Thursday 8 August 2013

ಚೆಲ್ಲಾಪಿಲ್ಲಿ ಹನಿ ಕವನ/ ಕಥೆಗಳು

ಮೌನಿಯಾಗಿ ಪರಿಚಿತಳಾದ ಅವಳ
ವಾಚಾಳಿ ರೂಪದಲ್ಲಿ ಒಪ್ಪಲು
ಮನಸ್ಸು ಹಿಂದೇಟ್ಹಾಕಿದ್ದು

ನನ್ನಂತೆ ಅವಳೂ ನಟಿಸಿಬಿಟ್ಟಳಾ

ಎಂಬ ಸಂದೇಹದಿಂದ !!
****

ಕಲರವ ಆಲಿಸಿ 

ಕವನವ ಪಟಿಸುತ 
ಹರಿಯಿತು ಖುಷಿಯ ಹನಿಯೊಂದು 
ಅಪ್ಪಣೆ ಕೇಳದೆ 
ಬಾಚಿತು ಬೆರಳು 
ಹಾಳೆಯೆದೆಗೆ ಮುದ್ರಿಸಲೆಂದು !!
ಮುದ್ರಿತ ಮಡಿಲಲಿ 
ನಿದ್ರಿಸದಾಕ್ಷರ 
ಹಾಡಿಗೆ ಸ್ಪೂರ್ತಿಯ ಸೆಲೆಯಾಗಿ 
ಹರಿಯಿತು ಕೊರಳಲಿ 
ತಟ್ಟುತ ಎದೆಗಳ 
ರುಚಿಕಟ್ಟಾಯಿತು ಮಾಗಿ !!
****

ಮಳೆ ನೀರಿಗೆ ಸಿಕ್ಕಿ 

ಕೊಚ್ಚಿ ಹೋಗುತ್ತಿದ್ದ 
ಇರುವೆಗೆ ಆಸರೆಯಾಗಿದ್ದು 
ಮರಕೆ ಬೇಡವಾಗಿ 
ತೊಲಗಿಸಿಕೊಂಡ ಹಣ್ಣೆಲೆ 

ನಿಂತ ಉಸಿರ ಮತ್ತೆ ಪಡೆದು 

ದಡದೆಡೆ ತಡವಡಿಸಿತೆಲೆ 
ಎದೆಯುಸಿರು ಬಿಟ್ಟು ಇರುವೆ 
"ಅಮ್ಮ" ಅಂದ ಕೂಡಲೆ !!!
****


ಅವಳ ಭಾವಚಿತ್ರವ ಕಂಡೊಡನೆ 
ಪ್ರೀತಿ ಯುಂಟಾಗಿದ್ದು 
ಅವನ ಮೂರ್ಖತನದಿಂದ 

ಅವಳ ಮರ್ಮದಿಂದಲ್ಲಾ 

ತಂತ್ರಜ್ಞಾನದ ತಲೆಹರಟೆಯಿಂದ !!
****

ನಾಜೂಕು ನಡೆ ಹೊತ್ತು 

ಬಳುಕುತ್ತಾ ಆಕೆ ಹೋಗಿದ್ದು 
ಪೆಟ್ಟಿ ಅಂಗಡಿಗೆ.
ಕೊಂಡದ್ದು ಸಿಗರೇಟು.
ಹಚ್ಚಿ ಸೇದಿ,
ತಟ್ಟಿದ ಧೂಪ ಕಿಡಿ 
ಸುಟ್ಟಿದ್ದು ನನ್ನ ಮನಸನ್ನ !!!
****


ಈ ದಿನವ 
"ಆ ದಿನ"ಗಳಾಗಿ 
ನೆನಪಿಡಲು ಬೇಕು 
ಆ ದಿನಗಳಂತೆ ನಸೀಬು 

ಹಿಂದಿನಂತೆ ಸವಾಲುಗಳು 

ಇಂದು ಇರದಾಗಿವೆ 
ಪಳಗಬೇಕು ಇನ್ನೂ ನಾನು 
ನೀಡಲು ಜವಾಬು !!
****


ಕನಸಿನ 
ಕವಲಲಿ 
ಕಾವ್ಯ 
ಕುಸುರಿ 

ಬರಹದ 

ಲೇಖನಿ 
ತುಂಬು 
ಬಸುರಿ 
****

ತುಂಡು ಚಡ್ಡಿ ಧರಿಸಿ 

ಬೈಕಿನ ಎತ್ತರ ಸೀಟಿನಲ್ಲಿ 
ಗೆಳೆಯನ ಬೆನ್ನಿಗಂಟಿ ಬಿಗಿದಪ್ಪಿದ 
ಶ್ವೇತ ಸುಂದರಿಯ ನೋಡಲು 
ನೆರೆದವರಿಗೆಲ್ಲಾ ಕಾರಣವಿತ್ತು 

ಇದ ಖಂಡಿಸುತ ನೋಟ ಬೀರಿದ 

ಆಕೆಯ ಗೆಳೆಯನಿಗೂ ಕಾರಣವಿತ್ತು

ಆದರೆ ವಿನಾಕಾರಣ ಸಿಟ್ಟುಗೈದ ಬಾಲೆ 

ಇದ್ದಷ್ಟು ತುಂಡನ್ನ ಎಳೆದುಕೊಳ್ಳುತ್ತಾ 
ಮಾನ ಕಾಪಾಡಿಕೊಳ್ಳುತ್ತಿದ್ದುದ್ದು ಮಾತ್ರ 
ವ್ಯರ್ಥ ಪ್ರಯತ್ನ !!
****


ರಾತ್ರಿ ಮಿಕ್ಕಿದ್ ಅನ್ನ ಕಲ್ಸಿ 
ಚಿತ್ರಾನ್ನ ಮಾಡ್ಕೊಟ್ರೂ 
ಒಂದೇ ಲೋಟ ಕಾಫೀ ತರ್ಸಿ 
ಬೈಟು ಮಾಡಿಟ್ರೂ 
ಅಬ್ಬಬ್ಬಾ ಏನ್ ರುಚಿ ಅಂತೀಯ !!
ಗೆಳೆಯ, ನಿನ್ ಜೊತೆ ಕೂತು 
ವಿಷ ಸೇವ್ಸಿದ್ರೂವೆ 
ಕಿಕ್ ಏರ್ತು ಹೊರ್ತು 
ಪ್ರಾಣ ಹಾರೋಗಿಲ್ಲಾ 
ಈ ಋಣಕ್ಕ ಏನಂತೀಯ ?!!
****

ಸಾರ್ಥಕ ಮಳೆ 

*************
ಹಳ್ಳಿ ಮಣ್ಣಿಗೆ ಅಮೃತ ಪಾನ 
ಚಿಗುರಿದ ಪೈರಿಗೆ ಜೀವದಾನ 
ಕೊಟ್ಟಿಗೆ ಎತ್ತಿಗೆ ಬಿತ್ತು ಕೆಲಸ 
ಇನ್ನೂ ನೆಮ್ಮದಿ ಮೂರು ದಿವಸ 
ಗಾಳಿ ಬೀಸಿ ಖುಷಿ ಕೆಡವದಿರಲಿ 
ಪಟ್ಟಣ ದತ್ತಣ ಮುಗಿಲು ಸಾಗದಿರಲಿ 
ಕೆರೆಗಳು ತುಂಬಲು ಬಂಗಾರ ಬಾಳು 
ಮಳೆಯಾಗದಿರಲಿ ಕೊಳಕು ಮೋರಿ ಪಾಲು !!!
****
ಅಕ್ಕ ತಂಗಿ ಮಧ್ಯೆ ಕಿಚ್ಚು ಹೊತ್ತಿಸಿದ್ದು
ಕಾಂಚೀವರಂ ಸೀರೆಯ ಆಯ್ಕೆ ಪ್ರಕ್ರಿಯೆ 
ಹಾಳಾದ ಅಂಗಡಿಯವ
ವಿಶೇಷ ವಿನ್ಯಾಸದ ಒಂಟಿ ಸೀರೆಯ
ಪ್ರದರ್ಶಿಸ ಬಾರದಿತ್ತು !!

ಎಲ್ಲರ ಗಮನಕ್ಕೆ : ಆ ವೇಳೆಗೆ ಗಂಡಸರ ಮಧ್ಯ ಪ್ರವೇಶ ನಿಷೆದಿಸಲಾಗಿ
ತ್ತು 

****


ಪಿಜ್ಜಾ ಅಂಗಡಿಗೆ ಹೋಗಿ 
ಏನು ತಿನ್ನುವುದೋ ತಿಳಿಯದವನಿಗೆ ಸಹಕಾರಿಯಾಗಿದ್ದು 
ಕನ್ನಡದವನೇ ಆಗಿದ್ದೂ 
ಬಾರದ ಆಂಗ್ಲದಲ್ಲಿ 
ತೊದಲುತ್ತ ವಿವರಿಸಿದ ಮಾಡರ್ನ್ ಮಾಣಿ !!!
****

ನಾನು ನಿನ್ನನ್ನು ನೀರಿನಲ್ಲಿ ತೇಲಿ ಬಿಟ್ಟೆ ಜ್ಯೋತಿಯಂತೆ 

ನೀನೂ ಮರೆತುಬಿಡು ನನ್ನ, ನಾ ಬೇಟಿಯೇ ಆಗದಂತೆ !!!

ಹೀಗೊಂದು ಪತ್ರ ಬರೆದು ಪ್ರಿಯತಮನಿಗೆ ಅಂಚೆ ಮೂಲಕ ಕಳುಹಿಸಿದಳು ಪ್ರೇಯಸಿ. 

ಮೊದಲೇ ಮಳೆಗಾಲ, ಪತ್ರ ತಲುಪುವಷ್ಟರಲ್ಲಿ ಒದ್ದೆಯಾಗಿತ್ತು, ಅಕ್ಷರಗಳೆಲ್ಲಾ ಅಳಿಸಿಹೊಗಿ ಪ್ರಿಯತಮನ ಓದಿಗೆ ಸಿಕ್ಕಿದ್ದು ಇಷ್ಟೇ :

ನಾ               ನೀ
ನೀ                               ನಾ

ಪ್ರಕೃತಿಗೂ ಅವರಿಬ್ಬರನ್ನ ದೂರಗೊಳಿಸಲು ಇಷ್ಟವಿರಲಿಲ್ಲವೇನೋ !!

****

ತಾಯೇ 
*********
ಕನ್ನಡವಿರಲಿ ಮುಂದೆ 
ಕರ್ನಾಟಕವಿರಲಿ ಒಂದೇ 
ಗುಡಿಯೊಂದಿರಲಿ ಸಾಕು 
ಸಮವಿರಲಿ ಧರ್ಮದ ಬೆಳಕು 
ಒಮ್ಮತವಿರಿಸು ಮನಸುಗಳಲ್ಲಿ 
ಅಮೃತ ಹರಿಸು ಮಾತುಗಳಲ್ಲಿ 
ತಾಯ್ನಾಡು ಮೆರೆಯುತಲಿರಲಿ 
ತಾಯ್ನುಡಿಗೆ ನಾಲಿಗೆ ಸವೆಯಲಿ 
ಭಾಗಿಸುವಾಲೋಚನೆ ಮರೆಸು 
ಸಹಬಾಳ್ವೆಯ ಸಿಹಿ ಸಿಂಪಡಿಸು 

****


"ದೇವದಾಸ"
***********
ಈಚಲ ಮರದಡಿ ತಪಸ್ಸುಗೈದ ಭಕ್ತನ ಶ್ರಧೆಯ ಶ್ರಮಕೆ ಸೋತು 
ದೇವರು ಒಲಿದು ಕೇಳಿದನಂತೆ 
"ನಿನ್ನ ಭಕ್ತಿ ನಾ ಮನಸೋತಿರುವೆ, ವರವೇನಾದರು ಕೋರು" ಎಂದು 
ಅದಕ್ಕೆ ಭಕ್ತ : "ಚಿರಕಾಲ ನಿನ್ನ ದಾಸನಾಗಿದ್ದು, ಯುಗಗಳುರುಳಿದರೂ ನನ್ನ ಹೆಸರು ಅಳಿಯದೇ ಉಳಿಯಲಿ" ಅಂದನಂತೆ 
ದೇವರು ಸಂದರ್ಭ ಸಹಿತ ಆಲೋಚಿಸಿ:
1) ಪಾರೋ ಎಂಬ ಹೆಣ್ಣನ್ನು ಸೃಷ್ಟಿಸಿದನಂತೆ 
2)ಭಕ್ತನಿಗೆ "ದೇವದಾಸ" ಎಂದು ಹೆಸರು ಕೊಟ್ಟನಂತೆ 

****


ಹಿಂಗೇ ತೋಟದ್ ಸುತ್ತ ಸುತ್ತಾಡ್ಕೊಂಡು 
ಕೈಗೆ ಸಿಕ್ಕಿದ್ ತೆಂಗಿನ್ ಗರಿಗಳ್ ಗುಡ್ಡೆ ಹಾಕ್ತಾ 
ಮುಳುಗೋ ಸೂರ್ಯನ್ ನೋಡ್ತಾ 
ತೋಚಿದ್ ಹಾಡ್ನ ಹಾಡ್ತಾ 
ಮರ್ತ್ ಲೋಕ ಇಲ್ಲೇ ಐತೆ 
ಅಂತ ಮರ್ತ್ ವಿಷ್ಯ ಗೆಪ್ತಿಗ್ ಬಂತು 
ಹಳ್ಳಿ ಗಾಳಿ ಪಟ್ಣಾನ್ ಮರ್ಸ್ತು .....

                                                                                                                             

                                                                                                                      -- ರತ್ನಸುತ 

No comments:

Post a Comment

ದಣಿವಾರಿ ಕೊಳದಲಿ

ದಣಿವಾರಿ ಕೊಳದಲಿ  ಕೆಂದಾವರೆ ಅರಳಿದೆ  ಮುಗಿಲೇರಿ ಬರದಲಿ  ಹನಿಗೂಡಲು ಇಳಿದಿದೆ  ರವಿಕಾಂತಿ ಸವಿಯುತ  ಹರಳಂತೆ ಮಿನುಗುತಾ  ಬೆರಗಲ್ಲೇ ತಯಾರಿಯಾಗುತಿದೆ  ಮನದಂಗಳ ಮುಂಜಾನೆಯ...