Friday, 30 November 2012

ಕತ್ತಲು - ಬೆಳಕಿನಾಟ

ದೂರ ನಿಂತೆ ಏಕೆ ನನ್ನತನದ ನೇರಳೆ?
ನಿನ್ನ ಹುಡುಕೋ ಸಲುವೆ ನನ್ನ ಬಿಟ್ಟು ಬರಲೇ?
ಎಷ್ಟು ನಟಿಸುತೀಯೆ? ಇದುವೇ ನಿನ್ನ ಸ್ಥಾನ
ಶಬ್ಧವಿಲ್ಲ ಎಲ್ಲೂ, ಪರಿಚಯಿಸಲು ಮೌನ

ಕತ್ತಲಾಚೆ ಒಂದು ಮುರಿದ ಬೆಳಕ ಬಿಲ್ಲು
ವ್ಯರ್ಥವಾಗಿ ಪಕ್ಕ ಉಳಿದ ಒಂಟಿ ಬಾಣ
ನೆರಳಿನಾಟವಾಡಿಸೋಕೂ ಬೇಕು ಬೆಳಕು
ಆಗದಿರಲಿ ಕುರುಡುತನದ ಅನಾವರಣ

ಬೆಚ್ಚಿ ಬಿದ್ದ ಮಗುವ ಹಿಡಿಯೆ ಬಿಟ್ಟು ಅಂಗೈ
ತಾಯಿ ಊಹೆಗೈಯ್ಯ ಬೇಕೇ ಅದರ ನಗುವ?
ಮಗುವಿಗಿಷ್ಟು ಸಾಲುತಿಲ್ಲ ಬೇಕು ಎದೆ
ತಬ್ಬಿ ಬೆಚ್ಚಗಿರಲು, ನೀಗಿಸೋಕೆ ಹಸಿವ

ನಟ್ಟ ನಡುವೆ ನೆಟ್ಟ ತುಳಸಿ ದಳದ ಹಸಿರು
ಕತ್ತಲಲ್ಲಿ ಕಪ್ಪು ತಾಳಿ ನಿಂತ ಜೀವ
ತೀರ್ಥ ಸುರಿದು ಕಡ್ಡಿ ಗೀರಿ ಉರಿಸಿ ದೀಪ
ಗೂಟ ಮುದುಡಿದೆ ಎದುರು ನೋಡಿ ಕಾವ

ಎಷ್ಟು ದೂರ ಚಲಿಸಲೆಂತು ಪ್ರಯೋಜಕ
ಮುಳ್ಳು ಮತ್ತೆ ಮರಳಬೇಕು ಆದಿ ಗೆರೆಗೆ
ಲೆಕ್ಕಿಸಿದವರಿಲ್ಲ ಅದರ ಸುತ್ತು ಪಯಣ
ಧಿಕ್ಕಾರವಿಟ್ಟಿತದಕೆ ಕತ್ತಲಿಗೆ

ತಮ್ಮ ತಾವೆ ಹುಡುಕುವಾಟ ಆಡಿ ಎಲ್ಲ
ಗೆದ್ದೆವೆಂದುಕೊಂಡರೂ ಗೆದ್ದವರು ಇಲ್ಲ!!
ಮತ್ತೆ ಹುಟ್ಟಿ ಬರಲಿ ಬರವಸೆಯ ಸೂರ್ಯ 
ಸೆರೆ ಮಾಡಲಿ ಕತ್ತಲನ್ನು ಬೆಳಕ ಜಾಲ......

                                               -ರತ್ನಸುತ  

Saturday, 24 November 2012

ಪಬ್ಲಿಕ್ ಪ್ರೇಮಿಗಳುಎಲ್ಲೋ ಹಲ್ಲಿಗಳು ಲೊಚಗುಡುವ ಸದ್ದು 
ಗೋಡೆಗಳೇ ಕಾಣದ ಸುತ್ತಲಿನ ಬಯಲು 
ಕಿವಿಗೊಟ್ಟು ಆಲಿಸಿ ಹಿಂಬಾಲಿಸಿದೆ ಧನಿಯ 
ಕಂಡದ್ದು ಮೈ ಮರೆತ ಪಬ್ಲಿಕ್ ಪ್ರೇಮಿಗಳು 

ಯಾರ ಹಂಗೂ ಇರದ ಅವರ ಸಾಂಗತ್ಯ
ಬಿಗಿ ಅಪ್ಪುಗೆಯ ಬಿಡಿಸಲೆಂತು ಸಾಧ್ಯ!! 
ತುಟಿಗಳನೆ ನಾಚಿಸಿ ಮರೆಯಾಗಿಸಿದೆ ಅಲ್ಲಿ 
ಚುಂಬನದ ಒತ್ತು, ಇಡೀ ಕಣ್ಣಿಗೆ ಬಿತ್ತು 

ಮಘ್ನತೆಯ ಆಳ, ಪ್ರೇಮಾನುಭವದೆತ್ತರ
ವ್ಯಕ್ತ ಪಡಿಸುವ ಪರಿಗೆ ನಾಚುವುದು ಅಕ್ಷರ 
ಆಗಾಗ ಮಾತಿಗೆ ಗೋಚರಿಸಿದ ತುಟಿ 
ಮತ್ತೆ ಸೆರೆಯಾಯಿತು ಮತ್ತೊಂದು ಮುತ್ತಿಗೆ 

ಒಂದೊಮ್ಮೆ ಹೀಗಿದ್ದು ಹಾಗೆ ಬದಲಾಗಿತ್ತು 
ಸಹಜ ಸ್ತಿತಿಗೆ ಅವರವರ ನಡುವಳಿಕೆ 
ನನ್ನ ಅಲ್ಪ ಆಲೋಚನೆಯ ಪ್ರಶ್ನಿಸುತ್ತಿದ್ದೆ
ಮತ್ತೆ ಪುನರಾವರ್ತಿಸಿದಳಾ ಕನ್ನಿಕೆ 

ಕೈಗಳು ತಡವಡಿಸಿದವು ಬರೆಯಲೆಂದು 
ಅಪಹಾಸ್ಯದ ಮೊರೆ ಹೋಗದಿರೆಂದು
ಹೇಳಿಕೊಂಡೇ ಹಿಡಿದೆ ಮನಸನೂ, ಲೇಖನಿಯನೂ
ಹೀಗೆ ಪದವಾಗಿ ಉಧ್ಭವಿಸಿತು ತುಂಟ ಕಾವ್ಯವೊಂದು 

ನಮ್ಮಲ್ಲಿ ಪ್ರೇಮಿಗಳ ಗುಟ್ಟೇ ಪ್ರೀತಿ 
ಗುಟ್ಟು ರಟ್ಟಾದರೆ ಆಗುವುದು ಪಜೀತಿ 
ಪಜೀತಿ ಮಾಡಿಕೊಳ್ಳುವುದೇ ಪ್ರೀತಿಯಾಗಿದೆ ಇಲಿ (ಪಶ್ಚಿಮ ದೇಶಗಳಲ್ಲಿ)
ರೂಢಿಯಾಗಿರುವ ಮಂದಿಗೇಕೆ ಪಂಚಾಯ್ತಿ........


                                              -- ರತ್ನಸುತ 


ನೀರವ ಸ್ಥಿತಿಯಲ್ಲಿ ಯಾರಿವನೆನ್ನದಿರು

ನೀರವ ಸ್ಥಿತಿಯಲ್ಲಿ ಯಾರಿವನೆನ್ನದಿರು ನೀನಿರದೆ ಈ ಗತಿ ಸಿದ್ಧಿಸಿತು ಜೀವಕೆ ಹಾಡುಹಗಲಲ್ಲಿ ನೀ ಆವರಿಸಿಕೊಂಡಿರುವೆ ಕನಸೊಂದು ಬೀಳುತಿದೆ ಗೊತ್ತಿದ್ದೂ ಬಾವಿಗೆ ಬ...