ಅಲೆಮಾರಿಯ ಹಾಡು-ಪಾಡು

ಕಥೆಯೊಳಗೆ ಉಪಕಥೆಗಳಾಗಿ
ಕವಿತೆ ಹುಟ್ಟ ಬಹುದು
ಬರೆದುಕೊಳ್ಳದೆಯೇ ಅವು
ಕಥೆಯೊಳಗೇ ಉಳಿಯ ಬಹುದು
ಹುಟ್ಟಿನಲ್ಲೇ ಸತ್ತ ಕವಿತೆಗಳಿಗೆ
ಇಟ್ಟ ಹೆಸರು ವ್ಯರ್ಥ
ಇಡದ ಹೆಸರಿನೊಡನೆ ಉಳಿದವೇ
ಬದುಕಿಗರ್ಥ

ಸಾಲಾಗಿ ಸುಲಿದ ಅಕ್ಷರಗಳ
ಹೊಸ ಅವತಾರ
ನೆನ್ನೆ ಪೆಚ್ಚು ಮೋರೆ ಹೊತ್ತವು
ನಡೆಸಿದಂತಿವೆ ಹುನ್ನಾರ
ಅದೇ ತಂಗಲು ಇಂದು
ಹೊಸ ರುಚಿ ಕೊಟ್ಟವು
ರುಚಿಸಬಹುದೆಂಬವುಗಳೆ
ಕೈ ಕೊಟ್ಟವು

ಗುರುತಿಗೆಂದೇ ಗುರಿಯಿಟ್ಟು
ತಪ್ಪಿದ ಗುರಿ ಗುರುತಾಗಿ
ಮಾಡಿಕೊಂಡ ಅವಾಂತರದೆಡೆ
ಗುರಿ ಮಾಡದ ನೋಟ
ಮೂಗಿನ ನೇರಕ್ಕೆ ನಡೆದು
ಹಳ್ಳಕೆ ಮುಗ್ಗರಿಸಿರಲು
ಪಾಠಗಳ ಪರಿಶೀಲಿಸಬೇಕೆಂದು
ಕಲಿತೆ ಪಾಠ

ಮರ್ಮಗಳ ಬೇಧಿಸದೆ
ಕರ್ಮವೆಂದು ಸುಮ್ಮನಾ-
-ದವುಗಳಿಗೆ ಹೆಸರಿಡಲು
ಒಲ್ಲೆ ಎಂದ ಮನಸು
ಹಸಿವಿರದೇ ತುರುಕಿಕೊಂಡು
ಅಜೀರ್ಣಕೆ ಕಕ್ಕಿಕೊಂಡ
ಅತಿ ಆಸೆಯ ಒತ್ತಾಯದ
ತುತ್ತಲ್ಲವೇ ತಿನಿಸು ?!!

ನಿಂತಲ್ಲೇ ನೀರಾಗಿ
ಕೊಳೆತ ಬುಡ ಬೇರಾಗಿ
ರೆಂಬೆ ಬುಜಗಳ ಹೊರದೆ
ನಂಟುಗಳು ಮುರಿದು ಬಿದ್ದು
ಹೆಮ್ಮರದ ಬದುಕಿಗೆ
ಮುಂಬರುವ ಮಿಂಚನ್ನು
ಎದುರಿಸೋ ಛಲವಿರದಿರುವುದೇ
ಪ್ರಾಣ ಹೀರೋ ಮದ್ದು

ಮೊಳೆಗೆ ಸಿಕ್ಕರೂ ಕಾಸು 
ಹೊಸಲು ದಾಟದ ಹೊರತು
ಬೆಲೆ ಇಹುದು ಅದಕೆ
ನಿತ್ಯ ಪೂಜೆ ನಮಸ್ಕಾರ
ಜೇಬಿನಲಿ ಜಣಗುಡುವ
ಕಾಂಚಾಣದ ಪಾಲಿಗೆ
ಬಯಕೆ ತೀರಿಸಿಕೊಳುವ
ಸಲುವೇ ಬಹಿಷ್ಕಾರ

ಉಳಿವುದಾದರೆ ಉಳಿಯುವ
ಉಣಸೇ ಮರದಂತೆ
ಇದ್ದಷ್ಟೂ ದಿನ ಉಳಿಗೆ
ಉಳಿ ಸೋಕದಂತೆ
ಉಳ್ಳವರಿಗೂ ಒಲಿದು
ಇಲ್ಲದವರಿಗೂ ಒಲಿದು
ಬಿದ್ದು ಹೋಗುವ ಮರಕೆ
ಉಂಟೇನು ಚಿಂತೆ ?!!

ಮೀನಿಗೆ ಮಂಚವೆಕೆ ?
ಬಾನಿಗೆ ಕುಂಚವೆಕೆ ?
ಅವರವರು ಪಡೆವುದೇ
ಅವರವರ ಪಾಡು
ಎಲ್ಲೋ ಮೊದಲಾಗಿ
ಇನ್ನೆಲ್ಲೋ ಕೊನೆಗೊಳ್ಳುವುದು
ಹೀಗೇ ಇರಬೇಕಲ್ಲವೇ 
ಅಲೆಮಾರಿಯ ಹಾಡು ??

                      --ರತ್ನಸುತ

Comments

  1. ಅಲೆಮಾರಿಯೇ ಪುಣ್ಯಾತ್ಮ ಬಾಡಿಗೆ
    ತುಟ್ಟಿ ಬದುಕಲ್ಲಿ!

    ReplyDelete

Post a Comment

Popular posts from this blog

ಜೋಡಿ ಪದ

"ಪಾಸ್ವರ್ಡ್" - RESET ಆಗ್ತಿರ್ಲಿ ಆಗಾಗ!!!

ಗರುಡ ಪ್ರಯತ್ನ ೩