Friday 16 August 2013

ಬೀದಿ ದೀಪದ ಲೋಪ ವೈಖರಿ!!

ಬೀದಿ ದೀಪದ ಕೆಳಗೆ 
ರೆಕ್ಕೆ ಮುರಿದ ಕೀಟ 
ಇದ್ದ ಒಂದು ರೆಕ್ಕೆ ಬಡಿದು 
ಕಂಬದಡಿಗೆ ಅವಿತು 
ಕಾದಿತ್ತು ಅನವರತ 
ನೆರವನ್ನು ಬಯಸಿ 
ದೀಪ ಉರಿದರೆ ತಮ್ಮವರು  
ಬರುವರೆಂದನಿಸಿ 

ಹೂವ ಬುತ್ತಿ ಹೊತ್ತು 
ಸಂಜೆ ಹೊತ್ತಿಗೆ ಇಳಿದಳು ಅಜ್ಜಿ 
ಬೀದಿ ಕೊನೆಯ ಶಿವನ- 
-ಗುಡಿಯ ಪೂಜೆಯ ವೇಳೆಗೆ  
ಅಜ್ಜಿ ಪಂಜು ಮರೆತಿದ್ದಳು 
ದೀಪ ಉರಿದ ವಿನಹ 
ದೇವರಿಗಿಲ್ಲ ಹೂವು
ವ್ಯಾಪಾರ ಕಹಿ ಬೇವು 

ಹರಿದ ಚೀಲದ ತುಂಬ
ಕನಸಿನ ಪುಸ್ತಕಗಳ ತುಂಬಿ 
ಕಪ್ಪು ಮಸಿ ಕಂಗಳಲಿ 
ನಾಳೆ ಬೆಳಕನು ಬಯಸಿ 
ಪುಟ್ಟ ಹೃದಯಗಳು ಜ್ಞಾನ -
- ದಾಸೋಹಿಯಾಗಿರಲು 
ಬೆಳಕು ಬಾರದೆ ಅಂದು 
ಆಸೆಗಳಿಗೆ ನಿರಾಸೆ 

ಗಂಡನ ಹಂಗು ಕಳೆದ 
ನತದೃಷ್ಟೆ ಆಕೆ 
ನೆರಳೊಂದೇ ಆಸರೆ, ಆದರೆ 
ಈ ಧರೆಗೆ ಗ್ರಹಣ ಹಿಡಿಯಬೇಕೆ ?!!
ಕಗ್ಗತ್ತಲಲ್ಲಿ ನೆರಳು 
ಹೊರ ಬಾರದಾಗಿತ್ತು 
ಕಾಮಾಂಧರ ಹಸಿವ ಸದ್ದಿಗೆ ಬೆಚ್ಚಿ 
ಪ್ರಾಣವೇ ಮುಷ್ಟಿಯಲಿತ್ತು !!

ಹಾದವರೆಲ್ಲರೂ ಅಪರಿಚಿತರೇ,
ಅಲ್ಲಿ ಒಬ್ಬರನ್ನೊಬ್ಬರು 

ಗುರುತು ಹಿಡಿಯದೇ ಸೋತು 
ಮೌನ ಆವರಿಸಿತ್ತು 
ಒಂದು ಇರುಳಿನ ಈ 
ಘೋರ ಚಿತ್ರಣ ಕಂಡು 
ತಾನೆಷ್ಟು ಉಪಕಾರಿ ಅನಿಸಿ 
ದೀಪವು ಒಳಗೊಳಗೇ ಉಬ್ಬಿತ್ತು !!

                          --ರತ್ನಸುತ 

1 comment:

  1. ಬೀದಿ ದೀಪದ ದೃಷ್ಟಿಕೋನದಲ್ಲಿ ಕವನದ ಹೂರಣ ತುಂಬುವುದು ತಮಾಷೆಯಲ್ಲ! ಬಿಡಿ ಚಿತ್ರಗಳನ್ನು ಒಪ್ಪವಾಗಿ ಹೊಲಿದಿದ್ದೀರಾ.

    ReplyDelete

ಅತಿ ಮಧುರ ಅನುರಾಗ

ಅತಿ ಮಧುರ ಅನುರಾಗ  ನಿನ್ನೊಲವ ಮಳೆ ಹನಿಗೆ  ಮಿಂದಿರಲು ಮನಸಿದು     ನಿಂತು ನಿಂತು ಬೀಸಿದಂತೆ  ಸಂಜೆ ತಂಪು ಗಾಳಿ  ಅಂಕೆ ಮೀರಿ ಬರುವ ಮಾತು  ಹಾಕಬೇಕೇ ಬೇಲಿ  ಜೊತೆ ಇರಲು ...