ಬಂಡೆ ಹೂವು

ಬಂಡೆ ಬುಡದ ಹುಲ್ಲು
ನಾ ರಾಗಿ ಕಾಳಿನಷ್ಟೇ ಕಲ್ಲು
ಎತ್ತರಕ್ಕೆ ಆಕಾಶ
ಸುತ್ತಿ ಬರಲು ಭೂಮಿ
ತೀಡಿದರೆ ಕಾವ್ಯ ತೈಲ
ಬೇಡದೆಯೂ ದಕ್ಕಿ ನೆರಳು
ಹರಡಿಕೊಂಡ ಅದರ ಸುತ್ತ
ಕಾವ್ಯ ರಸಿಕ ಪಂಗಡ
ಬಿಸಿಲಿಗೊಂದು ಬೇಗೆ ಸಾಲು
ಮಳೆಗೊಂದು ಹನಿಗವನ
ಚಳಿಗಾಲಕೆ ಉದುರಿದಂತೆ
ಪಕ್ವ ಎಲೆಯ ಪದಗಳು
ಚಾಮರಕೆ ತೊನೆದು ತೊನೆದು
ಬಳುಕಾಡಿದ ಪಚ್ಚೆ ಕೊಂಬೆ
ಚಂದಿರನ ತಲೆಯ ಮೇಲೆ
ಹೊತ್ತಿಡಲು ಜೊನ್ನ ಸಿಂಬೆ
ಬಳ್ಳಿಯಾಗಿ ಹಬ್ಬಿ ಬೆಳೆದ
ದಾರಿಯುದ್ದಕೂ ತಾಳೆ ಗರಿಯ
ಕೆತ್ತಿ, ಕೊರೆದ ಕಾವ್ಯ ಘಮ
ಉನ್ಮಾದದ ಮನೋರಮ;
ವಸ್ತು, ವಸ್ತುವಿನಲೂ ಜೀವ-
ಭಾವ ಸಂಚಲನ-ವಲನ
ಪಠಿಸಿ ಸೋತ ನಾಲಗೆಗೆ
ಉತ್ಕೃಷ್ಟ ಲೇಪನ!!
ಬಂಡೆ ಅಂದವರೆಲ್ಲ
ಬುಡದಲ್ಲೇ ಊಳಿದವರು
ಬಲಿಯ ಬೇಕು ಬುದ್ಧಿ
ತಿಳಿಯಲಿಕ್ಕೆ ಮನಸು
ತಾ ನಿರ್ವಿಕಾರ ಪ್ರತಿಮೆ
ನವಿರು, ಒರಟು ಮಿಶ್ರಿತ
ಅಪ್ರತಿಮ ಶಿಲ್ಪ ಕಲೆ!!
ಗುಂಡಿಗೆ ಇದ್ದರೆ ಸಾಲದು
ಅದರೊಳಗೂ ಬೇಕು ಚೂರು
ಕಿಚ್ಚು, ಪ್ರೀತಿ, ಅಭಿರುಚಿ
ವ್ಯಂಗ್ಯ, ಹಾಸ್ಯ, ಅಭಿಮಾನ,
ಸಣ್ಣ ಮಗುವಿನ ನಿಲುವು;
ಆಗ
ಬಂಡೆ ಬಾಗಿ ಒಲಿವುದು
ಓದುಗ ಮನಸಿನ ಪಾಲಿಗೆ
ಮೃದು ಹೂವಿನಂತೆ!!
                    -- ರತ್ನಸುತ

Comments

Popular posts from this blog

ಜೋಡಿ ಪದ

"ಪಾಸ್ವರ್ಡ್" - RESET ಆಗ್ತಿರ್ಲಿ ಆಗಾಗ!!!

ಗರುಡ ಪ್ರಯತ್ನ ೩