ಖಾಯಿಲೆ ಖಸಾಲೆ

ಅಂಗೈಯ್ಯ ಹಸಿವಿಗೂ
ಹೊಟ್ಟೆ ಹಸಿವಿಗೂ ನಡುವೆ
ನಾಲಗೆಯದ್ದು ಬೇರೆಯದ್ದೆ ತಕರಾರು
ಬಾಯಿಗಿಟ್ಟದ್ದ ಒಪ್ಪದೆ
ಕೈಗೆಟುಕದ್ದಕ್ಕೇ ಮನಸೋತು
ಅತ್ತಲಾಗೇ ಹಠದಲ್ಲಿ ವಾಲುತ್ತದೆ
ಗಂಟಲಿಗೆ ತೀರದ ಗೋಳು;

ಮಧುಮೇಹದಿಂದ
ರಕ್ತ, ಮೂತ್ರವೆಲ್ಲವೂ ಸಿಹಿಯಾಗಿ
ನಾಲಗೆಯನ್ನ ಕಹಿಯಾಗಿಸಿತು;
ತಕ್ಕ ಶಾಸ್ತಿಯಾಯಿತೆಂದುಕೊಂಡು
ನಕ್ಕುಣಿಸುತ್ತಿದ್ದ ಅಂಗೈಯ್ಯ ತುದಿಬೆರಳ ತುಂಬ
ಸೂಜಿ ಚುಚ್ಚಿದ ಗುರುತುಗಳು!!

ಹೊಟ್ಟೆ ಕೆಟ್ಟು
ಒಳಗೆಲ್ಲ ಗುಡುಗುಡು ಗುಡುಗು
ಮಳೆಗರೆವ ವೇಳೆಗೆ
ತಂಬಿಗೆ ಸಿಗದೆ ಹಸಿಯಾದ
ಪಾಯಿಜಾಮಕ್ಕೆ ಒಗೆತವಿಲ್ಲ

ನೀರಿನಲ್ಲಿ ಕೀಟಾಣುಗಳಿವೆಯಂತೆ
ಮಿನರಲ್ ವಾಟರ್ ತರಿಸಿ
ದಣಿವಾರಿಸಿಕೊಂಡವರಿಗೆ ಮುಂದೆ
ಪಾಯಿಖಾನೆಯ ಜಪ;
ರುಪಾಯಿ ಒಂದಕ್ಕೆ
ಎರಡಕ್ಕೆ ಎರಡು ರುಪಾಯಿ
ಬೆಂಗಳೂರು ದುಬಾರಿಯಾಗಿದೆ
ಅಡಿಗಡಿಗೂ ರೇಟು!!

ಡಾಕ್ಟರ್ ಕೋಣೆಯಿಂದ
ಹೊರಬಂದವರೆಲ್ಲ ಅಂಡುಜ್ಜಿಕೊಂಡು
ಕೈಯ್ಯಲ್ಲಿ ಮಾತ್ರೆ ಚೀಟಿ ಹಿಡಿದು
ಪೆಚ್ಚು ಮೋರೆಯಲ್ಲಿ ದವಾಖಾನೆಯತ್ತ
ಹೆಜ್ಜೆಯಾಕುತ್ತಾರೆ
ದಶಕಗಳಿಂದ ಅಲ್ಲೇ ಭಿಕ್ಷೆ ಬೇಡುತ್ತಿದ್ದ
ಯಾವ ರೋಗವನ್ನೂ ಕಾಣದ
ಭಿಕ್ಷುಕನತ್ತ ಹೊಟ್ಟೆ ಕಿಚ್ಚಿನ ನೋಟ ಬೀರಿ!!

ಡಾಕ್ಟರ್ ಬೆಲ್ಲು ಹೊಡೆದು
ನರ್ಸಮ್ಮನ ಒಳಗೆ ಕರೆಸಿಕೊಂಡು
ಚಿಲಕ ಹಾಕಿಸಿಕೊಳ್ಳುತ್ತಾನೆ
ಗಂಟೆ ಒಂಬತ್ತಾಯ್ತು
ತಾನೂ ಸೂಜಿ ಚಿಚ್ಚಿಸಿಕೊಳ್ಳದೆ ಹೋದರೆ
ಮುಂಜಾವು ಮೂಡದು ಅವಗೆ
                           
                                 -- ರತ್ನಸುತ

Comments

Popular posts from this blog

ಜೋಡಿ ಪದ

"ಪಾಸ್ವರ್ಡ್" - RESET ಆಗ್ತಿರ್ಲಿ ಆಗಾಗ!!!

ಗರುಡ ಪ್ರಯತ್ನ ೩