Thursday, 3 April 2025

ಎಷ್ಟು ಬಣ್ಣಿಸಬಹುದು ನೀ ಹೇಳು?

ಎಷ್ಟು ಬಣ್ಣಿಸಬಹುದು ನೀ ಹೇಳು?

ಕಲ್ಪನೆಗೂ ಮೀರಿದ ಚೆಲುವನ್ನು
ಕೆನೆಗಟ್ಟಿದ ಕನ್ನೆ ಗುಳಿಯಲ್ಲಿ
ಮನ ಸೋಲಿಸೋ ಗುಣದ ಕೆಮ್ಮಣ್ಣು

ಬಳೆಗಿಟ್ಟ ಲೆಕ್ಕವದು ಎಷ್ಟೆಂದು
ಮೊದಲಿಂದ ಎಣಿಸುವ ಉತ್ಸಾಹಿ
ನೋಡುತ್ತಾ ಕುಳಿತರೆ ಜಗವನ್ನೇ
ಮರೆಯುತ್ತ ಆದೆ ನಾ ವ್ಯಾಮೋಹಿ

ಯಾರಿಗೇನಾದರೆ ನಿನಗೇನು
ನಿನ್ನದೇ ಲೋಕದಲಿ ನೀನರಲು
ರಿಂಗಣಿಸಿ ಬಂದಂತೆ ಸಿಹಿ ಗಾಳಿ
ಅಪ್ಪಳಿಸಿ ಕುಣಿದಿವೆ ಮುಂಗುರುಳು

ತಾಳು ಏನಾಯಿತೋ ನೋಡೋಣ
ತುಟಿ ಮೇಲೆ ಚಂದಿರನ ನಗೆ ಜೊನ್ನು?
ಕಣ್ಣು ಮಿಟುಕಿಸಿದಲ್ಲಿ ಮಿಂಚೊಂದು
ಪಾಳಿ ಮುಗಿಸಿ ಮರಳಿ ಬಂತೇನು?

ಮುಂಗುಟವ ಎಳೆ ತಂದು ಕಚ್ಚಿದರೆ
ನಾಚುವುದು ನೆಲವೆಲ್ಲ ನೋಡಿಲ್ಲಿ
ನಿನ್ನುಸಿರ ಬಿಸಿ ತಾಕಿದಾಗೆಲ್ಲ
ಸೂರ್ಯಕಾಂತಿಯ ಸುಗ್ಗಿ ಎದೆಯಲ್ಲಿ

ಬಂಗಾರವ ತೊಟ್ಟ ಬಂಗಾರ
ಸಿಂಗಾರ ಯಾರಿಗಾರು ಹೇಳು?
ನಿನ್ನಾಟಕೆ ಕಾದಿದೆ ಮಗಳೇ
ಮುನಿಯಪ್ಪ ತಾತನ ಊರ್ಗೋಲು!

No comments:

Post a Comment

ಬರುವೆ ನಿನಗಾಗಿ

ಬರುವೆ ನಿನಗಾಗಿ  ಇರುವೆ ಜೊತೆಯಾಗಿ  ಪ್ರತಿ ಗಳಿಗೆ ಬೇಕಿದೆ ನಿನ್ನಾಸರೇ  ನೀನದೇ ಈ ಹಾಡು  ಹಿಡಿದು ಹೊಸ ಜಾಡು  ನಾ ಹಾಡುವೆನು ಕೂಡಿ ಬಾ ನೀ ಆದರೆ  ಬೆರೆತ ಮನದಲ್ಲಿ  ಪುಟಿ...