ಆಟ ಕೊನೆಗೊಳ್ಳುವ ಮುನ್ನ

ಪ್ರವಾದಿಗಳು ಹುಟ್ಟುತ್ತಲೇ
ತಲೆಯ ಹಿಂದೆ ಚಂದ್ರನನ್ನೋ
ಸೂರ್ಯನನ್ನೋ ಹೊತ್ತು ತಂದಿರುತ್ತಾರೆ;...


ಹೋದಲ್ಲೆಲ್ಲ ಬೆಳಕ ಚೆಲ್ಲಿ
ಜನರ ಕತ್ತಲ ದೂರವಾಗಿಸೋಕೆ

ಈ ಊರಿಗೊಬ್ಬ ಹುಟ್ಟಿಕೊಂಡಂತೆ
ಆ ಊರಿನಲ್ಲೂ ಒಬ್ಬ ಹುಟ್ಟಿಕೊಂಡ;


ಜನರು ಗೊಂದಲಕ್ಕೀಡಾದರು
ಯಾರು ಸತ್ಯ, ಯಾರು ಸುಳ್ಳು?
ನಂತರ ಅವರವರ ನಂಬಿಕೆಗನುಸಾರವಾಗಿ
ಅನುಯಾಯಿಗಳಾಗಿ ಮುಂದುವರಿದರು

ಮಕ್ಕಳಾಟದಂತೆ ಒಂದು ದಿನ
ಆ ಊರು, ಈ ಊರಿನವರ ನಡುವೆ
ಮಾತಿಗೆ ಮಾತು ಬೆರೆತು
ಪ್ರವಾದಿಗಳನ್ನ ಪೈಪೋಟಿಗೆ ನಿಲ್ಲಿಸುತ್ತಾರೆ
ಯಾರು ಉತ್ಕೃಷ್ಟರೆಂದು ಸಾಬೀತು ಪಡಿಸಲು


ಮಕ್ಕಳ ಹಠವ ಕಂಡು ದಿಗ್ಭ್ರಾಂತರಾಗಿ
ಕೊನೆಗೆ ಪೂರ್ವಯೋಜನೆಯಂತೆ
ಪ್ರತಿ ಆಟದಲ್ಲೂ ಇಬ್ಬರೂ ಸೋಲುತ್ತಾ ಹೋಗುತ್ತಾರೆ;
ಮಕ್ಕಳ ಕಣ್ಣಲ್ಲಿ ನೀರು
ಹಿಂದೆಯೇ ರಕ್ತ ಸುರಿಯುತ್ತದೆ


ಕೆನ್ನೆ ಸವರಿ
ಕಲೆ ಅಂಟಿದ ಹಸ್ತವ ನೋಡಿಕೊಂಡು
ಕುಂಠಿತರಾಗಿ ತಂತಮ್ಮ ಪ್ರವಾದಿಗಳ
ತಂತಮ್ಮೂರಿಗೆ ಎಳೆದೋಯ್ದು
ಕಂಬಕ್ಕೆ ಕಟ್ಟಿ ಸಾಮೂಹಿಕ ಕಲ್ಲು ತೂರುತ್ತಾರೆ;
ಪ್ರತಿ ಕಲ್ಲು ಹೂವಾಗಿ
ಪರಿತಪಿಸಿ ಒಡಲ ಸೋಕುತ್ತದೆ


ಖುಷಿಯಿಂದ ಕುಪ್ಪಳಿಸಿದವರು
ಇವರೇ ನಿಜವಾದ ಪ್ರವಾದಿ ಎಂದು
ಘೋಷಣೆ ಕೂಗುತ್ತಲೇ,
ಮಾರುದ್ದ ದೂರದಿಂದ ಆ ಊರಿನವರು
ಅದೇ ತಮ್ಮ ಜೈಕಾರಗಳಿಂದ ಮುತ್ತಿಕೊಳ್ಳುತ್ತಾರೆ;

ಮುಂದಾಗಲಿರುವುದೇ ಇಂದಾಗುತ್ತಿರುವುದು

ದೇವರು ಪ್ರವಾದಿಗಳನ್ನ
ವಾಪಸ್ಸು ಕರೆಸಿಕೊಂಡು ಬೋಧಿಸುತ್ತಾನೆ
"ಅವರಿಗೆ ಬೇಕಿರುವುದು ನೀವಲ್ಲ
ನಿಮ್ಮದೊಂದು ನೆಪವಷ್ಟೇ ಕಚ್ಚಾಡಲು,
ಇನ್ನು ನಿಮಗಲ್ಲಿ ಜಾಗವಿಲ್ಲ
ಎಲ್ಲವೂ ಅವರಿಷ್ಟದಂತೆ ನಡೆಯುತ್ತದೆ.


ಆದರೆ ನೆನಪಿಡಿ
ಅವರೆಲ್ಲ ನಿಮ್ಮ ರಕ್ತ, ನಿಮ್ಮ ಬೆವರು, ನಿಮ್ಮ ಪ್ರೀತಿ
ಆಟ ನಡೆಯುವ ತನಕ ನಡೆಯಲಿ
ಮುಗಿಸಬೇಕನಿಸಿದರೆ
ಆ ಕ್ಷಣ ಸೋಲು ಗೆಲುವನ್ನ ಪರಾಮರ್ಶಿಸಲು
ಯಾರೂ ಉಳಿಯಕೂಡದು"

ದೇವರೂ ಆಟದಿಂದ ಜಾರಿಕೊಳ್ಳುತ್ತಾನೆ!!

--ರತ್ನಸುತ

Comments

Popular posts from this blog

ಜೋಡಿ ಪದ

"ಪಾಸ್ವರ್ಡ್" - RESET ಆಗ್ತಿರ್ಲಿ ಆಗಾಗ!!!

ಗರುಡ ಪ್ರಯತ್ನ ೩