ಚಿಗುರಿ, ಉದುರಿ, ಚಿಗುರಿ....

ಮರದ ಕೊನೆ ಎಲೆ ಉದುರಿತು
ಕೊನರುವ ಕನಸು ಈಗ ಪರಿಪೂರ್ಣ
ತಂಬೆಲರ ಹಾದಿ ಹಿಡಿದು
ಉದುರಿದೆಲೆಗಳು ಪರಸ್ಪರ
ವಿನಿಮಯಗೊಳ್ಳುತ್ತಿವೆ
ಮರ ಮರಕ್ಕೂ ಒಂದೊಂದು ಕಥೆ!!

ಸೀಮೆಗಳಿಲ್ಲದೆ ಹಬ್ಬಿ
ನೆಲವನ್ನ ಹಸಿಯಾಗಿಸಿದ್ದ
ರೆಂಬೆ-ರೆಂಬೆಗಳೂ ಈಗ
ನಿರ್ವಾಣ, ಬೆಳಕ ಬರಮಾಡಿಕೊಂಡು
ನೆಲಕ್ಕೆ ಬಿಸಿ ಮುಟ್ಟಿಸುತ್ತಿವೆ!!

ಮರದಡಿಯ ದೇವ ಕಲ್ಲಿಗೆ
ಎಂದೂ ಕಾಣದಷ್ಟು ಶೀತ, ಉಷ್ಣಾಂಶದ
ಪರಿಧಿಯನ್ನ ಮುಟ್ಟಿ ಬಂದ ಖುಷಿ
ತೀಕ್ಷ್ಣವಾದ ಕಿರಣಗಳಿಂದ ಜಳಕ
ಒಣ ಎಲೆಗಳಿಟ್ಟ ಕಚಗುಳಿಯ ಪುಳಕ!!

ನಾ ಮುಂದು, ತಾ ಮುಂದೆಂಬಂತೆ
ಪುಟಿದ ಚಿಗುರಿನ ಮೊಗ್ಗು
ಮರಕ್ಕೆ ಮತ್ತೊಮ್ಮೆ ಮೈ ನೆರೆದ ಸಿಗ್ಗು
ನೆರೆ ಹೊರೆಯ ಬಂಜೆ ಕೊಂಬೆಗಳ ಈರ್ಷೆ
ಒಟ್ಟಾರೆ ಹೊಸತನದ ಪರಿಶೆ!!

ಎಲ್ಲೋ ಉದುರಿ, ಮತ್ತೆಲ್ಲೋ ಗೊಬ್ಬರವಾದ
ನಿರಾವಲಂಬಿ ಎಲೆಗಳಿಗೆ
ತಾವ್ಬಿಟ್ಟು ಬಂದ ಸಹಿಯಲ್ಲಿ
ಯಾರು ಸುಖಿಸುತ್ತಿರಬಹುದೆಂಬ ಕುತೂಹಲ
ಅಲ್ಲೆಲ್ಲೆಲ್ಲೂ ಅದೇ ಗದ್ದಲ!!

ಚಿಗುರು ಬೆಳೆದು ಹಗುರ ಮರಕೆ
ತೂಕವೊದಗಿಸುತ್ತಲೇ
ಬೇರು, ಬುಡದ ಪಾಲಿಗಾಯ್ತು
ಮತ್ತೆ ತುಂಬು ಕತ್ತಲೆ;
ಹಸಿ ನೆಲದ ಎಲೆಗಳೆಲ್ಲ
ಕೊಳೆತು ಕಪ್ಪಗಾದವು
ಹಕ್ಕಿ ಗೂಡು ಕಟ್ಟಿ ಮತ್ತೆ
ಮರವ ಹಬ್ಬಿಕೊಂಡವು!!
                                 -- ರತ್ನಸುತ

Comments

Popular posts from this blog

ಜೋಡಿ ಪದ

"ಪಾಸ್ವರ್ಡ್" - RESET ಆಗ್ತಿರ್ಲಿ ಆಗಾಗ!!!

ಗರುಡ ಪ್ರಯತ್ನ ೩