ಹೀಗೊಂದೆರಡು ಸಾಲುಗಳು !!!

ಹೀಗೊಂದು ಜಾಡು 
ದಿಕ್ಕು ದೆಸೆ ಇಲ್ಲದೆ
ಏದುಸಿರಿಟ್ಟು ಓಡಿಸಿ 
ಯಾವುದೋ ಹಳ್ಳಕ್ಕೆ ಬೀಳಿಸಿ 
ಮೊಣ ಕಾಲು-ಕೈಯ್ಯಿ
ತರಚಿಕೊಂಡು, ಕೀವು ಕಟ್ಟಿ 
ನೆತ್ತಿಯ ಸುಟ್ಟ ಜ್ವರ
ಅಡ್ಡಗಾಲಿನ ನೋವು

ಹೀಗೊಂದು ಇರುಳು
ತಮ್ಮ ನೆರಳಿಗೆ ತಾವೇ 
ಬೆಚ್ಚಿ ಬೀಳುವ ಹಾಗೆ
ಅಸಹಾಯಕರ ಮಾಡಿ
ಮೊಂಡು ಈಟಿಯ ಕೊಟ್ಟು
ಕಾಳಗಕೆ ದೂಡಿ
ನಿದ್ದೆ ಬರಿಸದೆ
ಒದ್ದಾಟಕೆ ಮಣಿಸಿತು

ಹೀಗೊಂದು ಮಾತು
ಆಯ ತಪ್ಪಿ ಹೊರಬಂದು
ಕಾಯ್ದುಕೊಂಡ ಗತ್ತಿಗೆ
ಕುತ್ತನು ತಂದು
ಜೋಡಿಕೆಗೆ ಸಿಗದೇ
ತನ್ನಿಷ್ಟಕೆ ಹರಿದಾಡಿ
ಹೆಸರಿಗೆ ಮಸಿ ಬಳಿದು
ಕೆಸರೆರಚಿತು ಮುಖಕೆ

ಹೀಗೊಂದು ಮೌನ
ಮೃತ್ಯು ಅವತಾರದಲಿ
ಕುತ್ತಿಗೆಯ ಹಿಚುಕಿ
ಹೊರಗೆ ತೋರ್ಪಡಿಸದೇ
ಒಳಗೊಳಗೇ ಚಿವುಟಿ
ಆವರಣವ ತನ್ನ ತೆಕ್ಕೆಯಲಿ 
ಸೆರೆಹಾಕಿ 
ಅಸ್ತಿತ್ವವನು ಮೆರೆಯಿತು 

ಹೀಗೊಂದು ಸಾಲು
ಇಕ್ಕಟ್ಟಿನಲ್ಲೂ ಸರಾಗವಾಗಿ
ಅಡೆ ತಡೆಗಳಿಂದ
ಅವಿರೋಧವಾಗಿ ಹರಿದು
ತಟ್ಟಿದೆದೆಯ ತೆರೆದೊಡನೆ
ತೆಪ್ಪಗೆ ತೇಪೆ ಹಾಕಿಕೊಂಡು
ತನ್ನದೇ ತಾಳ ಹಿಡಿದು
ಕವಿತೆ ಸಾಲಾಯಿತು .....

                 --ರತ್ನಸುತ 

Comments

Popular posts from this blog

ಜೋಡಿ ಪದ

"ಪಾಸ್ವರ್ಡ್" - RESET ಆಗ್ತಿರ್ಲಿ ಆಗಾಗ!!!

ಗರುಡ ಪ್ರಯತ್ನ ೩