Wednesday 28 August 2013

ಮಾನವ ಯಂತ್ರ!!!























ಸೂರ್ಯ ಹುಟ್ಟೋಕೂ ಮೊದ್ಲೇ ಎದ್ದು 
ಹೊಸ್ಲು ಸಾರ್ಸಿ, ಓಲೆ ಉರ್ಸಿ 
ನೀರ್ ಕಾಯ್ಸಿ, ಪೂಜೆ ಮುಗ್ಸಿ 
ಗಂಟೆ ಶಬ್ಧ ಕಿವಿಗ್ಬಿದ್ರೆ. 
ಆಗ ಚೂರು ಕದ್ಲೋರ್ ನಾವು
ದೇವ್ರ ಮುಖ ನೋಡೋಕ್ ಮುಂಚೆ 
ದರ್ಶ್ನ ಕೊಟ್ಟು ನಗೋಳ್ ನೀನು 

ತಿಂಡಿ ಮಾಡಿ, ಡಬ್ಬಿ ಕಟ್ಟಿ 
ತಟ್ಟೆಗಿಟ್ಟು ಮುಂದಿಟ್ರೂವೆ 
ತಿನ್ನೋಕ್ ಭಾರ ಅನ್ಸೋ ಹೊತ್ಗೆ 
ತುತ್ತು ಮಾಡಿ ಬಾಯ್ಗಿಟ್ಟೆ 
ಅವ್ಸ್ರದಲ್ಲಿ ಡಬ್ಬಿ ಮರ್ತು 
ಹಂಗೇ ಮನೆ ಬಿಟ್ವಿ ಅಂದ್ರೆ 
ಬಸ್ ಸ್ಟಾಂಡ್ ವರ್ಗೂ ಓಡಿ ಬಂದು 
ಟಾಟ ಹೇಳಿ, ಬ್ಯಾಗಲ್ಲಿಟ್ಟೆ 

ಆಫೀಸಿಂದ ಫೋನ್ ಮಾಡಿ 
"ಏನ್ ಮಾಡ್ತಿದ್ದೀಯ?" ಅಂದ್ರೆ 
ರಾಗಿ ಮಷೀನ್ಗ್ ಹೋಗ್ಬಂದೆ 
ಸೊಪ್ಪು, ತರ್ಕಾರಿ ತಂದೆ 
ಬಚ್ಚಲ್ ತೊಳ್ದು, ನೀರ್ ಸೇದಿ 
ಗಿಡಕ್ಕೆಲ್ಲಾ ನೀರ್ ಸುರ್ದೆ 
ಅವ್ರೇಕಾಯಿ ಸಿಪ್ಪೆ ಸುಲ್ದು 
ಇದ್ಕಿ ಸಾರು ಮಾಡ್ದೆ ಅಂದೆ 

ಸಂಜೆ ಮನೆಗ್ ಬರೋ ಹೊತ್ಗೆ 
ಒಗ್ದಿದ್ ಬಟ್ಟೆ ಮಾಡ್ಚಿಡ್ತಿದ್ದೆ 
ಬಟ್ಟೆ ಒಗ್ದಿದ್ ವಿಷ್ಯ ಮುಂಚೆ
ನನ್ನಿಂದ ಮುಚ್ಚಿಟ್ಟಿದ್ದೆ 
ನೆಂಟ್ರು-ಇಷ್ಟ್ರು, ಆಳು-ಕಾಳು 
ಯಾರ್ಗೂ ಮೋಸ ಆಗ್ದಿದ್ದಂಗೆ 
ಹೊತ್ತೊತ್ತಿಗ್ ಅಡಿಗೆ ಮಾಡ್ಹಾಕಿ 
ಕಾಪಿ ತಿಂಡಿ ಮಾಡ್ಕೊಟ್ಟಿದ್ದೆ 

ಅಪ್ಪ ತೋಟಕ್ಕೆ ಹೋಗಿ ಬಂದ್ರೆ 
ಮೈಕೈಗ್ ನೀರು, ಟವಲ್ಲು ಕೊಟ್ಟು 
ಊಟಕ್ ಎಲ್ರೂ ಕುಂತಾಗ 
ಮಾಡಿದ್ ಅಡ್ಗೆ ಸಾಲ್ದೆ ಬಂದು  
ತಂಗ್ಲು ನೀನ್ ತಿಂದೆ 
ಮಲ್ಗೋ ಮುಂಚೆ ಅರ್ಧ ಗಂಟೆ 
ಯಾವ್ದೋ ಹಾಕಿದ್ ಚಾನಲ್ ನೋಡ್ತಾ 
ಬಿಡಿ ಹೂವ ಕಟ್ಕೊಂಡು, ತೂಕಡ್ಸಿ ಬಿದ್ದೆ 

ಯಾವತ್ತೂ ಖಾಯ್ಲೆ ಬಿದ್ದೋಳಲ್ಲ 
ಅಪರೂಪಕ್ಕೆನಾರ ಉಷಾರ್ ತಪ್ಪಿದ್ರೆ 
ಡಾಕ್ಟರ್ ಹತ್ರ ಹಿಂಗಂತೀಯ 
"ಯಾಕೋ ಈ ನಡ್ವೆ ಸುಸ್ತು 
ಕೆಲ್ಸ ಮಾಡ್ತಾ ಆಯಾಸ 
ಏನಾರ ಮಾತ್ರೆ ಕೊಡಿ ಸಾ 
ಸುಸ್ತು-ಗಿಸ್ತು ಆಗ್ದಿದ್ದಂಗೆ"
"ಅಮ್ಮ" ನೀನು ಯಾವಾಗ್ಲೂ ಹಿಂಗೆ ...... 

                                   --ರತ್ನಸುತ 

No comments:

Post a Comment

ದಣಿವಾರಿ ಕೊಳದಲಿ

ದಣಿವಾರಿ ಕೊಳದಲಿ  ಕೆಂದಾವರೆ ಅರಳಿದೆ  ಮುಗಿಲೇರಿ ಬರದಲಿ  ಹನಿಗೂಡಲು ಇಳಿದಿದೆ  ರವಿಕಾಂತಿ ಸವಿಯುತ  ಹರಳಂತೆ ಮಿನುಗುತಾ  ಬೆರಗಲ್ಲೇ ತಯಾರಿಯಾಗುತಿದೆ  ಮನದಂಗಳ ಮುಂಜಾನೆಯ...