ನನ್ನ ಹುಡುಕ ಬನ್ನಿ

ಕಡಲ ಅಲೆಗಳಿಗೆ ಕಣ್ಣೀರ ಉಣಿಸಿ
ಕಣ್ಣು ಸಪ್ಪೆಯಾಗುತ್ತ ಹೊರಟಿದೆ
ಕೆನ್ನೆ ಮೇಲೊಂದು ಹಾದಿ ನಿರ್ಮಿಸಿ
ಇನ್ನೂ ಒಂದಿಷ್ಟು ಹೆಚ್ಚೇ ಹರಟಿದೆ

ಮಡಿದ ಹೂವಿಂದ ಗಂಧ ಕಳುವಿಗೆ
ಹೊಂಚು ಹಾಕುತ್ತ ಗಾಳಿ ಬೀಸಿದೆ
ಬಂಧ ಕಳಚಿಟ್ಟ ನಗ್ನ ಕೈಗಳು
ಯಾರದೋ ಆಸರೆಗೆ ಕಾದಿದೆ

ಬಿದ್ದ ಮಾತನು ಎತ್ತಿ ಹಿಡಿಯುವ
ಯತ್ನವೆಲ್ಲವೂ ಸೋತು ನಿಂತಿದೆ
ಮೌನದಲ್ಲೆ ತಾನಾಗಿ ಮೂಡಿದ
ಕಾವ್ಯಕೊಂದು ಹೆಸರಿಡಲು ಬೇಕಿದೆ

ಎಲ್ಲ ಮರೆತು ಎಲ್ಲದರ ಕುರಿತು
ಕೊನೆಗೊಮ್ಮೆ ಯೋಚಿಸಿ ಸಾಯ ಬೇಕಿದೆ
ಅಥವ ಎಲ್ಲವ ನೆನಪಲಿಟ್ಟು
ಕೊನೆಗಾಣುವನಕ ಪರಿ ಬೇಯ ಬೇಕಿದೆ

ಬಿಟ್ಟ ಹೆಜ್ಜೆ ಗುರುತಲ್ಲಿ ಒಮ್ಮೆ
ನನ್ನಿರುವೆಕೆಯನು ಸಾಬೀತು ಮಾಡಿದೆ
ಮತ್ತೆ ಮತ್ತೆ ಹುಟ್ಟುತ್ತ ಮರುವು
ನೀಯತ್ತಿನಲ್ಲಿ ನನ್ನೆಸರ ಅಳಿಸಿದೆ

ಬನ್ನಿ ಬೇಗ ನನ್ನನ್ನು ಹುಡುಕಿ
ನಾನಿದ್ದ ಜಾಗ ನನ್ನನ್ನೇ ನುಂಗಿದೆ
ಅಳಿಯುವಾಸೆ ನನಗಿಲ್ಲ ಕೇಳಿ
ಕ್ಷಣವಾದರಿಲ್ಲಿ ಮನಸಾರೆ ಬಾಳದೆ!!

-- ರತ್ನಸುತ 

Comments

Popular posts from this blog

ಜೋಡಿ ಪದ

ಗರುಡ ಪ್ರಯತ್ನ ೩

ಗರುಡ ಗೀತ ಸಾಹಿತ್ಯ ೧