ಎಲ್ಲಿ ಉಳಿದವೋ ಕಾಣದಂತೆ !!!

ಎಲ್ಲಿ ಮೇಣದ ದೀಪ ?
ಎಲ್ಲಿ ಕೈ ಸರಪಳಿ ?
ಎಲ್ಲಿ ಕಂಬನಿ ಮೆತ್ತಿದ ಆ ಕೆನ್ನೆಗಳು ?
ಎಲ್ಲಿ ಆಕ್ರೋಶದ
ಒಮ್ಮತದ ಘೋಷಣೆ ?
ಎಲ್ಲಿ ಸಂಚಲನದ ಸನ್ನಿವೇಶಗಳು ?

ಒಂದು ಧ್ವನಿ ಮುರಿಯಿತು ಮೌನದ ಕೋಟೆಯ
ನಿದ್ದೆಯಿಂದೆಚ್ಚರಿಸಿತ್ತೆಲ್ಲರ ಘರ್ಜಿಸಿ
ನೆತ್ತರರಿಸಿದ ಬೆತ್ತದೇಟನೂ ಲೆಕ್ಕಿಸದೆ
ಅಸಹಾಯಕತೆಯ ಇಡೀ ದಂತ ಕಥೆಯಾಗಿಸಿ
ಎಲ್ಲಿ ಆ ಪ್ರತಿಧ್ವನಿ ?
ಎಲ್ಲಿ ಆ ಶಪತ ?
ಎಲ್ಲಿ ಕುಲ-ಧರ್ಮಗಳ
ಮೀರಿದ ಸೆಳೆತ ?

ಒಂದು ಜೀವದ ಉಸಿರಿನೋರಾಟವನು ಕಂಡು
ಕೋಟಿ ಹೃದಯಗಳು ನಿಟ್ಟುಸಿರು ಇಟ್ಟ ಪರಿ
ಆಡಳಿತ ಲೋಪಗಳ ಕೈಗನ್ನಡಿಯ ಬಿಂಬ
ಬದಲಾವಣೆಯ ಕಿಚ್ಚು ಹೊತ್ತು ಉರಿಸಿದ ಉರಿ
ಎಲ್ಲಿ ಆ ಜ್ವಾಲೆ ?
ಎಲ್ಲಿ ಆ ಶಕ್ತಿ ?
ಎಲ್ಲಿ ಕಾಣದೆ ಅಡಗಿದೆ
ದೇಶ ಭಕ್ತಿ ?

ಉರಿ ಬೆವರ ಹರಿಸಿದವರಲ್ಲಿ ಉಳಿಯದ ನಾಣ್ಯ
ಉರುಳಿತೇ ನಾಯಕರ ದುರಾಸೆಯ ಕಿಸೆಗೆ !!
ಹಸಿದ ಹೊಟ್ಟೆಯ ಬಗೆದು ಕಣ್ಣು ಮುಚ್ಚಿದ ತಿರುಕ
ಬಾರದೇ ದೂರುಳಿದ ಶುಕ್ರ ದೆಸೆಗೆ
ಎಲ್ಲಿದೆ ಪರಿಹಾರ ?
ಎಲ್ಲಿದೆ ನವೀಕಾರ ?
ಘನಿಕರನುಕೂಲಕ್ಕೆ
ಸಮಯ-ಗಡಿಯಾರ !!

ಒಂದು ನಾವೆಲ್ಲರೂ ಬಂಧು-ಬಳಗ ಎಂದು
ಸಾರಿದವರ ನುಡಿ ಶಾಸನವ ಸೇರಿದೆ
ಮಾರಣ ಹೊಮದಲಿ ಶರಣಾದ ಶಾಂತಿಯ
ನಡು ಬೀದಿ ಬೆತ್ತಲೆ ಮೆರವಣಿಗೆಯಾಗಿದೆ
ಎಲ್ಲಿದೆ ಐಕ್ಯತೆ ?
ಎಲ್ಲಿ ಸಮಾನತೆ ?
ಎಲ್ಲಿದೆ ನಮ್ಮ
ನಾಳೆಗಳಿಗೆ ಭಧ್ರತೆ ?!!

                   --ರತ್ನಸುತ 

Comments

Popular posts from this blog

ಜೋಡಿ ಪದ

"ಪಾಸ್ವರ್ಡ್" - RESET ಆಗ್ತಿರ್ಲಿ ಆಗಾಗ!!!

ಗರುಡ ಪ್ರಯತ್ನ ೩