ಹೀಗೊಂದು ಹಂಸ ಕೊಳ!!

ಸೂಜಿ ಕಣ್ಣಿನ ನೋಟ
ಮಂಜು ಪರದೆಯ ಆಟ
ಕುಂಚವ ನಾಚಿಸುವ ಬೆರಳಿನಂಚು
ಕಂಚು ಕಂಠದ ಕೂಗು
ಕೊಂಚ ಅರಳಿದ ಮೊಗ್ಗು
ಸ್ವಚ್ಛ ಹಾಳೆಯ ಮುಖದ ಗಲ್ಲ ಮಚ್ಚೆ

ಜೇನು ಸಕ್ಕರೆ ನಗೆಯ
ಮಿಂಚು ಮೂಡಿಸೋ ನಡೆಯ
ಕೊಂಚ ಕೊಂಚವೇ ಹೊಂಚು ಹೂಡಿ ದೋಚಿ
ದಣಿವು ಎಂಬುದ ಮರೆತು
ತಣಿಯೆ ನಿಂತಿದೆ ಮನವು
ರಮ್ಯ ಮಾತಿನ ಮರೆಯ ಮೌನ ಮೆಚ್ಚಿ

ಕುರುಳು ಮೋಡದ ಸಾಲು
ಹೆಣೆದ ಜಡೆಯ ಬಾಲ
ಬೀಸು ಚಾಟಿಯ ಏಟು ಕಾಮನೆಗಳಿಗೆ
ಇಷ್ಟವಾಗಿಸೋ ಮುನಿಸು
ಸ್ಪಷ್ಟ ನುಡಿಯ ವರಸೆ
ಪ್ರೇಮ ಗಂಗೆಯ ಹರಿವು ಹೃದಯದೊಳಗೆ

ಕುತ್ತಿಗೆಯ ಇಳಿಜಾರು
ರಹದಾರಿಯೆದೆಯೆಡೆಗೆ
ನನ್ನೆಲ್ಲಾ ಕನಸುಗಳ ಬೆಚ್ಚಗಿರಿಸೆ
ಹಠದ ಕೊನೆಯಲ್ಲೊಂದು
ಬಿಟ್ಟು ಕೊಡುವ ಗುಣ
ನನ್ನೆಲ್ಲಾ ತುಂಟತನಗಳನು ಸಹಿಸೆ

ಶಾಂತ ಚಿತ್ತದ ಕೊಳದಿ
ಹಂಸ ಎಬ್ಬಿಸಿದಲೆಗೆ
ಅಂತರಂಗ ತರಂಗಗಳಿಗೆ ನಿತ್ಯ ಪುಳಕ
ನಿಲ್ಲದಾ ಪ್ರೇಮ ಸುಧೆ
ಹರಿಸಿದಳು  ಬಾಳಲಿ
ಸ್ವರ್ಗವಾಸಿ ನಾನು ಒದಗಿದರೂ ನರಕ

                                 --ರತ್ನಸುತ

Comments

 1. ತುಂಬಾನೇ ಚೆನ್ನಾಗಿ ಬರೆದಿದ್ದೀರಾ ಭರತ್
  ಮೆಚ್ಚಿತು ಮನವು

  ReplyDelete
  Replies
  1. ಧನ್ಯೋಸ್ಮಿ ಗುರುಗಳೇ :))

   Delete

Post a Comment

Popular posts from this blog

ಜೋಡಿ ಪದ

"ಪಾಸ್ವರ್ಡ್" - RESET ಆಗ್ತಿರ್ಲಿ ಆಗಾಗ!!!

ಗರುಡ ಪ್ರಯತ್ನ ೩