ಕಲಾವಿದನ ನೆನೆಯುತ!!

ಹುಟ್ಟೋ ಸೂರ್ಯನ ತಡೆದು ನಿಲ್ಲಿಸಿ
ಕತ್ತಲಲ್ಲೇ ಬೆವರು ಹರಿಸಿ
ಎಷ್ಟು ಯುಗಗಳ ಕಳೆದು ಆಯಿತೋ
ವಿಶ್ವ ರೂಪದ ಸ್ಥಾಪನೆ
ಹುಟ್ಟು ಸಾವಿನ ನಡುವೆ ಜೀವನ
ಪ್ರೇಮ ಪ್ರಾಸದ ಮಿಶ್ರ ಗಾಯನ
ನೂಲು ಸೂಜಿಯ ಏಕೀಕರಣವೇ
ಕಲಾವಿದನ ಕಲ್ಪನೆ

ಜೀವ ಮುಕ್ತಿಗೆ ಪ್ರಾಣ ಪ್ರಾಪ್ತಿ
ಕಲ್ಲಿನೊಳಗೆ ಶಿಲೆಯ ಮೂರುತಿ
ಕೆತ್ತಲೆಂದು ಕೊಟ್ಟನೋಬ್ಬನ
ಕೈಗೆ ಉಳಿ-ಸುತ್ತಿಗೆಯನು
ತನ್ನ ಪಾಡಿಗೆ ಇದ್ದ ನೀರಿಗೆ
ಕಡಲ ಆಸೆಯ ಹರಿವು ಕೊಟ್ಟು
ಹಬ್ಬದಾವರಣದನಾವರಣಕೆ
ನೀಡಿದ ಖುಷಿ ಅಲೆಯನು

ಸಕಲ ಜೀವ ಸಂಕುಲದಲಿ
ಕುಲ ವ್ಯಾಕುಲಗಳ ಸುಳಿಯನಿಟ್ಟು
ಸಿಕ್ಕಿಕೊಳ್ಳದ ವಿವೇಕವಿಟ್ಟ
ಮನುಕುಲದ ಪಾಲಿಗೆ
ಗಮ್ಯವೆಂಬ ಗುಟ್ಟನಿರಿಸಿ
ತಾರತಮ್ಯದ ತಾಳ ಬೇರೆಸಿ
ಸಮಾನತೆಯ ಒಗಟನಿರಿಸಿದ
ಬಿನ್ನಮತಗಳ ಸಾಲಿಗೆ

ನೂರು ಕವಲಿನ ಬಾಳ ದಾರಿ
ಮೂರು ಹಾಳೆಯ ಗ್ರಂಥ ನೀಡಿ
ಬರೆಯಿರೆಂದನು ಇಂದಿನ ದಿನಚರಿ
ನೆನ್ನೆಯನು ನೆನಪಾಗಿಸಿ
ಮುಂಬರುವ ಹಾಳೆಯೊಳಗೆ
ಬರೆವುದೇನೋ ಎಂಬ ಗೊಂದಲ
ಕನಸ ಕಾಣುವ ಗೀಳು ಕೊಟ್ಟನು
ಕಲಾತ್ಮತೆಯ ನಿರೂಪಿಸಿ

ಪ್ರಶ್ನೆಯಿಟ್ಟನು ಉತ್ತರಿಸಲು
ಬದುಕು ಕೊಟ್ಟನು ಉದ್ಧರಿಸಲು
ಮನಸ ಕೊಟ್ಟನು ಮಾನವೀಯತೆಯನ್ನು
ಪೋಷಿಸಿಕೊಳ್ಳಲು
ಕಂಬನಿಯ ಕಡಲೊಳಗೆ ಕುಳಿತನು
ಉಕ್ಕಿ ಬಂದು ನೆರವಾಗಲು
ನೋವು ನಲಿವಿಗೆ ಹೆಗಲ ಕೊಟ್ಟು
ಜೊತೆಗಾರನಾಗಲು !!!

                        --ರತ್ನಸುತ

Comments

  1. 'ಕನಸ ಕಾಣುವ ಗೀಳು' ಸರಿಯಾಗಿ ಹೇಳಿದಿರಿ.

    ReplyDelete

Post a Comment

Popular posts from this blog

ಜೋಡಿ ಪದ

"ಪಾಸ್ವರ್ಡ್" - RESET ಆಗ್ತಿರ್ಲಿ ಆಗಾಗ!!!

ಗರುಡ ಪ್ರಯತ್ನ ೩