ಬದುಕಿನ ಕಾಂಪ್ಲಿಕೇಷನ್ನು

ರಾತ್ರಿಯಾದರೆ ಸಾಕು
ಕಂಠ ಪೂರ್ತಿ ಕುಡಿದುಬರುತ್ತಾನೆಂದು
ಆಕೆ ಆಪಾದಿಸಿದರೆ,...

ಕುಡಿಯಲು ಈಕೆಯೇ ಕಾರಣ
ಎಂದು ಈತ ಆಪಾದಿಸುತ್ತಾನೆ;
ಗೆದ್ದದ್ದು ಮಾತ್ರ ಲಕ್ಷ-ಲಕ್ಷ ಸುರಿದು
ಬಾರ್ ಲೈಸನ್ಸ್ ಗಿಟ್ಟಿಸಿಕೊಂಡ ಮಾಲೀಕ


ಬಾರ್ ಮಾಲೀಕನೆಂದೂ ಆಪ್ತವಾಗಿ
ಕಷ್ಟ-ಸುಖ ವಿಚಾರಿಸಿದವನಲ್ಲ
ಆದರೂ ಊರಿಗೆಲ್ಲ ದೊಡ್ಡ ಮನುಷ್ಯ,
ಬೀದಿ ಜಗಳ ಬಿಡಿಸುವ ಗೋಜಿಗೆ ಹೋಗದೆ
ಗಲ್ಲಾ ಪೆಟ್ಟಿಗೆಯ ತುಂಬಿಸುತ್ತಲೇ
ಅರ್ಧ ತಲೆ ಕೂದಲ ಉದುರಿಸಿಕೊಂಡಿದ್ದ


ತಲೆಗೂದಲಿಗೆ ನಾನಾ ಬಗೆಯ ಶಾಂಪು
ತೈಲಗಳು ಮಾರುಕಟ್ಟೆಗೆ ಲಗ್ಗೆಯಿಟ್ಟಿವೆ
ಎಲ್ಲವೂ ಟಿ.ವಿ ಪರದೆಯ ಮೇಲೆ
ಶೈನಾಗಿ ಮನೆಯ ಕಪಾಟಿನಲ್ಲಿ ಡಲ್ ಹೊಡೆದು
ಗ್ರಾಹಕರ ಕೋಪಕ್ಕೆ ಗುರಿಯಾಗಿಯೂ
ಸೇಲ್ಸಲ್ಲಿ ಮಾತ್ರ ಗಣನೀಯ ಏರಿಕೆ ಕಾಣುವವು


ಟಿ.ವಿ ಚಾನಲ್ಗಳಲ್ಲಿ ತೋರಿಸಿದಂತೆ
ಗಂಡ ಅನುಮಾನಗೊಂಡು ಹೆಂಡತಿಯ
ಹೆಂಡತಿ ತನ್ನ ಮಾಜಿ ಪ್ರಿಯಕರನ ಕೂಡಿ
ಗಂಡನ ತಲೆ ಉರುಳಿಸಿದ ಪ್ರಸಂಗಗಳು
ಸಂಸಾರದ ನಂಬಿಕೆಯ ಗೋಡೆಯ ಸೀಳಿ
ಅನುಮಾನದ ವಕ್ರ ದೃಷ್ಟಿಯಲ್ಲೇ
ಎಲ್ಲವನ್ನೂ ಅವಲೋಕಿಸುವ ಸ್ಥಿತಿಗೆ
ಉತ್ತಮ ಸಮಾಜವನ್ನ ತಂದು ನಿಲ್ಲಿಸಿ,
ತಾವಿರುವುದೇ ಉತ್ತಮ ಸಮಾಜದ
ಜೀರ್ಣೋದ್ಧಾರಕ್ಕೆ ಎಂಬಂತೆ ಬೊಬ್ಬೆ ಹೊಡೆಯುತ್ತಿವೆ


ಇಲಿಗೆ ಬೆಕ್ಕು, ಬೆಕ್ಕಿಗೆ ನಾಯಿ
ನಾಯಿಗೆ ಕಾರ್ಪೊರೇಷನ್ ಲಾರಿ
ಹೀಗೆ ನಿಲ್ಲದ ಸರಳನು ಸುತ್ತಿಕೊಂಡು
ಏಕ ಚಿತ್ತನಾಗಿ ಬಾಳುವ ಪ್ರಯತ್ನದಲ್ಲಿ
ಮನುಷ್ಯ ಎಣ್ಣೆ ಏಟಿಗೆ ಬಲಿಯಾಗುತ್ತಾನೆ;

ಮೆಲ್ಲಗೆ ಓದಿ,
ಮುಂದೆ ಆಗುವ ರಂಪಾಟಕ್ಕೆ ನಾ ಹೊಣೆಗಾರನಲ್ಲ!!


-- ರತ್ನಸುತ

Comments

  1. ನಿಜ ಗೆಳೆಯ, ಮನುಷ್ಯ ಎಣ್ಣೆ ಏಟಿಗೆ ಬಲಿಯಾಗುತ್ತಾನೆ!

    ReplyDelete

Post a Comment

Popular posts from this blog

ಜೋಡಿ ಪದ

"ಪಾಸ್ವರ್ಡ್" - RESET ಆಗ್ತಿರ್ಲಿ ಆಗಾಗ!!!

ಗರುಡ ಪ್ರಯತ್ನ ೩