ನಾ ಎಲ್ಲಿಯೂ ಸಲ್ಲದವನು

ಶಾಲೆಯಲ್ಲಿ ಮುಂದಿನ ಸಾಲಲ್ಲಿ ಕೂತು
ಮೇಷ್ಟ್ರ ಪಾಠಕ್ಕೆ ತಲೆಯಾಡಿಸಲಿಲ್ಲ
ಹಿಂದಿನ ಸಾಲಿನ ಪುಂಡರ ಜೊತೆ ಸೇರಿ
ಹಾಳಾಗಿ ತೂಕಡಿಸಲಿಲ್ಲ

ಮೈದಾನದ ದಂಡು ಪ್ರಯಾಣದಲ್ಲಿ
ಮುಂದಾಳತ್ವವಂತೂ ಸಿಗಲಿಲ್ಲ
ಹಿಂದುಳಿದು ತಪ್ಪು ಹೆಜ್ಜೆಯಿಟ್ಟು ತಪ್ಪಿಸಿಕೊಳ್ಳಲಿಲ್ಲ
ನಡುವೆ ಸಿಕ್ಕಿಕೊಂಡು, ಶೂ ಸಿಲುಕಿಕೊಂಡು
ಪಿ.ಟಿ ಕೊಟ್ಟ ಏಟುಗಳು ಲೆಕ್ಕವಿಲ್ಲ

ಪಾಸಾಗುವ ಸಲುವಾಗಿ ಓದಿಯೂ
ಪಾಸಾದಾಗ ಖುಷಿ ಪಡದೆ
ಎಸ್.ಎಸ್.ಎಲ್.ಸಿ ಮುಗಿಸಿ
ಅತ್ತ ಕಾಮಾಗಿದ್ದ ಕಾಮರ್ಸನು ಕೈಬಿಟ್ಟು
ಇತ್ತ ಆರ್ಟಿಸ್ಟಿಕ್ ಆರ್ಟ್ಸಿಗೆ ಗುಡ್ ಬೈ ಹೇಳಿ
ಯಾರೋ ದೂಡಿ ಸೈನ್ಸು ಆರಿಸಿಕೊಂಡು
ಒದ್ದಾಟದಲ್ಲೇ ತಕ್ಕ ಮಟ್ಟಿಗೆ ಅಂಕ ಗಿಟ್ಟಿತು!!

ವಿಷನ್ ಇಟ್ಟುಕೊಂಡವರ ಮಧ್ಯೆ
ಕೊಲೈಡಾಗಲೆಂದೇ ಇಂಜಿನಿಯರಿಂಗ್ ಆಯ್ತೆ;
ಅಲ್ಲೂ ನಿಲ್ಲದ ಕನ್ಫ಼್ಯೂಶನ್ನು
ನನಗೂ, ನನ್ನತನಗಳಿಗೂ, ನನ್ನಿರುವಿಕೆಗೂ
ಅಸಂಬದ್ಧ ಸಾಮ್ಯತೆಗಳು;

ನೀರಿಗೆ ಬಿದ್ದು ಈಜು ಕಲಿತೆ
ದಡದಲ್ಲಿ ತೆವಳುತ್ತ ಓಡುವುದ ಕಲಿತೆ
ಆದರೆ ಗುರಿ ಮಾತ್ರ ಶೂನ್ಯದೆಡೆಗೆ!!

ನಡುವೆ ಅಲ್ಲಲ್ಲಿ ಒತ್ತಾಯಕೆ ಅರಳಿದ
ಯೋಗ್ಯರಹಿತ ಕವಿತೆಯೆನಿಸಿಕೊಂಡ
ಪುಡಿಯಕ್ಷರಗಳಿಗೆ ಹಿಗ್ಗಿ
ಸಾಲದಕ್ಕೆ ಹೇಳಿಕೊಳ್ಳಲಿಕ್ಕೊಂದು ಕೆಲಸಕ್ಕೆ ಸೇರಿ
ಮನಸೊಪ್ಪದೆಯೂ ಕುಟ್ಟುತ್ತ ಕೂತು
ಮಣೆ ಕುಟುಕನಾಗಿದ್ದಕ್ಕೆ
ಕವಿತೆಗಳೂ ಅಪಹಾಸ್ಯ ಮಾಡತೊಡಗಿದವು!!

ಯಾರದ್ದೋ ನೆರಳಲ್ಲಿ ನುಸುಳಿ
ಯಾರದ್ದೋ ಅನುಕರಣೆಯಲಿ ಸೋತು
ಯಾರದ್ದೋ ಪ್ರಭಾವದಲ್ಲಿ ಕ್ಲಿಷ್ಟವಾಗಿ
ಬಯಲಾಗಿ ತಲೆ ತಗ್ಗಿಸಿದಾಗ
ಕಂಡದ್ದು ಉಬ್ಬಿದ ಹೊಟ್ಟೆ ಮಾತ್ರ;
ಸದ್ಯ ತಲೆ ಮೇಲೆ ಕೊಂಬಿಲ್ಲ
ಇದ್ದಿದ್ದರೆ ಆಕಾಶವೂ ಕಿರಿದೆನಿಸುತ್ತಿತ್ತು

                                  --ರತ್ನಸುತ

Comments

Popular posts from this blog

ಜೋಡಿ ಪದ

"ಪಾಸ್ವರ್ಡ್" - RESET ಆಗ್ತಿರ್ಲಿ ಆಗಾಗ!!!

ಗರುಡ ಪ್ರಯತ್ನ ೩