Posts

Showing posts from October, 2017

ಕಣ್ಣೂ, ಕನಸೂ

ಒಂದು ಕಣ್ಣ ಕಿತ್ತಿಟ್ಟು
ಮತ್ತೊಂದು ನೋಡುತಿದೆ
ಒಂದ ಬಿಟ್ಟು ಮತ್ತೊಂದು
ಕಂಡ ಕನಸ ಕೆದಕುತಿದೆ
ಮೋಸವಿಲ್ಲ ನೋವಿಗೆ...
ಪಸೆಯೊಂದು ಕಣ್ಣೀರಿಗೆ


ಅನುಮಾನದ ಕಣ್ಣು ಅದು
ಸ್ವಚ್ಛಗಣ್ಣ ಅನುಮಾನಿಸಿ
ರಕ್ತದ ಮಡುವಿನಲಿ ತನ್ನ ತಾನೇ
ಹೆಣವಾಗಿಸಿದೆ
ರೆಪ್ಪೆ ಬಡಿತಕರ್ಥವಿಲ್ಲ
ಪಸೆಯೊಂದು ನೆತ್ತರಿಗೆ


ಆ ಕೆನ್ನೆಯೂ, ಈ ಕೆನ್ನೆಯೂ
ಮೊದಲಿಂದಲೂ ಎಂದೂ ತಾವು
ಮುಖಾ-ಮುಖಿ ಆಗಿರದೆ
ತಮ್ಮ ತಮ್ಮ ಬಾಷ್ಪಗಳ
ಹೊಂದಿಸಿಕೊಳುತಿದ್ದವು
ವಿಮುಖದಲ್ಲೇ ನಿಟ್ಟುಸಿರು


ನೆತ್ತರು ಹರಿದ ಕೆನ್ನೆ
ಕಣ್ಣೀರು ಅಂಟಿದ್ದಕ್ಕೆ
ಕಣ್ಣೀರು ಹರಿದ ಕೆನ್ನೆ
ನೆತ್ತರು ಅಂಟಿದ್ದಕ್ಕೆ
ಅಲ್ಪದೂರದಲ್ಲೇ ಪಾಪ
ಸೂಚಿಸಿವೆ ಸಂತಾಪ


ಕನಸಿನ ವಿಚಾರದಲ್ಲಿ
ಸ್ಪಷ್ಟವಾಯ್ತು ಇದ್ದ ಕಣ್ಣಿಗೆ
ಬೇರೆ ಬೇರೆಯಲ್ಲ
ಕನಸೊಂದೇ ಕಣ್ಣಿಗೆ...
ಸತ್ತ ಕಣ್ಣು ಮರುಗಿತು
ಇದ್ದ ಕಣ್ಣು ಕರಗಿತು


ಆ ರಾತ್ರಿ ಬೀಳದ ಕನಸಿಗೆ
ನಿದ್ದೆಗೆ ಜಾರಿತು ಕಣ್ಣು
ಮತ್ತೆ ತೆರೆಯದಂತೆ
ಅತ್ತು, ಅತ್ತು ಹಣ್ಣಾಗಿ
ರೆಪ್ಪೆಯೊಳಗೆ ಮಣ್ಣಾಗಿ...


                    - ರತ್ನಸುತ

ಬಿಡಿಗವಿತೆ

ನೀಕಚ್ಚದಕೆನ್ನೆಮೇಲೊಂದುಮೊಡವೆ
ನೀಬಾರದಕನಸತುಂಬೆಲ್ಲಗೊಡವೆ
ಕಣ್ಣಲ್ಲೇಕಣಿಹೇಳುನಾಕುಣಿದುಬರುವೆ
ಅಲ್ಲೆಲ್ಲೋಹುಡುಕದಿರುನಿನ್ನಲ್ಲೇಇರುವೆ!!

                                         - ರತ್ನಸುತ 


ಘೋರ ಕನಸು

ಮೊನ್ನೆ ಕನಸಲ್ಲಿ ತುಂಬ ಅತ್ತಿದ್ದೆ
ಕಂಬನಿ ಕಣ್ಣ ದಾಟಿ ಹೊರ ಬರಲಿಲ್ಲ
ಬಿಕ್ಕಳಿಸಿದ್ದು ಎದೆಗೊರಗಿ ಮಲಗಿದ್ದ
ನನ್ನ ಮನದನ್ನೆಗೂ ತಿಳಿದಿರಲಿಲ್ಲ...


ಗೆಳೆಯ ಕೈ ಜಾರಿ ಹೊರಟಿದ್ದಾನೆ
ಅವನಿಗೆ ಕೊಡಬೇಕಾದ ಬಾಕಿಯ
ಲೆಕ್ಕ ಹಾಕುತ್ತಲೇ ಅಳುತ್ತಿದ್ದೆ
ಒಮ್ಮೆಯಾದರೂ ತಡೆಯುತ್ತಾನೆಂದುಕೊಂಡು


ಚಟ್ಟ ಕಟ್ಟುವ ಬಿದಿರು ಸೀಳಿಗೆ
ಅವನ ಚರ್ಮ ಸಿಕ್ಕಿಕೊಂಡರೆ?
ಆ ಮೌನ ಯಾತನೆಯ ಶಂಖ-ಜಾಗಟೆ ಸದ್ದು
ನುಂಗಿ ಬಿಡಬಹುದೆಂಬ ಆತಂಕ


ಅವನಿಗೆ ಹೂವೆಂದರೆ ಪ್ರಾಣ
ಹಂಗಾಗಿ ಹೆಚ್ಚೆಚ್ಚು ಹೂವ ಎರಚಿ
ಹೋದ ಪ್ರಾಣ ಮತ್ತೆ ಬರಬಹುದು
ಅವನ ಬಣ್ಣನೆಗೆ ಮನಸೋಲಲು


ಗದ್ದಲದಲ್ಲಿ ಅವನಿರಲಾರ
ಸದಾ ಏಕಾಂತದೊಂದಿಗೇ ಪರಿಚಿತ
ಗೋರಿ ಕಟ್ಟುವ ಮುನ್ನ ಎಚ್ಚರ
ಸುತ್ತ ಒಂದು ಇರುವೆ ಗೂಡೂ ಸಲ್ಲ


ಗೆಳೆಯ ನಗುತ್ತಿದ್ದವ ಸತ್ತಿದ್ದಾನೆ
ಅಳಿದ ಹಣೆಬರಹಕ್ಕೆ ವಿಭೂತಿ ರಾಚಿ
ಕಂಪಿಸಿದ ಬೆರಳಚ್ಚು ಉಳಿಸಿದೆ
ಹಣೆ ಬೆಚ್ಚಗಾಗಿಸುವ ಆಸೆಯಿಂದ


ಎಚ್ಚರಗೊಳ್ಳದಷ್ಟೂ ವೇಳೆ
ಗೆಳೆಯ ಸತ್ತಿದ್ದ
ಈಗ ಉಸಿರಾಡುತ್ತಿದ್ದಾನೆ ನನ್ನ ಎಚ್ಚರಗೊಳಿಸಿ
ಕೆನ್ನೆ ಸವರಿದರೆ ಕಂಬನಿಯ ಕಾಣೆ...


ಛೇ..ಈ ಕನಸುಗಳು ನಿಜಕ್ಕೂ ಘೋರ
ನೂರು ಕಾಲ ಖುಷಿಯಿಂದ ಬಾಳು ಗೆಳೆಯ!!


                                         - ರತ್ನಸುತ

ಎಡ-ಬಲ

ಎಡಗೈ ಹೊಲಸೆಂದ ಬಲಗೈ ಸ್ವಾರ್ಥ ಬಲಗೈ ಎಂದ ಎಡಗೈ ಕೈ ತಟ್ಟಿಕೊಂಡದ್ದ ಮರೆತಿತ್ತು ಬೊಗಸೆ ಆಕಾರ ಮುರಿದಿತ್ತು ಅಪ್ಪುಗೆಯ ಬಿಗಿ ಶಿಥಿಲಗೊಂಡಿತ್ತು
ಎಡಗಣ್ಣ ಬಲಗೈ, ಬಲಗಣ್ಣ ಎಡಗೈ ತಾಕಿದ್ದು ಎಂದೋ ಜ್ಞಾಪಿಸಿಕೊಳ್ಳಿ ತಾಕಿಲ್ಲವೆಂದಮಾತ್ರಕ್ಕೆ ತಪ್ಪೇ? ಈಗಲೇ ತಾಗಿದರೆ ಮುಗಿಯಿತು ನಿಷ್ಠುರ ಯಾರಿಗೆ ಒಳಿತು?
ತೋರ್ಬೆರಳುಗಳ ತಂದು ಸನಿಹ ವಿಮುಖಗೊಳಿಸುವುದೆಂಥ ಮರುಳು ಮನಸಲ್ಲಿ ಮನೆಯನ್ನು ಕಟ್ಟಿ ಮನೆ ಬಾಗಿಲಲಿ ಬಿಡಲು ನೆರಳು, ಅಳುವಾಗ ವ್ಯರ್ಥ ಗೋಳು
ದೂರುಳಿದ ಮಾತ್ರಕ್ಕೆ ಬೇಡೆಂದುಕೊಂಡು ಹತ್ತಿರತ್ತಿರದಲ್ಲಿ ಛಿದ್ರಗೊಂಡು ಉಳಿದ ಚೂರುಗಳಲ್ಲಿ ಕಂಡುಕೊಳ್ಳಲು ನಿಜವ ಏನು ಹೇಳಬೇಕು, ಯಾರ ದೂರಬೇಕು
ಉಗುರ ಕಚ್ಚಿದ ಹಲ್ಲು ಲೆಕ್ಕಿಸಿತೇ ಬೆರಳನ್ನು ಬಲಗೈಯ್ಯ ಹುಣ್ಣಿಗೆ ಎಡಗೈ ಕಣ್ಣು ಕೆಂಡ ಬಿದ್ದ ಹಸ್ತ ಹಂಚಿಕೊಂಡಿತು ನೋವ ಸಿಹಿಗಷ್ಟೇ ಬಲಹಸ್ತ ಸ್ವಹಿತ?
ಹೊಲಸು ಎಡಹಸ್ತವ ತಿಕ್ಕಲು ಬೇಕು ಬಲ ಬೆನ್ನ ಮುಖಕೂ ತಾವೇ ಸಪ್ಪಳ ವಿಭೂತಿಗೊಲಿದು ಮೈಥುನವ ಜರಿದರೆ ಹೇಗೆ? ಕೇಸರ ಪೂಜೆಗೂ ಇರಲಿ ಬೆಂಬಲ!!
                                       - ರತ್ನಸುತ