ಮೋಸಗಾರನ ಮೋಸದ ಕವನ!!

ನಿದ್ದೆಯಿಂದ ಎದ್ದ ನಾನು 
ಬಿಸಿ ಲೋಟ ಕಾಫಿ ಕಂಡು 
ಬಾಯಿ ತೊಳೆಯದೇ ಕುಡಿದೆ 
ಅಲ್ಲಿಗೆ ಹಲ್ಲಿಗೆ ಮೋಸ 

ಜಳಕದ ಇರಾದೆ ಇರದೆ 
ಬೊಗಸೆ ನೀರ ಮುಖಕೆ ಚೆಲ್ಲಿ 
ಮೆತ್ತಿಕೊಂಡೆ ಕಾಂತಿಲೆಪ 
ಅಲ್ಲಿಗೆ ಮೈಯ್ಯಿಗೆ ಮೋಸ 

ಧೂಳು ಹಿಡಿದು ನಿಂತು
ಸ್ವಚ್ಚಗೊಳ್ಳುವಿಕೆಗೆ ಕಾಯುತಿತ್ತು 
ಸೀಟು ತಟ್ಟಿಕೊಂಡು ನಡೆದೆ 
ಎಸಗಿ ಬೈಕಿಗೆ ಮೋಸ 

ಕೆಂಪು ನಿಷಾನೆ ಸ್ಪಷ್ಟ ಕಂಡೂ 
ನುಗ್ಗಿದೆ ಅದ ಲೆಕ್ಕಿಸದೆ 
ಸಹ ಚಾಲಕರನ್ನು ಸೇರಿ 
ಪೇದೆಗೆಸಗಿ ಮೋಸ ಆಫೀಸನು ತಲುಪಿರಲು 
ಮನಸೊಪ್ಪದೆ ಒಪ್ಪಿಕೊಂಡೆ 
ಮ್ಯಾನೇಜರ್ ಕೊಟ್ಟ ಕೆಲಸ 
ಸ್ವಾಭಿಮಾನಕೆ ಮೋಸ 

ಕೆಲಸ ಬಿಟ್ಟು ಹಗಲುಗನಸು 
ಕಾಣುತಲೇ ದಿನ ಕಳೆದೆ 
ಉಳಿಸಿಕೊಳ್ಳಲಿಲ್ಲ ನಂಬಿಕೆ 
ನಂಬಿದವರಿಗೆ ಮೋಸ 

ಹೊತ್ತು ಮೀರಿ ಮನೆಯ ಸೇರಿ 
ಚೂರು ಪಾರು ಊಟ ಮಾಡಿ 
ತಡ ರಾತ್ರಿಯವರಿಗೆ ಎದ್ದೆ 
ಹೊಟ್ಟೆ, ಕಣ್ಣು, ನಿದ್ದೆಗೆ ಮೋಸ 

ಮೋಸದ ಅರಿವಾಗಿರಲು 
ಪದಗಳ ಜ್ಞಾಪಕವಾಗಿ 
ಬರೆದುಕೊಂಡೆ ಒಂದು ಕವನ 
ಅಲ್ಲಿ ಮೋಸವೇ ಪ್ರಾಸ !!!

                  --ರತ್ನಸುತ 

Comments

  1. ಮೋಸವೇ ಜಗದ ನಿಯಮ ಕಣಪ್ಪ!

    ReplyDelete

Post a Comment

Popular posts from this blog

ಜೋಡಿ ಪದ

"ಪಾಸ್ವರ್ಡ್" - RESET ಆಗ್ತಿರ್ಲಿ ಆಗಾಗ!!!

ಗರುಡ ಪ್ರಯತ್ನ ೩