Monday 29 December 2014

ಗಜಲ್ಲಾ? ಗೊತ್ತಿಲ್ಲ!!


ಗುಳೆ ಹೊರಟ ಹೃದಯವನು ಎಲ್ಲೆಂದು ಹುಡುಕಲಿ?
ನಿನ್ನಲ್ಲೆ ಇಹುದೆಂದರದುವೇ ಸೂಕ್ತ


ಗಮನಕ್ಕೆ ನೀನಷ್ಟೇ ಗುಟುಕಾಗಿರೋ ವೇಳೆ
ನಯನಕ್ಕೆ ದಣಿವಾದರದುವೇ ಸೂಕ್ತ

ಎದೆಗೊಂದು ಪದ ಸಿಲುಕಿ ಹದವಾಗಿ ಬೆರೆತಾಗ
ಮಸಿಯಾದ ಬೆರಳಲ್ಲುಳಿವುದೇ ಸೂಕ್ತ

ಗರಿ ಹೊದ್ದು ಒಲವನ್ನ ತುಸು ಬೆಚ್ಚಗಿರಿಸುತ್ತ
ನಿನ್ನನ್ನು ಬಚ್ಚಿಡುವುದದುವೇ ಸೂಕ್ತ

ಗದ್ದಲದ ಗೂಡಲ್ಲೂ ಮೌನಕ್ಕೆ ಶರಣಾಗಿ
ಹಾಡು ಹಸೆಯಲಿ ಜೀವಿಸುವುದೇ ಸೂಕ್ತ

ಮೆದುವಾಗಿ ನಿನ್ನನ್ನು ಕಿರುಬೆರಳ ಅಂಚಲ್ಲಿ
ಸವರುತ್ತ ಮೈಮರೆತು ಸಾಯುವುದೂ ಸೂಕ್ತ

ಸ್ವರವೆಲ್ಲ ನಿನ್ನೆಸರ ಆವರಿಸಿಕೊಂಡಿರಲು
ಕೊಳಳೊಂದು ಮೈ ನೆರೆಯುವದು ಕೂಡ ಸೂಕ್ತ

ನಾನಾಗಿ ನಿನ್ನಲ್ಲಿ ನೀನಾಗಿ ನನ್ನಲ್ಲಿ
ಬಿಡಿಸಲಾಗದೆ ಬೆಸೆದುಕೊಳ್ಳುವುದೇ ಸೂಕ್ತ

ಮೊದಲಾದುದು ಎಲ್ಲೋ ಕೊನೆಗಾಣದೆ ಇರಲಿ
ನಮ್ಮ ಉಸಿರೊಂದಾದರದುವೇ ಸೂಕ್ತ

-- ರತ್ನಸುತ

No comments:

Post a Comment

ದಣಿವಾರಿ ಕೊಳದಲಿ

ದಣಿವಾರಿ ಕೊಳದಲಿ  ಕೆಂದಾವರೆ ಅರಳಿದೆ  ಮುಗಿಲೇರಿ ಬರದಲಿ  ಹನಿಗೂಡಲು ಇಳಿದಿದೆ  ರವಿಕಾಂತಿ ಸವಿಯುತ  ಹರಳಂತೆ ಮಿನುಗುತಾ  ಬೆರಗಲ್ಲೇ ತಯಾರಿಯಾಗುತಿದೆ  ಮನದಂಗಳ ಮುಂಜಾನೆಯ...