Monday 10 June 2013

ತೊಟ್ಟು ಹನಿಗಳು

ನಾನೊಬ್ಬ, ನೀನೊಬ್ಬಳು
ನಾವಿಬ್ಬರು ಜಗದೊಳಗೆ
ನಾನಲ್ಲ, ನೀನಲ್ಲೆ
ನಾವೊಂದೇ ನಮ್ಮೊಳಗೆ
***********************************
ಮಿಟುಕಿನ ಗುಟುಕಲ್ಲಿ ನಿನ್ನ
ಕಣ್ಣಲ್ಲೇ ನುಂಗುವಾಸೆ
ಒಮ್ಮೆ ಹಾಗೆ ಸುಳಿದು ಹೋಗಬಾರದೇ ಕಣ್ಮುಂದೆ ?!!
ಮೌನದ ಪಾಶದಲಿ ನನ್ನ
ಉಸಿರು ಬಿಗಿಯುವ ಬದಲು
ಒಗಟೊಂದನು ಬಳಿದು ಹೋಗು ಬೆನ್ಹಿಂದೆ !!
***********************************
ವೈರಿ ಅನಿಸಿಕೊಂಡವನ ಪ್ರಶಂಸೆಯಲ್ಲಿ
ಬೆನ್ನ ತುಂಡಾಗಿಸುವಷ್ಟು ಶಕ್ತಿಯಿತ್ತು
ಗೆಳೆಯನ ಆಲಿಂಗನದಲಿ, ಗೆಲುವನ್ನೂ
ಮೀರಿಸುವಷ್ಟು ತೃಪ್ತಿಯಿತ್ತು
************************************
ಕನಸಲ್ಲಿ ಸುಲಿದ ಹಣ್ಣಿನ ಹಾಗೆ ಸಿಕ್ಕವಳು
ನಿಜದಿ ಬಾನೆತ್ತರದ ಮರದಲ್ಲಿ ಕೂತೆ
ಕನಸಲ್ಲಿ ನಿನ್ನನ್ನು ಬಣ್ಣಿಸಿದ ಪ್ರೇಮ ಕವಿ
ನಿಜದಲಿ ಬೇಗುದಿಗೆ ಬಳಲಿ ಸೋತೆ
*********************************************
ದಾಹವೆಂದು ಒಡ್ಡಿದೆ ಬೊಗಸೆಯ ನಿನ್ನೆದುರು
ಬಳುಕು ನಡು ಬಿಂದಿಗೆಯೊಡನೆ ಬಂದೆ ನೀ , ಬಗ್ಗಿಸಲು ಖಾಲಿ ನೀರು
************************************
ಒಂದು ವೀಣೆ, ನಾಲ್ಕು ತಂತಿ
ಆದರೆ ನಿನ್ನಲ್ಲೊಂದು ವಿನಂತಿ
ನುಡಿಸುವಾಗ ಜೋಪಾನ ಗೆಳತಿ
ಹರಿತವಾದ ತಂತಿಗಳ ನೋಯಿಸ ಬೇಡಾ
ಬಿಕ್ಕುವುದು ಬೆರಳು, ಕೇಳುಗರ ಕಿವಿಗಳು
************************************
ಕಾಗದ ದೋಣಿ ತಲುಪುವ ಹೊತ್ತಿಗೆ
ಅಕ್ಷರ ಅಳಿಸಿ ಹೋಗಿತ್ತು
ಕಂಬನಿ ರಕ್ಷೆ ಪಡೆದವು ಮಾತ್ರ
ಅಳಿಯದೆ ಹಾಗೆ ಉಳಿದಿತ್ತು
************************************
ಜೇಬಿಗೆ ಕತ್ತರಿ ಹಾಕಿದ ಅವಳ
ಕರೆದನು ಅವನು "ಕಳ್ಳಿ"
ಅವಳು ಅಳುಕಿಲ್ಲದೇ ಹೊರ ತಗೆದಳು
ಅವನು ಕಟ್ಟಿದ ತಾಳಿ

************************************
ಜೋಡ್ಸಿ, ಜೋಡ್ಸಿ ಬರ್ಕೊಂಡಾಯ್ತು
ಹಾಳೆ ಗಟ್ಳೆ ಕವ್ನಾ
ಓದೋರಿಲ್ಲಾ, ಕೇಳೋರಿಲ್ಲಾ ಅದ್ನಾ
************************************
ಗೋರಂಟಿ ಗಾಯ, ಏನ್ ಪುಣ್ಯ ಮಾಡಿತ್ತೋ
ನನ್ ಕೈಯ್ಯಾರೆ ನಿನ್ ಕೈಯೆಲ್ಲಾ ಹರ್ದಾಡಿತ್ತು
************************************
ಬಾಗಿಲಲ್ಲೇ ನಿಂತು ಬಿಡು
ನೆರಳು ಮಾತ್ರ ಒಳಬರಲಿ
ನೀನು ದೂರ ಹೋದರೂ
ನೆನಪುಗಳು ಅಳಿಯದೆ ಇರಲಿ

************************************

ನಿಜ ಹೇಳಲೇ?
ನೀನಲ್ಲಾ ಜಗತ್ ಸುಂದರಿ
ಆದರೆ,
ಚಂದನದ ವಾಹಿನಿಯ
ಮಧುರ ಚಿತ್ರ ಮಂಜರಿ

************************************
ಸ್ವಲ್ಪ ತಡಿ, ನೆನೆಸಲಿ ಈ ಮಳೆ
ಆಗಲೇ ನನ್ನಿರುವಿಕೆಗೆ ಬೆಲೆ

************************************
ಗೀಚೋದೆಲ್ಲಾ ಪದ್ಯ ಅನ್ನೋದಾದ್ರೆ
ನಾನೂ ಕವಿನೇ
ಕತ್ತಲ ಮನೆಲ್ ಬೆಳ್ಗೊ ದೀಪ
ಪುಟ್ಟದಾದ್ರೂ ರವಿನೇ

************************************
ನೀ ತೊರೆದ ಆ ಗಳಿಗೆ
ನಾ ನೋವಿನ ಮಳಿಗೆ
ಸರಕು ಖಾಲಿ ಆಯಿತೀಗ
ಮತ್ತೆ ಬಾರೆ ಬಳಿಗೆ

************************************
ಗುರುತಿಡದೇ ಮುತ್ತಿಕ್ಕಲು ನಿನಗೆ
ತುಟಿಗಲ್ಲದೇ ಗಲ್ಲಕಿಟ್ಟೆ ಕೊನೆಗೆ

************************************
ಮದುವೆ ಸ್ಫೂರ್ತಿ ಆದ್ರೆ ಓಕೆ
_______ಆಗ್ದೇ ಇರ್ಲಿ ಜೋಕೆ !!




                                                                      --ರತ್ನಸುತ

No comments:

Post a Comment

ದಣಿವಾರಿ ಕೊಳದಲಿ

ದಣಿವಾರಿ ಕೊಳದಲಿ  ಕೆಂದಾವರೆ ಅರಳಿದೆ  ಮುಗಿಲೇರಿ ಬರದಲಿ  ಹನಿಗೂಡಲು ಇಳಿದಿದೆ  ರವಿಕಾಂತಿ ಸವಿಯುತ  ಹರಳಂತೆ ಮಿನುಗುತಾ  ಬೆರಗಲ್ಲೇ ತಯಾರಿಯಾಗುತಿದೆ  ಮನದಂಗಳ ಮುಂಜಾನೆಯ...