ಓದು ಬಾ ನನ್ನ

ನನ್ನ ಬಾಳ ಪುಸ್ತಕವ, ಒಮ್ಮೆ ತೆರೆದು ನೋಡು
ಕಾಣಸಿಗುವುದೆಲ್ಲವೂ ಖಾಲಿ ಪುಟಗಳೇ 
ಅಲ್ಲಲ್ಲಿ ಒಂದೆರಡು ಅನರ್ಥ ಕವಿತೆಗಳು 
ನಡುವೆಲ್ಲೋ ಅಡಗಿಸಿಟ್ಟ ಭಾವ ಚಿತ್ರ

ನೆನಪಿನ ನವಿಲುಗರಿ, ಅಚ್ಚಾದ ಹೂವುಗಳು 
ನೆತ್ತರಿಂದ ಮಾಡಿಕೊಂಡ ನೋವಿನನಾವರಣ 
ಬೇಸರಕ್ಕೆ ಗೀಚಿಕೊಂಡ ಒರಟು ರೇಖೆಗಳು 
ಕಣ್ಣೀರಿನ ಉರುಳಿಗೆ ಸುಕ್ಕು ಹಿಡಿದ ಹಾಳೆ ಮಡಿಲು 

ಶೀರ್ಷಿಕೆಯಲ್ಲೇ ಮುಗಿದ ಮರ್ಮಾಂತರ ಕಥೆಗಳು 
ನಾಚಿಕೆಗೆ ಸಾಕ್ಷಿಯಾದ ಅವಸರದಿ ಸರಿದ ಹಾಳೆ 
ಬರೆಯದೇ ಮಡಿಚಿಟ್ಟ ಗುಟ್ಟಿನ ಓಲೆ 
ನೆಪಮಾತ್ರಕೆ ಸಂಖ್ಯೆಯ ಲೆಕ್ಕ ಹೊತ್ತ ಕಾಗದ 

ಮೊದಲಿಂದ ಕೊನೆ ವರೆಗೆ ಬರೆಯ ನೀಳ ಬೇಸರ
ಬೆನ್ನು ಹಾಳೆಯಲ್ಲಿ ಮಾತ್ರ, ನೂಕು-ನುಗ್ಗಲು 
ಒಂದರ ಮೇಲೊಂದರ ಹಿಂದೊಂದರಂತೆ ಸಾಲುಗಳು 
ನಿನ್ನ ನೆರಳು ಸುಳಿದರೆ,ಆ ಸಾಲಿಗೆ ಗುರುತು ಹಾಕು 

ಬೆನ್ನುಡಿ ಆಗಿಸುವೆ ಅದ, ಕೊನೆಗೂ ಕೊನೆಗೊಳ್ಳಿಸುವೆ 
ಬಾಳಿನರ್ಪಣೆಯ ಪುಟದಲಿ ಬರೆಯುವೆ ನಿನ್ಹೆಸರ
ಮುಖಪುಟದ ಇಣುಕಿಗೆ ನೀಡುವೆ ಬಣ್ಣದ ಎಳೆಯ 
ಸೆಳೆಯುವೆ ಚೂರು-ಪಾರು ಆಸಕ್ತ  ಓದುಗರ................ 


                                                  --ರತ್ನಸುತ 

Comments

 1. ಚೆನ್ನಾಗಿದೆ ರತ್ನಸುತ :-)

  ReplyDelete
  Replies
  1. ಧನ್ಯೋಸ್ಮಿ ಪ್ರಶಸ್ತಿ :)

   Delete
 2. ನಿಮ್ಮ ಬಾಳ ಪುಸ್ತಕದ ಪ್ರತಿಯೊಂದು ಪುಟದ ಪ್ರತಿಯೊಂದು ಸಾಲು ಮಧುರವಾಗಿತ್ತು!

  ReplyDelete
 3. ಬರೆಯದೇ ಮಡಿಚಿಟ್ಟ ಗುಟ್ಟಿನ ಓಲೆ - ಇನ್ನೂ ಶುರು ಮಾಡಿಲ್ಲವೇ ಕವಿವರ್ಯ?
  ಭಾವನೆಗಳು ಬೇಸರಕ್ಕೆ ಗೀಚಿಕೊಂಡ ಒರಟು ರೇಖೆಗಳು ಆಗಬಾರದಲ್ಲ
  ಮತ್ತೆ ಶೀರ್ಷಿಕೆಯಲ್ಲೇ ಮುಗಿದ ಮರ್ಮಾಂತರ ಕಥೆಗಳು ಆಗಬಾರದಲ್ಲ! ಲವ್ವಿನಲಿ!

  ಆದರೂ ನಿಮ್ಮ ಆಶಯ ಮೆಚ್ಚಿದೆ, ಸೆಳೆಯುವೆ ಚೂರು-ಪಾರು ಆಸಕ್ತ ಓದುಗರ ಅದೇ ಬದುಕು...

  ReplyDelete

Post a Comment

Popular posts from this blog

ಜೋಡಿ ಪದ

"ಪಾಸ್ವರ್ಡ್" - RESET ಆಗ್ತಿರ್ಲಿ ಆಗಾಗ!!!

ಗರುಡ ಪ್ರಯತ್ನ ೩