Friday 5 December 2014

ಎಲ್ಲ ಮುಗಿದ ಮೇಲೆ

ನಾಲ್ಕು ಅಂತಸ್ತಿನ ಕಟ್ಟಡದ ಮೇಲೆ
ಪ್ರಪಂಚದ ವಿಕೃತಿಯನ್ನ ಕಂಡು
ಮಂಕಾಗಿ ಕೂತಿದ್ದೆ;
ಯಾರೋ ತಡೆದರು
"ನಿನಗಿನ್ನೂ ವಯಸ್ಸಿದೆ
ಈ ವಿಕೃತಿಗಳನ್ನು ಅರಗಿಸಿಕೊಳ್ಳಲು
ಮುಪ್ಪಿನ ಅರ್ಹತೆ ಬೇಕು
ಎದ್ದು ಹೋಗು" ಅಂದರು
ನಾ ಅಲ್ಲೇ ಕೂತಿದ್ದೆ;
ದೂರದಲ್ಲಿ ಆ ನರಕ
ಮಂಜು ಪರದೆಯ ಆಚೆ
ನಿಧಾನಕ್ಕೆ ಗೋಚರಿಸತೊಡಗಿತು
ಅಲ್ಲಿ ನನ್ನ ಸಾವಿನ ಸಂಭ್ರಮ
ಆಗಲೇ ಮುಗಿಲು ಮುಟ್ಟಿತ್ತು;
ಜನ ಜಮಾಯಿಸಿದರು
ನನ್ನ ಕೊನೆ ಉಸಿರಿನ ಪುರಾವೆಗೆ;
ಮಾನವೀಯತೆ ಮೆರೆದವರಲ್ಲೂ
ಅಸಹಾಯಕತೆ ಎದ್ದು ಕಾಣುತ್ತಿತ್ತು
ಪೋಲೀಸರು ಕಾನೂನು ವ್ಯಾಪ್ತಿಯಲ್ಲೇ ಸಿಲುಕಿ
ಹೊರ ಬರದೆ ಒದ್ದಾಡಿದರು
ಎಲ್ಲ ಪ್ರಯತ್ನಗಳೂ
ನನ್ನ ಓಲೈಕೆಯಲ್ಲಿ ಸೋತಿದ್ದವು;
ಆಚೆ ಸಂಭ್ರಮಕ್ಕೆ ನಾ ಮೋಸ ಮಾಡಲಾರೆ,
ಅದಕ್ಕೊಂದು ಅರ್ಥ ಕಲ್ಪಿಸಬೇಕಿತ್ತು
ಇಲ್ಲವಾದಲ್ಲಿ ಎಲ್ಲರ ಕಣ್ಣೀರು ಪೋಳಾಗುತ್ತದೆ!!
ಯಾರ ಮಾತೂ ಕಿವಿಗೆ ಬೀಳದೆ
ಎಲ್ಲವೂ ನಿಚ್ಚಲವಾದವು,
ನನಗೆ ನನ್ನ ಎದೆ ಬಡಿತ ಮಾತ್ರ ಕೇಳಿಸುತ್ತಿತ್ತು;
ಭಯದ ಉತ್ತುಂಗವನ್ನೂ ದಾಟಿ
ಕೈಗೊಂಡ ಕಾರ್ಯವನ್ನ ಪೂರ್ಣಗೊಳಿಸಿ
ನಾ ಮಿಮುಕ್ತಿ ಹೊಂದಬೇಕಿತ್ತು;
ಎದೆ ಬಡಿತ ಏರುತ್ತ, ಏರುತ್ತ
ಕ್ರಮೇಣ ಇಳಿಮುಖದಲ್ಲೇ ನಿಂತು ಹೋಯಿತು!!
ಕಣ್ಬಿಟ್ಟು ನೋಡಿದೆ
ಪ್ರಪಂಚವೇ ನನ್ನ ಸುತ್ತ
ಅನುಕಂಪದ ಅಡಕವನ್ನೇ ಹೇರಿತು
ನಾನು ಆ ಕ್ಷಣ ನಿಜಕ್ಕೂ ಬದುಕಬೇಕಿತ್ತು
ಆದರೆ.....
                                        -- ರತ್ನಸುತ

No comments:

Post a Comment

ದಣಿವಾರಿ ಕೊಳದಲಿ

ದಣಿವಾರಿ ಕೊಳದಲಿ  ಕೆಂದಾವರೆ ಅರಳಿದೆ  ಮುಗಿಲೇರಿ ಬರದಲಿ  ಹನಿಗೂಡಲು ಇಳಿದಿದೆ  ರವಿಕಾಂತಿ ಸವಿಯುತ  ಹರಳಂತೆ ಮಿನುಗುತಾ  ಬೆರಗಲ್ಲೇ ತಯಾರಿಯಾಗುತಿದೆ  ಮನದಂಗಳ ಮುಂಜಾನೆಯ...