ನೀ ಸತಾಯಿಸಿದಿರುಳು !!!

ಇಳಿಸಂಜೆಯ ಹೂವು 
ಬಿರಿದಿತ್ತು ಆ ಹೊತ್ತು 
ನೀ ಬರುವ ದಾರಿಯನು 
ಎದುರು ನೋಡಿ 
ಚಿಮುಕಿಸಿದ ನೀರ್ಹನಿಯು 
ಅಂಚಿನಲ್ಲಿ ವಾಲಿತ್ತು 
ಜಾರ ಬಿಡದಂತೆ 
ದಳಗಳನು ಬೇಡಿ 

ದುಂಬಿಗಳ ಅಧರವನು 
ಘಾಸಿಗೊಳಿಸಿತು ಹೂವು 
ಇದ್ದಷ್ಟೂ ಮಧುವನ್ನು 
ಕಾಯ್ದಿರಿಸುತ 
ಎಲೆಗಳೆಲ್ಲವೂ ಮಿರಿದು 
ಹಸಿರೆದ್ದು ನಾಚಿದವು 
ನಿನ್ನ ಬಣ್ಣನೆ ನುಡಿಯ 
ಶೇಖರಿಸುತ 

ಗುಚ್ಚದೊಳಗಿನ ಹೂವು 
ಮತ್ತೊಂದಕೆ ಮೆತ್ತಿ 
ಉತ್ಪತ್ತಿಸಿತು ಅಲ್ಲಿ 
ಪ್ರೇಮ ಶಾಖ 
ಸ್ವಾಭಾವಿಕ ಕೆಂಪು 
ಕಂಗೊಳಿಸುವ ಬಣ್ಣ 
ಇನ್ನೂ ಲಜ್ಜೆಯ ಮೆರಗು 
ಹೆಚ್ಚ ಬೇಕಾ?!!

ಅತ್ತಲಾಚೆಯ ಹಿಡಿದು 
ಇತ್ತಲ ತುದಿವರೆಗೆ 
ನೋಟ ವಿಸ್ತರಿಸಿರಲು 
ಸ್ತಬ್ಧ ನುಡಿಯು 
ಹುಲ್ಲಿನಡಿ ಇರುವೆಯ 
ಮಣ್ಣಿನ ಉಪ್ಪರಿಗೆ 
ಅಪ್ಪಳಿಸದಂಥ 
ಹಗುರ ನಡೆಯು 

ಕತ್ತಲಾವರಿಸಲು 
ಹೂಗಳು ಕಂಪಿಸಿತು 
ಮುಗಿಲತ್ತ ಮುಖ ಮಾಡಿ 
ಕಂಬನಿಯ ಸಹಿಸೆ 
ನಿನ್ನ ಆಗಮನದಲಿ 
ಚೇತರಿಕೆ ಹೂಗಳಿಗೆ 
ಧನ್ಯವಾಯಿತು ಕಂಬನಿ 
ನೀನು ಒರೆಸೆ !!!

              --ರತ್ನಸುತ 

Comments

Popular posts from this blog

ಜೋಡಿ ಪದ

"ಪಾಸ್ವರ್ಡ್" - RESET ಆಗ್ತಿರ್ಲಿ ಆಗಾಗ!!!

ಗರುಡ ಪ್ರಯತ್ನ ೩