Tuesday, 17 November 2020

ನನ್ನ ನಿನ್ನ ನಡುವೆ ಕಟ್ಟಿದೆ

ನನ್ನ ನಿನ್ನ ನಡುವೆ ಕಟ್ಟಿದೆ 

ಮೋಡವು ಮಂಜಿನ ಅಂತರವ 
ಚೂರು ಕಾದರೆ ತಾನೇ ಸರಿದು 
ಕಾಣುವುದೆಲ್ಲವೂ ಸುಂದರವೇ 

ಬೆನ್ನು ತೋರುವ ಸಾಹಸವೇಕೆ?
ಮನದ ಮಾತನು ಆಲಿಸದೆ 
ನಿನ್ನ ಇಷ್ಟದ ಸಾಲಲಿ ನನಗೆ 
ದಿಟ್ಟ ಸ್ಥಾನವು ಸಿಗಬಹುದೇ?

ಮುಂಜಾವಿನ ಸೂರ್ಯನ ಹಾಗೆ 
ತಣ್ಣಗೆ ಕಾಯುವೆ ನಾ ಮರೆಗೆ
ಮಂಜಿನ ಸೆರಗು ಕಣ್ಣನು ಕಟ್ಟಲು
ನಿನಗೆ ನಾ ಕಾಣದೆ ಹೋದೆ  

ಎಲ್ಲ ಕರಗಿ ನೀರಾಗಲು ನೀ 
ಮಡಿಲಾಗುವೆ ಉರುಳುವ ಹನಿಗೆ 
ನಾನೇ ಬಂದು ತಬ್ಬಿದ ಅವುಗಳ 
ಮುದ್ದಿಸಿ ಬೇರ್ಪಡಿಸುವವರೆಗೆ 

ಹೊಳೆಯುವೆ ನನ್ನ ಕಿರಣವು ಸೋಕಿ 
ಹಸಿರು ತೊಟ್ಟರೆ ನೀ ರಮೆಯೇ 
ನನ್ನ ಪಥದ ದಾಟಿಗೆ ನಿನ್ನ 
ಕೆನ್ನೆಯ ರಂಗು ಕುಣಿಯುವುದೇ?

ಆಗೋ ಮತ್ತೆ ಹೊರಡುವ ಸಮಯ 
ಮತ್ತೆ ತರುವೆ ಹೊಸ ಬೆಳಕ 
ಅಡಗಿಸಿಟ್ಟ ಭಾವನೆಗಳನು 
ತೆರೆದಿಡುವ ಇರುಳಿನ ಬಳಿಕ 

ನಿನಗೆ ನಿನ್ನದೇ ತೊಳಲಾಟಗಳು 
ಅಂತೆಯೇ ನನಗೂ ನನ್ನವು 
ಅರಿತು ಬೆರೆತರೆ ಚಿಂತೆಯ ದಹಿಸಿ 
ಅರಳಬಲ್ಲದು ಪ್ರೇಮವು... 

ಈ ಗಾಯವಿನ್ನೂ ಹಸಿಯಾಗಿದೆ

ಈ ಗಾಯವಿನ್ನೂ ಹಸಿಯಾಗಿದೆ

ನೆನಪೆಂಬ ನೋವು ಜೊತೆಯಾಗಿದೆ
ಉಸಿರಾಟವಿನ್ನೂ ಬಿಗಿಯಾಗಿದೆ
ಬೆಳಕಾಗಿ ನೀನು ಬರಬೇಕಿದೆ 
ನಡು ನೀರಿನಲ್ಲಿ ಒದ್ದಾಡುವೆ
ದಡವಾಗು ಚೂರು ಹಗುರಾಗುವೆ 

ಬೆರಳಲ್ಲಿ ಅಂಟಿದ ಮಸಿಯೆಲ್ಲವ 
ಒರೆಸೋಕೆ ಮನಸಿಲ್ಲ ನೀನಿಲ್ಲದೆ 
ಕಣ್ಣೀರು ಹರಿವಾಗ ತಾನಾಗಿಯೇ 
ತಡೆಯೋಕೆ ಮುಂದಾಗಿ ಸಾಕಾಗಿದೆ 
ಮನದಾಳದಲ್ಲಿ ಒಲವಾಗುವಾಗ
ನಿನ್ನನ್ನು ಮರೆತಂತೆ ನಟಿಸೋಕೂ ದಿಗಿಲಾಗಿದೆ 

ಮಗುವಾಗಿ ಒರಗುತ್ತ ಆ ತೋಳಲಿ
ಜಗವನ್ನು ಮರೆವಂಥ ಬಯಕೆ ಇದೆ
ಬರಿಗೈಯ್ಯಲಿರುವಲ್ಲೂ ನಿನ್ನೊಂದಿಗೆ
ಸಿರಿವಂತನಾದಂತೆ ಭ್ರಮಿಸುತ್ತಿದೆ 
ಎದುರಾಗಿ ಮತ್ತೆ ಕಳುವಾಗುವಾಗ 
ಹೃದಯಕ್ಕೆ ಖುಷಿ ಕೊಟ್ಟು ಕಸಿದಂತೆ ಬಳಲುತ್ತಿದೆ 

ಕನಸು ಹೆಣೆಯುವ ಕುಸುರಿ

ಕನಸು ಹೆಣೆಯುವ ಕುಸುರಿ

ಕಲಿಸುವೆ ನಾ ನಿನಗೆ
ಬಾ ಒರಗು ಕಂದ ಅಪ್ಪನೆದೆಗೆ
ನಾ ಕಾಣದ ಬಣ್ಣ ನೀ ತುಂಬು
ನೀ ಬಯಸಿದ ಬಣ್ಣ ನಾ ತರುವೆ
ಕಟ್ಟೋಣ ಬಾ ಎಲ್ಲವ ಜೊತೆಗೆ

ಮಳೆ ನೀರ ಓಟಕೆ
ಹಾಳೆಗಳ ಹರಿದು ದೋಣಿ ಮಾಡಿ
ತೇಲಿಸಿ ಕೊನೆ ಮುಟ್ಟಿ ಕುಣಿಯೋಣ
ಚಂದ್ರನುದುರಿಸಿದನೆಂದೆಣಿಸಿ
ಎಲೆಯೆಲೆಯ ಇಬ್ಬನಿ ಬಿಡಿಸಿ 
ನಿಲುವಂಗಿ ಒಡ್ಡಿ ಬಾಚಿಕೊಳ್ಳೋಣ 

ಗೊಂಬೆ ರೂಪವ ಕೆಡವಿ 
ಉಟ್ಟ ತೊಡುಗೆಯ ಹರಿದು 
ಮತ್ತೆ ಹೊಸ ರೂಪ ಕೊಡುತ
ನಡು ಮನೆಯ ಹಿಡಿದು
ಮೂಲೆ ಮೂಲೆಗೆ ಹರಡಿ
ಯಾವುದೆಲ್ಲಿರಬೇಕೋ ಅಲ್ಲೇ ಇಡುತ

ಮರಳ ಗೂಡಲಿ ಬೆರಳು
ನಡೆಸುವ ಆಟವ
ಕಲಿಸುವೆ ಬಾ ಮನದ ಕಡಲ ತೀರದಲಿ
ನೆನೆದಷ್ಟೂ ನೆನೆದು
ಒಲೆ ಉರಿಗೆ ಮೈಯ್ಯೊಡ್ಡಿ
ನಡುಗುವ ಕೆನ್ನೆಗೆ ಅಂಗೈ ಚಾಚುತಲಿ 

ಗದರುವಾಗ ಅಳು
ಅಳುವ ಹಿಂದೆಯೇ ನಗು
ನಕ್ಕಾದ ನಂತರ ಮತ್ತದೇ ಸಲುಗೆ
ನನ್ನ ಪಾತ್ರವ ತಾಳಿ
ನಿನ್ನ ನನ್ನೊಳಗಿಳಿಸಿ
ಕೈಗನ್ನಡಿಯ ಹಾಗೆ ಕಂಡೆ ನನಗೆ

ಜೊತೆಗೆ ಹುಟ್ಟಿದೆವು 
ಜೊತೆಗೆ ಕಲಿತೆವು ನಾವು 
ಏಳುಬೀಳೆಂಬ ಜೀವನದ ಪಾಠಗಳ 
ಒಪ್ಪಿತ ಪಡೆದ ತಪ್ಪಾದರೂ 
ತಪ್ಪು ಮಾಡಿ ಒಪ್ಪಿಕೊಳ್ಳುವೆ 
ನಿನ್ನ ನಿಲುವಿನೆದುರು ನಾನಿನ್ನೂ ಶಿಥಿಲ...

ಯಾರಲ್ಲಿ ಹೇಳಲಿ ನಾನು ನವಿರಾದ ಅನುಭವವ

ಯಾರಲ್ಲಿ ಹೇಳಲಿ ನಾನು ನವಿರಾದ ಅನುಭವವ 

ಮನವೀಗ ಕಲಿತಿರುವಾಗ ಅನುರಾಗ ಕಲರವವ 
ನೀರಾಗಿ ಹರಿವುದು ಹೃದಯ ಆ ನೋಟ ತಾಕಿದರೆ 
ಏನೇನೋ ಜರಿಗಿತು ಒಳಗೆ ಬಳಿ ನೀನು ಬರುತಲಿರೆ 
ಈ ಜಗವೇ ವಿಸ್ಮಯದಂತೆ ನೀ ಮಾಡಿದೆ ಜಾದು
ನೀ ತೋರುವಷ್ಟು ಪ್ರೀತಿ ಇನ್ನೆಲ್ಲೂ ಸಿಗದು 

ಆ ನಿಮಿಷ, ಮರಳಿ ಮರಳಿ ನೆನಪಾಗೋ ವೇಳೆ 
ಹೂಗಳಿಗೂ ಒದ್ದಾಡೋ ಸುಖವ ಹಂಚಿ ಬರಲೇನು?
ಕಾತರಿಸಿ ಬಾಗಿಲಿಗೆ ಪ್ರಾಣ ಕೊಟ್ಟು ಬಂದಿರುವೆ 
ನೀ ಎದುರು ಸಿಕ್ಕಾಗ ನನ್ನ ನಾನೇ ಮರೆತೇನು 
ಹಿಂದೆಲ್ಲ ಬೀಳೋ ಕನಸು ಅಪೂರ್ಣವೆನಿಸಿದೆ ಏಕೋ 
ಈಗೀಗ ಅಲ್ಲೂ ನೀನಷ್ಟೇ ಆವರಿಸಿಕೊಂಡಿರುವೆ 

ಸ್ವೀಕರಿಸು ಒಂದಿಷ್ಟು ಸಲುಗೆಯ ಕಣ್ಣಲ್ಲೇ ಕೊಡುವೆ 
ಆದರಿಸೋ ಉಸಿರನ್ನು ನೀಡುತ ಮತ್ತೆ ಕಸಿಯುತಲಿ 
ತಲ್ಲಣದ ಒಂದೊಂದು ಹೆಜ್ಜೆಯ ದಾಟಿ ಬಂದಿರುವೆ 
ಅಚ್ಚರಿಯ ಒಂದಿಷ್ಟು ರಸಗಳ ಒಟ್ಟುಗೂಡುತಲಿ 
ಮೊದಲೆಲ್ಲ ಜರುಗಲು ಹೀಗೆ ಮರುಳಾದ ಸಂಶಯವು 
ಈಗೀಗ ಕಾರಣ ಸಿಕ್ಕು ಹಿತವಾದ ಭಾವನೆಯು 

ಮಾಯಾ ದರ್ಪಣದ ಬಳುವಳಿಯ ನೀಡು

ಕೋರೆಗಳ ಮರೆಸಿ ನಗುವನ್ನು ಮೂಡಿಸುವ 

ಮಾಯಾ ದರ್ಪಣದ ಬಳುವಳಿಯ ನೀಡು 
ನಿನಗೊಪ್ಪುವಂತೆಯೇ ಸಜ್ಜಾಗಿ ಬರುವೆ
ನಂತರವೇ ಪ್ರೇಮ ಪರೀಕ್ಷೆ ಮಾಡು 

ಇಗೋ ಕ್ರಾಪು ಕಾಣದಂತೆ ಕೆದರಿಕೊಂಡಿರುವೆ 
ಮುಖಕ್ಕೆ ಪೌಡರಿನ ಟಚ್ಚಪ್ಪು ಕೊಟ್ಟು
ಇಸ್ತ್ರಿ ಮಾಡಿದ ಅಂಗಿ ನಿನಗಿಷ್ಟದ ಬಣ್ಣದ್ದು 
ಒಟ್ಟಾರೆ ಎದುರಾದೆ ನನ್ನನ್ನೇ ಬದಿಗಿಟ್ಟು 

ಕಣ್ಣೇರಿದ ಕನ್ನಡಕದ ಹೊರಗೆ 
ನೀ ಕಾಣುವಷ್ಟೇ ಸ್ಪಷ್ಟ, ಕನಸಲ್ಲೂ 
ಕಣ್ಮುಚ್ಚಿಯೂ ಕಾಣಸಿಗುತೀಯ ಎಂದಾಗ 
ಸುಳ್ಳು ಹೇಳಿದೆನೆಂದು ಭಾವಿಸಬೇಡ 

ಹೇರಿಕೊಂಡಿರುವೆ ಬಾಡಿಗೆ ಶೋಕಿಯ 
ಮೆಚ್ಚಿದಂತೆ ಮೆಚ್ಚಿ ತಿರಸ್ಕರಿಸಿ ಬಿಡು 
ನಾಳೆಗಳ ವಿಸ್ತಾರ ಕಂಡವರು ಯಾರು 
ನಟಿಸುತ್ತಾ ಕಳೆವೆ, ಮರಳಿ ನನ್ನ ಹುಡುಕಿ ಕೊಡು 

ಎಲ್ಲಕ್ಕೂ ರೂಪಕಗಳ ಮೊರೆ ಹೋಗಿ 
ಏನೂ ತೋಚದೆ ಕೈಚೆಲ್ಲಿ ಕೂತಿದ್ದೇನೆ 
ಕವಿತೆ ಕಟ್ಟುವುದು ಸುಲಭದ ತುತ್ತಲ್ಲ 
ನೀ ಹಸಿದಾಗ, ನಾ ಇಲ್ಲಿ ಬರಿದು ಹೊಲ 

ಸತ್ವಹೀನ ಬಿಳಿ ಹಾಳೆಗಳು 
ಅಕ್ಷರಕ್ಕಾಗಿ ಹಪಹಪಿಸುತ್ತಿವೆ ಕಪಾಟಿನಲ್ಲಿ 
ಬೇಕಿರುವುದು ಮನಃಸ್ಪರ್ಶಿ ಸಂವಹನ 
ನೀನಿದ್ದೂ ಇಲ್ಲವಾಗಿಸುವ ಆವರಣ ಬೇಡ 
ನೀನಿರದೆಯೂ ಇರುವಂತೆ ಭಾಸವಾಗುವ ನೆನಪು ಸಾಕು.... 

ಕಿವಿಗೊಡು ಪಿಸು ಮಾತಿಗೆ

ಕಿವಿಗೊಡು ಪಿಸು ಮಾತಿಗೆ 

ತುಸು ಕರೆದರೂ ಬಳಿಗೆ ಬಾ  
ಹಸಿ ಗಾಯಕೆ ನಿನ್ನ ನೆರಳ ಉಪಶಮನದ ನೆವವು 
ನಸುಕಲ್ಲಿಯ ಪಯಣದಲಿ
ಮಿಟುಕಿಸದಿರು ಕಣ್ಣುಗಳ 
ಅರೆ ಕ್ಷಣವೂ ನಿನ್ನ ಬಿಟ್ಟಿರಲಾರದು ಮನವು 

ನಶೆಯೊಳಗಿಂದೀಚೆಗೆ 
ಬಂದೆದುರಿಗೆ ನಿಂತ ನಿಲುವು-
-ಗನ್ನಡಿಯಲಿ ಕಾಣಿಸಿತ್ತು ಕೆನ್ನೆಗಂಟಿ ಪಸೆಯು 
ದೆಸೆಯೆಂಬುದು ಕಾಣದಾಗಿ
ಹುಸಿ ಬದುಕನು ನಡೆಸುವಲ್ಲಿ 
ಗಡಿಯಾರದ ಮುಳ್ಳು ಇರಿದಂತೆ ಪ್ರತಿ ಸಲವೂ 

ಹೇರಳವಾಗಿವೆ ನೆನಪು 
ಕಣ್ಣ ಕಾವಲು ದಾಟಿ 
ಹೊಮ್ಮುವಂತೆ ಮಾಡಿವೆ ಕಂಬನಿ ಸಾಲನ್ನು 
ಚೂರೇ ಅಂತರವಿದ್ದೂ 
ಅಂಧಕಾರ ಕವಿದಂತೆ 
ಇದ್ದಲ್ಲೇ ಉಳಿದು ನಾ ಕುರುಡು ಗಾವಿಲನು

ಸೋಲನು ಗೆದ್ದು ಬರಲು 
ಯಾವುದೇ ಸುಲಭಗಳಿಲ್ಲ 
ಕಠಿಣ ದಾರಿ ಹಿಡಿಯುವುದ ಯಾಕೆ ಕಲಿಸದಾದೆ?
ಬಿದ್ದಷ್ಟೇ ಸುಲಭಕ್ಕೆ 
ಮುಂದೂಡಿಸಲಾಗದೇ?
ಪ್ರೀತಿಯ ಬಲೆ ಮತ್ತಷ್ಟು ಗೋಜಲಾಗಿ ಹೋಗಿದೆ

ಮುಟ್ಟಿ ಹೋಗು, ತಟ್ಟಿ ಹೋಗು 
ಬಿಟ್ಟು ಹೊರಡುವ ಮುನ್ನ 
ಎಚ್ಚರದಲ್ಲುಳಿದಾಗ ಖಚಿತವೆನಿಸಲಿ ಎಲ್ಲ 
ಹಾಗಲ್ಲದೆ ದೂರಾದರೆ 
ದೇವರಾದರೂ ಸರಿಯೇ 
ನಂಬಿಕೆ ಮೂಡಿಸಿದರೂ ನಾ ನಂಬುವವನಲ್ಲ... 

Wednesday, 4 November 2020

ಸಾಗಿ ಹೊರಟ ದಾರಿಯಲಿ

ಸಾಗಿ ಹೊರಟ ದಾರಿಯಲಿ 

ಅಳಿಯದ ಹೆಜ್ಜೆಯ ಗುರುತು 
ಕೊಟ್ಟು ಮರೆತ ಮಾತಿನಲಿ 
ತೀರದ ನೋವಿನ ಗುರುತು 
ಕಲ್ಲ ಕೆತ್ತಿದ ಉಳಿಯಲ್ಲಿ 
ಕ್ಷಮೆಯಾಚನೆಯ ಗುರುತು 
ಮಣ್ಣ ಬೆರೆತ ಹನಿಯಲ್ಲಿ 
ಮೋಡವ ಕಟ್ಟುವ ಗುರುತು 

ಎಲ್ಲಿದೆ ನಿನ್ನ ಗುರುತು?
ಈಗೆಲ್ಲಿದೆ ನಿನ್ನ ಗುರುತು? 
ನಿನ್ನನೇ ನೀನು ಮರೆತು ಕೂತರೆ 
ಉಳಿವುದೇ ನಿನ್ನ ಗುರುತು?

ಗಂಧವ ತೇಯುತ ಹೋದಂತೆ 
ಹೊಮ್ಮುವ ದಿವ್ಯ ಘಮಲು 
ಸವೆದ ಕೋಲಿನ ಅಂಚಿನಲಿ 
ಜೀವಂತಿಕೆಯ ಗುರುತು 
ಬಳ್ಳಿಯಿಂದ ಬೇರ್ಪಟ್ಟು 
ಮೊಗ್ಗಿನ ಅವಸ್ಥೆ ದಾಟಿ 
ಅರಳಿದ ಹೂವಿನ ನಗುವಲ್ಲಿ 
ಕಿರು ಉತ್ಸಾಹದ ಗುರುತು 

ಎಲೆಮರೆ ಕಾಯಿಗಳೆಲ್ಲ 
ಕೊನೆಗೆ ಗೆದ್ದೆವು ಎಂದು 
ಕಲ್ಲಿನ ಹೊಡೆತವು ತಪ್ಪಿ 
ಕಾದು ಹಣ್ಣಾದೆವೆಂದು 
ಮರದ ಕುರಿತು ಹೇಳಲು 
ಹಸಿದ ಹಕ್ಕಿಗೆ ನೀಡಲು 
ಉಳಿದ ತನ್ನಲಿ ಕಾಣುವುದು 
ಸಂತೃಪ್ತಿಯ ಗುರುತು 

ದೂರದ ಬೆಟ್ಟದ ತುದಿಯಲ್ಲಿ 
ಕಟ್ಟಿದ ಗೋಪುರದಡಿಯಲ್ಲಿ 
ನೆಲೆಸಿದ ಮೂರ್ತಿಗೆ ನಿತ್ಯವೂ 
ಮೌನಾಚರಣೆಯ ಗುರುತು 
ಅಟ್ಟದ ಮೇಲೆ ಕಟ್ಟಿಟ್ಟು 
ಯಾರಿಗೂ ಕಾಣದೆ ಬಚ್ಚಿಟ್ಟು 
ಉಳಿಸಿದ ದವಸದ ಮೊಳಕೆಯಲಿ 
ತೆನೆ ತೂಗಾಡುವ ಗುರುತು 

ಬತ್ತಿದ ಕಾಲುವೆಗಳಿವು 
ದಟ್ಟ ಮೋಡವ ಕಂಡು 
ಎಲ್ಲೋ ಮುಂದೆ ಕರಗಬಲ್ಲವು 
ಎನ್ನುತ ಹಿಗ್ಗಿ ಬಿರಿದು 
ತುಂಬಿ ಹರಿದು ಜಲಸಿರಿ 
ಹೊತ್ತು ತಂದಿದೆ ಓಲೆಯ 
ಶುಭ ಸಂಕೇತದ ಕರೆಯೋಲೆ
ಹಸಿರು ಪಸರುವ ಗುರುತು... 

ನನ್ನ ನಿನ್ನ ನಡುವೆ ಕಟ್ಟಿದೆ

ನನ್ನ ನಿನ್ನ ನಡುವೆ ಕಟ್ಟಿದೆ  ಮೋಡವು ಮಂಜಿನ ಅಂತರವ  ಚೂರು ಕಾದರೆ ತಾನೇ ಸರಿದು  ಕಾಣುವುದೆಲ್ಲವೂ ಸುಂದರವೇ  ಬೆನ್ನು ತೋರುವ ಸಾಹಸವೇಕೆ? ಮನದ ಮಾತನು ಆಲಿಸದೆ  ನಿನ್ನ ಇಷ...