Monday 29 December 2014

ಬಿಳಿ ನಿಲುವಂಗಿ


ಬಿಳುಪಿನ ಮೇಲೆ ಎಲ್ಲವೂ ಸ್ಪಷ್ಟ
ನಾ ತೊಟ್ಟ ಬಿಳುಪು ಹಾಗಲ್ಲ
ನನ್ನ ಸ್ಪಷ್ಟ ಕಲೆಗಳನ್ನ ಸುಲಭಕ್ಕೆ
ಒಂದೇ ಒಗೆತಕ್ಕೆ ಬಿಟ್ಟುಗೊಡುತ್ತದೆ
ಯಾವ ಸಾಬೂನೂ ಬಳಸದೆ
ಯಾವ ನಾರಿಂದಲೂ ತಿಕ್ಕದೆ
ಕೇವಲ ಪರಿತಪಿಸುವಲ್ಲೇ
ಮರೆಯಾಗುವ ಕಲೆಗಳವು

ಅಮ್ಮ ಹೊಲಿಸಿದ ಅಂಗಿ ಅದು
ತಪ್ಪುಗಳಿಗೆ ಆಸ್ಪದ ನೀಡುವುದಿಲ್ಲ
ತಪ್ಪಾದರೂ ಕ್ಷಮಿಸುವ ಉದಾರಿ

ಸದಾ ಒಂದು ತಪ್ಪಿತಸ್ಥ ಭಾವ ಬಿತ್ತಿ
ನನ್ನ ಒಳಗಿಂದ ತಿದ್ದುವ ಅಸ್ತ್ರ,
ಅಮ್ಮನಿಗೆ ಗೊತ್ತಿಲ್ಲದ್ದೇನಿದೆ

ಕೆಸರ ಬಯಲಲ್ಲಿ ಜಾಗರೂಕತೆ ಮರೆಯದಂತೆ
ನನಗೆ ನನ್ನನ್ನೇ ಕಾವಲಿಟ್ಟಿದ್ದಾಳೆ
ಎಂಥ ಚತುರಿ ನಾರಿ!!

ಅಲ್ಲಲ್ಲಿ ಹರಿದರೆ
ದಿನವೆಲ್ಲ ವ್ಯಯಿಸಿ ಕಸೂತಿ ಬಿಡಿಸಿ
ಹೊಸ ವಿನ್ಯಾಸವಾಗಿಸುತ್ತಾಳೆ
ಮೊದಲಿಗೆ ನವಿಲು
ನಂತರ ಗರಿ, ನಂತರ ಮಳೆ
ಒಟ್ಟಾರೆ ಪರಿಪೂರ್ಣ ಚಿತ್ರಣ

ಮೈಗತ್ತದೆ ಸಣ್ಣಗಾಗಿದೆ
ಅದಕ್ಕೂ ಜೀವವಿದ್ದಿದ್ದರೆ ನನ್ನ ಸಮ
ಬೆಳೆದು ನಿಲ್ಲುತ್ತಿತ್ತೇನೋ,
ಸದ್ಯ ಕಪಾಟಿನಲ್ಲಿ ಜೋಪಾನ ಪಡಿಸಿದ್ದೇನೆ


ಈಗಲೂ ಅಮ್ಮಳ ಕಾಳಜಿ
ಹಾಗೇ ಇದೆ
ಬಿಳಿ ವಸ್ತ್ರ ಕಲೆಯಾದರೆ
ಒಗೆತ ಕ್ಲಿಷ್ಟವೆಂದರಿತರೂ
ಪಟ್ಟು ಹಿಡಿದು ಅದನ್ನೇ ಹೊಲಿಸುತ್ತಾಳೆ
ನಾನಿನ್ನೂ ದಾರಿ ತಪ್ಪದೆ ಉಳಿದಿದ್ದೇನೆ!!

-- ರತ್ನಸುತ

No comments:

Post a Comment

ದಣಿವಾರಿ ಕೊಳದಲಿ

ದಣಿವಾರಿ ಕೊಳದಲಿ  ಕೆಂದಾವರೆ ಅರಳಿದೆ  ಮುಗಿಲೇರಿ ಬರದಲಿ  ಹನಿಗೂಡಲು ಇಳಿದಿದೆ  ರವಿಕಾಂತಿ ಸವಿಯುತ  ಹರಳಂತೆ ಮಿನುಗುತಾ  ಬೆರಗಲ್ಲೇ ತಯಾರಿಯಾಗುತಿದೆ  ಮನದಂಗಳ ಮುಂಜಾನೆಯ...