Friday 5 December 2014

ಇದನ್ನೂ ಕೇಳಿ ಹೋಗು

ಇರುವಷ್ಟೂ ಪ್ರೀತಿಯನ್ನ ನಿನಗೇ ಕೊಟ್ಟು
ಈಗ ನನ್ನ ನಾನೇ ಪ್ರೀತಿಸಲಾಗದೆ
ಅಂಗಲಾಚಿ ಬೇಡುತ್ತಿದ್ದೇನೆ
ಆದಷ್ಟೂ ನನ್ನ ಪ್ರೀತಿಸುವಂತೆ ನಟಿಸು
ಕನಸುಗಳಾದದೂ ನೆಮ್ಮದಿಯಿಂದ ಮಲಗಲಿ;
ರಸ್ತೆ ಮಧ್ಯೆ ಹರಿದ ಚಪ್ಪಲಿ ಬಿಟ್ಟು
ಬರಿಗಾಲಿನಲ್ಲಿ ನಡೆದು
ನಿನ್ನ ಮನಸನ್ನ ತಲುಪಿದವನ
ಸತ್ಕರಿಸದೆ ಹೋದರೆ
ಬಾಯಾರಿ ಸಾಯದಿದ್ದರೂ
ಬಯಕೆ ಹುಸಿಯಾಗಿ ಸಾಯುತ್ತೇನೆ;
ಹೋಗಲಿ ವಿಷವನ್ನಾದರೂ ಕೊಡು!!
ಕಣ್ಣಂಚಿನಲಿ ನಿನ್ನ ಕಾದವ
ಕಣ್ಣ ಮಿಟುಕಿಸುವಲ್ಲಿನ ನೋವ ಬಲ್ಲೆ;
ನೀನೇನೋ ಸನ್ನೆಯಲ್ಲಿ ಎಲ್ಲವ ಹೇಳಿ
ಏನನ್ನೂ ಅಪೇಕ್ಷಿಸದೆ ಹೊರಟು ಹೋದೆ,
ನೆರಳಿನ ಮೂಕ ಮುನಿಸು
ನಿಲ್ಲಲೂ ಬಿಡದೆ, ಮುಂದರಿಯಲೂ ಬಿಡದೆ
ನನ್ನ ಕಾಡುವ ಪರಿಯ
ಮಾತಿನಲ್ಲಿ ವಿವರಿಸಲಾಗುತ್ತಿಲ್ಲ!!
ಜೇಬಲ್ಲಿ ಅನಾಥವಾಗಿ ಉಳಿದ ಲೇಖನಿ
ಏನನ್ನಾದರೂ ಬರೆ ಎಂದಾಗ
ನಿನ್ನ ಚಿತ್ರ ಹೊರತು ಏನ ನೆನೆಯಲಿ?
ನೀನೇ ಹೇಳಿ ಹೋಗು;
ಮತ್ತೆ ಇಕ್ಕಟ್ಟಿಗೆ ಸಿಲುಕಿ
ಏನೂ ಬರೆಯದೆ ಹುಚ್ಚನಾಗಲಾರೆ!!
ಹಸ್ತ ರೇಖೆಗಳೆಲ್ಲ
ಆಣೆ, ಪ್ರಮಾಣಗಳ ವಹಿವಾಟಿನ ನಡುವೆ
ನಷ್ಟದ ಲೆಕ್ಕ ತೋರಿಸುವ
ದಾಖಲಾತಿಗಳಾಗಿವೆ;
ಲೆಕ್ಕ ತಪ್ಪಾಗಿದೆ
ಇದು ಗೊತ್ತಿದ್ದೂ ನೀ ಅಂಗೀಕರಿಸಿ
ಸುಮ್ಮನಾಗಿದ್ದಕ್ಕೇ
ನನದೊಂದು ಸಿಟ್ಟು ನಿನ್ನ ಮೇಲೆ!!
ಒಮ್ಮೆ ಬೇಟಿಯಾಗು
ಬಾಳ ದಾರಿಯಲ್ಲಿ
ಕೊಟ್ಟದ್ದು, ಕೊಡದುದ್ದರ ಕುರಿತು
ಒಮ್ಮೆ ಸಮಾಲೋಚಿಸಿ
ಎಲ್ಲವನ್ನೂ ಇತ್ಯರ್ಥ ಮಾಡಿಕೊಳ್ಳೋಣ!!
                                 -- ರತ್ನಸುತ

No comments:

Post a Comment

ದಣಿವಾರಿ ಕೊಳದಲಿ

ದಣಿವಾರಿ ಕೊಳದಲಿ  ಕೆಂದಾವರೆ ಅರಳಿದೆ  ಮುಗಿಲೇರಿ ಬರದಲಿ  ಹನಿಗೂಡಲು ಇಳಿದಿದೆ  ರವಿಕಾಂತಿ ಸವಿಯುತ  ಹರಳಂತೆ ಮಿನುಗುತಾ  ಬೆರಗಲ್ಲೇ ತಯಾರಿಯಾಗುತಿದೆ  ಮನದಂಗಳ ಮುಂಜಾನೆಯ...