Monday, 29 December 2014

Fun is fun

I'm done with one
And that's not done
Need something...

To have some more fun

 
So be it mud
Or broken stone
A sailing cloud
An empty road


A bottle full
Or half would do
I couldn't stop myself
From what I do


A pinch of pain
A dustbin friend
To pen a pen
With ink of blood


It's not done though
But hereby stop
I'm off for sale
From near by shop


Good bye for now
I'll need you sometime
May not be near
But future to shine!!


-- Rathnasutha

ಸಲುಗೆಯ ಮೇರೆಗೆ

ನೀ ನನ್ನೆದುರಲ್ಲಿ ನಕ್ಕಂತೆ
ಬೇರೆಯಾರೆದುರಲ್ಲಿ ನಕ್ಕರೂ
ಹೃದಯಕ್ಕೆ ಕಾದ ದಬ್ಬಳವಿಟ್ಟಂತೆ;


ಈ ನೀಚತನವನ್ನ
ನೀ ಎಷ್ಟು ದೂರಿದರೂ ಸರಿಯೇ
ಈ ವಿಚಾರದಲಿ ನಾ ನೀಚನೇ!!


ಒಮ್ಮೆ ನನ್ನ ಸ್ಥಾನದಲ್ಲಿದು
ಒದ್ದಾಡಿ ನೋಡಿದ್ದರೆ
ಬೇನೆ ಅರ್ಥವಾದೀತು,
ಹೊರತು ಬೇರಾವ ದಾರಿಯಿಲ್ಲ


ಅವ ಅಣ್ಣನಂಥವನೋ, ಅಜ್ಜನಂಥವನೋ
ನನಗೆ ಬೇಡಾವ ಸಮಜಾಯಿಶಿ;
ಗಂಡಸಿನ ಬುದ್ಧಿ ಹೆಣ್ಣಿನಂತೆ
ಅನುಮಾನ ಪಡುವ ವಿಷಯದಲ್ಲಿ.
ನೋವಿಗೆ ಮುಲಾಮಿಲ್ಲ
ವಿಲಿ-ವಿಲಿ ಒದ್ದಾಟವಷ್ಟೇ ಬಳುವಳಿ!!


ಸರಿ, ಈಗ ಕ್ಷಮೆಯಾಚಿಸು,
ಕೋಪ ನೆತ್ತಿಯ ಸುಡುತಿದೆ
ಕಣ್ಣು ಕೆಂಪಾದರೆ ನೀ ಬೆದರುತ್ತೀಯ
ಅದ ನಾ ನೋಡಲಾರೆ


ಅಳದಿರು ಮಾರಾಯ್ತಿ
ಸಲುಗೆಯಲ್ಲಿ ಕಾಲೆಳೆದ ತಪ್ಪಿಗೆ
ಕಾಲಿಗೆ ಬಿದ್ದು ಬಿಡುತ್ತೇನೆ ಕ್ಷಮಿಸಿಬಿಡು!!


ಹಾ.. ಆ ನಗುವಿಗೆ ಹೆಸರೇನಿಡಲಿ?
ಅಂತೂ ದಿನ ಸಾರ್ಥಕ
ನಿನ್ನ ಸಿಟ್ಟಿನಿಂದ
ನನ್ನ ಪರಿಪಾಠದಿಂದ!!


--ರತ್ನಸುತ

ಬದುಕಿನ ಕಾಂಪ್ಲಿಕೇಷನ್ನು

ರಾತ್ರಿಯಾದರೆ ಸಾಕು
ಕಂಠ ಪೂರ್ತಿ ಕುಡಿದುಬರುತ್ತಾನೆಂದು
ಆಕೆ ಆಪಾದಿಸಿದರೆ,...

ಕುಡಿಯಲು ಈಕೆಯೇ ಕಾರಣ
ಎಂದು ಈತ ಆಪಾದಿಸುತ್ತಾನೆ;
ಗೆದ್ದದ್ದು ಮಾತ್ರ ಲಕ್ಷ-ಲಕ್ಷ ಸುರಿದು
ಬಾರ್ ಲೈಸನ್ಸ್ ಗಿಟ್ಟಿಸಿಕೊಂಡ ಮಾಲೀಕ


ಬಾರ್ ಮಾಲೀಕನೆಂದೂ ಆಪ್ತವಾಗಿ
ಕಷ್ಟ-ಸುಖ ವಿಚಾರಿಸಿದವನಲ್ಲ
ಆದರೂ ಊರಿಗೆಲ್ಲ ದೊಡ್ಡ ಮನುಷ್ಯ,
ಬೀದಿ ಜಗಳ ಬಿಡಿಸುವ ಗೋಜಿಗೆ ಹೋಗದೆ
ಗಲ್ಲಾ ಪೆಟ್ಟಿಗೆಯ ತುಂಬಿಸುತ್ತಲೇ
ಅರ್ಧ ತಲೆ ಕೂದಲ ಉದುರಿಸಿಕೊಂಡಿದ್ದ


ತಲೆಗೂದಲಿಗೆ ನಾನಾ ಬಗೆಯ ಶಾಂಪು
ತೈಲಗಳು ಮಾರುಕಟ್ಟೆಗೆ ಲಗ್ಗೆಯಿಟ್ಟಿವೆ
ಎಲ್ಲವೂ ಟಿ.ವಿ ಪರದೆಯ ಮೇಲೆ
ಶೈನಾಗಿ ಮನೆಯ ಕಪಾಟಿನಲ್ಲಿ ಡಲ್ ಹೊಡೆದು
ಗ್ರಾಹಕರ ಕೋಪಕ್ಕೆ ಗುರಿಯಾಗಿಯೂ
ಸೇಲ್ಸಲ್ಲಿ ಮಾತ್ರ ಗಣನೀಯ ಏರಿಕೆ ಕಾಣುವವು


ಟಿ.ವಿ ಚಾನಲ್ಗಳಲ್ಲಿ ತೋರಿಸಿದಂತೆ
ಗಂಡ ಅನುಮಾನಗೊಂಡು ಹೆಂಡತಿಯ
ಹೆಂಡತಿ ತನ್ನ ಮಾಜಿ ಪ್ರಿಯಕರನ ಕೂಡಿ
ಗಂಡನ ತಲೆ ಉರುಳಿಸಿದ ಪ್ರಸಂಗಗಳು
ಸಂಸಾರದ ನಂಬಿಕೆಯ ಗೋಡೆಯ ಸೀಳಿ
ಅನುಮಾನದ ವಕ್ರ ದೃಷ್ಟಿಯಲ್ಲೇ
ಎಲ್ಲವನ್ನೂ ಅವಲೋಕಿಸುವ ಸ್ಥಿತಿಗೆ
ಉತ್ತಮ ಸಮಾಜವನ್ನ ತಂದು ನಿಲ್ಲಿಸಿ,
ತಾವಿರುವುದೇ ಉತ್ತಮ ಸಮಾಜದ
ಜೀರ್ಣೋದ್ಧಾರಕ್ಕೆ ಎಂಬಂತೆ ಬೊಬ್ಬೆ ಹೊಡೆಯುತ್ತಿವೆ


ಇಲಿಗೆ ಬೆಕ್ಕು, ಬೆಕ್ಕಿಗೆ ನಾಯಿ
ನಾಯಿಗೆ ಕಾರ್ಪೊರೇಷನ್ ಲಾರಿ
ಹೀಗೆ ನಿಲ್ಲದ ಸರಳನು ಸುತ್ತಿಕೊಂಡು
ಏಕ ಚಿತ್ತನಾಗಿ ಬಾಳುವ ಪ್ರಯತ್ನದಲ್ಲಿ
ಮನುಷ್ಯ ಎಣ್ಣೆ ಏಟಿಗೆ ಬಲಿಯಾಗುತ್ತಾನೆ;

ಮೆಲ್ಲಗೆ ಓದಿ,
ಮುಂದೆ ಆಗುವ ರಂಪಾಟಕ್ಕೆ ನಾ ಹೊಣೆಗಾರನಲ್ಲ!!


-- ರತ್ನಸುತ

ಮೂಡಿಲ್ಲದ ಹಾಡು

ಮೂಡಿಲ್ಲದ ಹಾಡಿನಲ್ಲಿ ಇಣುಕಿ ಹೋಗುತಾವೆ
ಪಾಳು ಬಿದ್ದ ನೆನಪುಗಳು
ಗೂಡಿಲ್ಲದ ನಾಡಿನಲ್ಲಿ ಕೆಣಕಿ ಸಾಯುತಾವೆ...

ನಿನ್ನ ಮೆತ್ತನೆಯ ತೋಳುಗಳು

ರೇಟಿಲ್ಲದ ಗುಜರಿಯಲ್ಲೂ ಉಳಿದು ಬೀಗುತಾವೆ
ನೀ ಸೋಕಿದ ಕೈ ಬೆರಳು
ಕಟ್ಟಾದರೂ ಕರೆಯಲಿನ್ನೂ ಗುನುಗಿ ಕೊಲ್ಲುತಾವೆ
ಆ ಮೌನದ ಭರ ಸಿಡಿಲು


ಸ್ವೀಟಾದರೂ ಯಾಕೋ ಏನೂ ಇಷ್ಟವಾಗುತಿಲ್ಲ
ಹಂಚದೇನೆ ನಿನಗೆ
ಇಷ್ಟಾದರೂ ಇನ್ನೂ ಚೂರು ಸ್ಪಷ್ಟವಾಗುತಿಲ್ಲ
ನಿನ್ನ ಸ್ಮೈಲು ನನಗೆ


ಸಂಡೆಗಳಲಿ ರಜೆಯ ಸಜೆ ಬಿಡುವಿಲ್ಲದ ಕಸುಬು
ತೀರದ ಹುಡುಕಾಟ
ಮಿಕ್ಕೆಲ್ಲ ದಿನಗಳಲಿ ಕೆಲಸದಲ್ಲಿ ಮನಸಿಲ್ಲ
ಹಿಂಸೆಗೂ ಪರದಾಟ


ಪೆನ್ನು ಹಿಡಿದರಲ್ಲಿ ನಿನ್ನ ಕಣ್ಣಿನಷ್ಟೇ ಧ್ಯಾನ
ಬೆರೆದ ಸಾಲಪೂರ್ಣ
ಹದಿರು ಹಾಕುವಾಗ ಕಸದ ಬುಟ್ಟಿಯಲ್ಲಿ ನನ್ನ
ಸತ್ತು ಬಿದ್ದ ಪ್ರಾಣ


ಟೈಂಪಾಸ್ ಮಾಡುವುದಕೂ ಇಲ್ಲ ಟೈಮು
ಒಂಟಿ ಬಾಳುವಾಗ
ಟೈಂ ಪ್ಲೀಸ್ ಅಂದರೂನು ನಿಲ್ಲದಾದೆ ನೀ
ಗಾಯ ಚೀರಿದಾಗ!!


-- ರತ್ನಸುತ

ಆಟ ಕೊನೆಗೊಳ್ಳುವ ಮುನ್ನ

ಪ್ರವಾದಿಗಳು ಹುಟ್ಟುತ್ತಲೇ
ತಲೆಯ ಹಿಂದೆ ಚಂದ್ರನನ್ನೋ
ಸೂರ್ಯನನ್ನೋ ಹೊತ್ತು ತಂದಿರುತ್ತಾರೆ;...


ಹೋದಲ್ಲೆಲ್ಲ ಬೆಳಕ ಚೆಲ್ಲಿ
ಜನರ ಕತ್ತಲ ದೂರವಾಗಿಸೋಕೆ

ಈ ಊರಿಗೊಬ್ಬ ಹುಟ್ಟಿಕೊಂಡಂತೆ
ಆ ಊರಿನಲ್ಲೂ ಒಬ್ಬ ಹುಟ್ಟಿಕೊಂಡ;


ಜನರು ಗೊಂದಲಕ್ಕೀಡಾದರು
ಯಾರು ಸತ್ಯ, ಯಾರು ಸುಳ್ಳು?
ನಂತರ ಅವರವರ ನಂಬಿಕೆಗನುಸಾರವಾಗಿ
ಅನುಯಾಯಿಗಳಾಗಿ ಮುಂದುವರಿದರು

ಮಕ್ಕಳಾಟದಂತೆ ಒಂದು ದಿನ
ಆ ಊರು, ಈ ಊರಿನವರ ನಡುವೆ
ಮಾತಿಗೆ ಮಾತು ಬೆರೆತು
ಪ್ರವಾದಿಗಳನ್ನ ಪೈಪೋಟಿಗೆ ನಿಲ್ಲಿಸುತ್ತಾರೆ
ಯಾರು ಉತ್ಕೃಷ್ಟರೆಂದು ಸಾಬೀತು ಪಡಿಸಲು


ಮಕ್ಕಳ ಹಠವ ಕಂಡು ದಿಗ್ಭ್ರಾಂತರಾಗಿ
ಕೊನೆಗೆ ಪೂರ್ವಯೋಜನೆಯಂತೆ
ಪ್ರತಿ ಆಟದಲ್ಲೂ ಇಬ್ಬರೂ ಸೋಲುತ್ತಾ ಹೋಗುತ್ತಾರೆ;
ಮಕ್ಕಳ ಕಣ್ಣಲ್ಲಿ ನೀರು
ಹಿಂದೆಯೇ ರಕ್ತ ಸುರಿಯುತ್ತದೆ


ಕೆನ್ನೆ ಸವರಿ
ಕಲೆ ಅಂಟಿದ ಹಸ್ತವ ನೋಡಿಕೊಂಡು
ಕುಂಠಿತರಾಗಿ ತಂತಮ್ಮ ಪ್ರವಾದಿಗಳ
ತಂತಮ್ಮೂರಿಗೆ ಎಳೆದೋಯ್ದು
ಕಂಬಕ್ಕೆ ಕಟ್ಟಿ ಸಾಮೂಹಿಕ ಕಲ್ಲು ತೂರುತ್ತಾರೆ;
ಪ್ರತಿ ಕಲ್ಲು ಹೂವಾಗಿ
ಪರಿತಪಿಸಿ ಒಡಲ ಸೋಕುತ್ತದೆ


ಖುಷಿಯಿಂದ ಕುಪ್ಪಳಿಸಿದವರು
ಇವರೇ ನಿಜವಾದ ಪ್ರವಾದಿ ಎಂದು
ಘೋಷಣೆ ಕೂಗುತ್ತಲೇ,
ಮಾರುದ್ದ ದೂರದಿಂದ ಆ ಊರಿನವರು
ಅದೇ ತಮ್ಮ ಜೈಕಾರಗಳಿಂದ ಮುತ್ತಿಕೊಳ್ಳುತ್ತಾರೆ;

ಮುಂದಾಗಲಿರುವುದೇ ಇಂದಾಗುತ್ತಿರುವುದು

ದೇವರು ಪ್ರವಾದಿಗಳನ್ನ
ವಾಪಸ್ಸು ಕರೆಸಿಕೊಂಡು ಬೋಧಿಸುತ್ತಾನೆ
"ಅವರಿಗೆ ಬೇಕಿರುವುದು ನೀವಲ್ಲ
ನಿಮ್ಮದೊಂದು ನೆಪವಷ್ಟೇ ಕಚ್ಚಾಡಲು,
ಇನ್ನು ನಿಮಗಲ್ಲಿ ಜಾಗವಿಲ್ಲ
ಎಲ್ಲವೂ ಅವರಿಷ್ಟದಂತೆ ನಡೆಯುತ್ತದೆ.


ಆದರೆ ನೆನಪಿಡಿ
ಅವರೆಲ್ಲ ನಿಮ್ಮ ರಕ್ತ, ನಿಮ್ಮ ಬೆವರು, ನಿಮ್ಮ ಪ್ರೀತಿ
ಆಟ ನಡೆಯುವ ತನಕ ನಡೆಯಲಿ
ಮುಗಿಸಬೇಕನಿಸಿದರೆ
ಆ ಕ್ಷಣ ಸೋಲು ಗೆಲುವನ್ನ ಪರಾಮರ್ಶಿಸಲು
ಯಾರೂ ಉಳಿಯಕೂಡದು"

ದೇವರೂ ಆಟದಿಂದ ಜಾರಿಕೊಳ್ಳುತ್ತಾನೆ!!

--ರತ್ನಸುತ

ಒಂದು ಸಣ್ಣ ಕೂಗು

ಜಗದ ಎಲ್ಲ ಜೀವಗಳಿಗೂ ನೆರಳು ನೀನಂತೆ
ಆಡುತಿರುವ ಉಸಿರು ಕೂಡ ನಿನ್ನದೇನಂತೆ
ಪ್ರಭುವೇ ನೀ ಎಲ್ಲಿರುವೆ?...

ನಿನ್ನ ಕಾಣ ಬಯಸಿರುವೆ!!


ಹಸಿವ ಕೂಡ ಮರೆಸುವಂಥ ಕೈಯ್ಯಿ ನಿನದಂತೆ
ನೆನೆದರಲ್ಲೇ ಉಳಿಯದಂತೆ ಯಾವುದೇ ಚಿಂತೆ
ಪ್ರಭುವೇ ನೀ ಎಲ್ಲಿರುವೆ?
ನಿನ್ನ ಕಾಣ ಬಯಸಿರುವೆ!!


ಮುಳುಗಿ ಏಳುವೆ ನಿನ್ನ ಧ್ಯಾನದಿ
ಮೊಣಕಾಲೂರಿ ನಾ ಬೇಡುವೆ
ತಲೆಯ ಬಾಗಿಸಿ ನೆಲವ ತಾಕುವೆ
ಹೆಸರೇ ಇಲ್ಲದೆ ಕೂಗುವೆ
ಹೆಸರೇ ಇಲ್ಲದೆ ಕೂಗುವೆ....


ಯಾವ ದಿಕ್ಕು, ಯಾವ ದಾರಿ ಹೇಳು ನೀ ಬೇಗ?
ನಿನ್ನ ಮಡಿಲ ಸೇರಬೇಕು ನೋಡು ನಾನೀಗ
ಪ್ರಭುವೇ ನೀ ಎಲ್ಲಿರುವೆ?
ನಿನ್ನ ಕಾಣ ಬಯಸಿರುವೆ!!


ಹರಿವ ಕಣ್ಣಿಗೆ ನಿನದೇ ಹಂಬಲ
ಎದೆ ಬಡಿತಕ್ಕೂ ನೀನೇ ದೊರೆ
ಕರೆವ ಈ ಸ್ವರ ಚೂರು ಸಣ್ಣದು
ಅತಿ ಆತ್ಮೀಯವೇ ಆದರೆ
ಅತಿ ಆತ್ಮೀಯವೇ ಆದರೆ...


ಎಲ್ಲ ನೀನೇ ಅನ್ನುವಾಗ ಎಲ್ಲಿ ನೀ ಹೋದೆ
ಬೇಗ ಬಂದು ನೀಗಿಸಯ್ಯ ಮನಸಿನ ಬಾಧೆ
ಪ್ರಭುವೇ ನೀ ಎಲ್ಲಿರುವೆ?
ನಿನ್ನ ಕಾಣ ಬಯಸಿರುವೆ!!


-- ರತ್ನಸುತ

ಒಂದು ಹೆಜ್ಜೆ ದೂರ

ಓದಲು ಮುಂದಿಟ್ಟೂ ತೆರೆಯದ
ಪುಸ್ತಕದೊಳಗಿನ ಗುಟ್ಟೇ
ನಿನ್ನ ಕೆಂದುಟಿಯ ಕಮರಿದ ಸಾಲು?

ಅರ್ಧರ್ಧ ಹಂಚಿಕೊಂಡ ಕಣ್ಗಳು
ಪೂರ್ತಿ ಚಂದಿರನನ್ನೇ ನುಂಗಿದಂತಿವೆ,
ಮೇಲೆ ಬಾನಲ್ಲಿ ಅರೆ ಚಂದಿರನ ಗೋಳು!!


ಬಯಕೆಯ ಬಿಚ್ಚಿಡಲು ಹೆಚ್ಚು ಸಮಯ
ವ್ಯರ್ಥವಾಗಿ ವೃದ್ಧಾಪ್ಯ ನನ್ನ ಶಪಿಸುವಾಗ
ನಿನ್ನ ಚಿರಯೌವ್ವನ ಛೇಡಿಸಲಿ

ಬಿರುಗಾಳಿ ಎಬ್ಬಿಸಬಲ್ಲ ಮೌನದೊಳಗೂ
ಒಮ್ಮೆ ಮಿಂದೆದ್ದು ಏದುಸಿರು ಬಿಡುವಾಗ
ಕನಿಕರದ ಹಸ್ತವ ಎದೆಗಿಟ್ಟು ನೀವು

ಕಾಲ್ಬೆರಳ ಮೆಟ್ಟುವ ಶಾಸ್ತ್ರಕ್ಕೆ
ಕಾಲ ಕೂಡಿ ಬರಬೇಕಿಲ್ಲ

ಎದುರು-ಬದುರು ನಿಂತದ್ದಾಗಿದೆ
ನಿನ್ನದೊಂದು ಹೆಜ್ಜೆ, ನನ್ನದೊಂದು ನಡುಕ
ಅಲ್ಲಿಗೆ ಎದೆಗೆದೆ ತಾಕಿ
ಉಸಿರಾಟ ಕೇಳಬಹುದು
ಕಾದಿರುವೆ ಕ್ಷಣಕೆ
ಎಚ್ಚೆತ್ತ ಮನಕೆ ತೂಕಡಿಕೆ ತರಿಸಿ!!

-- ರತ್ನಸುತ

ಪರಿತಪನೆ

ಅಗಲಿದ ಜೀವಗಳೇ ಕ್ಷಮಿಸಿ
ನಿಮ್ಮ ಅಗಲಿಕೆಯ ವಿಷಯ
ನನ್ನ ತಲುಪದಷ್ಟು ಮೆದುವಾಗಿ
ಡಂಗೂರ ಸಾರಲ್ಪಟ್ಟಿತು
ಅದಕ್ಕಾಗಿಯೇ ಬರಲಾಗಿಲ್ಲ
ನನ್ನ ಸೋತ ಮೋರೆಯ ಹೊತ್ತು
ನಿಮ್ಮ ಅಂತಿಮ ದರ್ಶನಕ್ಕೆ!!

ಈಗ ನಿಮ್ಮ ನೆನಪು
ನನ್ನಲ್ಲೆಬ್ಬಿಸಿದ ಅಪಾರ ದುಃಖಕ್ಕೆ
ಕಣ್ಣೀರಿಡುವ ಅರ್ಹತೆಯನ್ನೂ
ಕಳೆದುಕೊಂಡ ಪಾಪಿಯಾಗಿದ್ದೇನೆ;
ನಿಜಕ್ಕೂ ನಾನು ಪರಮ ಪಾಪಿ!!


ನಿಮ್ಮವರ ಹೃದಯ ಭಾರವ
ಹೊರಲಾಗದವನು
ನಿಮ್ಮ ಭಾರಕ್ಕೂ
ಬಾರದ ಹೆಗಲು
ಹಿಡಿ ಮಣ್ಣ ಚೆಲ್ಲದ ಹಸ್ತ
ನಾಚಿಕೆಯಲ್ಲಿ ತಲೆ ತಗ್ಗಿಸಿವೆ
ತೋಳುಗಳು ಶಕ್ತಿಹೀನವಾಗಿವೆ!!

ಅಂತಿಮ ಯಾತ್ರೆಯ ಕೂಡಿ
ಎದ್ದ ಧೂಪದಲ್ಲಿ ಮೀಯದೆ
ಹೂವ ಹಾದಿಯನು ಹಾಯದೆ
ಮಾನವೀಯತೆಯ ಮರೆತು
ಎಲ್ಲೊ ಮೈಮರೆತ ತಪ್ಪಿಗೆ
ನನ್ನ ಅಂತಿಮ ದಿನದಂದೇ
ಮುಯ್ಯಿಗೆ ಮುಯ್ಯಿ ತೀರಲಿ!!

-- ರತ್ನಸುತ

ಹೇಳಲಾಗದವು ಇಷ್ಟೇ ಅಲ್ಲ


ಮೆಚ್ಚಿ ನೀಡಿದ ಹೃದಯದೊಳಗೆ
ನೆತ್ತರು ಇಂಗಿ ಟೊಳ್ಳಾಗಿದೆ
ಒಮ್ಮೆ ಹಿಂದಿರುಗಿಸು
ಭರ್ತಿ ಮಾಡಿ ಕೊಡುವೆ
ಪ್ರೀತಿಯಲ್ಲಿ ಯಾವ ಕೊರತೆಗಳೂ ಬೇಡ

ಹಳೆ ಆಣೆ ಭಾಷೆಗಳಿಟ್ಟ
ಹಸ್ತ ಸವೆದು ಮಾಸಿಹೋಗಿದೆ
ನಾಲ್ಕೂ ಕೈಗಳು ನೆಟ್ಟ ಬಳ್ಳಿ
ಹೂ ಬಿಟ್ಟಿದೆಯಂತೆ
ನೆರಳಲ್ಲಿ ಕೂತು ಮತ್ತೆ ಮಾತು ಕೊಡುವೆ
ಕೈಯ್ಯ ಚಾಚಲು ಬರುವೆ ತಾನೆ?

ಒಂದಕ್ಕಿಂತ ಮತ್ತೊಂದು ಮಿಗಿಲು
ಕನಸುಗಳ ಸುವಿಸ್ತಾರವಾಗಿ ವಿವರಿಸಿ
ಕೋಪ, ನಾಚಿಕೆ, ಅಸೂಯೆಗಳ
ಒಟ್ಟೊಟ್ಟಿಗೆ ಕಾಣ ಬಯಸುವಾಗ
ಕನಸಿಂದ ಮರೆಯಾಗದಿರು
ಅದೊಂದೇ ನನ್ನ ನಿನ್ನ ಗೌಪ್ಯ ಸ್ಥಳ

ಮೊದ ಮೊದಲಿಗಾಡಿದ ಮಾತುಗಳೆಲ್ಲ
ಕಾಲಹರಣಕ್ಕೆ ಅಂದುಕೊಳ್ಳಬೇಡ
ಕಡೆ ಮಾತುಗಳನ್ನ ಕಡೆಗಣಿಸಬೇಡ
ನಡು ನಡುವೆ ಬಿಕ್ಕಳಿಸಿ ಮೌನವಹಿಸಿದ್ದೇ
ತೂಕವುಳ್ಳವು ಅಂದುಕೊಳ್ಳದಿರು
ಮನಸಿನ ಕಣ್ಣು ತೆರೆದು
ಹೃದಯದ ಕಿವಿಯಾರೆ ಆಲಿಸಿ ನೋಡು
ಪ್ರತಿ ಮಾತಿನ ಹಿಂದಿನ ಉಸಿರು
ನಿನ್ನದೇ ಜಪಗೈಯ್ಯುತ್ತಲಿರುತ್ತದೆ!!

ಹೂವು ಹಿಡಿದು ಕಾಯುತ್ತೇನೆ
ಹೂವು ನೀನೇ ಎಂದು ನಂಬಿ
ನೀ ಬಾಡುವುದ ನೋಡಲಾಗದ ನಾನು
ಯಾವ ಅತಿರೇಖಕ್ಕೆ ತಲುಪುತ್ತೇನೋ
ಹೇಳಲಾಗದು ಸಖಿ
ಸುಳ್ಳೆಯಾದರೂ ಸರಿ
ಸ್ವೀಕರಿಸಿ ನಂತರ ಕಸವಾಗಿಸಿದರೂ ಸರಿಯೇ
ಅಲ್ಪ ಪ್ರಾಣದಲ್ಲಿ ಬದುಕಿಬಿಡುತ್ತೇನೆ!!

-- ರತ್ನಸುತ

ಒಂದು ಸ್ಪೂರ್ತಿಯ ಹಿಡಿದು

ಹಚ್ಚಿಟ್ಟ ಬೆಂಕಿಯದು
ಮೈಗತ್ತಿದಾಗಲೇ

ಮರೆತಿದ್ದ ಉಡುಗೊರೆಯ ನೀಡಬೇಕಿತ್ತು
ಹಣೆಗೊಂದು ಮುತ್ತು

ಹೊಸೆದಿಟ್ಟ ದಾರ
ಕಂಕಣವ ಕಟ್ಟಿ
ನೋವಾಗದಂತೆ ಬಿಗಿಸಬೇಕಿತ್ತು
ನಡುದಾರ ಗಂಟು

ಲೆಕ್ಕ ಮರೆತಂತೆ
ಕನಸುಗಳ ವಿಂಗಡಿಸಿ
ಬಣ್ಣ ಹಚ್ಚುತ್ತಲೇ ಹರಡಬೇಕಿತ್ತು
ಎಣಿಸುತ್ತ ಕೂತು

ಹೆಮ್ಮರದ ಕೊಂಬೆಯಲಿ
ಹಕ್ಕಿ ಕಟ್ಟಿದ ಗೂಡ
ಹೆಕ್ಕಿ ತಂದ ನಾರ ಸೇರಬೇಕಿತ್ತು
ಕೂಡಿ ಹಾಡಿ ಜೋತು

ಮುನಿಸಿನಾಚೆಗೆ ಒಂದು
ಈಚೆಗೆ ಹಲವಾರು
ತೀರದ ಸಿರಿಯಲ್ಲಿ ಮುಳುಗಬೇಕಿತ್ತು

ಮುಗಿಯದಂತೆ ಮಾತು

-- ರತ್ನಸುತ

Comeಬನಿ ಸಾಲು

ಕಣ್ಣ ಹನಿಯೊಂದು ಕೀಟಲೆ ಮಾಡುತ್ತ
ಜಾರಿದ್ದಾದಮೇಲೆ ಅಲ್ಲೊಂದು ಸಣ್ಣ ತುರಿಕೆ;
ಒರೆಸಿಕೊಂಡರೆ ಸಾಲದು

ಉಗುರು ಸೋಕಿಸಿ ಒಂದೆರಡು ಬಾರಿ ಕೆರೆಯಬೇಕು!!

ಚಳಿಗಾಲದ ಒಡೆದ ಒರಟುಗೆನ್ನೆಯ ಮೇಲೆ
ಮೂಡಿದ ಗೆರೆಗಳು
ಬತ್ತಿದ ನಾಲೆಯ ನಡುವೆ
ಸಣ್ಣ ಕಾಲುವೆ ಕೊರೆದಂತಿದ್ದವು

ಕಣ್ಣಿಗೆ ತಣ್ಣೀರೆರಚಿಕೊಂಡರೂ
ಕಂಬನಿಯ ಕಲೆ ಮಾತ್ರ ಹಾಗೇ ಉಳಿದಿತ್ತು
ಬಹುಶಃ ಯಾರದ್ದೋ ಸಾಂತ್ವನಕ್ಕೆ
ಸುದೀರ್ಘವಾಗಿ ಕಾದಿರಬೇಕು

ನಾ ಅಷ್ಟೇನು ಅಪಕ್ವ ನಟನಲ್ಲ
ಆದರೂ ನಗುವಿನ ನಟನೆ
ಕೃತಕವಾಗಿ ಬಹಳ ಹೀನವಾಗಿ ಕಾಣುತ್ತಿತ್ತು
ನನ್ನನ್ನೇ ತೃಪ್ತಿ ಪಡಿಸದ ನಗು ಇನ್ನಾರ ಹಿತಕ್ಕಾಗಿ?
ನಗುವುದನ್ನೇ ಬಿಟ್ಟುಬಿಟ್ಟೆ!!


ಕಣ್ಣೆವೆಗೆ ಅಂಟಿ ಬಡಿತಕ್ಕಷ್ಟೇ ಕದ            
ಕೊನೆಯ ಹನಿಯಲ್ಲಿ
ದುಃಖದ ಒಟ್ಟಾರೆ ಸಾರಾಂಶ ಅಡಗಿತ್ತು,
ಬತ್ತಿದ ನಾಲೆ ಮತ್ತೆ ತುಂಬಿತು

ಕೊರೆದ ಕಾಲುವೆಗಳೂ ಸಹಿತ!!

-- ರತ್ನಸುತ

ದಡ್ಡನ ಪದ


ಕೋಳಿ ಸಾರಿಗೂ ಬೇಳೆ ಸಾರಿಗೂ
ಒಂದೇ ಬೇಗೆಯ ಒಲೆಯಲ್ಲ

ಸ್ನೇಹ ಮಳೆಯಲಿ ಪ್ರೀತಿ ಕೊಡೆಯನು
ಹಿಡಿದು ನಿಂತರೆ ತರವಲ್ಲ

ಗಂಡು ಗಟ್ಟಿಗ ಹೆಣ್ಣು ಕೋಮಲೆ
ಯಾವ ಕೋನವೂ ಕೂಡಲ್ಲ
ಅದರೂ ಪ್ರತಿ ಸ್ಟೋರಿಯಲ್ಲಿನ
ಕ್ಲೈಮ್ಯಾಕ್ಸು ಬದಲಾಗಲ್ಲ

ಹಾಡು ಗೀಚುತ ಮಣ್ಣು ಅಗೆವುದು
ಇಬ್ಬರಲ್ಲೂ ಒಂದೇ ಗುಣ
ಒಪ್ಪಿಕೊಂಡರೆ ಹೂವ ನೆಡುವರು
ಇಲ್ಲ ಹೃದಯ ಸತ್ತ ಹೆಣ

ಅವಳ ಕಂಬನಿ ಇವನ ಹಸ್ತಕೆ
ಇವನ ಜೇಬು ಅವಳ ಕಡೆ
ಇವರ ಪ್ರೀತಿ ಇವರಲ್ಲೇ ಗುಟ್ಟು
ರಟ್ಟಾಯಿತಾಗ್ಲೇ ಎಲ್ಲಾ ಕಡೆ

ಮದುವೆಯಲ್ಲಿ ಕೊನೆಗೊಳ್ಳಲಿಕ್ಕೂ
ಬಲವಾದ ಕಾರಣ ಬೇಕಿದೆ
ನಡುವೆ ಜಗಳ ಆಗೋದು ಸಹಜ
ಅನುಮಾನ ಉಳಿಯದು ಸೋಲದೆ

ಹಳೆ ಒಲೆಯ ಹಸಿ ಸೌದೆ ಉರಿಗೆ
ಮೇಲೆದ್ದ ಹೊಗೆಯೇ ಲವ್ ಸ್ಟೋರಿಯು
ಸಾರಿ ಸಾರಿ ತಲೆ ಚಚ್ಚಿಕೊಂಡು
ನಗುವವರೇ ಇಲ್ಲಿ ಪ್ರತಿ ಬಾರಿಯೂ

ಕ್ಷಮಿಸಬೇಕು ನಿಷ್ಠಾವಂತರು
ಕೋಪಗೊಳ್ಳದೆ ಕೇಳಿರಿ
ಆತುರಕ್ಕೆ ಬಲಿಯಾಗಬೇಡಿ
ಒಳ್ಳೆ ಸಮಯಕ್ಕೆ ಕಾಯಿರಿ

-- ರತ್ನಸುತ

ಬಿಳಿ ನಿಲುವಂಗಿ


ಬಿಳುಪಿನ ಮೇಲೆ ಎಲ್ಲವೂ ಸ್ಪಷ್ಟ
ನಾ ತೊಟ್ಟ ಬಿಳುಪು ಹಾಗಲ್ಲ
ನನ್ನ ಸ್ಪಷ್ಟ ಕಲೆಗಳನ್ನ ಸುಲಭಕ್ಕೆ
ಒಂದೇ ಒಗೆತಕ್ಕೆ ಬಿಟ್ಟುಗೊಡುತ್ತದೆ
ಯಾವ ಸಾಬೂನೂ ಬಳಸದೆ
ಯಾವ ನಾರಿಂದಲೂ ತಿಕ್ಕದೆ
ಕೇವಲ ಪರಿತಪಿಸುವಲ್ಲೇ
ಮರೆಯಾಗುವ ಕಲೆಗಳವು

ಅಮ್ಮ ಹೊಲಿಸಿದ ಅಂಗಿ ಅದು
ತಪ್ಪುಗಳಿಗೆ ಆಸ್ಪದ ನೀಡುವುದಿಲ್ಲ
ತಪ್ಪಾದರೂ ಕ್ಷಮಿಸುವ ಉದಾರಿ

ಸದಾ ಒಂದು ತಪ್ಪಿತಸ್ಥ ಭಾವ ಬಿತ್ತಿ
ನನ್ನ ಒಳಗಿಂದ ತಿದ್ದುವ ಅಸ್ತ್ರ,
ಅಮ್ಮನಿಗೆ ಗೊತ್ತಿಲ್ಲದ್ದೇನಿದೆ

ಕೆಸರ ಬಯಲಲ್ಲಿ ಜಾಗರೂಕತೆ ಮರೆಯದಂತೆ
ನನಗೆ ನನ್ನನ್ನೇ ಕಾವಲಿಟ್ಟಿದ್ದಾಳೆ
ಎಂಥ ಚತುರಿ ನಾರಿ!!

ಅಲ್ಲಲ್ಲಿ ಹರಿದರೆ
ದಿನವೆಲ್ಲ ವ್ಯಯಿಸಿ ಕಸೂತಿ ಬಿಡಿಸಿ
ಹೊಸ ವಿನ್ಯಾಸವಾಗಿಸುತ್ತಾಳೆ
ಮೊದಲಿಗೆ ನವಿಲು
ನಂತರ ಗರಿ, ನಂತರ ಮಳೆ
ಒಟ್ಟಾರೆ ಪರಿಪೂರ್ಣ ಚಿತ್ರಣ

ಮೈಗತ್ತದೆ ಸಣ್ಣಗಾಗಿದೆ
ಅದಕ್ಕೂ ಜೀವವಿದ್ದಿದ್ದರೆ ನನ್ನ ಸಮ
ಬೆಳೆದು ನಿಲ್ಲುತ್ತಿತ್ತೇನೋ,
ಸದ್ಯ ಕಪಾಟಿನಲ್ಲಿ ಜೋಪಾನ ಪಡಿಸಿದ್ದೇನೆ


ಈಗಲೂ ಅಮ್ಮಳ ಕಾಳಜಿ
ಹಾಗೇ ಇದೆ
ಬಿಳಿ ವಸ್ತ್ರ ಕಲೆಯಾದರೆ
ಒಗೆತ ಕ್ಲಿಷ್ಟವೆಂದರಿತರೂ
ಪಟ್ಟು ಹಿಡಿದು ಅದನ್ನೇ ಹೊಲಿಸುತ್ತಾಳೆ
ನಾನಿನ್ನೂ ದಾರಿ ತಪ್ಪದೆ ಉಳಿದಿದ್ದೇನೆ!!

-- ರತ್ನಸುತ

ನೀರವ ಸ್ಥಿತಿಯಲ್ಲಿ ಯಾರಿವನೆನ್ನದಿರು

ನೀರವ ಸ್ಥಿತಿಯಲ್ಲಿ ಯಾರಿವನೆನ್ನದಿರು ನೀನಿರದೆ ಈ ಗತಿ ಸಿದ್ಧಿಸಿತು ಜೀವಕೆ ಹಾಡುಹಗಲಲ್ಲಿ ನೀ ಆವರಿಸಿಕೊಂಡಿರುವೆ ಕನಸೊಂದು ಬೀಳುತಿದೆ ಗೊತ್ತಿದ್ದೂ ಬಾವಿಗೆ ಬ...