Tuesday, 9 December 2014

ಮತ್ತೆ ಕೊನೆಯ ಮಾತು

ಬಿಸಿಲಲ್ಲಿ ನಿಂತು ಇನ್ನೆಷ್ಟು ಹೊತ್ತು
ನಮ್ಮ ಅಸ್ಮಿತೆಗಳ ಕೆಡವಬೇಕು?
ಬಾ, ನೆರಳಿನಲ್ಲಿ ಕೂತು ಮೌನವಹಿಸೋಣ
ಉದುರಿದೆಲೆಗಳಿಗೆ ಸಂತಾಪ ಸೂಚಿಸುತ್ತ!!
ಕಡೆಗೊಮ್ಮೆ ಬಿಗಿಹಿಡಿದು
ಬಿಡುಗಡೆಗೊಳಿಸುವ ಉಸಿರ ಬಿಸಿಗೆ
ಮೂಗಿನ ಕೆಳಗಿನ ರೋಮ ಬೆಚ್ಚಲಿ
ತುಟಿ ಗೋಲಾಕಾರದಲಿ ನಿಟ್ಟುಸಿರಿಡಲಿ;
ಬಡಿದಂತಾಗುವ ಎದೆ ಬಾಗಿಲ ಚಿಲಕ
ಮತ್ತಷ್ಟು ಸಡಿಲಾಗುವ ಮುನ್ನ
ನಾಲ್ಕು ಮಾತುಗಳಾಡಿ ಮುಕ್ತಾಯಗೊಳಿಸೋಣ
ಸಂಜೆಗತ್ತಲ ಕಾಯಿಸಿದರೆ ರಾತ್ರಿಯ ಬೇನೆ ಹಿತವಲ್ಲ!!
ನಿರಂತರ ಜೊತೆಗುಳಿವ ನೆರಳ
ನೆಪವೊಡ್ಡಿ ತುಸು ದೂರ ನಿಲ್ಲಿಸಿ
ಮುತ್ತಿನ ಮಳೆಗರೆದು
ತೋಯ್ದ ಕೆನ್ನೆಗಳ ಮರೆಸಿಟ್ಟುಕೊಳ್ಳೋಣ
ಸಿಟ್ಟಿಗೂ ಚೂರು ಸಾಂತ್ವನ ಸಿಗಲಿ!!
ಗದ್ಯ, ಪದ್ಯಗಳ ಗುದ್ದಾಟದಲ್ಲಿ
ಬದುಕುಳಿದ ಪದಗಳ ಆಯ್ದು
ಕೊನೆಗೊಮ್ಮೆ ಜೋಡಿಸಿಕೊಳ್ಳೋಣ
ಪುರುಸೊತ್ತು ಸಿಕ್ಕಾಗ ಓದಿಕೊಳಲು
ಕಣ್ಣೀರು ಹೆಚ್ಚಾಗಿ ಬಿಕ್ಕಿಕೊಳಲು!!
                                          -- ರತ್ನಸುತ

No comments:

Post a Comment

ನೀರವ ಸ್ಥಿತಿಯಲ್ಲಿ ಯಾರಿವನೆನ್ನದಿರು

ನೀರವ ಸ್ಥಿತಿಯಲ್ಲಿ ಯಾರಿವನೆನ್ನದಿರು ನೀನಿರದೆ ಈ ಗತಿ ಸಿದ್ಧಿಸಿತು ಜೀವಕೆ ಹಾಡುಹಗಲಲ್ಲಿ ನೀ ಆವರಿಸಿಕೊಂಡಿರುವೆ ಕನಸೊಂದು ಬೀಳುತಿದೆ ಗೊತ್ತಿದ್ದೂ ಬಾವಿಗೆ ಬ...