Wednesday 26 June 2013

ತೊಟ್ಟು ಹನಿಗಳು!!

ನನ್ನ ಸಹಜತೆಯ "ನಾಟಕೀಯ" ಎಂದು ಭಾವಿಸಿದ್ದು
ನಿನ್ನ ಅಲ್ಪತನ
ನಿನ್ನ ನಾಟಕವ "ಸಹಜತೆ" ಎಂದು ಭಾವಿಸಿದ್ದು
ನನ್ನ ದಡ್ಡತನ
___________________________________________
ಎಡವಿ ಹೆಬ್ಬೆರಳು ಗಾಯಗೊಂಡಾಗ ನನಗೆ ನೆನಪಾಗಿದ್ದು
ಅಮ್ಮ ಅಂದು ಬಾಗಿಲನಕ ಬರದೇ,
ಎಚ್ಚರ ತಪ್ಪಿ,
ಎಡಗಾಲಿಟ್ಟು ಮನೆ ಬಾಗಿಲ ದಾಟಿದ ಸಂಗತಿ!!
___________________________________________
ನೋಡಲೇ ಬೇಕೆನಿಸುವ ಮುಖ ನಿನ್ನದಲ್ಲಾ ಅಂತಾರೆ!!
ಆದರೆ, ನೀ ನೋಡಗೊಡುತ್ತಲೇ ಇಲ್ಲವಲ್ಲಾ,
ಅದಕ್ಕಾಗೇ ನೋಡಲೇ ಬೇಕೆಂಬ ಹಠ!!
___________________________________________
ಬಿಡುವಾದಾಗಲೇ ಹುಟ್ಟುವುದಕ್ಕೆ
ಭಾವನೆಗಳಿಗೆ ಸಮಯ ಪ್ರಜ್ಞೆ ಇಲ್ಲಾ
ಎಲ್ಲಂದರಲ್ಲಿ, ಹೇಗೆಂದರ್ಹಾಗೇ -
- ಮೂಡುವುದವುಗಳ ಹುಟ್ಟು ಧರ್ಮ
ಬರೆದುಕೊಳ್ಳುವುದು/ ಕೆರೆದುಕೊಳ್ಳುವುದು ಅವರವರಿಗೆ ಬಿಟ್ಟಿದ್ದು!!
___________________________________________
ನನ್ನ ಹೊರ ಜಗತ್ತಿಗೆ ಪರಿಚಯಿಸಲು
ನೀ ಉಂಡ ನೋವಿನರಿವು ನನಗಿಲ್ಲಾ ತಾಯೇ
ಆದರೆ
ಪ್ರತಿ ಸಲ ನಿನ್ನ ನೋಯಿಸಿದಾಗ ನಗುವೆಯಲ್ಲಾ
ಆ ನಗುವೇ ಸಾರುತಿದೆ ನಿನ್ನ ಸಹನೆಯ ಶೃಂಗವ!!
___________________________________________

                                           --ರತ್ನಸುತ 

Tuesday 25 June 2013

ತೊಟ್ಟು ಹನಿಗಳು!!

ಇದ್ದಲ ಪುಡಿ ತಿಕ್ಕಿಗೆ
ಹಲ್ಲು ಕಪ್ಪಾಗದು,
ಮುಪ್ಪು ದೇಹಕೆ ಮಾತ್ರ
ಮನಸು ಮುಪ್ಪಾಗದು!!
________________________________
"ಮರಿ ಹಾಕುವುದಿಗೋ" ಎಂದು
ನವಿಲುಗರಿ ಕೊಟ್ಟು ಹೊರಟವಳು
ಮತ್ತೆ ಕಾಣಲೇ ಇಲ್ಲಾ
ಗರಿ ಮರಿ ಹಾಕಲೂ ಇಲ್ಲಾ!!
________________________________
ನಿನ್ನ ಊಹೆಗೈದಾಗಲೇ ಭಾವ ಸ್ಪರ್ಶ ನವಿರು
ಹಾಗಾಗಿ,
ದಯೆತೋರಿ ನನ್ನ ಕಣ್ಣಿಗೆ ಕಾಣದಿರು
________________________________
ನಾ ನಿನ್ನ ಅರಿತು
ಮನಕೆ ಪರಿಚಯಿಸಿದ್ದಕ್ಕಿಂತಲೂ
ಅರಿಯದೇ ಪರಿಚಯಿಸಿಕೊಂಡದ್ದು ಹೆಚ್ಚು

ಈಗ ಮನಸ್ಸು ನಿಜಾಂಶ ಒಪ್ಪುತ್ತಿಲ್ಲಾ!!
________________________________
                             
                                                --ರತ್ನಸುತ

Monday 24 June 2013

ತೊಟ್ಟು ಹನಿಗಳು!!

ಕವಿಯೊಡನೆ ಜಗಳ ಕಾದ ಅವನ ಹೆಂಡತಿ
ಅಂದಿನ ಕವಿತೆಗೆ ಸ್ಪೂರ್ತಿಯಾದಳು!!
ಕಟುಕನೊಡನೆ ಜಗಳ ಕಾದ ಅವನ ಹೆಂಡತಿ
ಇನ್ನಿಲ್ಲದೆ, ಗೋಡೆಗೆ ಜೋತು ಬಿದ್ದಳು!!
________________________________
ಕುರುಡನ ಕಂಬನಿ, 
ಕಿವುಡನ ಮೌನ, 
ಮೂಗನ ಹಾಡು, 
ವಿರಹಿಯ ಪಾಡು, 
ಎಲ್ಲವೂ ಅವರವರು ಬೇಡದೇ ಪಡೆದ 
ಶಾಪಘ್ರಸ್ತ ವರದಾನ.... 
________________________________
ನಾನಾಡದ ಮಾತಿಗೆ ಸ್ಪೂರ್ತಿಯು ನೀ 
ನೀ ಆಲಿಸದ ನುಡಿಗಾರನು ನಾ 
________________________________
ನನ್ನನ್ನು ನೋಡಿಯೂ ನೋಡದಂತೆ 
ನಟಿಸುವಾಟದಲ್ಲಿ 
ನೀ,
ಗೆದ್ದು ಸೋತೆ 
ನಾ,
ಸೋತು ಗೆದ್ದೆ 
ಇಬ್ಬರೂ ಸೋಲು, ಗೆಲುವನ್ನ ಸಮವಾಗಿ ಉಂಡೆವು 
__________________________________
ನಿನ್ನ ಕಂಡು ಮೋಹಗೊಳ್ಳದ ನಾನು 
ಆಲೆಮನೆಯ ಬೆಲ್ಲದ ಮುದ್ದೆಗೆ 
ಮುಗಿ ಬೀಳದ ಇರುವೆಯಂತೆ 
________________________________
ಅಂದು,
ಉಗುರು ಬೆಚ್ಚಗಿನ ಸೋಕಿಗೆ 
ಮುದುಡು ಮಲ್ಲೆಯಂತಿದ್ದವಳು 
ಇಂದು,
ಶೀತಲ ಸಮರರಂಗದ 
ಕೆಂಡ ಸಂಪಿಗೆಯಾದೆ ಏಕೆ?
________________________________
ಅವಳ ಎದೆ ಭಾಗವ ಧಿಟ್ಟಿಸಿದವನ ಕಣ್ಣಲ್ಲಿ,
ಕಾಮ ತ್ರಿಷೆಗಿಂತಲೂ ಹೆಚ್ಚು 
ಹೊಟ್ಟೆ ಹಸಿವಿನ ಛಾಯೆಯಿತ್ತು
ಅದಕ್ಕಾಗೇ ಅವಳ ಮಾಂಗಲ್ಯದ ಮೇಲೆ 
ಅವನ ಕಣ್ಣಿತ್ತು ....!!
________________________________
                           --ರತ್ನಸುತ 

Friday 21 June 2013

ತೊಟ್ಟು ಹನಿಗಳು!!

ನಿನ್ನುಸಿರಿನೇರಿಳಿತ
ಎಣಿಸುವ ಕುಸುರಿ
ನೀಡು ನನಗೆ
ನಿನ್ನೆದೆಗೊರಗಿಸಿ ನನ್ನ
______________________________________
ಗಾಳಿಗೆ ಹಾರಲು ಬಿಟ್ಟ
ನಿನ್ನ ನೀಳ ಕೇಶದೊಳಗೆ
ಕೀಟದಂತೆ ನುಸುಳಿ
ಬಾಚಣಿಗೆಗೆ ಸಿಕ್ಕಿ ಸಾಯುವಾಸೆ!!
______________________________________
ನಿನಗಾಗಿ ಹೂ ತರಲೇ? ಅಂದೊಡನೆ ನೀ
"ತರಲೆ!!" ಅಂದು ಸಿಟ್ಟಾದೆ
ನನ್ನ ಪ್ರಶ್ನೆ, ನಿನ್ನ ತುಂಡುತ್ತರ ಒಂದೇ ಏಕೆ?!!
______________________________________
ನಿನ್ನ ಪ್ರೀತಿಗೆ ಸಿಲುಕಿ
ಮಾಗಿದ ರೇಷಿಮೆ ಹುಳುವಾದೆ
ತಿನ್ನುವ ಮನಸಿಲ್ಲಾ, ಮಲಗುವ ಮಾತಿಲ್ಲಾ
ಕಟ್ಟಿಕೊಂಡೆ ನನ್ನ ಸುತ್ತ ಕನಸಿನೆಳೆಯ ಗೂಡನ್ನು!!
______________________________________
ಗಡಿ ಕಾಯುತಿದ್ದ ಯೋಧರು
ದೇಶ ಪ್ರೇಮ ಮರೆತು ಮಿತ್ರರಾದರು
ಯುದ್ಧ ಘೋಶವಾದೊಡನೆ
ಒಬ್ಬರನ್ನೊಬ್ಬರು ಕೊಂದು ದೇಶ ಭಕ್ತರಾದರು!!
______________________________________
                                   
                                                --ರತ್ನಸುತ

Thursday 20 June 2013

ನೆನಪಿನ ಬಳಪ!!!


















ಗೀಚಿದಷ್ಟೂ ನೀ ಮೂಡುತಿದ್ದೆ
ತಿದ್ದುವಿಕೆ ಹಿಂದೆ ಕರಗುತಿದ್ದೆ 
ಇದ್ದ ಆಕಾರವ ಬಿಟ್ಟು, 
ಬರೆದವನ ಬರವಣಿಗೆಯಾಧಾರಕೆ ಮಣಿದು 
ದೃಢವಾಗಿದ್ದವ ಪುಡಿಯಾಗುತಿದ್ದೆ 

ಜೇಬಿನೊಳಗೊಂದಿಷ್ಟು ಚೂರಾಗಿ ಉಳಿದು 
ಬೇಡಿದವರಿಗೆ ಹಂಚುವಿಕೆಯಲ್ಲಿ ಮುರಿದು 
ನಲಿಯುತಿದ್ದೆ ಸವೆಸಿದರೂ ವಿನಾಕಾರಣಕೆ 
ಕ್ಷಣವಾದರೂ ನಿಲ್ಲದೆ ಹಾಗೆ ತಡೆದು 

ಹಸಿದಾಗ ಚಪ್ಪರಿಸಿ ಕಡಿದವು ಹಲ್ಲು 
ಕೊಟ್ಟೆಯಲ್ಲಾ ನಾಲಿಗೆಗೆ ಏನೋ ಸವಿ 
ನಿನ್ನ ಅಂಚನು ಎಂಜಲಿಂದ ನೆನೆಸಿ ಬರೆದೆ 
ಅದೇನು ಘತ್ತು ಮೂಡಿದಕ್ಷರಗಳ ಠೀವಿ!!

ಒಮ್ಮೊಮ್ಮೆ ಬಣ್ಣ ಮೈತುಂಬಿಕೊಳ್ಳುತ್ತಿದ್ದೆ 
ಹಿಡಿದು ಬರೆದ ಬೆರಳುಗಳಿಗೇನೋ ಖುಷಿ 
ತಪ್ಪುಗಳ ಅಳಿಸಿಹಾಕಲು ಅಂಟುವೆ ಕೈಗೆ 
ಅದೇ ಕೈಗಳಿಂದ ಸರಿಯಾಗಿ ಬರೆಸಿ 

ಈ ನಡುವೆ ನೀನೇಕೋ ಕಾಣಸಿಗುತಿಲ್ಲಾ 
ಇಂದಿನ ಚಿಣ್ಣರಿಗೆ ಧೂಳು ಸರಿ ಬರದು 
ಪೆನ್ಸಿಲ್ಲು-ರುಬ್ಬರ್ರು, ಹಾಳೆ ಮಡಿಲಿನ ಬರಹ 
ಬೆಳೆದವರು ಸ್ಪರ್ಶ ರಟ್ಟುಗಳ ಕೈಲ್ಹಿಡಿದು 

ನಿನ್ನ ಅನುಕರಿಸಿ ಹುಟ್ಟಿದವಲ್ಲಾ ಏನೇನೋ 
ಆದರು ನಿನ್ನ ಮೆಟ್ಟುವವರಾರು ಹೇಳು 
ನೆನಪುಗಳ ಸಾಲು-ಸಾಲಲಿ ನಿನ್ನದೇ ಗುರುತು 
ನಿನಗೂ ಮರು ಜನ್ಮವಿದೆ ಚೂರು ತಾಳು!!


                                      --ರತ್ನಸುತ 


Wednesday 19 June 2013

ತೊಟ್ಟು ಹನಿಗಳು

ನನ್ನವಳಿಗೆ ಮದುವೆ ನಿಶ್ಚಯವಾದೊಡನೆ
ನೆನಪಾಗಿದ್ದು ನಾನೇ ಅಂತೆ!!
ಅದಕ್ಕಾಗೇ,
ಓಡಿ ಹೋಗಿ ಕೋಣೆ ಚಿಲಕ ಹಾಕಿಕೊಂಡು
ನನ್ನ ಒಲವಿನೋಲೆಗಳನ್ನೆಲ್ಲಾ ಸುಟ್ಟಳಂತೆ
__________________________________
ಮರದಲ್ಲಿ ತೂಗುವಾಗಲೇ ಕೈ ಸೇರಬೇಕಿದ್ದ
ಅರೆ ಮಾಗಿದ ಮಾವು ನೀನು
ಮಾರುಕಟ್ಟೆಯಲ್ಲಿ ಕೈ ಬದಲಾಗುತ್ತಲೇ
ಒತ್ತಾಯಕೆ ಹಣ್ಣಾದೆ!!
__________________________________
ಹಿತ್ತಲ ಗುಲಾಬಿಯ ಕತ್ತರಿಸಲು
ನೆರೆಯ ದಾಸವಾಳ ಬಿಕ್ಕಿತ್ತು
ಆಗಷ್ಟೇ ಅವರಿಬ್ಬರಿಗೆ ಪ್ರೀತಿ ಹುಟ್ಟಿತ್ತು !!
__________________________________
ಗಂಗೆ ಶಿವನನ್ನೇ ಮುಳುಗಿಸುವಳು!!
ಇದು ಶಿವನಿಗೂ ತಿಳಿಯದ ರಹಸ್ಯವೇ?
ಬಗೀರಥನಿಗೆ ಬ್ರಹ್ಮ ಗುಟ್ಟಾಗಿ ಹೇಳಿದ್ದನೇನೋ
ಅವನನ್ನೇ ಕರೆದು ಕೇಳೋಣವೇ?
__________________________________
"ಅಮ್ಮಾ, ನಿನ್ನ ಬಿತ್ತಿದರೆ ಹುಟ್ಟಬಹುದಲ್ಲಾ
ನೂರಾರು ಅಮ್ಮಂದಿರು"
ಹೀಗೆಂದ ಕಂದ ಕಾಳು
ಬೀಳ್ಗೊಟ್ಟಿತು ತಾಯ ಜೀವ ಸಮಾಧಿಗೆ ....
__________________________________

                                     --ರತ್ನಸುತ 

ತೊಟ್ಟು ಹನಿಗಳು

ಕೆಕ್ಕರಿಸಿ ನೋಡದಿರು!!
ಕೆಂಗಣ್ಣಿನ ರಂಗು,
ಇಷ್ಟವಾಗಿ ಬಿಡಬಹುದು
ಪ್ರೀತಿಯಾಗಿ ಬಿಡಬಹುದು
__________________________
ಅವನ ಕ್ರೌರ್ಯವ ದ್ವೇಷಿಸಿದವಳಿಗೆ
ಮೌನವ ಇಷ್ಟಪಡದೇ ಇರಲಾಗಲಿಲ್ಲ!!
__________________________
ಒದ್ದಾಡಿದ ಮಗುವನು
ಮುದ್ದಾಡುವ ಸಂಚು ಹೂಡಿ
ಒದ್ದಾಡಿದಳೊಬ್ಬ ತಾಯಿ!!
__________________________
ನನ್ನ ಹಾದು ಹಾರಿ ಹೋದ
ಬಣ್ಣ ಬಳಿದ ಅಕ್ಕಿ ಕಾಳು
ಹಿಡಿಯಲ್ಲಿರುವವುಗಳ
ಅಸಹಾಯಕಮಾಡಿದೆ.
ಹೇಗೆ ಉಳಿಯಲಿ ನಾನೂ
ಅಕ್ಷತೆಯ ಚೆಲ್ಲದೇ?
__________________________
"ಹಸಿರು ವರದಾನ,
ಇದ ಕಾಯುವುದೆಮ್ಮಯ ಧರ್ಮ"!!
ಇದ ತಪ್ಪಾಗಿ ಓದಿಕೊಂಡವ
ಎಮ್ಮೆಯ ಕಾವಲಿಗೆ ಕಟ್ಟಿ
ನಿಟ್ಟುಸಿರಲ್ಲಿ ಮರ ಕಡಿದನು.....
__________________________

                         --ರತ್ನಸುತ

Tuesday 18 June 2013

ಓದು ಬಾ ನನ್ನ

















ನನ್ನ ಬಾಳ ಪುಸ್ತಕವ, ಒಮ್ಮೆ ತೆರೆದು ನೋಡು
ಕಾಣಸಿಗುವುದೆಲ್ಲವೂ ಖಾಲಿ ಪುಟಗಳೇ 
ಅಲ್ಲಲ್ಲಿ ಒಂದೆರಡು ಅನರ್ಥ ಕವಿತೆಗಳು 
ನಡುವೆಲ್ಲೋ ಅಡಗಿಸಿಟ್ಟ ಭಾವ ಚಿತ್ರ

ನೆನಪಿನ ನವಿಲುಗರಿ, ಅಚ್ಚಾದ ಹೂವುಗಳು 
ನೆತ್ತರಿಂದ ಮಾಡಿಕೊಂಡ ನೋವಿನನಾವರಣ 
ಬೇಸರಕ್ಕೆ ಗೀಚಿಕೊಂಡ ಒರಟು ರೇಖೆಗಳು 
ಕಣ್ಣೀರಿನ ಉರುಳಿಗೆ ಸುಕ್ಕು ಹಿಡಿದ ಹಾಳೆ ಮಡಿಲು 

ಶೀರ್ಷಿಕೆಯಲ್ಲೇ ಮುಗಿದ ಮರ್ಮಾಂತರ ಕಥೆಗಳು 
ನಾಚಿಕೆಗೆ ಸಾಕ್ಷಿಯಾದ ಅವಸರದಿ ಸರಿದ ಹಾಳೆ 
ಬರೆಯದೇ ಮಡಿಚಿಟ್ಟ ಗುಟ್ಟಿನ ಓಲೆ 
ನೆಪಮಾತ್ರಕೆ ಸಂಖ್ಯೆಯ ಲೆಕ್ಕ ಹೊತ್ತ ಕಾಗದ 

ಮೊದಲಿಂದ ಕೊನೆ ವರೆಗೆ ಬರೆಯ ನೀಳ ಬೇಸರ
ಬೆನ್ನು ಹಾಳೆಯಲ್ಲಿ ಮಾತ್ರ, ನೂಕು-ನುಗ್ಗಲು 
ಒಂದರ ಮೇಲೊಂದರ ಹಿಂದೊಂದರಂತೆ ಸಾಲುಗಳು 
ನಿನ್ನ ನೆರಳು ಸುಳಿದರೆ,ಆ ಸಾಲಿಗೆ ಗುರುತು ಹಾಕು 

ಬೆನ್ನುಡಿ ಆಗಿಸುವೆ ಅದ, ಕೊನೆಗೂ ಕೊನೆಗೊಳ್ಳಿಸುವೆ 
ಬಾಳಿನರ್ಪಣೆಯ ಪುಟದಲಿ ಬರೆಯುವೆ ನಿನ್ಹೆಸರ
ಮುಖಪುಟದ ಇಣುಕಿಗೆ ನೀಡುವೆ ಬಣ್ಣದ ಎಳೆಯ 
ಸೆಳೆಯುವೆ ಚೂರು-ಪಾರು ಆಸಕ್ತ  ಓದುಗರ................ 


                                                  --ರತ್ನಸುತ 

Friday 14 June 2013

ಅಮಂಗಳ ರಣರಂಗ


ಬಹು ಬೇಡಿಕೆಯ ಸರಕು 
ಬಹುಮುಖ ಪ್ರತಿಭೆಯ ಛಾಯೆ 
ಕಣ್ಣೊಳಗೆ ಬರೆಯದೆ ಸೆಳೆಯುವ 
ಕಾವ್ಯದ ಮಾಯೆ 
ಅಪರಿಚಿತ ಆಪ್ತತೆಯ ಬೀರುವ ನೋಟ 
ಧಕ್ಕಿಸಿಕೊಂಡವರ ಸ್ವಂತ ಮೈ-ಮಾಟ 

ಅಲ್ಪಾಯುಷ್ಯದ ಅರಮನೆಯ ಯೋಗ 
ಕಾಂಚಾಣಕೆ ಕೈ ಸೇರುವನುರಾಗ 
ಮೋಂಬತ್ತಿ ಬೆಳಕು, ಮೂಗುತ್ತಿ ಮಿನುಗು 
ಗೌಪ್ಯ ದ್ವಾರದ ಶೋಧನೆಯ ಗುಪ್ತ ಜಾಗ 


ಧಿಕ್ಕಾರದೊಂದಿಗೆ ಧೂಪ ಪರದೆಯ ಹಿಂದೆ 
ಧರ್ಮವನು ದಂಡೆತ್ತಿ ಕೊಂದ ಪತಿವ್ರತೆಯರು 
ಮನೆಯ ಜೇನನು ಜರಿದು, ಪಾಷಾಣ ಮೊರೆ ಹೋದ 
ಮೋಹ ರಣರಂಗದಲಿ ದಣಿದ ಸತ್ಪುರುಷರು 



ಅನುಮೋದಿಸದ ಮನದ ಒತ್ತಾಯದ ಕಸುಬು 
ಮುಂಬಾಗ ಹೊಂಗಿರಣ, ಹಿತ್ತಲಲಿ ಮಬ್ಬು 
ಹೊಸಕುವ ಕೈಗಳಿಗೆ ಗಂಧ ಸೋಕಿದ ಗುರುತು 
ಹೂಗಳಿಗೆ ಇದ್ದ ಗುರುತಿಗೆ ಅಳಿದ ಹೆಸರು 

ಇಲ್ಲಿ ಸೋತವರು ಮತ್ತೆಲ್ಲೋ ಗೆಲ್ಲುವರು 
ಗೆದ್ದೆವೆಂದುಕೊಂಡೇ ಮತ್ತಿಲ್ಲೇ ಸೊಲುವರು 
ಅಸಹಾಯಕತೆಯ ಕಥೆ ಕೆಲವರದ್ದಾದರೆ 
ದುರಂತ ಅಂತ್ಯದ ಕಥೆ ಇನ್ನುಳಿದವರದ್ದು...... 

ಮೌನದೊಳಗಿನ  ಕೂಗು ಅಲ್ಲಿಯವರೆಗೂ ಯಾರಿಗೂ ಕೇಳಿಸದು, ದೇವರಿಗೂ ಸಹಿತ!!!

                                  
                                                                                --ರತ್ನಸುತ 

Thursday 13 June 2013

ಹೇಳಬೇಕ್ಕಾದ್ದು ಹೇಳಲಾಗದ್ದು!!














ನಿನ್ನ ಕಣ್ಣಿಗೆ ಬಿದ್ದ ಗೊಂಬೆಗುಡಿಸಿದ ಸೀರೆ
ನೀನಾಸೆ ಪಟ್ಟ ಬೆಲೆಗೆ ಸಿಗದಿರೆ ಸಾಕು 
ಇಬ್ಬರಿರುವ ಮನೆಗೆ ಒಂದಾದರೆ ಸಾಲದೇ?
ಡಜನ್ಗಟ್ಟಲೆ ಲಟ್ಟಣಿಗೆ ಯಾಕೆ ಬೇಕು?

ಆ ಬೀದಿಯಲಿ ಹೂ ಮಾರುವವನಿಗೆ ಸೊಕ್ಕು 
ಮೊಳ ಮೀರಿ ಹೆಚ್ಚು ಕೇಳಿದರೆ ಸಿಡುಕುವನು 
ಚಿನ್ನದ ಅಂಗಡಿಗಳೇ ಸಾಲುಗಟ್ಟಿವೆ ಅಲ್ಲಿ
ನಿನ್ನ ಕಣ್ಣಿಗೆ ಬಿದ್ದರೆ ನನ್ನ ಗತಿಯೇನು!!

ಮೆಲ್ಲ ನಡೆ, ನಿನ್ನ ಸೋದರತ್ತೆ ಮಗಳಿಹಳಲ್ಲಿ 
ಈಗಷ್ಟೇ ಹೊಸದೊಂದು ಕಾರು ಕೊಂಡಿಹಳಂತೆ 
ಎದುರಾದರೆ ಮತ್ತೆ ಹೊಸ ರಾಗ ತಗೆಯುವೆ 
ಕಣ್ತಪ್ಪಿಸುವ ಆಕೆಗೆ ಕಾಣದಂತೆ 

ಸ್ಟಾರು ಹೋಟಲ್ಲುಗಳು ನೋಡಲಷ್ಟೇ ಚಂದ 
ಉಪ್ಪು-ಖಾರ ಇರದ ಸಪ್ಪೆ ಊಟ ಅಲ್ಲಿ 
ಹೀಗಂದುಕೊಳ್ಳುವಷ್ಟರಲ್ಲಿ ಆಗಲೇ ನೀನು 
ಹಿಡಿದಿದ್ದೆ ಮೆನು ಕಾರ್ಡು ಕೈಯ್ಯಲ್ಲಿ 

ಸಂಜೆ ವೇಳೆಗೆ ಒಂದು ಕಡ್ಡಿ ಐಸ್ ಕೀಂ ಹೀರಿ 
ಮನೆ ಕಡೆ ನಡೆದರೆ ಎಂಥಾ ಸೊಗಸು 
ಹೇಳಬೇಕನಿಸಿದ್ದ ಅನಿಸಿಕೆ ಅರಿತಳಾ?
ಯಾಕೆ ಕೆನ್ನೆಗೆ ಸವರಿರುವಳು ಮುನಿಸು ??!!

ರಾತ್ರಿ ಊಟಕ್ಕೆ ತಂಗಲನ್ನ-ಗೊಜ್ಜು 
"ಹೇಗಿದೆ"? ಅಂತ ಕೇಳಲು ಏನು ಹೇಳಲಿ!!
ಪಾಕ ಶಾಸ್ತ್ರದ ಪ್ರವೀಣೆ ಅಂದ ನಾಲಿಗೆ 
ಶಾಪ ಹಾಕಿತು ಮತ್ತದೇ ಹಳೇ ಶೈಲಿಯಲಿ....... 


                                        --ರತ್ನಸುತ 

Wednesday 12 June 2013

ಆಂತರ್ಯ

















ನಿನ್ನಂಗೈಯ್ಯ ಸೂರಿನಡಿ ಆಣೆಯನು 
ಹೊರುವ ಭಾರ ಅದು ಹೂವಿಗೂ ಹಗುರ 
ನಿನ್ನಾಧರದ ಮಾತಿನ ವೀಣೆಯನು 
ನುಡಿಸಲು ಹೊಮ್ಮುವ ಧನಿ ಜೆನಿಗೂ ಮಧುರ 
ನಿನ್ನಾಟಕೆ ಸೋಲುವ ಗೀಳನು ಅರಿತು 
ಗೆಲ್ಲಿಸುವ ನೀ ಭಾರಿ ಚತುರ 
ಕಪ್ಪು ಬಡ ಮುಗಿಲಿನ ಒಡೆತಿ ನಾನು 
ನೀ ನನ್ನ ಮನದಂಗಳದ ಚಂದಿರ 

ಒಂಟಿ ನಾನಿರಲು ನೀ ನೆನಪಾಗಿ ಗೀಚುವ
ಚಿತ್ತಾರದೊಳಗೆ ನೀ ಮೂಡಿ ಬರುವೆ 
ಅತಿಯಾದ ಯಾತನೆಗೆ ಕಣ್ತುಂಬಿಕೊಂಡಾಗ 
ಜೀವ ತಾಳುತ ಕೆನ್ನೆ ಸವರಿ ಬಿಡುವೆ 
ಒದ್ದೆ ತಲೆ ಕೂದಲನು ವೋರೆಸುತ್ತ ನಾನಿರಲು 
ಕದ್ದು ಜಾರುವೆ ನನ್ನ ಎದೆ ಗೂಡಿಗೆ 
ಎಷ್ಟು ತೀಡಿದರು ಕಡಿಮೆಯೇ 
ನಿನ್ನ ಕಂಡೊಡನೆ ಕರಗುವುದು ಕಣ್ಗಾಡಿಗೆ 

ಹೇಳಿಕೊಟ್ಟೆಯಾ ಕನ್ನಡಿಗೆ ರಸಿಕತೆಯ?
ಸೆಳೆದು ಬಿಟ್ಟುಕೊಡಲು ಸತಾಯಿಸಿದೆ 
ನಾ ಮರೆತ ಹಣೆ ಬೊಟ್ಟು ತನ್ನಲ್ಲಿ ಇರಿಸಿ 
ಸಿಂಗಾರಕೆ ಒಲಿದು ಸಹಕರಿಸಿದೆ 
ಮುಂಗುರುಳಿಗೂ ನಿನ್ನ ತುಂಟತನ ತಿಳಿದಿದೆ 
ನೀ ಕಂಡೊಡನೆ ಸರಿಯುವುದು ಕಿವಿ ಮರೆಗೆ 
ತುಟಿಯ ರಂಗಿಗೆ ತವಕದಲಿ ಹುಚ್ಚು ಹಿಡಿದಿದೆ 
ನಿನ್ನ ಹೆಸರಲಿ ಅಳಿಸಿ ಹೋಗುವ ವರೆಗೆ 

ಹೆಜ್ಜೆ ಗುರುತುಗಳೆಲ್ಲೂ ಉಳಿದಿಲ್ಲ ದಾರಿಯಲಿ 
ನೀ ಸಿಕ್ಕಿದೆಡೆಯೇ ಸಭೀಕರಿಸಿವೆ 
ಘಮದ ಮಲ್ಲೆಯ ದಿಂಡು ನೀ ಮುಡಿಯೇರಿಸಲು 
ಮಡಿದ ಆಸೆಗಳೂ ನವೀಕರಿಸಿವೆ 
ನನ್ನ ಕಿರು ಬೆರಳಿಗೆ ಒಂಟಿತನದ ಕೊರಗು 
ಕೊಂಡಿಯಾಕಾರದಲಿ ಮುಂದಾಗಿದೆ 
ಎಲ್ಲೇ ಇದ್ದರೂ, ನೀ ಕಾಣದೇ ಹೋದರೂ 
ಚಾಚಿದ ಕೈಗೆ ಸಿಗಬಾರದೇ?

ಪೋಲಿ ಸೂರ್ಯನು, ಸುಮ್ಮನೆ ಬೆವರಿಳಿಸಿದ 
ಆದರೂ ನಿನ್ನ ಪಾಲನು ಕಾಯ್ದಿರಿಸಿದೆ 
ಬಂಧ ಮುಕ್ತಿಯ ನೀಡು ನನ್ನೆಲ್ಲಾ ನಾಳೆಗಳು 
ನಿನಗಾಗಿ ಮೈನೆರೆದು ಕಾಯುತ್ತಿದೆ 
ನೀನೊಬ್ಬ, ನಾನೊಬ್ಬಳು ಈ ಜಗದೊಳಗೆ 
ನಮ್ಮೊಳಗೆ ನಾವು ಒಂದೇ ಅಲ್ಲವೇ?!!
ನಿನ್ನ ಹೊಂಗಿರಣದ ತಿಳಿ ಸ್ಪರ್ಶ ಸಲುವಿಗೆ 
ಇಂಗದ ಇಬ್ಬನಿಯ ಹಾಗೆ ಕಾಯುವೆ ........... 

                                          --ರತ್ನಸುತ 

Tuesday 11 June 2013

ಹೊರ್ಡೋ ಟೈಮಲ್ ಒಂದೆರ್ಡ್ ಮಾತು



















ವಿದಾಯ ಹೇಳೋ ವೇಳೇಲಿ
ನಿನ್ನ ಹಣೆಗೆ ಮುತ್ತಿಟ್ಟಾಗ ಗೊತ್ತಾಗಿಲ್ವಾ?
ಇದು ಗೆಳೆತನಕ್ಕೂ ಮೀರಿದ್ದು ಅಂತ
ಗೊತ್ತಾದ್ಮೇಲೂ ಸುಮ್ನಿದ್ಯಾ?
ಮತ್ಯಾಕೆ ಕಣ್ಣು ತೇವ ಆಯ್ತು
ನಿನ್ಮ ನ್ಸಲ್ಲೂ ಚೂರು ಪ್ರೀತಿ ಉಳ್ಕೊಂಡಿತ್ತಾ ??

ನೀನ್ ನನ್ ಪಕ್ಕ ಕೂತಾಗೆಲ್ಲಾ
ಎಷ್ಟು ನಾಚ್ಕೊತಿದ್ದೆ ಅಂತ
ಪ್ರತಿ ಸಾರಿ ಕಚ್ಚ್ಕೊಂಡಿದ್ ನನ್ ನಾಲ್ಗೆನ ಕೇಳು
ಕನ್ನಡ ಪದ ಬರಿಯೋಕ್ ಗೊತ್ತು
ಆಗಾಗ್ ಯೆಂಡ ಬಿಟ್ಕೋತಿದ್ದೆ
ಹೆಂಡ್ತಿ ನೀನಾಗ್ಬಿಟ್ಟಿದ್ರೇ, ನಂದೇ ರತ್ನನ್ ಬಾಳು

ನೀನೊಂದ್ ಜಾತಿ, ನಾನೊಂದ್ ಜಾತಿ
ಹಿಂಗ್ಯಾಕ್ ಆಗೊಯ್ತೋ ಗೊತ್ತಿಲ್ಲ
ದೇವ್ರು ಆಟಾಡ್ತೌನೆ ಈ ಜಾತಿ ಹೆಸ್ರಿಟ್ಟು
ತುಂಬೋ ತನ್ಕ ಅಳ್ತಾಯಿರು
ಅಂತ ಆತ ಬಿಟ್ಟಂಗೌನೆ
ಹೃದ್ಯ ಚುವ್ಟಿ, ಕೈಗೆ ಬೆಳ್ಳಿ ಚೊಂಬೊಂದನ್ನ ಕೊಟ್ಟು

ಆಸೆ ಸೆರ್ಗಿನ್ ಆಚೆ ಅಂಚಲ್
ಎಷ್ಟು ಭಾರ ಹೊತ್ತು ನಡೀತೀ
ಎಲ್ಲಾ ನನ್ ಜೇಬಿಗಿಳ್ಸಿ ನೆಮ್ದಿಯಾಗಿರ್ಬಾರ್ದಾ?
ನೆರ್ಗೆ ಸರಿ ಮಾಡೋಕಂತ
ಕರ್ದೆ ಒಮ್ಮೆ ಗೆಪ್ತಿ ಮಾಡ್ಕೋ
ಆಗ್ಲಾದ್ರೂ ನನ್ನ ಗಂಡ ಅಂತ ಅನ್ಕೋಬಾರ್ದಾ?

ಹೋಗ್ಲಿ ಬಿಡು,
ಏನ್ ಮಾತಾಡಿ ಏನ್ ಪ್ರಯೋಜ್ನ
ನೀನಂತೂ ನನ್ ಬಿಟ್ ಹೋಗೋಕೆ ತಯಾರಾಗಿದ್ದೀಯ
ಸತ್ಮೇಲ್ ನನ್ ಗೋರಿ ಮುಂದ್ ನಿಂತು ಚೂರು ಅಳ್ತೀಯಲ್ಲಾ
ಆವಾಗ್ಲಾದ್ರು ಪ್ರೀತಿಸ್ತಿದ್ದೆ ಅಂತ ಒಪ್ಕೊತೀಯಾ??


                                               --ರತ್ನಸುತ

Monday 10 June 2013

ದ್ಯಾವ್ರೊಟ್ಟಿಗ್ ಮಾತು-ಕತೆ



















ತಮ್ ತಮ್ ಅನ್ಕೂಲಕ್ತಕ್ಕಂಗೆ 
ತಾಳ ಹಾಕೋ ಮಂದಿ ಇವ್ರು 
ತಾಳ ತಪ್ಪೋದ್ರೇನು ತಕ್ಕಾ 
ಅದು ಒಂದು ತಾಳಾನೇ 
ಅಣ್ತಮ್ಮಂದ್ರು ಅನ್ನಿಸ್ಕೊಂಡೋರ್ 
ನೆಂಟಸ್ತನ ಮುರ್ಕೊಂಡವ್ರೆ  
ಕಾಸು ಮಾಡಿ ಮನ್ಸು ಮುರ್ದೋ 
ಗುಡ್ಸ್ಲೇ ಅಲ್ವಾ ಅರ್ಮಾನೆ?

ನಗ್ತಾ ಐತೆ ತುಟಿ ಆದ್ರೆ 
ಉಸ್ರಲ್ ವಿಸ ತುಂಬ್ಕೊಂಡೈತೆ 
ಮನ್ಸಾ-ಮನ್ಸನ್  ಬೇಟೆ ಆಡ್ಕೊಂಡ್ 
ಸಾಯ್ತಾವ್ರೇ ಇಲ್ಲಿ 
ಮನೆ ಮುಂದೆ ಬೇಲಿ ಸೀಮೆ 
ಮುಳ್ಳಿನ್ ದಾರಿ, ನೆತ್ತರ್ ಕೊಡಿ 
ಹುವಾಗ್ಬೇಕಿದ್ ಹೃದಯ ಆಯ್ತು 
ಚುಚ್ಚೋ ಪಾಪಸ್ಕಳ್ಳಿ 

ಮಾತ್ಗಾರ್ರು ಸಿಕ್ತಾರೆಲ್ಲೂ 
ಮಾಡ್ತೋರ್ಸೋರಿಲ್ಲಾ ಒಬ್ಬ್ರೂ 
ಮೀಸೆ ತಿರ್ವೋನ್ ಆದ ಗಂಡ್ಸು 
ಭೂಮಿಗ್ ಭಾರ್ವಾಗಿ 
ಹುಟ್ಟಾಗದೆ ಸಾಯೊ ತನ್ಕ 
ಹೆಂಗೋ ಬದ್ಕಿದ್ರಾಯ್ತು ಅಂತ 
ಬಾಳೋ ಮಂದೀನ್ ಕರ್ಸ್ಕೋ ತಂದೆ
ನರ್ಕಕ್ ನೇರ್ವಾಗಿ!!

ನಾನು, ನಂಗೇ, ನಂದೇ ಎಲ್ಲಾ 
ಅನ್ನೋ ಪಾಪಿ ಮುಂಡೇವುಕ್ಕೆ 
ತಿಳಿಯೋದ್ ಎಂದ್ಗೋ ಸತ್ತಾಗ್ -
-ನಮ್ಕೂಡೇನೂ ಬರ್ರಾಕ್ಕಿಲ್ಲಾ
ಇಗೋ-ಅಗೋ ಅಂತ ಸುಮ್ಕೆ 
ಸತಾಯ್ಸ್ತೀಯ ಒಡ್ಯ ನೀನು 
ಹಾಳಾಗೊಗ್ರಿ ಅಂತ ಯಾಕೆ 
ಪ್ರಳಯ ಆಗ್ಸಾಕ್ಕಿಲ್ಲಾ!!

ದ್ಯಾವ್ರೆ ನಿನ್ಕೂಡ್ ಮಾತಾಡೋದ್ನ 
ಯಾರ್ಕೂಡಾರಾ ಹೀಳ್ಬಿಟ್ಟೀಯ 
ನನ್ನೇ ದ್ಯಾವ್ರು ಅಂತ ಮಾಡಿ 
ನಿನ್ ಮರ್ತಾರು ಜನ!! 
ಈವತ್ತಿಗಿಷ್ಟ್ ಸಾಕು ಮಾತು 
ಇನ್ನು ಸಿಕ್ಕಾಪಟ್ಟೆ ಐತೆ 
ನಾಳೆ ಸಿಗು ಇನ್ನಷ್ಟೊತ್ತು 
ಕುಂತು ಮಾತಾಡಣ ......... 


                              --ರತ್ನಸುತ 

ತೊಟ್ಟು ಹನಿಗಳು

ನಾನೊಬ್ಬ, ನೀನೊಬ್ಬಳು
ನಾವಿಬ್ಬರು ಜಗದೊಳಗೆ
ನಾನಲ್ಲ, ನೀನಲ್ಲೆ
ನಾವೊಂದೇ ನಮ್ಮೊಳಗೆ
***********************************
ಮಿಟುಕಿನ ಗುಟುಕಲ್ಲಿ ನಿನ್ನ
ಕಣ್ಣಲ್ಲೇ ನುಂಗುವಾಸೆ
ಒಮ್ಮೆ ಹಾಗೆ ಸುಳಿದು ಹೋಗಬಾರದೇ ಕಣ್ಮುಂದೆ ?!!
ಮೌನದ ಪಾಶದಲಿ ನನ್ನ
ಉಸಿರು ಬಿಗಿಯುವ ಬದಲು
ಒಗಟೊಂದನು ಬಳಿದು ಹೋಗು ಬೆನ್ಹಿಂದೆ !!
***********************************
ವೈರಿ ಅನಿಸಿಕೊಂಡವನ ಪ್ರಶಂಸೆಯಲ್ಲಿ
ಬೆನ್ನ ತುಂಡಾಗಿಸುವಷ್ಟು ಶಕ್ತಿಯಿತ್ತು
ಗೆಳೆಯನ ಆಲಿಂಗನದಲಿ, ಗೆಲುವನ್ನೂ
ಮೀರಿಸುವಷ್ಟು ತೃಪ್ತಿಯಿತ್ತು
************************************
ಕನಸಲ್ಲಿ ಸುಲಿದ ಹಣ್ಣಿನ ಹಾಗೆ ಸಿಕ್ಕವಳು
ನಿಜದಿ ಬಾನೆತ್ತರದ ಮರದಲ್ಲಿ ಕೂತೆ
ಕನಸಲ್ಲಿ ನಿನ್ನನ್ನು ಬಣ್ಣಿಸಿದ ಪ್ರೇಮ ಕವಿ
ನಿಜದಲಿ ಬೇಗುದಿಗೆ ಬಳಲಿ ಸೋತೆ
*********************************************
ದಾಹವೆಂದು ಒಡ್ಡಿದೆ ಬೊಗಸೆಯ ನಿನ್ನೆದುರು
ಬಳುಕು ನಡು ಬಿಂದಿಗೆಯೊಡನೆ ಬಂದೆ ನೀ , ಬಗ್ಗಿಸಲು ಖಾಲಿ ನೀರು
************************************
ಒಂದು ವೀಣೆ, ನಾಲ್ಕು ತಂತಿ
ಆದರೆ ನಿನ್ನಲ್ಲೊಂದು ವಿನಂತಿ
ನುಡಿಸುವಾಗ ಜೋಪಾನ ಗೆಳತಿ
ಹರಿತವಾದ ತಂತಿಗಳ ನೋಯಿಸ ಬೇಡಾ
ಬಿಕ್ಕುವುದು ಬೆರಳು, ಕೇಳುಗರ ಕಿವಿಗಳು
************************************
ಕಾಗದ ದೋಣಿ ತಲುಪುವ ಹೊತ್ತಿಗೆ
ಅಕ್ಷರ ಅಳಿಸಿ ಹೋಗಿತ್ತು
ಕಂಬನಿ ರಕ್ಷೆ ಪಡೆದವು ಮಾತ್ರ
ಅಳಿಯದೆ ಹಾಗೆ ಉಳಿದಿತ್ತು
************************************
ಜೇಬಿಗೆ ಕತ್ತರಿ ಹಾಕಿದ ಅವಳ
ಕರೆದನು ಅವನು "ಕಳ್ಳಿ"
ಅವಳು ಅಳುಕಿಲ್ಲದೇ ಹೊರ ತಗೆದಳು
ಅವನು ಕಟ್ಟಿದ ತಾಳಿ

************************************
ಜೋಡ್ಸಿ, ಜೋಡ್ಸಿ ಬರ್ಕೊಂಡಾಯ್ತು
ಹಾಳೆ ಗಟ್ಳೆ ಕವ್ನಾ
ಓದೋರಿಲ್ಲಾ, ಕೇಳೋರಿಲ್ಲಾ ಅದ್ನಾ
************************************
ಗೋರಂಟಿ ಗಾಯ, ಏನ್ ಪುಣ್ಯ ಮಾಡಿತ್ತೋ
ನನ್ ಕೈಯ್ಯಾರೆ ನಿನ್ ಕೈಯೆಲ್ಲಾ ಹರ್ದಾಡಿತ್ತು
************************************
ಬಾಗಿಲಲ್ಲೇ ನಿಂತು ಬಿಡು
ನೆರಳು ಮಾತ್ರ ಒಳಬರಲಿ
ನೀನು ದೂರ ಹೋದರೂ
ನೆನಪುಗಳು ಅಳಿಯದೆ ಇರಲಿ

************************************

ನಿಜ ಹೇಳಲೇ?
ನೀನಲ್ಲಾ ಜಗತ್ ಸುಂದರಿ
ಆದರೆ,
ಚಂದನದ ವಾಹಿನಿಯ
ಮಧುರ ಚಿತ್ರ ಮಂಜರಿ

************************************
ಸ್ವಲ್ಪ ತಡಿ, ನೆನೆಸಲಿ ಈ ಮಳೆ
ಆಗಲೇ ನನ್ನಿರುವಿಕೆಗೆ ಬೆಲೆ

************************************
ಗೀಚೋದೆಲ್ಲಾ ಪದ್ಯ ಅನ್ನೋದಾದ್ರೆ
ನಾನೂ ಕವಿನೇ
ಕತ್ತಲ ಮನೆಲ್ ಬೆಳ್ಗೊ ದೀಪ
ಪುಟ್ಟದಾದ್ರೂ ರವಿನೇ

************************************
ನೀ ತೊರೆದ ಆ ಗಳಿಗೆ
ನಾ ನೋವಿನ ಮಳಿಗೆ
ಸರಕು ಖಾಲಿ ಆಯಿತೀಗ
ಮತ್ತೆ ಬಾರೆ ಬಳಿಗೆ

************************************
ಗುರುತಿಡದೇ ಮುತ್ತಿಕ್ಕಲು ನಿನಗೆ
ತುಟಿಗಲ್ಲದೇ ಗಲ್ಲಕಿಟ್ಟೆ ಕೊನೆಗೆ

************************************
ಮದುವೆ ಸ್ಫೂರ್ತಿ ಆದ್ರೆ ಓಕೆ
_______ಆಗ್ದೇ ಇರ್ಲಿ ಜೋಕೆ !!




                                                                      --ರತ್ನಸುತ

Friday 7 June 2013

ಒಲವೇ ಜೀವನ ಸಾಕ್ಷಾತ್ಕಾರ !!!!

ಪುಟ್ಟ ಮನೆಯ ಸಂಸಾರ
ಆಡು ಭಾಷೆ ವ್ಯವಹಾರ
ಕಾಲ್ನಡಿಗೆಯ ಸಂಚಾರ
ನಂಬಿಕೆಗಳ ನವೀಕಾರ
ಸ್ನೇಹ-ಪ್ರೀತಿ ಬಂಗಾರ
ಆತ್ಮ ಬಲದ ಆಧಾರ
ಪರಿಶ್ರಮದ ಬಂಢಾರ
ಮಾತಿನಲ್ಲಿ ಮಮಕಾರ
ನಗುವಿನಲ್ಲಿ ಮಂದಾರ
ಸ್ಪಷ್ಟವಾದ ನಿರ್ಧಾರ
ವಿಚಾರಬರಿತ ಆಚಾರ
ಸಿಹಿ-ಕಹಿಗಳ ಸ್ವೀಕಾರ
ಅನುರಾಗದಾಳ ಸಾಗರ
ಅಭಿಮಾನದಲೆಯ ಅಬ್ಬರ
ಅನಂತತೆಯ ವಿಸ್ತಾರ
ಅಹಂರಹಿತ ತೀರ
ಮಿತವಾದ ಮತ್ಸರ
ದೃಢವಾದ ಹಂದರ
ಮನಸಾಗಲಿ ಹೆಮ್ಮರ
ಮಾತಾಗಲಿ ಇಂಚರ
ಮುನಿಸಿರಲಿ ದೂರ
ಸಾಮರಸ್ಯವಿರಲಿ ಹತ್ತಿರ
ಅನುಕಂಪದ ಎತ್ತರ
ಮೀರಿಸಲಿ ಅಂಬರ
ಬದುಕು ಬಲು ಸುಂದರ
ಒಡೆಯದಿರಲಿ ಹಾಲಿನಥರ
ಜೀವನಕೆ ಬೇಕಿದೆ ಒಲವು ಅಪಾರ
ಒಲವೇ ಜೀವನ ಸಾಕ್ಷಾತ್ಕಾರ !!!!

                            --ರತ್ನಸುತ 

ಪ್ರಕೃತಿಯ ಕವನ


ಇಳೆಗಿಳಿದ ತಿಳಿ ಮಂಜು 
ಹೊದ್ದು ಹುಲ್ಲಿನ ಮೇಲೆ 
ಶಮನಗೊಂಡಿತು ತಂಪು 
ಅಂತೆಯೇ ಹಸಿರೆಲೆ ಜ್ವಾಲೆ 
ಮುದ್ದಾಟದ ಫಲವೇ 
ಇಬ್ಬನಿಯ ಜನನ 
ಮುಂಜಾವ ಸ್ವಾಗತಕೆ 
ಪ್ರಕೃತಿಯ ಕವನ................ 

          --ರತ್ನಸುತ 


(ಚಿತ್ರ ಕೃಪೆ - ಹೇಮಂತ್ ಮುತ್ತರಾಜು) 

Thursday 6 June 2013

ನಿನ್ನ ಹೊರತು ನಾನು

ಬಣ್ಣ ಮಾಸಿದ ಸೀರೆ 
ಸುಣ್ಣ ಬಳಿಯದ ಗೋಡೆ 
ಗಂಧ ಬೀರದ ಗಾಳಿ 
ಬರೆದು ಹರಿದಿರೋ ಹಾಳೆ 
ಮುತ್ತು ಕಟ್ಟಡ ಚಿಪ್ಪು 
ಹನಿಗೆ ಬಡಿಯದ ರೆಪ್ಪೆ 
ಈಜಲಾಗದ ಮೀನು 
ನಿನ್ನ ಹೊರತು ನಾನು .............

                --ರತ್ನಸುತ 

Wednesday 5 June 2013

ಒಬ್ಬ ನಾ - ಮತ್ತೊಬ್ಬ ನೀ

ಒಬ್ಬರ ಹನಿಗಳು
ಮತ್ತೊಬ್ಬರಿಗೆ ಕೇವಲ
ಒಬ್ಬರ ಹನಿಗವನ
ಮತ್ತೊಬ್ಬರಿಗೆ ನೀಳ
ಅಳತೆ ಮಾಡಿ ನೋಡಿದರೆ
ಎಲ್ಲವೂ ಎಲ್ಲರಂತೆಯೇ
ಒಂದೇ ಬಿಂಬದ ಕನ್ನಡಿ
ಹತ್ತು ಹಲವು ಮೂಲ

ಒಬ್ಬರ ಮೌನ
ಮತ್ತೊಬ್ಬರಿಗೆ ಶಾಪ
ಒಬ್ಬರ ಹಸಿವು
ಮತ್ತೊಬ್ಬರ ಪರಿತಾಪ
ಒಂದೇ ಮುಖ ಮುದ್ರೆಯೊಳಗೆ
ನೂರೆಂಟು ಮುಖವಾಡ
ದೇವರೂ ಚತುರನೇ ಸರಿ
ತಾಳಿದನು ಹಲವು ರೂಪ

ಒಬ್ಬರ ಅಭಿಲಾಷೆಗಳು
ಮತ್ತೊಬ್ಬರಿಗೆ ಅತಿರೇಖ
ಒಬ್ಬರ ಮನದಾಸೆಗಳು
ಮತ್ತೊಬ್ಬರಿಗೆ ನರಕ
ಒಂದೇ ಸೂಜಿಯ ಅಂಚನು
ಹಿಂಬಾಲಿಸಿದ ನೂಲಿಗೆ
ಹೊಲಿಗೆ ಹೊರಗೆ, ಒಳಗೆ
ಕಂಡೂ ಕಾಣದಿರುವ ತವಕ

ಒಬ್ಬರ ಒತ್ತು
ಮತ್ತೊಬ್ಬರ ಉದ್ಧಾರ
ಒಬ್ಬರ ಸ್ವತ್ತು
ಮತ್ತೊಬ್ಬರ ಅಧಿಕಾರ
ಬಂದೇ ಬರುವುದು ಕಾಲ
ಕಾದು ಕೂರುವುದು ಕೇಡು
ಬಿಗಿದ ಕೈಗಳೊಡನೆ ಪಡೆವ
ಆತ್ಮಬಲ ಅಪಾರ

ಒಬ್ಬರ ಹಾಡು
ಮತ್ತೊಬ್ಬರ ರೋಮಾಂಚನ
ಒಬ್ಬರ ಗೂಡು
ಮತ್ತೊಬ್ಬರ ಆಮಂತ್ರಣ
ಒಬ್ಬ ಮತ್ತೊಬ್ಬನೊಡನೆ
ಒಬ್ಬನಾಗಲೇ ಬೇಕು
ಕೂಡಿ ಬಿಡಿಸಿದಾಗ ವರ್ಣಮಯ
ಬಾಳ ಚಿತ್ರಣ .........

                         
                          --ರತ್ನಸುತ





Tuesday 4 June 2013

ಸ್ವಾಭಿಮಾನಿ ತಿರುಕನಾದ
















ಬಿಡಾರವಿಲ್ಲದೂರಿನಲ್ಲಿ, ಗುಡಿಗೆ ಕೈ ಮುಗಿದ ಬಳಿಕ
ದುಡಿಮೆ ಬೆವರು ಹರಿಸಿದನು, ಅತ್ತ ಭೂಮಿ ನಗುವ ತನಕ

ಉತ್ತು, ಬಿತ್ತು, ಮಳೆಗೆ ಕಾದು, ನೆರೆಗೆ ಅಂಜಿ ಬಾಳಿದವನು
ಪುಡಿಗಾಸು ಕೈ ಸೇರಲು, ಮೆಲ್ಲ ಗಿಂಜಿ ಬೆದರಿದನು

ತೆಂಗು, ಜೋಳ, ಬತ್ತ, ತೇಗ, ಇವೇ ಆಪ್ತ ಬಂಧು-ಬಳಗ
ಕತ್ತಲೆಂಬ ಭೂತ ಗೆಲ್ಲಲಾಗಲಿಲ್ಲಾ ಕನಸ ಮೀನುಗ

ಧಿಟ್ಟವಾದ ಮಾಳಿಗೆ, ಸಂಸಾರವೆಂಬ ಜೋಳಿಗೆ
ಮೆಲ್ಲ ತೂಗಿ ಸಾಗುತಿರಲು ದೃಷ್ಟಿ ಬಿತ್ತೇ ಬಾಳಿಗೆ??

ಬಂಡಿ ಮೊಟಾರಾಯಿತು (Motor)
ಮಣ್ಣು ಟಾರಾಯಿತು (Tar)
ಆಗಸದಲಿ ಹಾರಾಡುವ ಲೋಹದ್ಹಕ್ಕಿ ಜೋರಾಯಿತು
ಹೆದ್ದಾರಿಗೆ ಹೆದರಿ ಭೂಮಿ
ಸಿಕ್ಕ ರೇಟಿಗೆ (Rate) ಸೇಲು (Sale)
ಒಂದಿಷ್ಟು ಪರಿಹಾರದ ಜೊತೆಗೆ ಕಣ್ಣೀರ ಪಾಲು

ಮನೆ ಉರುಳಿ ಟೋಲಾಯಿತು (Toll)
ಕಣ ಕಾಂಕ್ರೀಟಾಯಿತು (Concrete)
ಕನಸಲ್ಲೂ,ನಿಜದಲ್ಲೂ ಭೂತಾಯಿಯ ಅಳಲು
ಚಕ್ರ ಉರುಳಿತು 
ಸ್ವಾಭಿಮಾನಿ ಮತ್ತೆ ತಿರುಕನಾದ
ದೇವರೂ ಸೋತನೆ ಅಸ್ತಿತ್ವ ಉಳಿಸಿಕೊಳ್ಳಲು??
                                         
                                                      --ರತ್ನಸುತ

Monday 3 June 2013

ಸೂತಕದ ಮನೆ ನಾಟಕ
















ಸೂತಕದ ಮನೆಯೊಳಗೆ ಪಾಯಸ ರುಚಿಯಿತ್ತು
ನನ್ನ ಮನೆ ಸಪ್ಪೆ ಊಟಕ್ಕೂ ರುಚಿ ಹೆಚ್ಚಿತ್ತು
ಸತ್ಕಾರಕ್ಕಿರದ ಕೊರತೆ , ಖುಷಿಯ ನೀಡಿತ್ತು
ಅಮ್ಮ ಏತಕೆ ಹೊಡೆದಳೋ? ದೇವರಿಗ್ಗೊತ್ತು!!

ನಾಸ್ತಿಕರಾದವರ ಮನೆ ತುಂಬೆಲ್ಲಾ ಧೂಪ
ನೆನ್ನೆಯ ಮಾನವನಿಗೆ ಇಂದು ಧೈವ ರೂಪ
ಎಲ್ಲರೂ ಕೈ ಮುಗಿದು ಸೇವಿಸಿದರು ಪ್ರಸಾದ ಹಣ್ಣು
ನಾನು ಸೇವಿಸಿದ್ದಕ್ಕೆ ಅಮ್ಮಳಿಗೆ ಕೆಂಗಣ್ಣು

ನನಗಿನ್ನೂ ಹತ್ತರ ಹರೆಯ, ಆಕೆ ನನ್ನ ಸಹಪಾಟಿ
ಆಟೋಟ, ಓದು, ಬರಹ ಆಕೆಯ ಜೊತೆಗೇ
ಅಂದೇಕೋ ದೂರುಳಿದೆವು ಒತ್ತಾಯದ ಮೇರೆಗೆ
ಕಣ್ಣೀರು ಜಿನುಗಿತು ಬಿಕ್ಕಳಿಕೆಯ ಜೊತೆಗೆ

ಶಾಸ್ತ್ರ ಪ್ರಕಾರದಿ ಆತ್ಮ ತೃಪ್ತಿಸುವ ಪರಿ
ಪೂಜೆ, ಹವನಗಳ ಭೂಟಾಟಿಕೆಯ ಮಧ್ಯ
ಮಂಡಲದ ನಡುವಲ್ಲಿ ಸುಡುವಾಗ್ನಿ ಯಜ್ಞ ಕುಂಡ
ಮಂತ್ರಗಳ ಘಧರಿಗೆ ಬೆಚ್ಚಿದಳು ಭಾಗ್ಯ

ಆಕೆಯೇ ಭಾಗ್ಯ, ನನ್ನೊಡನೆ ಕೂಡುವ ತವಕ ಆಕೆಗೆ
ಅಂದು ಅವಳ ತಂದೆಯ ಶ್ರಾಧ, ಕಾರಣ ಬರಲಾಗಿಲ್ಲ ಮನೆಯಿಂದೀಚೆಗೆ
ಅಜ್ಜಿ ಬಿಡಿಸಿಟ್ಟಳು ಸೂತಕ ಮನೆ ಜಾತಕ
ಅರ್ಥವಾಗದೆ ಸೋತೆ ತೆರೆ ಮರೆಯ ನಾಟಕ.........


                                                                   --ರತ್ನಸುತ 

ಅತಿ ಮಧುರ ಅನುರಾಗ

ಅತಿ ಮಧುರ ಅನುರಾಗ  ನಿನ್ನೊಲವ ಮಳೆ ಹನಿಗೆ  ಮಿಂದಿರಲು ಮನಸಿದು     ನಿಂತು ನಿಂತು ಬೀಸಿದಂತೆ  ಸಂಜೆ ತಂಪು ಗಾಳಿ  ಅಂಕೆ ಮೀರಿ ಬರುವ ಮಾತು  ಹಾಕಬೇಕೇ ಬೇಲಿ  ಜೊತೆ ಇರಲು ...