Tuesday 9 December 2014

ಒಂದು ಹಳೆ ನೆನಪು

ಚಂಡು ಉರುಳುರುಳಿ ಚರಂಡಿಗೆ ಬಿತ್ತು,
ಎಡಗೈ ಹಾಕಿ ಹೊರ ತೆಗೆಯದಿದ್ದರೆ
ಆಟ ನಿಂತು ಎಲ್ಲರೂ ಸೋತಂತೆ;
ಗೆಲುವೆಂಬುದಿಲ್ಲದಿದ್ದರೆ ಆಟ ಬೋರು!!
ಆ ದಿಕ್ಕಿಗೆ
ಕ್ಷೇತ್ರ ರಕ್ಷಕ ನಾನೇ ಆದ್ದರಿಂದ
ಹೊಣೆ ನನ್ನ ಮೇಲಿತ್ತು;
ಹೇಳಿ ಕೇಳಿ ಇಪ್ಪತ್ತು ರೂಗಳ ಪಂದ್ಯ,
ಗೆಲ್ಲುವ ಸಾಧ್ಯತೆ ನಮಗೇ ಹೆಚ್ಚಿತ್ತು
ನನ್ನದೂ ಎರಡು ರೂ ಪಾಲಿತ್ತು;
ವಟಾರದ ಎಲ್ಲ ಪಾಯ್ಕಾನೆಯ ಪೈಪ್ಗಳು
ಆ ಗಟಾರಿಗೆ ಜೋಡಣೆಯಾಗಿದ್ದವು;
ನೂರು ಮೀಟರ್ ದೂರಕ್ಕೇ ನಾರುವ
ಅದರ ಬಳಿ ಹೋಗುವುದೇ ಸಾಹಸ;
ಅಂಥದರಲ್ಲಿ ಚಂಡು ಎತ್ತುವುದೇ?
ಅಬ್ಬಬ್ಬಾ ಕಷ್ಟ ಸಾಧ್ಯ!!
ಮೈದಾನದಿಂದ ಬಿಟ್ಟಿ ಸಲಹೆ ಬೇರೆ
"ಆ ಮರದ ರೆಂಬೆ ಹಿಡ್ದು ಎತ್ತು"
"ಕಡ್ಡಿ ಹಾಕಿ ತಗಿ"
"ಯೋಚ್ನೆ ಮಾಡ್ಬೇಡ, ಏನಾಗಲ್ಲ"
"ಸಹಾಯಕ್ಕೆ ಬರ್ಲಾ?"
ದೂರದಿಂದ ಅಂದವರೇ ಹೊರತು
ಸಹಾಯ ಮಾಡುವ ಮನಸು
ಅಲ್ಲಾರಿಗೂ ಇರಲಿಲ್ಲ;
ನಾನಾಗಿದ್ದರೂ ಅವರಂತೆಯೇ ಮಾಡುತ್ತಿದ್ದೆ!!
ಧೈರ್ಯ ಮಾಡಿ
ಉಸಿರು ಬಿಗಿ ಹಿಡಿದು
ಕಣ್ಮುಚ್ಚಿ
ಒಂದೇ ಏಟಿಗೆ ಕೈ ಹಾಕಿ
ಚಂಡು ಎತ್ತಿದೆನೆಂಬುದೇ ನೆನಪು;
ಆ ನಂತರ ಹತ್ತತ್ತಿರ ಹತ್ತು ನಿಮಿಷದವರೆಗೆ
ನನ್ನ ಮೂಗಿಗೆ ತಟ್ಟಿದ ಗಬ್ಬು
ತನ್ನ ಪ್ರಾಭಲ್ಯ ಮೆರೆದು
ಪ್ರಜ್ಞಾಹೀನ ಸ್ಥಿತಿಗೆ ದೂಡಲಿಲ್ಲವೆಂಬುದೇ ಪುಣ್ಯ!!
ಆ ನಂತರ
ಮಣ್ಣು, ಸಗಣಿ, ಎಕ್ಕದ ಎಲೆಗೆ ತಿಕ್ಕಿ
ನೀರಿನಿಂದ ತೊಳೆದು
ವಾಸನೆ ಹೋಗಲಾಡಿಸಿ
ಆಟ ಮುಂದುವರಿಸಿ
ಪಂದ್ಯ ಗೆದ್ದು
ಇತ್ತ ಎರಡು ರೂಗಳ ಜೇಬಿಗಿರಿಸಿದ ಖುಷಿ
ಪಟ್ಟ ಕಷ್ಟಗಳನ್ನೆಲ್ಲ ಮರೆಸಿತು;
ಇಂದು ಏ.ಸಿ ಕಛೇರಿಗಳಲ್ಲಿ
ಸಾವಿರ-ಸಾವಿರ ದುಡಿದರೂ
ನೆಮ್ಮದಿ ತರಲಾರದೆಂಬ ಬೇಸರವೇ
ಈ ಹಳೆ ನೆನಪನ್ನ ತರಿಸಿ
ತಾನೂ ಧಾನ್ಯವಾಯಿತು!!
                               -- ರತ್ನಸುತ

1 comment:

  1. ಬಾಲ್ಯದ ಆಟ ಆ ಹುಡುಗಾಟ
    ಎಂದೂ ಮರೆತಿಲ್ಲ...
    ಎಂದು ಸುಮ್ಮನೆ ಬರೆಯುತ್ತಾರೆಯೇ ಸಿನಿಮಾ ಕವಿ?

    ReplyDelete

ದಣಿವಾರಿ ಕೊಳದಲಿ

ದಣಿವಾರಿ ಕೊಳದಲಿ  ಕೆಂದಾವರೆ ಅರಳಿದೆ  ಮುಗಿಲೇರಿ ಬರದಲಿ  ಹನಿಗೂಡಲು ಇಳಿದಿದೆ  ರವಿಕಾಂತಿ ಸವಿಯುತ  ಹರಳಂತೆ ಮಿನುಗುತಾ  ಬೆರಗಲ್ಲೇ ತಯಾರಿಯಾಗುತಿದೆ  ಮನದಂಗಳ ಮುಂಜಾನೆಯ...