ಹೇಳಬೇಕ್ಕಾದ್ದು ಹೇಳಲಾಗದ್ದು!!


ನಿನ್ನ ಕಣ್ಣಿಗೆ ಬಿದ್ದ ಗೊಂಬೆಗುಡಿಸಿದ ಸೀರೆ
ನೀನಾಸೆ ಪಟ್ಟ ಬೆಲೆಗೆ ಸಿಗದಿರೆ ಸಾಕು 
ಇಬ್ಬರಿರುವ ಮನೆಗೆ ಒಂದಾದರೆ ಸಾಲದೇ?
ಡಜನ್ಗಟ್ಟಲೆ ಲಟ್ಟಣಿಗೆ ಯಾಕೆ ಬೇಕು?

ಆ ಬೀದಿಯಲಿ ಹೂ ಮಾರುವವನಿಗೆ ಸೊಕ್ಕು 
ಮೊಳ ಮೀರಿ ಹೆಚ್ಚು ಕೇಳಿದರೆ ಸಿಡುಕುವನು 
ಚಿನ್ನದ ಅಂಗಡಿಗಳೇ ಸಾಲುಗಟ್ಟಿವೆ ಅಲ್ಲಿ
ನಿನ್ನ ಕಣ್ಣಿಗೆ ಬಿದ್ದರೆ ನನ್ನ ಗತಿಯೇನು!!

ಮೆಲ್ಲ ನಡೆ, ನಿನ್ನ ಸೋದರತ್ತೆ ಮಗಳಿಹಳಲ್ಲಿ 
ಈಗಷ್ಟೇ ಹೊಸದೊಂದು ಕಾರು ಕೊಂಡಿಹಳಂತೆ 
ಎದುರಾದರೆ ಮತ್ತೆ ಹೊಸ ರಾಗ ತಗೆಯುವೆ 
ಕಣ್ತಪ್ಪಿಸುವ ಆಕೆಗೆ ಕಾಣದಂತೆ 

ಸ್ಟಾರು ಹೋಟಲ್ಲುಗಳು ನೋಡಲಷ್ಟೇ ಚಂದ 
ಉಪ್ಪು-ಖಾರ ಇರದ ಸಪ್ಪೆ ಊಟ ಅಲ್ಲಿ 
ಹೀಗಂದುಕೊಳ್ಳುವಷ್ಟರಲ್ಲಿ ಆಗಲೇ ನೀನು 
ಹಿಡಿದಿದ್ದೆ ಮೆನು ಕಾರ್ಡು ಕೈಯ್ಯಲ್ಲಿ 

ಸಂಜೆ ವೇಳೆಗೆ ಒಂದು ಕಡ್ಡಿ ಐಸ್ ಕೀಂ ಹೀರಿ 
ಮನೆ ಕಡೆ ನಡೆದರೆ ಎಂಥಾ ಸೊಗಸು 
ಹೇಳಬೇಕನಿಸಿದ್ದ ಅನಿಸಿಕೆ ಅರಿತಳಾ?
ಯಾಕೆ ಕೆನ್ನೆಗೆ ಸವರಿರುವಳು ಮುನಿಸು ??!!

ರಾತ್ರಿ ಊಟಕ್ಕೆ ತಂಗಲನ್ನ-ಗೊಜ್ಜು 
"ಹೇಗಿದೆ"? ಅಂತ ಕೇಳಲು ಏನು ಹೇಳಲಿ!!
ಪಾಕ ಶಾಸ್ತ್ರದ ಪ್ರವೀಣೆ ಅಂದ ನಾಲಿಗೆ 
ಶಾಪ ಹಾಕಿತು ಮತ್ತದೇ ಹಳೇ ಶೈಲಿಯಲಿ....... 


                                        --ರತ್ನಸುತ 

Comments

 1. ಭರತ ಮುನಿಗಳೇ ನಮ್ಮೆಲ್ಲರ ಮನೆ ಮನೆ ರಾಮಾಯಣವನ್ನು ಇಷ್ಟು ಚೆನ್ನಾಗಿ ಕಟ್ಟಿಕೊಟ್ಟಿರುವುದು ನಮಗೆ ಮೆಚ್ಚಿಗೆಯಾಯಿತು.

  ರಾತ್ರಿ ಊಟಕ್ಕೆ ತಂಗಲನ್ನ-ಗೊಜ್ಜು
  "ಹೇಗಿದೆ"? ಅಂತ ಕೇಳಲು ಏನು ಹೇಳಲಿ!!
  ಮುಂದುವರೆದು,
  ಪಕ್ಕದ ಮನೆಯ ಬಿರಿಯಾನಿ ಘಮಲು!

  ಅಕಟಕಟಾ...

  ReplyDelete

Post a Comment

Popular posts from this blog

ಜೋಡಿ ಪದ

"ಪಾಸ್ವರ್ಡ್" - RESET ಆಗ್ತಿರ್ಲಿ ಆಗಾಗ!!!

ಗರುಡ ಪ್ರಯತ್ನ ೩