರತ್ನಸುತ 

Friday 5 July 2013

ಅಂತ್ಯ

ಅವನಿಗೆ ಅಂದು ಎಂದಿಗಿಂತಲೂ ಹೆಚ್ಚು ಕೆಲಸ, ಹಾಗಾಗಿ ಮನೆ ತಲುಪುವಲ್ಲಿ ತಡವಾಗಿತ್ತು. ಮಧ್ಯ ರಾತ್ರಿಗೂ ಮೀರಿದ ಸಮಯ, ಅವನ ಸ್ಕೂಟರ್ ಮೇಲೆ ಸಾಗಿತ್ತು ಸವಾರಿ. ಅವನ ಮನೆಗೂ ಅವನಿದ್ದ ಸ್ಥಳಕ್ಕೂ ನಡುವೆ ದಾರಿಯಿಡೀ ವಿಸ್ತರಿಸಿದ್ದ ಸ್ಮಶಾಣವಿತ್ತು. ಅವನಿಗೆ ಆ ಹೊತ್ತಿನಲ್ಲಿ ಮನೆಗೆ ಬಂದು-ಹೋಗಿ ಅಭ್ಯಾಸವಾಗಿದ್ದರಿಂದ ಯಾವುದೇ ಭಯ ಆತಂಕ ಇರಲಿಲ್ಲ.
ಆದರೆ ಗೊಂದಲವೆಲ್ಲಾ ಒಂದೇ, ಅವನಿಗೆ ಪರಿಚಿತರು ಅವನನ್ನ ಗುರುತಿಸುವಲ್ಲಿ ಸೊಲುತ್ತಿದ್ದರು, ಆವ ಮಾತನಾಡಿಸಿದರೂ ಲೆಕ್ಕಿಸದೆ ಹೊರಟು ಬಿಟ್ಟರು, "ಆ ಹೊತ್ತಿನಲ್ಲಿ ಪರಿಚಿತ-ಅಪರಿಚಿತ ಧ್ವನಿಯ ಗ್ರಹಿಸುವ ಸ್ಥಿತಿಯಲ್ಲಿ ಯಾರು ಇರುತ್ತಾರೆ" ಅಂದುಕೊಂಡು ಅವ ಮುನ್ನಡೆದ, ಆದರೆ ವಿಚಿತ್ರವೆಂಬಂತೆ ಕೆಲವರು ಅವನನ್ನ ತಡೆದು ಮಾತನಾಡಿಸಿದರು, ಅದೂ ಒಂದು ಗೊಂದಲಮಯವಾಯ ವಿಷಯವೇ!!

ಇನ್ನೇನು ಕಣ್ಣೋಟ ದೂರದಲ್ಲಿ ಅವನ ಮನೆ. ಒಂದು ಎಡ ತುರುವು ತಗೆದುಕೊಂಡು ನೇರ ಹೋದರೆ ಮೂರನೇ ಮನೆ. ಆದರೆ ಆವತ್ತು ಅವನಿಗೆ ಆಶ್ಚರ್ಯ, ಮನೆ ಬಾಗಿಲು ತೆರೆದೇ ಇತ್ತು, ಬೀಗ ಮುರಿದಂತೆ ಕಂಡಿರಲಿಲ್ಲಾ. ಕಳ್ಳರ ಕೆಲಸವಾಗಿದ್ದರೆ ಎಲ್ಲವನ್ನೂ ಅಚ್ಚುಕಟ್ಟಾಗಿ ಮಾಡುತ್ತಿದ್ದರು, "ಇದ್ಯಾವುದೋ ಪರಿಚಿತರ ಕೆಲಸವೇ" ಅಂದುಕೊಂಡು ಒಳಗೆ ಹೋಗಲು ಮುಂದಾದ, ಹಣೆಯಲ್ಲಿ ಬೆವರು, ಚೂರು ಕೈಕಾಲು ನಡುಕ ಬಂದಿತ್ತು, ಹೊಸಲು ದಾಟಿ ನಾಲ್ಕು ಹೆಜ್ಜೆ ಮುಂದಿಡುತ್ತಿದ್ದಂತೆ ಯಾರೋ ಅವನ ಹಿಂದೆ ನಿಂತಂತೆ ಭಾಸವಾಯ್ತು, ಹಿಂದೆ ತಿರುಗಿ ನೋಡುವಷ್ಟರಲ್ಲಿ ಅವನ ತಲೆಗೆ ಜೋರಾದ ಪೆಟ್ಟು, ಅಷ್ಟೇ; ಇದ್ದಲ್ಲೇ ಅವ ಕುಸಿದು ಬಿದ್ದ.

ಮಂಜು ಮಂಜಾದ ಆವರಣ, ಆಗಷ್ಟೇ ನಿದ್ದೆಯಿಂದ ಎದ್ದವನಂತೆ ಅವ ಮೈ ಮುರಿಯುತ್ತಾ ಕಣ್ಣುಜ್ಜಿ ನೋಟ ಸ್ಪಷ್ಟಪಡಿಸಿಕೊಂಡ, ಆಗಲೇ ಅವನಿಗೆ ಅನಿಸತೊಡಗಿದ್ದು ಅವನು ಬಂದಿಯಾಗಿದ್ದಾನೆಂದು. ಅದು ಗಾಜಿನ ಮನೆ, ಸುತ್ತಲು ಧೂಪದ ತೆಳು ಪರದೆ, ಅದರಾಚೆ ಒಂದಷ್ಟು ಮಂದಿ ನಿಂತಿದ್ದರು, ಅವರ್ಯಾರು-ಎತ್ತ ಎಂಬ ಸುಳಿವು ದೊರೆತಿರಲಿಲ್ಲಾ.
ಅಷ್ಟರಲ್ಲೇ ಯಾರೋ ಒಬ್ಬ ಅರೆ ಬೆತ್ತಲೆ ಮನುಷ್ಯ ಮೈಯೆಲ್ಲಾ ವಿಭೂತಿ ಬಳಿದುಕೊಂಡು, ಕೊರಳಲ್ಲಿ ಮಣಿ, ರುಧ್ರಾಕ್ಷಿ ಮಾಲೆ ಧರಿಸಿ, ಹಣೆ ಕಾಣದಷ್ಟು ಗಂಧ ಬಳಿದುಕೊಂಡು, ಕೆಂಪು ಕಣ್ಣುಗಳಿಂದ ನನ್ನನ್ನು ಧಿಟ್ಟಿಸಿದ.  "ನೀನು ಯಾರು??" ಎಂದು ನನ್ನ ಕೆಲಿದ. ನನಗೆ ಆತಂಕದೊಂದಿಗೆ ಚೂರು ನಗು ಬಂದರೂ, ನಗದೆ ಏನೊಂದು ಮಾತಾಡದೆ ಸುಮ್ಮನಿದ್ದೆ. ಕೈಯ್ಯ ತುಂಬಾ ವಿಭೂತಿ ಹಿಡಿದು ನನ್ನ ಮೇಲೆ ಸುರಿದು ಮತ್ತೆ ಗಾಜಿನ ಬಾಗಿಲು ಮುಚ್ಚಿದ. ಎರಡು ಮೂರು ಬಾರಿ ಸೀನಿದ ಮೇಲೆ ಸ್ವಲ್ಪ ಚೇತರಿಸಿಕೊಂಡು "ನನ್ನ ಹೆಸರು ಸದಾಶಿವ, ಇದು ನನ್ನ ಮನೆ. ನೀನು ಯಾರು?" ಅಂದ.ಸದಾಶಿವನ ಮಾತಿಗೆ ಮಂತ್ರವಾದಿ ಉತ್ತರಿಸದೆ, ಯಾರಿಗೋ ಸದಾಶಿವನ ಪರಿಚಯ ಮಾಡಿಕೊಟ್ಟದ್ದು ಕೇಳಿಸಿತು. ಆ ಅಪರಿಚಿತ ಮನುಷ್ಯ ಹತ್ತಿರವಾದಂತೆ ಅವರು ಸದಾಶಿವನ ಚಿಕ್ಕಪ್ಪ ಅಂತ ಸದಾಶಿವನಿಗೆ ಖಾತರಿ ಆಯ್ತು.

ಸದಾಶಿವನಿಗೂ ಅವನ ಚಿಕ್ಕಪ್ಪನಿಗೂ ಆಗಾಗ ಆಸ್ತಿ ವಿಷಯದಲ್ಲಿ ಜಗಳಗಳಾಗುತ್ತಿತ್ತು, ಆಸ್ತಿ ಅಂದರೆ ಆ ಮನೆ ಒಂದೇ ಅಲ್ಲ, ಊರಲ್ಲಿನ ತೋಟ, ವೊಲ, ಗದ್ದೆ ವಗೇರೆ ವಗೇರೆ. ಅದೇ ಕಾರಣಕ್ಕೆ ಸದಾಶಿವನನ್ನ ಅವನ ಚಿಕ್ಕಪ್ಪ ಕೊಲೆ ಮಾಡಿಸಿದ್ದ. ಪಾಪ ತಾನು ಸತ್ತ ಸಂಗತಿ ಖುದ್ದು ಸದಾಶಿವನಿಗೂ ಗೊತ್ತಿರಲಿಲ್ಲ, ಕೊಲೆ ಮಾಡಿ ಸಂಸ್ಕರಿಸದೆ ಪಿಷಾಚಿ ಮಾಡಿ ಬಿಟ್ಟಿದ್ದ ಅವನ ಚಿಕ್ಕಪ್ಪ. ಸದಾಶಿವನಿಗೆ ಅಳು, ಕೋಪ, ಜುಗುಪ್ಸೆ ಎಲ್ಲವು ಒಟ್ಟಿಗೆ ಬಂತು, ತನ್ನಲ್ಲಿದ್ದ ಪೈಷಾಚಿಕ ಶಕ್ತಿಯನ್ನೆಲ್ಲಾ ಬಳಸಿ ಗಾಜಿನ ಮನೆ ಮುರಿದು ಏಕಾಏಕಿ ತನ್ನ ಚಿಕ್ಕಪ್ಪನ ಮೇಲೆ ಹಾರಿ ಕೊಲೆ ಮಾಡಲೆತ್ನಿಸಿದ. ಚಿಕ್ಕಮ್ಮ, ಅವರ ಮಕ್ಕಳು, ಮಂತ್ರವಾದಿ ಎಲ್ಲರೂ ಅವನನ್ನ ಹಿಡಿದು ಹಿಂದಕ್ಕೆ ಜಗ್ಗಿದರು.
ಅರೆ!! ಅವನು ಪಿಷಾಚಿ ಆದರು ಎಲ್ಲರ ಸ್ಪರ್ಶ ಅವನ ಮೇಲೆ ಬಿತ್ತಲ್ಲಾ, ಅವನಿಗೆ ಆಶ್ಚರ್ಯ!! ಕಣ್ಣು ಮಿಟುಕಿಸಿ ನೋಡಿದರೆ ಎಲ್ಲವೂ ಇದ್ದಂತೇ ಇತ್ತು ಮತ್ತೊಮ್ಮೆ ಮಿಟುಕಿಸಿದರೆ ಎಲ್ಲವೂ ಬದಲು, ಆವ ಬದುಕಿದ್ದ, ಎತಾ ಪ್ರಕಾರ ಅವನ ಚಿಕ್ಕಪ್ಪನ ಮೇಲೆ ಜಗಳಕ್ಕಿಳಿದಿದ್ದ.

ಭೂಕಂಪವಾದ ಅನುಭವ ಒಮ್ಮೆಲೇ, ಅಲ್ಲೋಲ ಕಲ್ಲೋಲವಾದಂತಿದೆ ಜಗತ್ತು. ಗಾಜಿನ ಗೋಡೆಗಳಿಗೆ ಅಪ್ಪಳಿಸುತ್ತ ಎಚ್ಚರವಾಯಿತಿ ಸದಾಶಿವನಿಗೆ, ಹೌದು ಅವನಿನ್ನೂ ಧಿಗ್ಬಂದನದಲ್ಲಿದ್ದ, ಸತ್ತಿದ್ದ !! ಅವನ ಆತ್ಮವ ಧಹಿಸಲು ಅವನನ್ನ ಯಾವುದೋ ನಿಘೂಢ ಸ್ಥಳಕ್ಕೆ ಕರೆತರಲಾಗಿತ್ತು . ಅವನಿಗೆ ಆ ಸ್ಥಳ ಗೊತ್ತಿತ್ತು, ಅದು ಅವನದ್ದೇ ನೀಲಗಿರಿ ತೋಪು. ನೋಡು ನೋಡುತ್ತಿದಂತೆ ಅವನು ನಿಶಕ್ತನಾಗುತ್ತಿದ್ದ, ಮಂತ್ರವಾದಿಯ ಮಾತುಗಳಿಗೆ ಆವ ತಲೆಯಾಡಿಸುತ್ತಿದ್ದ. ಅವನಿಗೆ ಒದಗಿದ್ದು ಧರಿದ್ರ ಸಾವು. ಅತ್ತ ಅಂತ್ಯ ಸಂಸ್ಕಾರವೂ ಆಗಿರಲಿಲ್ಲ, ಇತ್ತ ಆತ್ಮಕ್ಕೂ ಶಾಂತಿ ದೊರೆಯಲಿಲ್ಲ. ಮಂತ್ರವಾದಿಯ ಮರ್ಮ ಜ್ವಾಲೆಗೆ ಸಿಲುಕಿದ ಆತ್ಮ ಚೀರಿತ್ತು "ಅಯ್ಯೋ, ಅಮ್ಮ" "ಅಯ್ಯೋ, ಅಮ್ಮ", ಆಗಲೇ ಸಮುದ್ರದ ಧಟ್ಟ ಅಲೆ ಅವನ ಮೇಲೆ ಅಪ್ಪಳಿಸಿತ್ತು. ಸದಾಶಿವನ ಅಮ್ಮ ಅವನನ್ನ ಎಚ್ಚರಿಸಲು ಪ್ರಯತ್ನಿಸಿ ಕೊನೆಗೆ ಮುಖದ ಮೇಲೆ ಲೋಟ ನೀರೆರಚಿದಳು.

ಸದಾಶಿವ ಈಗ ನಿಜಕ್ಕೂ ಬದುಕಿದ್ದ, ಅದ ಖಾತರಿ ಪಡಿಸಿಕೊಳ್ಳಲು ತನ್ನ ಅಮ್ಮನ ಬಾಳಿ ಚಿವುಟಿಸಿಕೊಂಡ.
ಆವ ರಿಯಲ್ ಎಸ್ಟೇಟ್ ಉದ್ಯಮಿ, ಊರಿನ ಜನಕ್ಕೆಲ್ಲಾ ನಾಮ ಹಾಕಿದ್ದಲದೇ, ತನ್ನ ಚಿಕ್ಕಪ್ಪನ ಆಸ್ತಿಯನ್ನೂ ಸುಳ್ಳು ಧಾಕಲಾತಿಗಳಿಂದ ತನ್ನ ಹೆಸರಿಗೆ ಮಾಡಿಕೊಂಡಿದ್ದ.
ಅಂದು ಚಿಕ್ಕಪ್ಪನ ಜೊತೆ ಕೊನೆಯ ಸುತ್ತಿನ ಮಾತುಕತೆಯಿತ್ತು. ಅಮ್ಮನಿಗೆ ಹೇಳಿ ಚಿಕ್ಕಪ್ಪನಿಗೆ ಕರೆ ಮಾಡಿಸಿದ.

ಚಿಕ್ಕಪ್ಪ : "ಹಲೋ, ಯಾರ್ ಮಾತಾಡೋದು"
ಸದಾಶಿವ : "ನಾನು ಚಿಕ್ಕಪ್ಪ ಸದಾಶಿವ"
ಚಿಕ್ಕಪ್ಪ : "ನೀನು ಕೆಳಿದಷ್ಟು ಹಣ ತರ್ತೀನಪ್ಪ, ಇನ್ನೇನು ಅರ್ಧ ಗಂಟೇಲಿ ಅಲ್ಲಿರ್ತೀನಿ"
ಸದಾಶಿವ : "ಏನು ಬೇಡ ಬನ್ನಿ ಚಿಕ್ಕಪ್ಪ, ನಾನು ಪಾಪಿ ಇಷ್ಟು ದಿನ ನಿಮ್ಮನ್ನ ಗೋಳ್ಹೊಯ್ಕೊಂಡೆ. ರಾತ್ರಿ ಅಪ್ಪ ಕನ್ಸಲ್ಲಿ ಬಂದು ಬುದ್ದಿ ಹೇಳಿದ್ರು, ನಿಮ್ಮ ಆಸ್ತಿ ನಿಮ್ಗೆ ಸೇರಿದ್ರೇನೇ ಅವರ ಆತ್ಮಕ್ಕೆ ಶಾಂತಿ ಅಂತೆ"
ಇಷ್ಟು ಹೇಳಿ ಕಾಲ್ ಕಟ್ ಮಾಡಿದ.

ಅಮ್ಮ ಮಗ ಒಳ್ಳೆಯವನಾದ ಅಂತ ದೇವರಿಗೆ ತುಪ್ಪದ ದೀಪ ಹಚ್ಚಿ ಖುಷಿ ಪಟ್ಳು, ಚಿಕ್ಕಪ್ಪ ಆಸ್ತಿ ಧಕ್ಕಿಸ್ಕೊಂದು ಖುಶಿಯಾದ. ಸದಾಶಿವ ರಿಯಲ್ ಎಸ್ಟೇಟ್ ಕೆಲ್ಸ ಬಿಟ್ಟು ವ್ಯವಸಾಯಕ್ಕಿಳಿದ, ಕನಸಲ್ಲಿ ಕಂಡ ದೃಶ್ಯಗಳೆಲ್ಲಾ ಅವನಲ್ಲೇ ಗುಟ್ಟಾಗಿ ಉಳಿಯಿತು.


                                                                                                                                        --ರತ್ನಸುತ 

Thursday 4 July 2013

ತೊಟ್ಟು ಹನಿಗಳು!!

ನೆಗಡಿ ಆದಾಗ ಸಹಜ
"ತಲೆ" ನೋವು
ನಿನ್ನ ನೆನಪಿನೊಂದಿಗೆ ಬಂದಂತೆ
"ಎದೆ" ನೋವು

ದೇವರು ಕುರುಡನಲ್ಲಾ
ಶಿಲ್ಪಿ ಕುರುಡ
ಇರದ ಕಣ್ಣನು ಕೆತ್ತಿ ಬಿಟ್ಟ !!

ಫಲ ನೀಡಿದ ಎಮ್ಮೆ ಕರಿಯಿತು
ವಾರವೆಲ್ಲಾ ಗಿಣ್ಣು ಹಾಲು
ಕರುವಿಗೆ ಸಿಕ್ಕಿದ್ದು ನಾಲ್ಕು ತೊಟ್ಟು
ಮಿಕ್ಕಿದ್ದೆಲ್ಲಾ ಕಂಡವರ ಪಾಲು

ಮಾವಿನ ತೋಪಿಗೆ ಇಟ್ಟ ಕಾವಲು
ತಡೆಯಲಾದೀತೇ ಗೆದ್ದಲ?
"ಹುಡುಗಿ", ನೀ ಅಡಗಿಸಿಟ್ಟರೂ ಹೃದಯವ ಕದಿವುದೇ
ನನ್ನ ಮನದ ಹಂಬಲ


(ವಿದೇಶದಿಂದ ಹಿಂದಿರುಗಿದವಳ ಕುರಿತು)
ನಾಲ್ಕೆಳೆ ಜಡೆಯವಳಾಗಿದ್ದೆ
ನನ್ನ ಬಿಟ್ಟು ಹೋಗುವ ಮುನ್ನಾ
ಎರಡೆಳೆ ಜಡೆಯವಳಾಗಿರುವೇಕೇ?
ಮರೆತೆಯ ಸೀಗೇಕಾಯನ್ನ (ಅರ್ಥಾತ್ ಕನ್ನಡವನ್ನ)

ನಕ್ಕು-ನಕ್ಕು ಹೊಟ್ಟೆ ಹುಣ್ಣಾಗಿದೆ
ಇದ್ದ ನೋವುಗಳು ಮಣ್ಣಾಗಿದೆ, ಸೋತು ಸುಣ್ಣಾಗಿದೆ!!!


                                                   --ರತ್ನಸುತ




ಹಾವಳಿ

ಹಸಿದವನ ಇರುಳುಗಳು 
ಹೆಸರಿಲ್ಲದ ಕನಸುಗಳು 
ಹಸಿ ಮನದ ಬಯಲಿನಲ್ಲಿ 
ಹುಸಿ ಬೆಳಗಿದ ದೀಪಗಳು 
ಪಾಳು ಬಿದ್ದ ಹಳೇ ರಂಗ 
ನೀಡಿತು ನೂತನ ಕರೆಯ 
ಹೆಪ್ಪುಗಟ್ಟಿದ ಕಡಲ 
ಹಾಯಬೇಕಿದೆ ಹರೆಯ 
ಏಕಾಂಗಿ ನಾ ಅಲ್ಲಿ 
ಅಪರಿಚಿತರೇ ನನಗೆಲ್ಲಾ 
ಆದರೂ ಬಡಗಣ್ಣುಗಳ 
ಹಳೇ ಚಾಳಿ ಬಿಡಲಿಲ್ಲಾ!!

              --ರತ್ನಸುತ 

Wednesday 3 July 2013

ತೊಟ್ಟು ಹನಿಗಳು!!

ಇತಿ-ಮಿತಿ ಇರಿಸಿತು
ಅನ್ಯರಿಗೆ ಮೋಸ ಮಾಡದಿರಲು.
ತನಗೆ ತಾನೇ ಮೋಸ ಮಾಡಿಕೊಳಲು
ಬಡ ಮನಸು ಯಾವ ಮಿತಿಯನೂ ಇರಿಸಿಕೊಳ್ಳದೇ !!
___________________________________________
ಮಳೆಯೊಂದಿಗೆ ನಿನ್ನ
ಪ್ರೇಮ ಸಂದೇಶವ ರವಾನಿಸಿದೆಯಾ ??
ಯಾಕೋ ಜೋರಾಯ್ತು ಗುಡುಗು-ಸಿಡಿಲು
ನಡುವೆ ಅಲ್ಲಲ್ಲಿ ಕೇಳಿಬಂದರೂ
ಪೂರ್ತಿ ಗ್ರಹಿಸುವಲ್ಲಿ ಸೋತೆ, ಮತ್ತೆ ಸೋತೆ !!
___________________________________________
ತೇರೆಳೆದ ದಾರಿಯಲಿ
ನೀ ನಡೆದೆ ಗೊತ್ತೆನಗೆ
ನೀ ಹೆಜ್ಜೆ ಇಟ್ಟೆಡೆ
ಮರು ಚಿಗುರಿದೆ ಗರಿಕೆ
___________________________________________
ಬರೆದ ಮಾತ್ರಕೆ ನಾ ಕವಿಯಲ್ಲಾ
ನಿನ್ನ ಪ್ರೀತಿಸಿದ ಮೇಲೂ ಪ್ರೆಮಿಯಾಗಲಿಲ್ಲವಲ್ಲಾ
ಅದಕ್ಕಾಗಿ ಮನಸು ಯಾವುದಕ್ಕೂ ಮನ್ನಣೆ ಕೊಡುತ್ತಿಲ್ಲಾ !!
___________________________________________

                                                             --ರತ್ನಸುತ

ನಮ್ಮ ಸುತ್ತಾ ಒಂದು ಸುತ್ತು























ಅಂಗಲಾಚಿದ ಕೈಗೆ ಎಂಜಲನ್ನವ ಕೊಡುವ
ನಂಜು ತುಂಬಿದ ಮನದ ಮನುಜರಿಲ್ಲಿ
ಬಿಚ್ಚು ಬಾಳಿನ ಮನೆಗೆ ಮಂಜುಗಟ್ಟಿದ ಕಿಟಕಿ
ನೋಟ ಹಾರುತಲಿಲ್ಲಾ ಸ್ವಾರ್ಥ ಬೇಲಿ

ಬತ್ತವಿಲ್ಲದ ಬಳ್ಳ, ಎತ್ತು ಕಟ್ಟಡ ನೇಗಿಲಿದ್ದರೆಲ್ಲಿದೆ
ಅವಕೆ ಸ್ಥಾನ-ಮಾನ
ಮೇಲು ಕೀಳಿನ ಘನತೆ, ಸಮತೆ ಸಾರದ ಹಣತೆ
ಸರಿಪಡಿಸಲಿರಬೇಕೇ ರಾಮ ಬಾಣ ?

ನೆತ್ತರಿಲ್ಲದ ನರವ, ಕೊಡುಗೆ ಇಲ್ಲದ ಕರವ
ಪಿಡಿದು ಕತ್ತರಿಸುವುದು ಪಾಪವಲ್ಲಾ
ಕಿಚ್ಚಿರದ ಎದೆ ಮೇಲೆ ಮಚ್ಚು ಸವರುತ್ತಲಿ
ಹೊತ್ತಿಸಿದ ಕಿಡಿಗಿಚ್ಚು ಬೆಳಕಿಗಲ್ಲಾ

ಕಾಮದಾಹದ ಕೊರಳ ಮಾನವೀಯತೆ ಮರೆತು
ಬಗೆದು ಹಾಕುವ ಬಲದ ನಾರಿ ಎಲ್ಲಿ ?
ತನ್ನ ಬಿಂಬವ ತಾನೇ ಜರಿದ ತಾಯ್ಗನ್ನಡಿ 
ಹೆಣ್ಣಾಗಲು ತನ್ನ ಕರುಳ ಬಳ್ಳಿ

ತಿಂದು ತೇಗಿದ ಹೊಟ್ಟೆ, ಗಂಧ ಮೆತ್ತಿದ ಬಟ್ಟೆ
ಎದೆ ಸಾಗರದಲಿ ವಿಷ ಮಂಥನ
ತನ್ನ ತಾನೇ ಗೆಲ್ಲಿಸುತ ಸೊಲುವವರಲ್ಲಿ
ಆತ್ಮಾಭಿಮಾನದ ಸರ್ವ ಪಥನ

ರಾಡಿಯಾದ ಮನಕೆ ರೂಢಿಯಾಗಿದೆ
ಭ್ರಷ್ಟತನವೊಂದೇ ಹಸಿವ ನೀಗಿಸೋ ದವಸ
ಎತ್ತ ಸಾಗಿತೋ ಪಯಣ, ಗುರಿ ಎಲ್ಲಿಹುದೋ
ಸುಳಿವಿರದೆ ಹೆಚ್ಚಿದೆ ಓಟದ ರಭಸ

ಕಣ್ಣು ಕುರುಡಾಗಲಿ, ಮಾತು ಬಿದ್ದೋಗಲಿ
ಹಿತ ವಚನ ಆಲಿಸದ ಕಿವಿಯು ಕಿವುಡಾಗಲಿ
ಮನಸು ಮನಸಲೇ ಮಾತು, ಉಸಿರ ಸ್ಪರ್ಶದ ಪರಿಚಯದಲಿ
"ನಾನು" "ನೀ"ನೆಂಬುದಳಿದು, ಜಗವೇ ಒಂದಾಗಲಿ ......

                                                   
                                                 --ರತ್ನಸುತ 

Monday 1 July 2013

ತಳ್ಳು ಬಂಡಿ ಸರಕು






















ಉರುಳಿದ ತಳ್ಳು ಬಂಡಿಯಲ್ಲಿ
ಸೊಪ್ಪು, ಹಣ್ಣು, ತರಕಾರಿ
ಮಾರುವ ಮರ್ಮ ರೀತಿಗಳನು
ಬದಲಿಸಿದ್ದನು ವ್ಯಾಪಾರಿ
ಕೊಳೆತವೆಲ್ಲಾ ಅಡಿಗೆ ಸಿಲುಕಿಸಿ
ಹೊಳೆದವನ್ನೇ ಬಿಂಬಿಸಿ
ಗಿರಾಕಿ ಸಿಕ್ಕರೆ ಕೆ.ಜಿ ತೂಕಕೆ
ಕೊಳೆತವನ್ನೂ ಸೇರಿಸಿ

ಕಟ್ಟು ಸೋಪ್ಪನು ಎರಡು ಮಾಡಿ
"ಒಂದು ಕೊಂಡರೆ ಒಂದು ಉಚಿತ"
ಹಾದು ಹೋದವರನ್ನು ಸೆಳೆಯುವ
ಅವನ ಆಮಿಷದ ಪರಿ
ಕೊಂಡ ಸರಕು ಮಾರಿಕೊಂಡರೆ
ಅಂದೇ ಯುಗಾದಿ, ದೀಪಾವಳಿ
ಯಾರು ಹುಟ್ಟಿದರಾರು ಸತ್ತರೂ
ಅವನಿಗಿಲ್ಲ ಉಸಾಬರಿ!!

ಅವರೆ ತೂಕಕೆ ಒಂದು ರೆಕ್ಕೆ
ಕರಿ ಬೇವಿನ ಎಲೆಯ ಒಡ್ಡು
ದುಬಾರಿ ದನಿಯಾ ಸೊಪ್ಪು
ಕೊಟ್ಟ ಚೆಲ್ಲರೆಗೆ ಹೊಡೆಯಿತು ಸೆಡ್ಡು
ಉಳಿದ ನಾಲ್ಕು ಬಲಿತ ಬೆಂಡೀ
ಇದ್ದ ದರಕೂ ಹೆಚ್ಚು ದುಬಾರಿ
ತೊಂಡೇ, ಬದನೇ, ಈರುಳ್ಳಿ
ಕಣ್ತಪ್ಪಿಸಿ ಬಿತ್ತು ಬುಟ್ಟಿಗೆ ಜಾರಿ

ಹಣ್ಣಲ್ಲದ ಹಣ್ಣು ಗುಡ್ಡೆ
ಏಟು ತಿಂದು ಬಿದ್ದ ಮಾವು
ಒತ್ತಡಕೆ ಹಣ್ಣಾದ ಬಾಳೆ
ದ್ರಾಕ್ಷಿ ಗೊಂಚಲ ಬಿಟ್ಟ ಪೋಲಿ
ಪರಂಗಿ ಮೇಲೆ ನೊಣಗಳ ದಾಳಿ
ಸೇಬಿನೊಂದಿಗೆ ಸೀಬೇ ಹಣ್ಣು
ಹಲಸಿಗೆ ಮೆತ್ತಿತ್ತು ಮಣ್ಣು
ಮುತ್ತಿದವುಗಳಿಗುನ್ಮತ್ತ ಜೇನು

ಮಾರಿಹೊದವು ತಾನೇ ಎಲ್ಲಾ
ಮೂರು ಕಾಸಿನ ಲಾಭ ಇಲ್ಲಾ
ಮಾರು ಸಂತೆಯ ಏರು-ಪೇರಿಗೆ
ತತ್ತರಿಸಿದ ಬಡ ವ್ಯಾಪಾರಿ
ಮುಂದೆ ಹಬ್ಬದ ಕನಸ ಕಂಡು
ಆದ ನಷ್ಟವ ನೆಂಜಿಕೊಂಡು
ಮತ್ತೆ ಸಜ್ಜಾಯಿತು ಬಂಡಿ
ಮಾರಾಟಕೆ ಮರು ತಯಾರಿ......

                         --ರತ್ನಸುತ 

ನೆನಪಿನ ದಿಂಬು

ಅಮ್ಮಳ ರೇಷ್ಮೆ ಲಂಗ
ಅಪ್ಪನ ಹಳೇ ಅಂಗಿ
ಅಜ್ಜಿಯ ಹರಕಲು ಸೀರೆ
ಅಜ್ಜನ ಮಾಸಲು ಪಂಚೆ
ಬಾಲ್ಯದ ಮುರುಕಲು ಗೊಂಬೆ
ಬಿಗಿಯಾದ ಸರಾಯಿ-ಚಡ್ಡಿ
ಅಂಗನವಾಡಿ ಪುಸ್ತಕ ಚೀಲ
ಕೈ ಹೊಲಿಗೆಯ ಸೂಜಿ-ದಾರ
ಇರುಳಿನ ಕವಲು, ನೆನಪಿನ ಪಯಣ
ನೆನ್ನೆಯ ದಿಂಬು, ಇಂದಿನ ಹಾಸಿಗೆ
ನಾಳೆಯ ಕನಸು !!

                     -- ರತ್ನಸುತ

ಅತಿ ಮಧುರ ಅನುರಾಗ

ಅತಿ ಮಧುರ ಅನುರಾಗ  ನಿನ್ನೊಲವ ಮಳೆ ಹನಿಗೆ  ಮಿಂದಿರಲು ಮನಸಿದು     ನಿಂತು ನಿಂತು ಬೀಸಿದಂತೆ  ಸಂಜೆ ತಂಪು ಗಾಳಿ  ಅಂಕೆ ಮೀರಿ ಬರುವ ಮಾತು  ಹಾಕಬೇಕೇ ಬೇಲಿ  ಜೊತೆ ಇರಲು ...