ಮಹಾಮಾಯಿ

ಚಕ್ಕೆ ಹಿಡಿದ ಗೋಡೆ 
ಜಂಟಿ ಒಲೆಯ ಬಿರುಕು 
ತೂತು ಬಿದ್ದ ಮಡಿಕೆ 
ಅದಕೆ ಮೆತ್ತಿಕೊಂಡ ಹುಣಸೆ 
ಬೊಬ್ಬೆ ಎದ್ದ ಕೈಯ್ಯಿ 
ಮೊರದೊಳಗೆ ಕಾಳು ಹೆಕ್ಕಿ 
ನೀರು ಕುದಿಗೆ ಬಂತು 
ಹಿಟ್ಟು ಖಾಲಿಯಾದ ಪೈಕಿ 

ಹರಿದ ಸೀರೆ ಜೋಳಿಗೆ 
ತೂಗು ನಿದ್ದೆ ಕೂಸಿಗೆ 
ಅತ್ತು ಎದ್ದರೇನು ಗತಿ 
ಬತ್ತಿದೆ ಎದೆ ಕ್ಷೀರ!!
ಕುದಿ ನೀರಿಗೆ ಉಪ್ಪು-ಹುಳಿ 
ಖಾರದೊಡನೆ ಚೂರು ದವಸ 
ನೀರು ಗಂಜಿಯಾಗಲಿಕ್ಕೆ 
ಇನ್ನೂ ದಾರಿ ದೂರ 

ದೂರ ನೆಂಟ ಬಾಗಿಲಲ್ಲಿ 
ಕಾಲು ಮುರಿದು ನಿಂತಿರುವ 
ನಕ್ಕು ಮಾತನಾಡಿ ಆಯ್ತು 
ಗಂಟೆ ಮೀರಿ ನಿಮಿಷ 
ಗಂಟಲಾರಿ ಹೋದರವನು 
ಕೇಳಬಹುದು ಪಾಣಕ 
"ಕೂಸಿಗೆರೆಯಬೇಕು ಹಾಲು"
ಕಾಲ್ಕಿತ್ತೆ ಸುಳ್ಳ ಮೂಲಕ 

ಕುದಿ ಕುದಿಯುತ ಕರಕಳಾಯ್ತು 
ಕಪ್ಪಗಿದ್ದ ಮಡಿಕೆ 
ಸುಟ್ಟ ಘಮಲು ಸೂಸಿ 
ಹೊಟ್ಟೆ ತುಂಬಿಸುವ ಸಲುವೇ?
ಕೂಸು ಕದಲಿತೇನೋ? ಭಯ!!
ಚಾಚಬೇಕೇ ಕೈಯ್ಯಿ?
ಯಾರೋ ಇಟ್ಟ ಶಾಪವಿದು 
ಈಗ ತೆರಲು ಮುಯ್ಯಿ 

ಕುಡುಕ ಗಂಡ ಭೂದಿಯಾದ 
ಉಳಿಸದೆ ಪುಡಿಗಾಸು 
ಕಾಮುಕ ಬೀದಿಯ ಕಾಗೆ 
ಹದ್ದಾಯಿತು ಕುಕ್ಕಿ 
ದಾನ, ಸಾಲ ಬೇಡಿದಲ್ಲಿ 
ಉಳಿಯದು ಸಂಭಂದ 
ಇದ್ದ ಒಡವೆ ಮಾರಿ ಬರುವೆ 
ಕೊಂಚ ತಾಳೋ ಕಂದ 

                       --ರತ್ನಸುತ 

Comments

  1. ಹಲವು ಚಿಂತೆಗಳ ನಡುವೆ ಜವಾಬ್ದಾರಿಗಳನ್ನು ಹೊರುವಳೇ ಮಾಯೀ

    ReplyDelete

Post a Comment

Popular posts from this blog

ಜೋಡಿ ಪದ

"ಪಾಸ್ವರ್ಡ್" - RESET ಆಗ್ತಿರ್ಲಿ ಆಗಾಗ!!!

ಗರುಡ ಪ್ರಯತ್ನ ೩